You are currently viewing ಕನ್ನಡವ ಬೆಳೆಸೋಣ ಬನ್ನಿ

ಕನ್ನಡವ ಬೆಳೆಸೋಣ ಬನ್ನಿ

ಕನ್ನಡದ ಮಣ್ಣೆನಗೆ ತುಲ್ಯದಿ
ಹೊನ್ನಿಗಿಂತಲು ಮಿಗಿಲೆನುತ ನಾ
ನನ್ನೆದೆಯೊಳಗೆ ಕೆತ್ತಿ ನಿತ್ಯವು ಪೂಜೆಗೈಯುವೆನು
ರನ್ನಪೊನ್ನರ ಕಾವ್ಯವರಿಯದೆ
ತನ್ನತನವನೆ ಮರೆತು ಯಾವುದೊ
ಭಿನ್ನ ಭಾಷೆಗೆ ಮನವ ನೀಡೆನು ನಾನು ಕೊನೆಯನಕ

ಹತ್ತು ಶತಕಗಳಷ್ಟು ಹಿಂದೆಯೆ
ಬತ್ತದುತ್ಸಾಹದಲಿ ನಾಡಿನ-
ಲೆತ್ತಲೂ ಕಾವ್ಯಗಳ ಪರಿಣತರಿದ್ದ ತಾಣವಿದು
ಗತ್ತಿನಲಿ ನಾನಿಂದು ಪೇಳ್ವೆನು
ಕಿತ್ತೆಸೆದರೀ ಜಿಹ್ವವನು ನಾ-
ನುತ್ತರಿಸೆನನ್ಯ ನುಡಿ ನೀಡುವೆನೆನ್ನ ವಾಗ್ದಾನ

ಚಂದನದ ಘಮಲನ್ನು, ರಚಿಸಿದ
ಕಂದಕಾವ್ಯಗಳೊಳಗೆ ತುಂಬಿದ-
ರಂದು ಮೇರಿನ ಕವಿಗಳೆಲ್ಲರು ತೋರಿಯಕರಾಸ್ತೆ
ಇಂದು ಬಗೆಗೆಟ್ಟವರ ಪರಿಯಲಿ
ಬಂಧುಬಾಂಧವರೆಲ್ಲ ಬಹಳಾ-
ನಂದ ತೋರುತಲಾಂಗ್ಲ ಭಾಷೆಯ
ಮೋಹಕಂಟಿಹರು

ಸೀವರಿಸದೀ ಭಾಷೆಯನು ಬಲು
ಭಾವನಾತ್ಮಕ ಬಂಧವಿರಿಸುತ
ನಾವು ಬೆಳೆಸುವ, ಕನ್ನಡಮ್ಮನ ಮೇಲ್ಮೆ ಕಾಯೋಣ
ಯಾವ ಮನುಜನು ತನ್ನ ತಾಯಿಯ
ಸೇವೆಗಿಳಿಯದೆ ಹಾಸ್ಯಗೈದರೆ
ದೇವ ಮೆಚ್ಚುವುದಿಲ್ಲವೆನ್ನುವ ತಿಳಿವು ನಮಗಿರಲಿ

ನಮ್ಮ ನಾಡನು ಕಟ್ಟಲೋಸುಗ
ಹುಮ್ಮನವ ತೋರೋಣ,ಕರೆಯುವೆ
ಹಮ್ಮುಬಿಮ್ಮುಗಳನ್ನು ತೋರದೆ ಬನ್ನಿ ಜೊತೆಗೂಡಿ
ನಿಮ್ಮ ಸಹಕಾರವನು ಬಯಸುವೆ
ಸಮ್ಮತಿಯ ನೀವ್ ಕೊಡುವಿರೆನ್ನುವ
ನಮ್ಮ ನಂಬುಗೆ ಕಳೆಯದಿರಿ ನೀವ್ ಬಂದು ಸಹಕರಿಸಿ

ಅಕರಾಸ್ತೆ= ಒಲವು
ಸೀವರಿಸು= ಉಪೇಕ್ಷಿಸು
ಬಗೆಗೆಡು= ವಿವೇಕ ಕಳೆದುಕೋ

ಕಿಗ್ಗಾಲು ಎಸ್ ಗಿರೀಶ್,
ಮೂರ್ನಾಡು ಅಂಚೆಪಟ್ಟಿಗೆ ೨೩
ಮೂರ್ನಾಡು ಅಂಚೆ,ಕೊಡಗು 571 252
ಮೊಬೈಲ್ : 91413 95426