ಕೂಡಿ ಕಳೆಯುತ್ತಲೆ ಹೊರಟ  ಪ್ರೇಮ ಗೀತೆ…

ಲೇಖಕರು : ಡಾ.ಯ.ಮಾ ಯಾಕೊಳ್ಳಿ

ಒಂದೊಲವ ಗೀತೆ ಬರೆ ಅಂದೆ….

ಬರೆಯ ಹತ್ತಿ ಮೂರು ದಶಕಗಳೇ ಆದರೂ

ಮುಗಿಯದ ಪ್ರೀತಿ ನಿನ್ನದು

ಎದೆಯ ಹೊಲಕೆ ಕಾವಲುಗಾತಿ

ಹಾಕಿದ ಒಂದು‌ ಕಾಳು ಅತ್ತಿತ್ತ ಸಾಗದಂತೆ

ನೋಡಿಕೊಂಡವಳು

ಮೆತ್ತನೆಯ ಮಾತೊಳಗೂ ಚುಚ್ಚುವ ಅಸ್ತ್ರದ

ಹರಿತವ  ಉಂಡವರಿಗಷ್ಟೇ ಗೊತ್ತು

ಯಾವುದು ಅಂಕೆ ದಾಟದ ಹಾಗೆ 

ಅಂಕೆಯೊಳಿಟ್ಟ

ಸಂಖ್ಯಾಶಾಸ್ತ್ರ ನಿನ್ನದು

ಅಲ್ಲಿ ಬೇರಿಜು ಕಳೆತಗಳ ಬಹಳ ಕಡಿಮೆ

ಲೆಕ್ಕದಲಿ ತಪ್ಪದೆ ನಿನ್ನ ಖಾತೆ ಕಿರ್ದಿಯನು

ಪೇರಿಸುತ್ತಲೇ ನಡೆದವಳು

ನಾ ಮಾತ್ರ ದೇಶದ ಆರ್ಥಿಕತೆಯಂಥವನು

ಕಳೆದು ಕಳೆದು ಕಡೆಯವೆರೆಗು ಖೋತಾ

ಬಜೆಟ್ಟಿನಲೆ ಬದುಕುವವನು

ಹಾಗೆಂದು ಹೆದರಿಕೆ ಏನೂ ಇಲ್ಲ

ವಿಶ್ವ ಬ್ಯಾಂಕಿನಂಥವಳ ಅಭಯವಿರುವಾಗ

ಸಾಲಕ್ಕೇನು ಕಮ್ಮಿ

ಬಡ್ಡಿ ಇರದು ಅಸಲು ಮರುಪಾವತಿಯದು

ತಪ್ಪಲಾರದ ಸಾಮಿತಿ

ಹೇಗೆ ಬರೆಯಲಿ ಕೂಡಿ ಕಳೆಯುವ ಲೆಕ್ಕ

ಬಿಟ್ಟ ಪ್ರೇಮ ಕವಿತೆ!

ಈಗ ಉಳಿದದ್ದು ಲೆಕ್ಕಾಚಾರಕ್ಕೆ

ಸೀಮಿತ ಬದುಕಷ್ಟೇ

ಆದರೂ ನಿನ್ನ ಪ್ರೇಮಕ್ಕೆ ಬಂದಿಲ್ಲ

ಒಂದಿನಿತು ಕುಂದು‌

ಅದೇ ಮೂರು ದಶಕದ

ಹಿಂದಿನ ಹುರುಪಿನಲಿ ಎದುರುಗೊಳ್ಖುವ

 ಛಲಗಾತಿ

ಕೇಳಿದರೆ ಸದಾ ಸಿದ್ಧ ಒಲವಿಗೆಲ್ಲಿದೆ ವಯ?

ಅದಕ್ಕಷ್ಟೇ ನಿರಂತರ ಜಯ

ಗೆಲ್ಲ ಹೊರಟಾಗಲೊಮ್ಮೆ ನೀ ಒಗೆದ ಪಟ್ಟು

 ಟಾಂಗಿನಲಿ ಬಿದ್ದ ನನಗೂ ಇದ್ದೇ ಇದೆ

ಸೋತವರಿಗೊಂದು ಬಾಳೆಹಣ್ಣು

ಕುಸ್ತಿಯಾಟದ ನಿಯಮ

ಇಷ್ಟೇ  ಸಾಕು ಬಿಡು,,ನೀ ಗೆದ್ದಷ್ಟೂ

ಗೆಲುವು ನನ್ನದೇ ..

ಒಲಿದ ಒಲುಮೆಯ ಸೋಲಿನಲೂ ಇರುವ

ಬಲವೂ  ನನ್ನದೇ !

No products were found for this query.

ಪ್ರಕಟಣೆಗಾಗಿ ಸಂಪರ್ಕಿಸಿ

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.