ಚಲುವ ಕನ್ನಡ ನುಡಿಯು ನಮ್ಮದು
ಎಂದರಷ್ಟೇ ಸಾಲದು
ಆಡು ಮಾತಲಿ ಆಗಿ ಸುಲಲಿತ
ತಟ್ಟಬೇಕಿದೆ ಮನವನು
ನಾಡ ಕಟ್ಟಿದ ಕಲಿಗಳ್ಹೆಸರನು
ನೆನೆದರಷ್ಟೇ ಸಾಲದು
ನಾಡನುಳಿಸಲು ನುಡಿಯನಾಡುತ
ನಡೆಯಬೇಕಿದೆ ಕುಲಜರು
ನಾಡಗುಡಿಯಲಿ ನೆಲದ ಭಾಷೆಯು
ಕಂಡರಷ್ಟೇ ಸಾಲದು
ಗಂಟೆ ಸದ್ದಲಿ ನುಡಿಯ ಉಲಿತವು
ಮೊಳಗಬೇಕಿದೆ ನಿತ್ಯವು
ನೆಲವು ಕನ್ನಡ ಜಲವು ಕನ್ನಡ
ಎನ್ನಲಷ್ಟೇ ಸಾಲದು
ಅನ್ನದಗುಳಿಗೆ ಮೂಲ ಕನ್ನಡ
ಆಗಬೇಕಿದೆ ಭಾಷೆಯು
ನಾಡ ಮಹಿಮೆಯ ಹಾಡಿ ಹೊಗಳುತ
ಕುಣಿದರಷ್ಟೇ ಸಾಲದು
ಉಸಿರು ಹೆಸರಲಿ ಬೆರೆತು ಕನ್ನಡ
ಬೆಳೆಯಬೇಕಿದೆ ನಾಡೊಳು
ನಾಡಗಡಿಯಲಿ ಗೋಷ್ಠಿ ಸಭೆಗಳು
ನಡೆದರಷ್ಟೇ ಸಾಲದು
ಸವಿಯಗನ್ನಡ ಮಧುರ ಸುಧೆಯನು
ಹರಡಬೇಕಿದೆ ಸುತ್ತಲು
ನಾಡ ಕುಡಿಗಳು ನಾವು ಎನ್ನುತ
ಇದ್ದರಷ್ಟೇ ಸಾಲದು
ಲಾಲಿ ಹಾಡನು ಜತನದಿಂದಲಿ
ಉಳಿಸಬೇಕಿದೆ ಕೇಳಲು
ಸೋಮಲಿಂಗ ಬೇಡರ
ನಂದಿ ನಗರ
ಬೀಳಗಿ – ೫೮೭೧೧೬
ಜಿಲ್ಲೆ – ಬಾಗಲಕೋಟೆ