ಬರೆಯಲು ಹೋದರೆ ಭಾವನೆ ಸಾಲದು
ಬರೆದಿಹ ಬರೆಹದ ಸಾರವೆ ರುಚಿಸದು
ಬರೆಯಲು ಹೊಸತಿನ ತೀರದ ಹಂಬಲ
ಬರೆಯುವುದೇನನು ತಿಳಿಯದ ಗೊಂದಲ
ಓದಲು ಕುಳಿತರೆ ಕಂಗಳು ಕಾಣದು
ಬೋಧನೆಗೆಯ್ಯಲು ವಿಷಯವು ಸಾಲದು
ವೇದನೆಯೇತಕೆ? ಮಲಗಲು ಹೋದರೆ
ಬಾಧೆಯು! ನಿದ್ದೆಯೆ ಬಾರದ ತೊಂದರೆ
ಕದಿಯಲು ಹೋದರೆ ಪದಗಳೆ ರುಚಿಸದು
ಪದಗಳ ಹೆಣೆಯುವ ರೀತಿಯೆ ತಿಳಿಯದು
ಹೃದಯಕೆ ಹಿಡಿಸದು ಬರೆದಿಹ ಪದಗಳು
ಹದುಳವು ಸುಮ್ಮನೆ ಕಳೆಯುವ ದಿನಗಳು
ಆದರೆ ಕೇಳದು ಮನವಿದು ಮರ್ಕಟ
ಸಾಧನೆಗೆಯ್ಯುವ ತುಡಿತವೊ ಕುಟಕುಟ
ಓದಲು ಹೇಗೋ ಹಳೆಗನ್ನಡವನು
ಬೀದಿಯ ಕರುವಿನ ಪಾಡಲಿ ದಣಿವೆನು
ಉಷೆಯಲಿ ಬರೆದಿಹ ರಚನೆಯನೋದಲು
ಕುಸಿವೆನು ಜರ್ರನೆ ಖುಷಿಯದು ಕಸಿಯಲು
ಹಸುರಲಿ ಮರುಗುವ ನಾಯಿಕೊಡೆಯ ತೆರ
ಕಸಿವಿಸಿ ಹುಟ್ಟಿಸೊ ಕವಿತಾ ಸಾಗರ
ನಾಡಿನಲುನ್ನತ ಕವಿಗಳ ತೆರದಲಿ
ಬೇಡುವೆ ಸರಸತಿಯೊಲುಮೆಯ ಮನದಲಿ
ಕಾಡುವ ಕವಿತೆಯು ನನ್ನಲಿ ಹುಟ್ಟಲು
ಮೋಡದಿ ನೇಸರನಂತೆಯೆ ಮೆರೆಯಲು
(ಮಂದಾನಿಲ ರಗಳೆ ಛಂದಸ್ಸಿನಲ್ಲಿ)
ಸುಲೋಚನಾ.ಜಿ.ಸಾಗರ
ಕನ್ನಡ ಭಾಷಾ ಶಿಕ್ಷಕರು,
ಸರ್ಕಾರಿ ಪ್ರೌಢಶಾಲೆ,
ಸುಭಾಷ್ ನಗರ,
ಸಾಗರ. ಶಿವಮೊಗ್ಗ ಜಿಲ್ಲೆ
ಮೊ.ನಂ.9481063719