ಹೊತ್ತವಳು, ಹೆತ್ತವಳು
ತುತ್ತು ಮಾಡಿ ಉಣಿಸಿದವಳು
ಮುತ್ತನ್ನಿಕ್ಕಿ ಪ್ರೀತಿಯ ತೋರಿದವಳು
ಅತ್ತು ನೊಂದಾಗ ಸಮಾಧಾನಿಸಿದವಳು
ಮತ್ತೆ ಕೈಯ್ಯನ್ನು ಹಿಡಿದು ಮುನ್ನಡೆಸಿದವಳು
ಹೊತ್ತಿಗೂ ಮುಂಚೆ ಏಳುವಳು
ಕತ್ತು ಹೊರಳದಂತೆ ದುಡಿಯುವವಳು
ನಿತ್ಯದ ಮನೆಗೆಲಸವನು ಪೂರೈಸುವಳು
ಹೊತ್ತ ಕನಸುಗಳನು ನನಸಾಗಿಸುವವಳು
ಹೆತ್ತ ಮಕ್ಕಳನ್ನು ತಿದ್ದಿ ಸನ್ಮಾರ್ಗಕ್ಕೆ ತರುವವಳು
ನೆತ್ತಿ ಏರಿದ ಸೂರ್ಯನ ನೋಡುವವಳು
ಬುತ್ತಿಯ ಕಟಗೊಂಡು ಹೊಲಕೆ ಓಡುವವಳು
ಬತ್ತಿ-ಬಾಡುವತನಕ ಹೊಲದಲ್ಲಿ ದುಡಿಯುವವಳು
ಬಿತ್ತಿ ಬೆಳೆಯುವ ಹೊಲಕ ತೊತ್ತಾಗಿ ದುಡಿಯುವವಳು
ಮತ್ತೆ ಭೂಮಿ ತಾಯಿಯ ನೆನೆದು ನಮಿಸುವವಳು
ಹೊತ್ತಿಗೆ ತೆರೆದು ಕಲಿಸಿದವಳು
ಕತ್ತಿಯ ಹಿಡಿದು ಹೋರಾಡಿದವಳು
ಬುತ್ತಿಯ ಬಿಚ್ಚಿ ಹೊಟ್ಟೆ ತುಂಬಿಸಿದವಳು
ಮತ್ತೆ ಮನೆ ಮಂದಿಗೆಲ್ಲ ಶಕ್ತಿಯಾಗಿ ಬೆಳೆಸಿದವಳು
ಮುತ್ತಿನಂತೆ ಹೊಳೆಯುತಲಿ ಈ ಜಗಕೆ ಕಣ್ಣಾದವಳು
ಎಮ್. ಎಚ್. ಹಾಲ್ಯಾಳ
ಸಾಹಿತಿಗಳು, ಮುದ್ದೇಬಿಹಾಳ
9972786391