You are currently viewing ವಾತ್ಸಲ್ಯ

ವಾತ್ಸಲ್ಯ

ಅವ್ವ ಎಂದರೇ ಹಾಗೆಯೇ
ತನ್ನೊಡಲು ಹಸಿದು ಕಂಗೆಟ್ಟರೂ
ಅನ್ನದ ಬಟ್ಟಲು ಹಿಡಿದು ಚಂದಮಾಮನನ್ನು ತೋರಿಸಿದವಳು

ತನ್ನ ಪ್ರತಿ ಉಸಿರು ಕರುಳಿನ ಕುಡಿಗೆ ಮೀಸಲು ಇಟ್ಟವಳು
ಸೀರೆಯ ಸೆರಗು ಗಾಳಿ ಬೀಸುವ ಚಾಮರ
ಒಮ್ಮೊಮ್ಮೆ ಅದುವೇ ಹಾಸಿಗೆ ಹೊದಿಕೆಯ ಚಾದರ

ಹರಿದ ಸೀರೆಗೆ ನೂರೆಂಟು ತೇಪೆ
ಅಲ್ಲಲ್ಲಿ ಹೊಲಿಗೆ ಹಾಕಿದ ಕಸೂತಿ
ಅದಿನ್ನೂ ಅಮ್ಮನಿಗೆ ಸೀರೆ ಹೊಸತು
ಬೇಕು ಎನ್ನುವ ಪದದ ಅರ್ಥವೇ ನಿಗೂಢ

ಅವ್ವ ಎಂದರೆ ಹಾಗೆಯೇ
ಮಮತೆ ವಾತ್ಸಲ್ಯ ಗಳ ಬರಿದಾಗದ ಖನಿ
ಅಪ್ಪನ ಹೆಗಲಿಗೆ ಹೆಗಲಾಗಿ ದುಡಿವ ಮಾನಿನಿ

ಅವ್ವ ಎಂದರೆ ಹಾಗೆಯೇ
ಇದ್ದಾಗ ಇದ್ದಷ್ಟು ಉಂಡು ಇಲ್ಲದಾಗ
ಇಲ್ಲವೆನ್ನದೆ ತಣ್ಣೀರು ಕುಡಿದು ಮಲಗಿದಾಕೆ

ರಚ್ಚೆ ಹಿಡಿದು ರಂಪಾಟ ಮಾಡಿದಾಗಲೂ
ಸಹನೆಯ ಎಲ್ಲೆ ಮೀರದಾಕೆ

ಅವ್ವ ಎಂದರೆ ಹಾಗೆಯೇ
ಮರುಭೂಮಿಯಲ್ಲಿ ಜಿನುಗುವ ಬತ್ತದ ತೊರೆ
ಬರಿದಾಗದ ಪ್ರೀತಿಯ ಅಕ್ಷಯ ಪಾತ್ರೆ

ಕೊಟ್ರೇಶ ಜವಳಿ
ಹಿರೇವಡ್ಡಟ್ಟಿ