You are currently viewing ಒಂದು ಆದರ್ಶದ ಕನಸು ಅರಸುತ್ತ….

ಒಂದು ಆದರ್ಶದ ಕನಸು ಅರಸುತ್ತ….

ಅದು ೧೯೯೪-೯೫ ಇರಬಹುದು ನಾನು ಗೋಕರ್ಣಕ್ಕೆ ಹೋಗಿದ್ದೆ. ನನ್ನ ವ್ಯವಹಾರದ ಏಕಾತಾನತೆ ಕಾಡಿದಾಗಲೆಲ್ಲ ಕುಟುಂಬ ಸಮೇತ ಗೋಕರ್ಣದ ಬೀಚಗೆ ಹೋಗುವುದು ಮೊದಲಿನಿಂದಲೂ ರೂಢಿ. ಏಕಾಂತ, ಪ್ರಶಾಂತ, ನಿಶ್ಯಬ್ದ ಅಪೇಕ್ಷಿಸುವವರಿಗೆ ಗೋವಾಗಿಂತ ಗೋಕರ್ಣದ ಸಮುದ್ರದ ದಂಡೆಗುಂಟ ವಿಹರಿಸುವದು, ಸುಮ್ಮನೆ ಕಡಲ ತೆರೆಗಳ ಶಬ್ದಗಳನ್ನು ಆಸ್ವಾದಿಸುವುದು ಒಬ್ಬ ಸೃಜನಶೀಲ ಮನಸ್ಸಿಗೆ ಯಾವತ್ತೂ ಹಿತಕೊಡುವ ಸಂಗತಿ ಎಂಬುದು ನನ್ನ ಅನಿಸಿಕೆ.

ಗೋಕರ್ಣ ಅಂದ ಕೂಡಲೆ ಒಬ್ಬ ಸಾಹಿತ್ಯ ಆಸಕ್ತಿ ಉಳ್ಳವನಿಗೆ ತಟ್ಟನೆ ನೆನಪಾಗುವುದು ಪ್ರಖ್ಯಾತ ಲೇಖಕ ಡಾ, ಗೌರೀಶ್ ಕಾಯ್ಕಿಣಿ ಅವರು. ಅಗ್ರಹಾರವೆಂಬ ಉಸಿರುಗಟ್ಟಿಸುವ ನೆಲವನ್ನೇ ತನ್ನ ಸಾಹಿತ್ಯಿಕ ಕರ್ಮಭೂಮಿ ಮಾಡಿಕೊಂಡು ತನ್ನ ಪ್ರಖರ ವ್ಯೆಚಾರಿಕ ಬರಹಗಳಿಂದ ಉಕ್ಕಿ ಹರಿಯುವ ಕಡಲಂತೆ ಜೀವಿಸಿದ ಡಾ. ಗೌರೀಶ್ ಅವರನ್ನು ಕಾಣಲು ಅಲ್ಲೇ ವಿಚಾರಿಸುತ್ತ ಹೋದೆ.

ತೀರ ಚಿಕ್ಕ ಹಾದಿಯ ಅಗ್ರಹಾರದಲ್ಲಿ ನಡೆಯುತ್ತ ಅವರ ಮನೆ ಪ್ರವೇಶಿಸಿದೆ. ಮನೆಯ ಎದುರೇ ಸಮುದ್ರ. ಒಬ್ಬ ಸಾಹಿತಿಯ ಕಲ್ಪನೆಗೆ ಸಮುದ್ರ ಬಿಟ್ಟರೆ ಮತ್ತೆಂತಹ ಖಜಾನೆ ಬೇಕು? ಗೌರೀಶರು ಹಾಗೂ ಅವರ ಪತ್ನಿ ಶಾಂತಾಬಾಯಿ ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡು ತಿನ್ನಲು ದ್ರಾಕ್ಷಿ, ಸೇಬು ಕೊಟ್ಟರು. ಆಲದ ಮರದಂತಿದ್ದ ಗೌರೀಶರ ಎದುರು ಗರಿಕೆಯಾಕಾರದ ನಾನು ಏನು ತಾನೆ ಮಾತಾಡಲಿ. ನಾನು ಆಗ ಯಾವುದೇ ಪುಸ್ತಕ ಬರೆಯದಿದ್ದರೂ ಸಾಹಿತ್ಯದ ಅಭಿರುಚಿಯಲ್ಲೇ ಮುಳುಗೇಳುತ್ತಿರುವುದನ್ನು ಅವರೆದುರು ಪ್ರಸ್ತುತಪಡಿಸಿದೆ. ನನ್ನ ಸಾಹಿತ್ಯದ ಒಲವನ್ನು ಅತ್ಯಂತ ಗೌರವದಿಂದ ಕಂಡ ಗೌರೀಶರು ಕನ್ನಡ ಸಾಹಿತ್ಯದ ಬೆಳವಣಿಗೆಗಳ ಬಗ್ಗೆ , ಚಳುವಳಿಗಳ ಬಗ್ಗೆ (ಆಗ ನಮಗೆ ಸಾಹಿತ್ಯಕ್ಕಿಂತ ಚಳುವಳಿಗಳೇ ಮುಖ್ಯವಾಗಿತ್ತು.) ತಮ್ಮ ಪುತ್ರ ಜಯಂತ ಕನ್ನಡದ ಸುಪ್ರಸಿದ್ದ ಸಾಹಿತಿಯಾದದ್ದು ಮೆಲುಕು ಹಾಕಿದರು.ಆ ಸಂಧರ್ಭದಲ್ಲಿ ನಮ್ಮ ತಂದೆಯವರು ತೀರಿಕೊಂಡು ೮,೧೦ ತಿಂಗಳು ಆಗಿತ್ತು. ಅವರ ಸಾವನ್ನು ರೂಪಕವಾಗಿಟ್ಟುಕೊಂಡು ‘ ಎದೆ ಕಲ್ಲು ಮಾಡಿಕೊಳ್ಳಬೇಕು’ ಕವಿತೆ ಬರೆದಿದ್ದೆ. ಅದನ್ನು ಮಹಾಲಿಂಗಪುರದ ಐತಿಹಾಸಿಕ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ಓದಿದ್ದೆ. ಅದು ಅಪಾರ ಮೆಚ್ಚುಗೆಗಳಿಸಿತ್ತು. ತೆಲುಗಿನ ಪ್ರಖ್ಯಾತ ಕವಿ ವರವರರಾವ್ ಅಧ್ಯಕ್ಷತೆ ವಹಿಸಿದ್ದರು. (ಮೊನ್ನೆ ತಾನೆ ಜೇಲಿನಿಂದ ಬಿಡುಗಡೆಗೊಂಡವರು) ಈ ಕವಿತೆ ಬಗ್ಗೆ ಗೌರೀಶ್ ಅವರೊಂದಿಗೆ ಚರ್ಚಿಸಿದೆ. ಬದುಕಿನ ನಶ್ವರತೆ ಹಾಗೂ ಸಾವಿನ ಅನಿವಾರ್ಯತೆಯ ಬಗೆಗೆ ಕಡಲು ಒಂದು ಮುಖ್ಯ ಕೇಂದ್ರಬಿಂದುವಾಗಿ ಇಡೀ ಕವನವನ್ನು ಆವರಿಸಿಕೊಂಡದ್ದನ್ನು ಬಹಳೇ ಪ್ರಶಂಸಿಸಿದರು.

ಗೌರೀಶರ ಈ ಒಡನಾಟ ನನ್ನ ಬದುಕಿನ ಕೆಲವೇ ಮಹತ್ವದ ಪ್ರಸಂಗಗಳಲ್ಲಿ ಒಂದಾಗಿದೆ. ಮೊನ್ನೆ ಹೋಳಿ ಹಬ್ಬಕ್ಕೆ ನನ್ನ ಅಂಗಡಿ ಕೂಡ ಬಂದಾಗಿದ್ದರಿಂದ ಮತ್ತೆ ಗೋಕರ್ಣಕ್ಕೆ ಹೋದೆ. ಈಗ ಡಾ. ಗೌರೀಶರು, ಶಾಂತಾಬಾಯಿ ಇಲ್ಲ. ನೆನಪು ಒತ್ತರಿಸಿ ಬಂತು. ಸಂದಿಗೊಂದಿ ನಡೆಯುತ್ತ ಅವರ ಮನೆ ತಲುಪಿದೆ. ಒಮ್ಮೆಲೆ ದಂಗಾಗಿ ಹೋದೆ. ಸಂಪೂರ್ಣ ಪಾಳುಬಿದ್ದ ಮನೆ. ಗಾಬರಿಯಾಯಿತು. ಅಲ್ಲಿ ಯಾರೂ ಇರಲಿಲ್ಲ. ಎಲ್ಲ ಬಾಗಿಲಗಳು ಮುಚ್ಚಿದ್ದವು. ಹೊರಾಂಗಣ ಸುತ್ತ ಸುತ್ತು ಹಾಕಿದೆ. ಅಲ್ಲಿದ್ದ ಎರಡು ಭಾವಿಯನ್ನು ಇಣುಕಿದೆ. ನೀರು ಸಂಪೂರ್ಣ ಬತ್ತುತ್ತ ಸಾಗಿತ್ತು. ಸುತ್ತೆಲ್ಲ ಕಸದ ರಾಶಿ, ಹರಿದ ಕಾಗದಗಳು, ಪ್ಲಾಸ್ಟಿಕ್ ಬಾಟಲಿಗಳು, ಎಲ್ಲೆಂದರಲ್ಲಿ ಬೆಳೆದ ಕಸ. ಡಾ.ಗೌರೀಶ್ ಕಾಯ್ಕಿಣಿ ಹೆಸರಿನ ಬಾಗಿಲಿಗೆ ಅoಟಿದ ಮಸುಕಾದ ಫಲಕ. ಮನೆಯ ಹಿಂದೆ ಬ್ರಹದ್ದಾಕಾರದ ತಿಪ್ಪೆಗುಂಡೆ. ಸ್ಪಷ್ಟವಾಗಿ ಕಾಣದ ಸಮುದ್ರ. ಸಂಕಟವಾಯಿತು. ಮನೆಯನ್ನೊಮ್ಮೆ ದಿಟ್ಟಿಸುತ್ತ ನಿಂತೆ. ಎಷ್ಟೊಂದು ಸಾಹಿತಿಗಳು ಈ ಮನೆಗೆ ಬಂದು ಹೋಗಿರಬೇಕು, ಎಂತೆಂಥ ಚರ್ಚೆಗಳು ಇಲ್ಲಿ ನಡೆದಿರಬೇಕು, ಎಷ್ಟೊಂದು ಸಾಹಿತಿಗಳಿಗೆ ಗೌರೀಶರ ವಿಚಾರಗಳು ಪ್ರಖರತೆ ಮೂಡಿಸಿರಬೇಕು, ಎಂಬೆಲ್ಲ ವಿಚಾರಗಳು ಒತ್ತರಿಸಿ ಬಂದಾಗ ವಿಷಾದ ಭಾವವಂದು ಅದೇ ಕಡಲಿನ ಅಲೆಗಳಂತೆ ಭೋರ್ಗರೆಯುತ್ತ ನನ್ನ ದೇಹ, ಮನಸ್ಸಿಗೆ ದಾಳಿಮಾಡತೊಡಗಿದವು. ಒಬ್ಬ ಸಾಹಿತಿಗೆ ಅವನ ಬರಹವೇ ಅಂತಿಮವಾಗಿ ಹೆಸರುತಂದುಕೊಡುವುದು ಹೌದಾದರೂ ಅವನ ಭೌತಿಕ ಪರಿಕರಗಳು ಕೂಡ ನಮ್ಮ ಪ್ರಜ್ಞೆಯ ಪರೀಧಿಯಲ್ಲಿ ಅವನ ನೆನಪುಗಳನ್ನು ಹಸಿರಾಗಿ ಉಳಿಸುವುದು ಖರೆ.

ಸಾಹಿತಿ, ಕಲಾವಿದರ ಮನೆಗಳು ಸ್ಮಾರಕ ವಾಗಿ ಉಳಿಯಬೇಕೆಂಬ ನನ್ನ ಯೋಚನೆ, ಆದರ್ಶ – ಆಧುನಿಕತೆಯ ರೂಕ್ಷತೆಯಲ್ಲಿ ನಲುಗಿ ದಿಕ್ಕಾಪಾಲಾಗಿ ಹೋಗುತ್ತಿರುವುದನ್ನು ನೆನೆದೆ. ಕಾಲು ನಡುಗ ಹತ್ತಿದವು. ಒಂದು ಕ್ಷಣವೂ ಅಲ್ಲಿ ನಿಲ್ಲದೆ ಭಾರ ಹೆಜ್ಜೆ ಹಾಕುತ್ತ ನನ್ನ ಜಾಗ ಸೇರಿದೆ.

-ಅಂಬಾದಾಸ ವಡೆ
ಬಾಗಲಕೋಟ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.