(ಜಯಂತಿ ಸಂದರ್ಭದಲ್ಲಿ ಬರೆದ ಬರಹ) ಮತ್ತೊಮ್ಮೆ ಬಸವ ಜಯಂತಿ ಬಂದಿದೆ. ದಿನಗಳೆದಂತೆ ಬಸವ ಜಯಂತಿ ಅದ್ದೂರಿತನ ಪ್ರಖರತೆಯ ಮೆರವಣಿಗೆಯಲ್ಲಿ ಬಸವ ಮರೆಯಾಗಿ ಭಾವಚಿತ್ರ ವಿಜೃಂಭಿಸುತ್ತಿದೆ. ಈಗಂತೂ ಸರಿ ಕೋವಿಡ್ ನಿಂದಾಗಿ ಸರಳ ಆಚರಣೆಯಾಗುತ್ತಿದೆ. ಆ ನಂತರ ಈ ರೀತಿಯಲ್ಲಿಯೇ ಆಚರಣೆಗಳು ತಾತ್ವಿಕವಾಗಿ, ಕ್ರಿಯಾಶೀಲವಾಗಿ, ಚಟುವಟಿಕೆಗಳ ಚಿಲುಮೆಯಾಗಿ ಜಯಂತಿ ಜರುಗಬೇಕಾಗಿರುವ ಜರೂರು ನಾಡಿನ ತುಂಬೆಲ್ಲಾ ಬೇಕಾಗಿದೆ. ಇದುವರೆಗಿನ ಅಂದರೆ ಕೋವಿಡ್ ಗಿಂತ ಹಿಂದಿನ ಜಯಂತಿ ಗಳ ಕಡೆಗೊಮ್ಮೆ ಕಣ್ಣು ಹಾಯಿಸಿದಾಗ ಮತ್ತೊಮ್ಮೆ ಬಸವನೆಂದರೆ ಭಯವೆಂಬ ದಿಗಿಲು ಮೂಡಿಸುವ ಘಟನೆಗಳು ಜಯಂತಿಯ ಹುಚ್ಚಾಟದಲ್ಲಿ ನಡೆದುಹೋಗಿದ್ದವು. ಪೂಜ್ಯರಾದ ಶರಣರಾದ ಶ್ರೀ ಹರ್ಡೇಕರ ಮಂಜಪ್ಪನವರ ದೂರದೃಷ್ಟಿಯ ಫಲವಾಗಿ ಅರ್ಥಪೂರ್ಣ ಆಚರಣೆ ಕ್ರಿ. ಶ. ೧೯೧೩ರ ಸುಮಾರಿಗೆ ನಡೆಯಿತು. ಈ ಆಚರಣೆಯ ಹಿಂದಿನ ಶ್ರಮ ಹೇಳತೀರದಾಗಿತ್ತು. ಬಸವನೆಂದರೆ ವೃಷಭನಲ್ಲ ಆತ ನಮ್ಮಂತೆ ಈ ಭೂಮಿಯಲ್ಲಿ ಬದುಕಿ ಅದ್ವೀತಿಯ ಸಾಧನೆ ಮಾಡಿದನೆಂಬುದನ್ನು ಮಂಜಪ್ಪನವರ ತಮ್ಮ ಶೋಧನಾತ್ಮಕ ಕೃತಿಯ ಮೂಲಕ ಮೊದಲ ಬಾರಿಗೆ ತೆರೆದು ತೋರಿಸಿದರು. ಆ ನಂತರ ಕೆಲವು ಮಠ ಪೀಠಗಳು ತಮ್ಮ ವಿಚಾರ ಸರಣಿ ಬದಲಿಸಿಕೊಂಡು ಬಸವನೆಂದರೆ ಬಲವಿಲ್ಲದವರಿಗೆ ಬೆಳಕೆಂದು ಭಾವಿಸಿ ಬಸವಾಶಯದ ಮೂಲಕ ಅಭೂತಪೂರ್ವವಾಗಿ ಮೌಲಿಕ ಪೂರ್ಣ ಜಯಂತಿ ಆಚರಿಸುತ್ತಾ ಬಂದರು. ಮೌಲಿಕ ಪೂರ್ಣ ಜಯಂತಿ ಆಚರಿಸುತ್ತಾ ಬಂದರು. ಆಗ ಬಸವನೆಂದರೆ ಆತ್ಮಶಕ್ತಿಯ ಜಾಗೃತಿ ಸೆಳೆತದ ಹೆದ್ದೊರೆಯಾದರು. ಆದರೆ ಎಪ್ಪತ್ತರ ದಶಕದ ನಂತರ ಹಿಂತಿರುಗಿ ನೋಡಿದಾಗ ಬಸವ ಮತ್ತದೇ ಜಾತಿಯ ಸಂಕೋಲೆಗಳಿಂದ ಬಂಧನವಾಗತೊಡಗಿದನು. ಇನ್ನಷ್ಟು ಕೆಲವರು ಭಯಂಕರ ಆಲೋಚನೆ ಮಾಡಿ ಬಸವನ್ನನ್ನೇ ಬಂಡವಾಳವಾಗುವ ಅವಕಾಶಗಳನ್ನು ಸೃಷ್ಟಿಸಿಕೊಂಡರು. ಅದಕ್ಕಾಗಿ ನಯವಾಗಿ ಬಸವ ವಚನಗಳನ್ನು ಬಳಸಿಕೊಂಡು ತಮ್ಮ ಭದ್ರತೆ ಗಟ್ಟಿ ಗೊಳಿಸುವತ್ತ ಮುಂದುವರೆದರು.ಇತ್ತೀಚಿಗಂತೂ ಕೆಲವು ಮಠ ಪೀಠಗಳಂತೂ ಬಸವನ ತಾತ್ವಿಕತೆಯನ್ನೇ ದಿಕ್ಕು ತಪ್ಪಿಸಿದರು. ಎಲ್ಲವೂ ಆತನ ಹೆಸರಿನ ಮೂಲಕವೇ ಮಾಡುತ್ತಲೇ ಆತ ಮಹಾಮಾನವತಾವಾದಿ ಎನ್ನುತ್ತಲೇ ಆತನನ್ನು ತಮ್ಮಗಳ ಮಠದ ಚಲಾವಣೆ ನಾಣ್ಯ ಮಾಡಿಕೊಂಡರು.
ಕೆಲವರಂತೂ ಆತನನ್ನು ದೇವರಾಗಿರಿಸಿ ಅದಕ್ಕಾಗಿ ಮತ್ತದೇ ಗದ್ದುಗೆ ಪೀಠಗಳಲ್ಲಿ ಅಲಂಕರಿಸಿ ನಯವಾಗಿ ಬಸವ ನನ್ನು ಮೂರ್ತಿಯಾಗಿರಿಸಿ ಮೌನಗೊಳಿಸಿದರು. ಬಸವನ ಮೂರ್ತಿಯೇ ಧ್ಯಾನಕ್ಕೆ ಮೂಲವಾಗಬೇಕಾಗಿತ್ತು. ಆದರೆ ಅದು ಅಂತಃಸತ್ವವಿಲ್ಲದ ತೋರಿಕೆಯ ಮೂರ್ತಿಯಾಗಿರಿಸಿ ಬಸವಚೈತನ್ಯವೆಂಬುದು ಜಡವಾಗಿ ಅದ್ದೂರಿ ಜಾತ್ರೆಯಾಗಿರಿಸಿ ಆ ಮೂಲಕ ತಮ್ಮ ಮಠ ಪೀಠಗಳ ಮೂಲಕ ಪ್ರತಿಷ್ಠೆಗಾಗಿ ಬಸವನ ಹೆಸರಿನಲ್ಲಿಯೇ ಪ್ರಶಸ್ತಿ ಸ್ಥಾಪಿಸಿ ತಮ್ಮ ನೈಜ ಮುಖವಾಡಗಳನ್ನು ಮುಚ್ಚಿ ತಮ್ಮ ಕಾರ್ಯ ಸಾಧನೆಗಾಗಿ ಬಸವನ ಹೆಸರಿನಲ್ಲಿಯೇ ಪ್ರಶಸ್ತಿ ಸನ್ಮಾನಗಳನ್ನು ಅಧಿಕಾರ ಹಣ ಖ್ಯಾತಿನೋಡಿ ಪ್ರದಾನ ಮಾಡಿದರು. ಬಸವಾಶಯವನ್ನೇ ಭಸ್ಮ ಮಾಡಲು ಹೊರಟವರಿಗೆ ಬಸವನ ಹೆಸರಿನಲ್ಲಿಯೇ ಸನ್ಮಾನ ಪ್ರಶಸ್ತಿಗಳು ದೊರಕಿದವು. ಅಲ್ಲೂ ಬಸವ ಬಂಡವಾಳದಂತೆ ಉಪಯೋಗವಾದನು. ಪ್ರಶಸ್ತಿ ಬಂಡವಾಳದಂತೆ ಉಪಯೋಗವಾದನು. ಪ್ರಶಸ್ತಿ ನೀಡಿರ ಮೂಲಕ ತಮಗೆ ಬೇಕಾದ ಕಾರ್ಯಸಾಧನೆ ಮಾಡಿಕೊಂಡರು. ಮತ್ತದೇ ಬಸವ ನೂತನ ಮಠೀಯ ಪುರೋಹಿತಶಾಹಿಯ ಲ್ಲಿ ಯೇ ನರಳಿದನು. ಆದರೂ ಬಸವ ಹತ್ತಿಕ್ಕಿದಷ್ಟು ಜನರಿಗೆ ಹತ್ತಿರವಾಗುತ್ತಿದ್ದಾನೆ. ಓಂ ಶ್ರೀ ಗುರು ಬಸವಲಿಂಗಾಯನಮ ಎಂಬುದು ಆತ್ಮಶಕ್ತಿಯ ಸಂಕೇತವಾಗಬೇಕಿತ್ತು. ಆದರೆ ಅದು ಕೆಲವರ ಮಂತ್ರವಾಗಿ ಅವರ ಅಸ್ತಿತ್ವಕ್ಕೆ ಆಧಾರವಾಯಿತೆಂಬುದು ದುರಂತದ ಸಂಗತಿಯಾಗಿದೆ. ಜಾತಿಯ ಜಾಲದೊಳಗೆ ಸಿಲುಕಿದವರನ್ನು ಮಾನವತೆಯ ಮಾತುಗಳ ಮೂಲಕ ಎದೆಗಪ್ಪಿಕೊಂಡ ಬಸವ ಮೌಡ್ಯದಿಂದ ಭ್ರಮಿತರಾದವರಿಗೆ ಬೆಳಕಾದ ಬಸವ ಕಪಟವೇಷದ ಮೂಲಕ ಅನ್ನ ಅಧಿಕಾರಗಳಿಗೆ ಮಣೆಮಾಡಿಕೊಂಡವರಿಗೆ ಕಾಯಕ ಸೂತ್ರ ಕಲಿಸಿದ ಬಸವ ಸಂಗ್ರಹವಾಗುವ ಧನ ದಾನ್ಯಗಳನ್ನು ಹಂಚಿಕೆಮಾಡಿಕೊಂಡು ಬದಕಬೇಕೆಂದು ದಾಸೋಹದ ಪರಿಕಲ್ಪನೆ ನೀಡಿದ ಬಸವನನ್ನು ನಾವಿಂದು ಕಾಣಬೇಕಿದೆ. ಕೋವಿಡ್ ನ ಈ ಸಂಧರ್ಭದಲ್ಲಿ ಆತ್ಮಶಕ್ತಿಯ ಜಾಗೃತಿಯ ಸಂಕೇತವಾದ ಭರವಸೆಯ ಬೆಳಕಾದ ಬಸವನನ್ನು ಮತ್ತದೇ ಮೌಡ್ಯತೆಯ ಕೂಪದಲ್ಲಿ ತಳ್ಳಲು ಬಸವ ಮಂತ್ರ ಹೇಳಿದರೆ ಕೋವಿಡ್ ಗೆ ಪರಿಹಾರ ದೊರಕಬಹುದೆಂಬುದನ್ನು ಹೇಳುತ್ತಾ ತಮ್ಮ ಅಸ್ತಿತ್ವ ಕಂಡುಕೊಳ್ಳಲು ಯತ್ನಿಸುವ ಕೆಲವು ಮಠ ಪೀಠಗಳು ನಯವಾಗಿ ಬಸವನನ್ನು ನಿಜ ಸಮಾಧಿಯ ನ್ನು ತಮಗರಿವಿಲ್ಲದೇ ಮಾಡುತ್ತಿರುವುದು ದುರಂತವಾದರೆ ಮತ್ತೊಂದೆಡೆ ಮತ್ತೊಮ್ಮೆ ಬಸವನನ್ನು ಚಾರಿತ್ರಿಕವಾಗಿ ಮರೆಮಾಡಬೇಕೆಂಬ ಹುನ್ನಾರಗಳು ನಡೆಯುತ್ತಿವೆ. ಈ ಮಧ್ಯೆ ಬಸವನನ್ನೇ ಬಂಡವಾಳವಾಗಿರಿಸಿದವರು ತಮ್ಮ ಸ್ಥಿರಾಸ್ತಿಗಳನ್ನು ಬಂಡವಾಳವಾಗಿರಿಸಿದವರು ತಮ್ಮ ಸ್ಥಿರಾಸ್ತಿಗಳನ್ನು ಕ್ರೋಢಿಕರಿಸುತ್ತಲೇ ಬಸವನನ್ನು ವಿಜೃಂಭಿಸುತ್ತಿದ್ದಾರೆ. ಹಾಗಾಗಿ ಬಸವ ವೆಂಬುದು ಮಂತ್ರವಾಗುವ ಬದಲಾಗಿ ಅದು ನಮ್ಮ ಆತ್ಮಶಕ್ತಿಯ ಪ್ರತೀಕವೆಂದು ನಾವು ಮುನ್ನಡೆಯಬೇಕಾದದ್ದು ಇಂದಿನ ದಿನ ಅಗತ್ಯವಾಗಿದೆ. ಬರಿ ಉದಕದಲ್ಲಿ ಆ ದೇವ ನೆನೆಯಲಾರನೆಂಬ ಬಸವರ ಸಂದೇಶದ ವಾಸ್ತವ ತಿಳುವಳಿಕೆ ನಮ್ಮದಾಗಬೇಕು. ಕಳ್ಳ ನಾಣ್ಯ ಸಲುಗೆಗೆ ಸಲ್ಲದೆಂಬ ಅರಿವು ಎಲ್ಲರಲ್ಲೂ ಮೂಡಿಸುವ ಜಾಗೃತಿ ಯ ಕೆಲಸ ಬಸವನನ್ನು ಅಪ್ಪಿಕೊಂಡ ಮಠ ಪೀಠಗಳಿಂದ ನಡೆಯಬೇಕು. ಆದರೆ ಇಂದಿನ ಸಂದರ್ಭದಲ್ಲಿ ಕೆಲವು ಮಠ ಪೀಠಗಳು ಕಳ್ಳನಾಣ್ಯದ ಕಪಾಟುಗಳಾಗಿ ಆ ಕಳ್ಳನಾಣ್ಯದ ಕಳ್ಳನಿಗೆ ರಕ್ಷಕನಾಗಿರುವ ಸಂಧರ್ಭ ಗಳು ನಮಗೆ ತೆರೆಮರೆಯಲ್ಲಿ ಗೋಚರಿಸುತ್ತಿರುವುದು ಬಹು ದುರಂತದ ಸಂಗತಿಯಾಗಿದೆ. ಹಾಗಾಗಿ ಬಸವ ಅನುದಿನವೂ ನಮ್ಮ ನಡೆಯಾಗಬೇಕು. ಯಾರದೋ ಮಾತುಗಳಿಗೆ ಬಸವ ನಮ್ಮ ದೈವವಾಗಬಾರದು. ನಮ್ಮ ಬದುಕಿನ ನೆಲೆಯಲ್ಲಿ ಆತನ ಸಂದೇಶಗಳ ಮೂಲಕ ನಾವು ಬಸವನನ್ನು ಅಪ್ಪಿಕೊಂಡು ಒಪ್ಪಿಕೊಂಡು ಮುನ್ನಡೆಯಬೇಕು. ಆರನಾದಡೆಯೂ ಬೇಡಿ ಬೇಡಿ ಬರಿದೆ ಧೃತಿಗೇಡಬೇಡ ಎಂಬ ಬಸವ ಮಾತು ನಮ್ಮ ವಿಶ್ವಾಸದ ಶಕ್ತಿಯಾಗಬೇಕು. ಮರಣದ ನೆಪವೊಡ್ಡಿ ಭಯ ಬೀಳಿಸಿ ನಮ್ಮೆಲ್ಲ ದುಡಿತದ ದುಡ್ಡನ್ನು ನಯವಾಗಿ ನಮ್ಮಿಂದಲೇ ಅಪಹರಿಸುವ ವೇಷಡಂಬಕ ರಿಗೆ ಮರಣವೇ ಮಹಾನವಮಿ ಎಂದರಲ್ಲಾ ಬಸವರು ಎಂದು ಎಚ್ಚರಿಕೆ ನೀಡಬೇಕು. ಹಾಗೆಯೇ ತನ್ನಾಶ್ರಯದ ರತಿಸುಖ ತಾನುಂಬ ಊಟ ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ಎಂಬ ಬಸವರ ಸಾರ್ವಕಾಲಿಕ ಸತ್ಯವನ್ನು ಹೇಳುವ ಮೂಲಕ ನಮ್ಮ ಆತ್ಮಶಕ್ತಿಯ ಅರಿವಿನ ದರ್ಶನ ಮಾಡಿಸಬೇಕು. ಬಸವನೆಂದರೆ ಮಂತ್ರವಲ್ಲ ನಮ್ಮ ಬದುಕಿನ ಆತ್ಮಶಕ್ತಿಯ ಸಂಕೇತ ಹಾಗಾಗಿ ಬಸವ ಇವನಾರವನೆನ್ನದೇ ಇವನಮ್ಮವನೆಂದು ಭಾವಿಸುವ ಬದುಕಿನ ಭವ್ಯಮಾರ್ಗ ಕನ್ನಡಿಯಂತೆ ನಮ್ಮ ಮುಂದಿದೆ ಈ ದಿಸೆಯಲ್ಲಿ ನಾವು ಬಸವನನ್ನು ಅನುದಿನವೂ ಆತ್ಮಗತಮಾಡಿಕೊಳ್ಳತ್ತಲೇ ಮುನ್ನಡೆಯಬೇಕಿದೆ.
ಸರ್ವರಿಗೂ ಮಹಾಮಾನವತಾವಾದಿ ಬಸವಣ್ಣನವರ ಜಯಂತಿಯ ಶುಭಾಶಯಗಳು
ಡಾ. ನಾಗರಾಜ ಹೀರಾ (ನಾಹೀರಾ)
ಕುಷ್ಟಗಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.