ನಮ್ಗ ಯಾವ್ದು ಹೊಸ ವರ್ಷ ಅಲ್ಲ!!!
ಹೌದ್ರೀ…ನಮ್ಗ ಯಾವ್ದು ಹೊಸ ವರ್ಷ ಅಲ್ಲ.ಯಾಕಂದ್ರ ನಾವು ದಿನಗೂಲಿ ಮಾಡ್ಕೊಂಡು ದಿನದ ಹೊಟ್ಟಿ ಪಾಡ್ ನೋಡ್ಕೋಳ್ಳೊ ಜನ.ಅವತ್ತಿನ್ ದುಡಿಮಿ ಅವತ್ತಿನ್ ಊಟಕ್ಕ ಆದ್ರ ಸಾಕಾಗೇತಿ.ನಮ್ಮಂತಾರ್ಗೆ ಯಾ ಯುಗಾದಿ?ಯಾ ಹೊಸ ವರ್ಷ?
ನಾವು ಹೊತಾರೆ ಎದ್ದು ಇದ್ದಿದ್ರಾಗ ಅದು ಇದು ಅಡಿಗಿ ಮಾಡ್ಕೊಂಡು ಸೂರ್ಯ ಹೊಂಡುತ್ಲೆ ಹೊಲ್ದಾಗ ಇರ್ಬೇಕು. ಹೊಲಕ್ ಬರುದು ಚುರ ತಡ ಆದ್ರೂ ನಮ್ ಸಾವ್ಕಾರ್ ನಮ್ಗ ಪೂರ್ತಿ ರೊಕ್ಕ ಕೊಡುಲ್ಲಾ.ಸಂಜಿ ತಂಕನೂ ಒಂಚೂರು ಬಿಡದಂಗ್ ಕೆಲ್ಸ ಮಾಡ್ಬೇಕು.ಇಲ್ಲಾಂದ್ರ ನಮ್ ಹಬ್ಬ ಆಗತೈತಿ.
ಸಂಜಿ ಮುಂದ ಹೊಲ್ದಾಗಿಂದ ಮನೀಗ್ ಬಂದ್ ಒಂದ್ ಕಪ್ ಚಾ ಕುಡದ ಉಳದಿದ್ದ ಪಳದಿದ್ದ ಉಂಡ್ ಮಕ್ಕೊಂಡ್ಬಿಟ್ರ ಮುಗಿತ ನೋಡ್ ನಮ್ ಯುಗಾದಿ…
ನಾವ್ ಹಬ್ಬಕ್ಕಂತ ಯಾವಾಗೂ ಹೊಸ ಅರಬಿ ತಗೋಳುದಿಲ್ಲ.ವರ್ಸಕ್ಕೊಮ್ಮಿ ರೊಕ್ಕ ಇದ್ದಾಗ ಯಾಡು ಸೀರಿ ತೊಂತೀವಿ ಅಷ್ಟ.ಒಂದು ಉಡಾಕ್. ಇನ್ನೊಂದು ಒಗಿಯಾಕ್.ಇನ್ನ ರೇಷ್ಮೀ ಸೀರೀ ಅಂತೂ ಈ ಜನಮದಾಗ್ ತಗೊಳ್ಳೂದಿಲ್ಲ.ಹರದ ಸೀರೀ ಕಾಣಲಾರದಂಗ್ ಇನ್ನೊಂದ್ ಅರಬಿ ಮುಚ್ಕೊಂಡ್ ಬಿಟ್ರ ಮುಗಿತ ನೋಡ್ ನಮ್ ಯುಗಾದಿ…
ನಮ್ಗ ದಿನಾ ಜಳಕ ಮಾಡಕ್ ಟೈಮ್ ಸಿಗುಲ್ಲ.ಇನ್ನ ಮೈ ತುಂಬ ಸೋರ್ಯಾಡಾಸ್ಕೊತ ಕೊಬ್ರಿ ಎಣ್ಣಿ ಹಚ್ಕೊಂಡ್ ಜಳಕ ಮಾಡುದ ದೂರ ಉಳಿತ.ತಲ್ಯಾಗಿನ ಕೂದಲಕ್ಕ ಎಣ್ಣಿ ಹಚ್ಚಾಕ್ ನಾವ್ ಡುಡದ ರೊಕ್ಕ ಸಾಲವಾಲ್ದ. ಹಿಂಗ್ ಐತಿ ನೋಡ್ ನಮ್ ಯುಗಾದಿ….
ನಮ್ ಮನ್ಯಾಗ ಯಾ ಹೋಳಿಗಿನೂ ಇಲ್ಲ. ಯಾ ಹುಗ್ಗಿನೂ ಇಲ್ಲ.ಈವತ್ ಒಂದಿನ ಹುಗ್ಗಿ ಉಂಡ್ರ ನಾಳೆ ನಾವ್ ಉಪವಾಸ ಇರ್ಬೇಕಾಗತ್.ಯಾಕಂದ್ರ ನಮ್ ಬಾಳ್ ಯಾವಾಗ್ಲೂ ಬರೀ ಬೇವ. ಬೆಲ್ಲ ಯಾವತ್ತೂ ಆಗಿಲ್ಲ.ಇದು ನಮ್ ಮನ್ಯಾಗಿನ ಯುಗಾದಿ…
ನಾವ್ ಯಾವತ್ತೂ ಹ್ಯಾಪಿ ಯುಗಾದಿ… ಹೊಸ ವರ್ಸ ಅಂತ ಮಾತಾಡುಲ್ಲಾ..ಎದ್ರ್ಯ… ಉಂಡ್ರ್ಯಾ… ತಿಂದ್ರ್ಯ ಅಂತ ಮಾತಾಡಿ ಕುಸಿ ಪಡ್ತೀವಿ.. ಟಸ್-ಪುಸ್ ಮಾತಾಡಲ್ಲ… ನಮ್ಮಂಗ ನಮ್ ಬಾಯಾಗಿನ ಯುಗಾದಿ…
ನಾವ್ ತಾಸ್ ಗಟ್ಲೆ ಪಾಳೆ ಹಚ್ಚಿ ಗುಡಿ ಗುಂಡಾರ ಸುತ್ತಿ ದೇವ್ರ ನೋಡಾಕ್ ಹೋಗುಲ್ಲ.ಕುಂಟಿ-ಕೂರ್ಗಿ ತಗೊಂಡ್ ಎತ್ತ್ ಹೊಡಕೊಂಡ್ ಹೊಲಕ್ ಹೋಗಿ ಬಾಳೆ ಮಾಡಿ ಭೂಮಿ ತಾಯಿನ ದೇವ್ರ್ ಅಂತ ಪೂಜೆ ಮಾಡ್ತೀವಿ…ಹೊಲ ಒಂದಿದ್ರ ಅದ ನಮ್ ಯುಗಾದಿ…
ನಮ್ಗ
ಜನೇವರಿನೂ ಹೊಸ ವರ್ಸ ಅಲ್ಲ…
ಯುಗಾದಿನೂ ಹೊಸ ವರ್ಸ ಅಲ್ಲ…
ಯಾಕಂದ್ರ ನಮ್ ದುಡಿಮಿ ನಿಂತಿಲ್ಲ…
ಹೊಟ್ಟಿ ತುಂಬ ಇನ್ನೂ ಉಂಡಿಲ್ಲ…
ಬೆಲ್ಲ ಒಮ್ಮಿನೂ ತಿಂದಿಲ್ಲ…
ಇದು ನಮ್ ಯುಗಾದಿ!!!
ಭುವನೇಶ್ವರಿ.ರು.ಅಂಗಡಿ
ನರಗುಂದ,ಗದಗ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಸತ್ಯದ ಪರಿಚಯ, ಅದ್ಭುತ ಬರವಣಿಗೆ

ಧನ್ಯವಾದಗಳು