You are currently viewing ಹಿಮಗಿರಿಯ ಸೊಬಗಿನ ಕಥನ

ಹಿಮಗಿರಿಯ ಸೊಬಗಿನ ಕಥನ

ಕೃತಿ – ಮನಸೆಳೆದ ಹಿಮಗಿರಿ (ಚಾರ್ಧಾಮ್ ಪ್ರವಾಸ ಕಥನ)
ಲೇಖಕಿ – ಶ್ರೀಮತಿ ಕೆ ಶೋಭಾ ರಕ್ಷಿತ್
ದರ -130/-

ಕೋವಿಡ್ -19 ಮಹಾಮಾರಿಗೆ ಜಗತ್ತು ತಲ್ಲಣಿಸಿದ ಸಮಯದಲ್ಲಿ ಆತಂಕಕ್ಕೆ ಈಡಾಗಿ ಎಲ್ಲ ಕಾರ್ಯ ಕಲಾಪಗಳು ನಿಂತು ಹೋಗಿ ಮನೆಯಲ್ಲಿ ಕೂರುವಂತಹ ಪರಿಸ್ಥಿತಿ ಏರ್ಪಟ್ಟಾಗ ಹಲವು ಸಾಹಿತ್ಯಿಕ ಬಳಗಗಳು ತಲೆ ಎತ್ತಿದ್ದಲ್ಲದೇ ವಾಟ್ಸಾಪ್,ಫೇಸ್ಬುಕ್, ಗೂಗಲ್ ಮೀಟ್ ಗಳಲ್ಲಿ ಅಂತರ್ಜಾಲ ಆಧಾರಿತ ಸಾಹಿತ್ಯ ಸ್ಪರ್ಧೆಗಳನ್ನು ಮಾಡಿ ರಾಜ್ಯದ, ದೇಶ, ವಿದೇಶದ ಉದಯೋನ್ಮುಖ ಬರಹಗಾರರನ್ನು ಹಿರಿಯ ಸಾಹಿತಿಗಳನ್ನು ಒಂದೆಡೆ ಬರುವಂತೆ ಮಾಡಿತು. ಆ ಸಂದರ್ಭದಲ್ಲಿ ಪರಿಚಯವಾದವರು ಕೊಡಗಿನ ಬರಹಗಾರ್ತಿ ಕೆ. ಶೋಭಾ ರಕ್ಷಿತ್ ರವರು. ನಾವೆಲ್ಲ ಹಲವು ವೇದಿಕೆಗಳಲ್ಲಿ ಪ್ರತಿವಾರದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತ ಎಲ್ಲರ ಬರಹ ಓದುತ್ತಾ ಆತ್ಮೀಯತೆಯನ್ನು ಬೆಳೆಸಿಕೊಂಡು ಬರುವಂತಾಯಿತು. ಆ ಸಮಯದಲ್ಲಿ ಶೋಭಾರವರು ಗುರುಕುಲ ಕಲಾ ಪ್ರತಿಷ್ಠಾನ ಕೊಡಗು ಘಟಕದ ಜಿಲ್ಲಾಧ್ಯಕ್ಷರಾಗಿ ವಿವಿಧ ಪ್ರಕಾರದ ಸಾಹಿತ್ಯಿಕ ಸ್ಪರ್ಧೆಗಳನ್ನು ಏರ್ಪಡಿಸಿ ಉದಯೋನ್ಮುಖ ಸಾಹಿತಿಗಳಿಗೆ ಅವಕಾಶ ಕಲ್ಪಿಸುವ ಮೂಲಕ ಕನ್ನಡಮ್ಮನ ಸೇವೆ ಮಾಡಿದರು. ಚಾರ್ಧಾಮ್ ಯಾತ್ರೆಯಲ್ಲಿ ತಮ್ಮ ಅನುಭವವನ್ನು ಯಥಾವತ್ತಾಗಿ ಚಿತ್ರಿಸುವ ಮೂಲಕ ‘ಮನಸೆಳೆದ ಹಿಮಗಿರಿ’ ಎಂಬ ಅದ್ಭುತ ಪ್ರವಾಸ ಕಥನವನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಇತ್ತೀಚೆಗೆ ಪ್ರೀತಿಯಿಂದ ಅಂಚೆ ಮೂಲಕ ಇದರ ಪ್ರತಿಯೊಂದನ್ನು ನನಗೆ ಕಳುಹಿಸಿದ್ದರು. ಇದು ಇವರ ಪ್ರಥಮ ಪುಸ್ತಕವಾದರೂ ಅತ್ಯದ್ಭುತವಾಗಿ ಪ್ರತಿಯೊಂದು ವಿಚಾರವನ್ನೂ ತುಂಬಾ ಸೊಗಸಾಗಿ ನಿರೂಪಣೆ ಮಾಡುತ್ತ ಓದುಗನ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲು ಹರ್ಷಿಸುತ್ತೇನೆ.

ಚಾರ್ಧಾಮ್ ಯಾತ್ರೆ ಕೈಗೊಳ್ಳುವವರು ಒಮ್ಮೆ ಈ ಪ್ರವಾಸ ಕಥನವನ್ನು ಓದಿದರೆ ಯಾತ್ರೆಯ ಪೂರ್ವ ತಯಾರಿ ಹಾಗೂ ಯಾವ್ಯಾವ ಸ್ಥಳದಲ್ಲಿ ಹೇಗೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂಬುದರ ಬಗ್ಗೆ ಉತ್ತಮ ಮಾಹಿತಿ ದೊರೆಯುವುದರಲ್ಲಿ ಸಂಶಯವಿಲ್ಲ. ಕೊಡಗಿನ ಪ್ರಖ್ಯಾತ ಸಾಹಿತಿ ಉಳವಂಗಡ ಕಾವೇರಿ ಉದಯರವರು ಮುನ್ನುಡಿಯಲ್ಲಿ ಹೇಳಿರುವಂತೆ ಶೋಭಾರವರು ಅತ್ಯಂತ ಕಠಿಣವಾದ ಈ ಯಾತ್ರೆ ಕೈಗೊಂಡು ಹಿಮಾಲಯದ ಸೊಬಗನ್ನು ಕಣ್ಣಾರೆ ಕಂಡು ಪ್ರಕೃತಿಯ ದೈವೀಕ ಅನುಭವ ಪಡೆದಿರುವುದು ಪುಣ್ಯವೇ ಸರಿ.
ಏಕೆಂದರೆ ಚಾರ್ಧಾಮ ಯಾತ್ರೆ ಎಲ್ಲರಿಗೂ ಸಾಧ್ಯವಿಲ್ಲ .
ಮಾನಸಿಕವಾಗಿ ದೈಹಿಕವಾಗಿ ಸಿದ್ಧರಿರಬೇಕು. ಇದ್ದರೂ ದೈವಾನುಗ್ರಹವಿಲ್ಲದೇ ಅಸಾಧ್ಯವೆಂದು ಹಿರಿಯರ ಅಭಿಪ್ರಾಯವಿದೆ.

ಈ ಕೃತಿಯನ್ನು ಓದುತ್ತಿದ್ದಂತೆ ತುಂಬಾ ಸರಾಗವಾಗಿ ಓದಿಸಿಕೊಂಡು ಹೋಗುವ, ಸ್ವತಃ ನಾವೇ ಯಾತ್ರೆ ಪೂರೈಸಿದ ಅನುಭವವಾಗಷ್ಟು ಸೊಗಸಾಗಿ ಶೋಭಾರವರು ಬರೆದಿದ್ದಾರೆ. ಒಟ್ಟು ೪೪ ಲೇಖನಗಳನ್ನೊಳಗೊಂಡ ಈ ಕೃತಿಯು ಹರಿದ್ವಾರ, ಹೃಷಿಕೇಶ, ಗಂಗೋತ್ರಿ ,ಯಮುನೋತ್ರಿ, ಕೇದಾರನಾಥ,ಬದರಿನಾಥ ಧಾಮಗಳ ಬಗ್ಗೆ ಸ್ಥಳೀಯ ಮಾಹಿತಿಯ ಜೊತೆಗೆ ಅಲ್ಲಿನ ದೇವಾಲಯಗಳ ವಿಶೇಷತೆಯನ್ನು ಹಾಗೂ ಅಲ್ಲಿ ತಲುಪುವಾಗ ಕೈಗೊಂಡ ಚಾರಣದಲ್ಲಿ ತಾವು ಮತ್ತು ತಮ್ಮ ಸಹ ಪ್ರವಾಸಿ ತಂಡಗಳೆದುರಿಸಿದ ಕಷ್ಟ ನಷ್ಟಗಳನ್ನು ತುಂಬಾ ಮನೋಜ್ಞವಾಗಿ ವಿವರಿಸಿದ್ದಾರೆ. ಇವರು ಕೇದಾರನಾಥ ದೇವಾಲಯಕ್ಕೆ ಹಾಗೂ ಯಮುನೋತ್ರಿಗೆ ಹೋಗುವಾಗ ಆದ ಕುದುರೆ ಸವಾರಿ,ಪಿಟ್ಟು ,ಪಾಲಕಿಗಳ ಸವಾರಿಯ ಸಿಹಿ ಕಹಿ ಅನುಭವಗಳನ್ನು ವ್ಯಕ್ತಪಡಿಸುತ್ತ ಈ ಯಾತ್ರೆಯಲ್ಲಿ ಒದಗಿ ಬರುವ ಸನ್ನಿವೇಶಗಳ ಬಗ್ಗೆ ಹೊಂದಬೇಕಾದ ಗಂಭೀರತೆಯನ್ನು ನಮಗೆ ಸುಲಲಿತವಾಗಿ ಕಟ್ಟಿ ಕೊಟ್ಟಿದ್ದಾರೆ ಎಂದು ನನ್ನ ಅನಿಸಿಕೆ.

ಈ ಕೃತಿಯಲ್ಲಿ ಇವರ ಕೇದಾರನಾಥ ಯಾತ್ರೆಯ ಕುರಿತು ಬರೆದ ಲೇಖನ ನನಗೆ ತುಂಬಾ ಹಿಡಿಸಿತು. ಒಟ್ಟಾರೆಯಾಗಿ ಓದುಗರಲ್ಲಿ ಚಾರ್ಧಾಮ್ ಯಾತ್ರೆಯ ಸುಂದರ ಪರಿಕಲ್ಪನೆ ಮೂಡುವಂತೆ ಮಾಡಿದ ಈ ಪ್ರವಾಸ ಕಥನವು ಚಾರ್ಧಾಮ್ ಯಾತ್ರಿಕರಿಗೆ ಒಂದು ಉತ್ತಮ ಮಾರ್ಗದರ್ಶಕ ಕೈಪಿಡಿಯಾಗಿದೆ.ಇಂತಹ ಹತ್ತು ಹಲವು ಕೃತಿಗಳು ಇವರಿಂದ ಕನ್ನಡ ಸಾರಸ್ವತ ಲೋಕಕ್ಕೆ ಸೇರಲಿ ಎಂಬ ಸದಾಶಯದೊಂದಿಗೆ

ದೀಪಾಲಿ ಸಾಮಂತ,
ದಾಂಡೇಲಿ









Leave a Reply