ಕನ್ನಡವೆಂದರೆ ಮೈನವಿರೇಳುವ ವೀಣೆಯ ನಾದದ ಶಾರದೆಯೂ
ರನ್ನರು ಪಂಪರು ಪೆಂಪನು ಚೆಲ್ಲಿಹ ಕಾವ್ಯದ ಗಂಧದ ವಾರಿಧಿಯೂ
ಕಣ್ಣಿಗೆ ಶಾಂತಿಯ ಕಾಂತಿಯ ತುಂಬುವ ಹಚ್ಚನೆ ಹೊನ್ನಿನ ನಾಡಿದುವೇ
ಬಣ್ಣನೆ ಸಿಕ್ಕದ ಚೆಲ್ವಿಕೆ ಸೂಸುವ ನಮ್ಮಯ ಸಂಸ್ಕೃತಿ ಬೀಡಿದುವೇ
ತುಂಗೆ ಶರಾವತಿ ಪಾವನ ತೀರ್ಥದಿ ಮಿಂದಿಹ ಸುಂದರ ಸಗ್ಗವಿದೂ
ತೆಂಗಿನ ಕಂಗಿನ ಗಂಧವ ಚೆಲ್ಲುವ ಚಂದದ ತಂಪಿನ ತಾಣವಿದೂ
ಗಂಗಕದಂಬರು ಹೊಯ್ಸಳರಾಳಿದ ಕೆಚ್ಚೆದೆ ರಾಜರ ಮಣ್ಣಿದುವೇ
ಶೃಂಗದ ವೈಭವವೆಲ್ಲೆಡೆ ಸಾರುವ ಶಿಲ್ಪಕಲಾಕೃತಿ ಗೂಡಿದುವೇ
ಜೋಗದ ಧಾರೆಯು ಶಾಲಿಯ ಗದ್ದೆಯು ಮಾಲೆಯ ಹಾಕಿವೆ ಕನ್ನಡಕೇ
ಸಾಗರ ಸೀಮೆಯು ಸೂರೆಯ ಮಾಡುತ ತೋರಣ ಕಟ್ಟಿದೆ ಕನ್ನಡಕೇ
ರಾಗವ ಹಾಕಿವೆ ಪಕ್ಷಿಯ ಸಂಕುಲ ಜೋಗುಳ ರೂಪದಿ ಕನ್ನಡಕೇ
ಯೋಗ ವಿಶಾರದೆ ಭಾರತ ಭೂಮಿಯ ನಲ್ಮೆಯ ಪುತ್ರಿಗೆ ಸಂಭ್ರಮದೀ
ಕನ್ನಡ ಶಬ್ದವನಾಡಲು ನಾಲಿಗೆ ಧನ್ಯತೆ ಭಾವವ ಹೊಂದುವುದೂ
ಕನ್ನಡ ಕಾವ್ಯವನೋದಲು ಕಂಗಳು ದಿವ್ಯತೆ ದೃಷ್ಟಿಯ ತಾಳುವುದೂ
ಕನ್ನಡನಾಡಲಿ ಹುಟ್ಟಲು ಜೀವಿಗೆ ಜನ್ಮದ ಪುಣ್ಯವು ಬೇಕಿಹುದೂ
ಕನ್ನಡದಲ್ಲಿದೆ ಶಕ್ತಿಯು ಭಕ್ತಿಯು ಕನ್ನಡವೆಂದರೆ ಕಲ್ಪತರೂ
ಉನ್ನತ ಚಿಂತನೆಗೆಯ್ಯುತ ಬಾಳಿದ ಸಿದ್ಧರು ಸಂತರ ಧಾಮವಿದೂ
ನನ್ನಿಯ ಪಾಲಿಸಿ ಧರ್ಮವ ಸಾರಿದ ವೀರರ ಧೀರರ ಹೇಮವಿದೂ
ಘನ್ನ ಪತಾಕೆಯ ಬಾನಿನ ಲೋಕದಲೂರಿದ ಹೆಮ್ಮೆಯ ತೇಜವಿದೂ
ಕನ್ನಡ ಕಣ್ಮಣಿ ಭಾಷೆಯಲಂದವು ಸತ್ತ್ವದಿ ಸಂಪದ ದೀಪ್ತಿಯಿದೂ
ರಾಮರು ಕೃಷ್ಣರ ದರ್ಶನವಿತ್ತಿಹ ಕಬ್ಬಿಗ ಪುಂಗವರಿಲ್ಲಿಹರೂ
ಭೀಮ ಪರಾಕ್ರಮ ತೋರಿದ ಜಾಣರ ಭವ್ಯ ಪರಂಪರೆಯಿಲ್ಲಿಹುದೂ
ನಾಮದ ಹಂಗನು ತೋರದ ಬಾಯ್ದೆರೆ ಜಾನಪದಾಮೃತವಿಲ್ಲಿಹುದೂ
ತಾಮಸ ಮೆಟ್ಟುತ ಚಿಂತನೆಗೆಯ್ದಿಹ ದಾಸವರೇಣ್ಯರ ತೋಟವಿದೂ
ಕನ್ನಡ ದೇವಿಯು ರಕ್ಷೆಯ ಕೋಟೆಯು ಭಾರತ ಮಾತೆಯ ಭವ್ಯತೆಗೇ
ಕನ್ನಡ ತಾಯಿಯ ಮೌಲ್ಯವು ಸಂತತ ನವ್ಯತೆ ತುಂಬಿದ ಸಾಗರವೂ
ಕನ್ನಡ ದೇಗುಲ ದಿವ್ಯದ ಸನ್ನಿಧಿ ಭಾಗ್ಯವು ಹೆಜ್ಜೆಯನಿಲ್ಲಿಡಲೂ
ಕನ್ನಡವೆಂಬುದು ಕೇವಲ ಭಾಷೆಯೆ? ನಾಡಿನ ನಲ್ಮೆಯ ನಾಡಿಯಿದೂ
ಬನ್ನಿರಿ ಕನ್ನಡ ಮಕ್ಕಳೆ ಮುಂದಕೆ ವಿಶ್ವಪತಾಕೆಯ ಹಾರಿಸುವಾ
ಕನ್ನಡ ತಾಯಿಗೆ ನಂದದ ದೀಪವ ಹಚ್ಚುತ ಬಾಳುವ ಸಂತಸದೀ
ಕನ್ನಡವಾಗಲಿ ಲೋಕದ ಕಂಗಳು ಮುನ್ನಡೆ ಸಾಧನೆಗೆಯ್ಯುತಲೀ
ಕನ್ನಡ ಕನ್ನಡ ನಮ್ಮಯ ಕನ್ನಡ ನಮ್ಮೆದೆ ಕನ್ನಡವಾಗಿರಲೀ
( ವನಮಂಜರಿ ವೃತ್ತ ಛಂದಸ್ಸಿನಲ್ಲಿ ಭಭಭಭಭಭಗು ಗಣಗಳು)
ಸುಲೋಚನಾ.ಜಿ.ಸಾಗರ
ಕನ್ನಡ ಭಾಷಾ ಶಿಕ್ಷಕರು,
ಸರ್ಕಾರಿ ಪ್ರೌಢಶಾಲೆ,
ಸುಭಾಷ್ ನಗರ, ಸಾಗರ.
ಶಿವಮೊಗ್ಗ ಜಿಲ್ಲೆ.
ಮೊ.ನಂ. 9481063719