You are currently viewing ಸಾಲುದೀಪ

ಸಾಲುದೀಪ

ಅವ್ವ
ನೀ ಎಂದೂ ತೀರದ
ಪ್ರೇಮದ ಖಣಿ
ನಿನ್ನೊಡಲು
ಥೇಟ್ ಕಡಲು

ಅವ್ವ
ನೀ ಹಚ್ಷಿದ ಹಣತೆ
ನಮ್ಮ ಬಾಳ ಹಾದಿಯ
ಕತ್ತಲು ನುಂಗಿದ್ದು

ಅವ್ವ
ನೀನು ಸಾಲು ಸಾಲು
ಸೋಲುಗಳುಂಡರೂ
ನಮ್ಮ ಬಾಳಿಗೆ
ಸಾಲುದೀಪವಾದೆ
ನೀನು ಬದುಕಿದ ರೀತಿ ನೋಡಿದರೆ
ಅಕ್ಷರಗಳಿಗಿಲ್ಲಿ
ಸೋಲೇ ಸೋಲು

ಅವ್ವ
ನೀ ಕಂಡ ಕಪ್ಪು ಬಿಳುಪು
ಕನಸುಗಳಲ್ಲಿ
ಹಲವು ಬಣ್ಣಗಳಿಗೆ ಜೀವ ತುಂಬಿದೆ
ಖುದ್ದು ಗಂಧದ ಕೊರಡಂತೆ
ತೇದು ಗೇದು
ಕಲ್ಲು ಮನಗಳಲಿ ನಗುವ
ಹೂವರಳಿಸಿ
ಮನೆಯಂಗಳದಿ
ಸಾಲುದೀಪವಾಗಿ ಬೆಳಗುತಿರುವೆ

ನಮ್ಮವ್ವನ ಬಾಳಲ್ಲಿ
ಮತ್ತೆ ಮತ್ತೆ ಪಣವೊಡ್ಡಿ
ಕಸುವು ಕಸಿಯಲು ಹವಣಿಸಿದಾಗ
ಈ ಬದುಕು ಮಣಿದೇ ಬಿಟ್ಟಿತು
ಮಂಡಿಯೂರಿದ ನಮ್ಮವ್ವನ
ದೈನ್ಯತೆಗೆ

ನಮಗಾಗಿ ಏನನ್ನೂ
ಕೂಡಿಡದ ಅವ್ವ
ಅಳಿಯದ ಕಳಿಯದ
ಅಕ್ಷರ ಕಲಿಸಿ
ಅಕ್ಷಯವಾಗೆಂದು ಹರಸಿದಳು
ಕರುಳಿಗೆ ಕರುಣೆಯ
ಬೆಸುಗೆಯನು ಬೆಸೆದಿರುವಳು

ಅವ್ವ,
ನಾನೆಷ್ಟು ಬರೆವೆನೊ
ನೀನು ದುಪ್ಪಟ್ಟು
ಬದುಕಬೇಕೆಂದು
ನನ್ನ ಶುಭ ಹಾರೈಕೆಯು ಇಂದು

ಡಾ.ದಾವಲಸಾಬ ನರಗುಂದ