You are currently viewing ನನ್ನ ಕನ್ನಡದ ಗುಡಿ

ನನ್ನ ಕನ್ನಡದ ಗುಡಿ

ಶರಣು ಓ ಕನ್ನಡವೆ ನಿನ್ನೊಲವಿಗೆ
ಕರ ಮುಗಿವೆನೀಗ ತಲೆ ಬಾಗಿಸಿ..
ವರ ನೀನು ನನಗೆ ನಲಿವ ತಂದಿತ್ತೆ
ಶಿರ ಬಾಗುವೆನು ನಿನಗೆ ನಮಿಸಿ.

ನನ್ನುಸಿರ ನುಡಿ ನೀನು ಸಿರಿಗನ್ನಡ
ಮುನ್ನುಡಿ ಬಾಳಿಗೆ ನಿನ್ನಿಂದ..
ಚೆನ್ನುಡಿಯ ಮಹಿಮೆಗೆ ಸಾಟಿ ಎಲ್ಲಿ
ಹೊನ್ನು ಸುರಿದಂತೆ ಬಾನಿಂದ.

ಕನಸುಗಳ ಕುಣಿಸಿ ಎತ್ತಾಡೊ ನುಡಿ
ಮನ ತಣಿಸುವುದು ಮುದದಿ.
ದಿನ ಸುಂದರ ನವ ನವೀನ ಸೊಗ
ಧ್ಯಾನ ಸಿರಿಗನ್ನಡದ್ದೆ ಮನದಿ.

ನುಡಿ ಸವಿಗೆ ಮರುಳೀಗ ಎಲ್ಲರೂ
ಗುಡಿ ಮೆರೆಯುತಿದೆ ತಾ ಬೀಗಿ.
ನಡಿಗೆ ನಡಿಗೆಯಲಿ ಕನ್ನಡದ ಮಂತ್ರ
ಗಡಿ ಮೀರಿ ನಿಂತಿದೆ ನೆರಳಾಗಿ.

ಬೆಡಗು ತುಂಬಿಹ ಭಾಷೆ ಮಧುರವು
ಕಡಲಾಚೆಗೂ ನರ್ತಿಸಿದೆ ಹಿಗ್ಗಿ.
ಬಡವನಾಗಲಿ, ಧನಿಕನೆ ಇರಲಿ
ಗೊಡವೆ ದೂಡಿ ನೀಡಿದೆ ಸುಗ್ಗಿ.

ಮೆರೆವ ಸೊಬಗಿನ ನಾಡು ನನ್ನದು
ಬೆರೆವ ಗುಣ ಇಲ್ಲಿ ಮನಗಳದು.
ಕರೆದು ಎರೆವರು ಸ್ನೇಹ ಪ್ರೀತಿಯನು
ತೊರೆದು ನಿಲ್ಲದ ಬಂಧವದು.

ನೆಲದ ಮಹಿಮೆ ಅನನ್ಯ , ಅದ್ಭುತ
ಜಲದ ಸಿರಿ ಇಹುದು ಇಲ್ಲೆ..
ಬಲವು ಹಸಿರು ವನರಾಶಿ ಜೀವಿಗೆ
ಒಲವು ಧುಮ್ಮಿಕ್ಕಿ ಹರಿವುದಿಲ್ಲೆ.

ಭವ್ಯ ಪರಂಪರೆಯ ಹೊತ್ತ ಬೀಡಿದು
ಕಾವ್ಯ ಸುಧೆ ಚೆಲ್ಲಿಹುದು ಉಕ್ಕಿ.
ದಿವ್ಯ ಪುರುಷರ ಮಹಾ ನೆಲೆಯಿದು
ಸುಶ್ರಾವ್ಯ ಸ್ವರದಿ ಉಲಿವುದು ಹಕ್ಕಿ.

ಕದಂಬ, ಹೊಯ್ಸಳ,ಚಾಲುಕ್ಯರಾದಿ
ಮದಕರಿ ಆಳಿಹ ನಾಡಿದು.
ಮುದದಿ ಮಮತೆಯಲಿ ಕಾವುದೆಮ್ಮ
ಮದ ಸೋಕದ ಮಧುರ ಬೀಡಿದು.

ಕಲೆ, ಸಂಸ್ಕ್ರತಿಯ ಸುಂದರ ದರ್ಶನ
ಶಿಲೆ ಸೆಳೆವುದು ಕೆತ್ತನೆಯಲಿ.
ಓಲೆ ಗರಿಗಳಲಿ ಗರಿಮೆ ಕನ್ನಡಕೆ
ಲೀಲೆ ತೋರಿದೆ ಜಗದಲಿ.

ಉಲಿವ ಆ ಕೋಗಿಲೆಗೂ ಹರುಷವು
ನಲಿವಿನ ಕುರುಹಿದೆ ಸ್ವರದಲಿ.
ಕಲಿಕೆಯ ಪಾಠವು ಬಾಳಿನುದ್ದಕೂ
ಪಾಲಿಸಬೇಕು ಸಹನೆಯಲಿ..

ಕರುನಾಡಿಗಿಹುದು ಸಿರಿ ಮೆತ್ತ ಕಳೆ
ಮೇರು ಪ್ರತಿಭೆಗಳ ತಾಣವಿದು.
ಕೀರುತಿ ತಂದಿತ್ತಿಹರು ಛಲ ಬಲದಿ
ಹಾರುವಂತೆ ನಾಡಿನ ಧ್ವಜವದು.

ಭರವಸೆಯ ಕುಡಿಗಳಿಗೆ ಪ್ರೋತ್ಸಾಹ
ನೆರವೇರಿಸಲು ಮನದಾಸೆಗಳ.
ಹರಸುತಿಹಳು ಭುವನೇಶ್ವರಿ ತಾಯಿ
ಕರಗಿಸುತ ಸುಳಿದ ದುಗುಡಗಳ.

ನನ್ನ ನಾಡು ನನಗೆಂದಿಗೂ ಹೆಮ್ಮೆ
ಕನ್ನಡವೆಂದರೆ ಅದು ಜೇನ್ನುಡಿ.
ಚಿನ್ನದ ಮಣ್ಣಿನ ಸಿರಿನಾಡು ನನ್ನದು
ಅನ್ನ ನೀಡುವ ರೈತ ಜೀವನಾಡಿ.

ಧ್ಯಾನ ಗೈದು ಸಿದ್ಧಿ ಪಡೆದ ನೆಲವಿದು
ಜ್ಞಾನಪೀಠಗಳು ದೇವಿ ಮುಡಿಗೆ.
ದಾನದಲಿ ಗೆದ್ದಿಹ ದಾರ್ಶನಿಕರಿಹರು
ಸ್ಥಾನ ಗೌರವದಿ, ಶ್ರೀರಕ್ಷೆ ಹೆಣ್ಣಿಗೆ.

ಗೆಲುವಿನ ಸಂಭ್ರಮ ಸೈನಿಕರ ಬಲದಿ
ಒಲುಮೆಯಲಿ ಮೆರೆವ ದೇಶಪ್ರೇಮ.
ಚೆಲುವಿನಲಿ ಸಾಟಿ ಇರದು ನಾಡಿಗೆ
ನಲುಮೆಯ ಸವಿಭಾವ ಸಂಗಮ.

ಜೀವನದಿ ಕಾವೇರಿ ನಗುತಿಹಳಿಲ್ಲಿ
ಭಾವಜೀವಿಗಳ ಮನ ತಣಿಸಿ.
ಅವನಿಯಲಿ ನಿತ್ಯ ಆನಂದ ಲಹರಿ
ನೋವಳಿಸುವಳು ತಾಯಿ ಹರಸಿ.

ವಿಜಯನಗರ ಸಾಮ್ರಾಜ್ಯದ ವೈಭವ
ರಾಜರ ಕಾಲದ ಹೆಗ್ಗುರುತು.
ಅಜರಾಮರವು ಆ ಆಡಳಿತದ ಪರಿ
ರಜತ,ಚಿನ್ನ,ವಜ್ರ,ಮುತ್ತಿನ ಗತ್ತು.

ನಾಡಿನ ಮಡಿಲಿದು ಪ್ರವಾಸಿ ತಾಣ
ಮೂಡಿಸುವುದು ನವ ಚೈತನ್ಯ.
ದೂಡಿ ಗೊಡವೆಯ ನಲಿವೆರೆವುದು
ಗೂಡಿನಲಿದೆ ನೆಮ್ಮದಿಯ ಸಾಹಿತ್ಯ.

ಹುಲಿ, ಸಿಂಹ,ಆನೆಗಳ ನೆಚ್ಚಿನ ತಾಣ
ಉಲಿವ ಕೋಗಿಲೆಗೆ ಇಲ್ಲಿ ಹಬ್ಬ.
ನಲಿವ ನವಿಲು, ಆ ಜಿಂಕೆ , ಮೊಲ,
ಚಿಲಿಪಿಲಿ ಕಲರವ ಕಳೆವುದು ಮಬ್ಬ.

ಜೋಗದ ಆ ಸೊಬಗು ರಮಣೀಯ
ದುರ್ಗದ ಕೋಟೆಗೆ ಮಿಗಿಲೆಲ್ಲಿ ?
ಸಾಗಲೆಬೇಕು ಮೈಸೂರ ದಸರೆಗೆ
ಮೊಗ ಅರಳುವುದು ಸಿರಿಯಲ್ಲಿ

ತಡೆವರಾರಿಲ್ಲ ಜೇನ್ನುಡಿಯ ಮೆರೆತ
ಪಡೆದು ನಲಿವರು ಸವಿ ಸ್ವಾದ
ನಡೆವ ದಾರಿಯಲಿ ಕನ್ನಡವೆ ನೆರಳು
ಕಡೆಗಣಿಸಿದರೆ ಕಂಬನಿ ನಿನಾದ

ಪ್ರಗತಿ ಪಥದಲಿ ಛಾಪು ಜಗದಲಿ
ವೇಗ ಪಡೆದಿದೆ ತಂತ್ರಜ್ಞಾನ
ಸಾಗರದ ಸೆರಗಲಿ ಸಾಲು ಗಿರಿಗಳು
ಸ್ವರ್ಗ ಸಾದೃಶ್ಯ ರೋಮಾಂಚನ

ಆಚಾರ ಪದ್ಧತಿಗೆ ಕರುನಾಡೆ ಗುರು
ವೈಚಾರಿಕತೆಗಿಲ್ಲಿ ನವ ಸ್ಪರ್ಷ
ವಿಚಾರ ಧಾರೆ ಈ ಧರೆಯ ಬೆಳಗಲಿ
ಪ್ರಚಾರಗೊಳ್ಳಲಿ ಕೀರ್ತಿ ಹರ್ಷ

ಮೆರೆಸೋಣ ಕರುನಾಡ ಘನತೆಯ
ಬೆರೆಯಲಿ ಎಲ್ಲೆಡೆ ನುಡಿ ಸಾರ
ತೆರೆಯಿರಿ ಎದೆಗದ ಸಿರಿಗನ್ನಡಕೆ
ದೊರೆಯಾಗಲಿ ಕನ್ನಡ ನಿರಂತರ
ಧರೆಯಾಗಲಿ ಕನ್ನಡದ ಮಂದಿರ

ದಿನೇಶ್, ಎನ್, ಅಮ್ಮಿನಳ್ಳಿ
೯೯೬೪೦೨೮೧೧೭
ಅಂಚೆ :- ಅಮ್ಮಿನಳ್ಳಿ
ತಾ :- ಶಿರಸಿ.