ತೇವ ಆರಿದ ನಾಲಿಗೆ

ಲೇಖಕರು : ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ನಾಳೆ ಅಥವಾ ನಾಡಿದ್ದು

ಹಸಿದ ಬಯಕೆ

ಮುದುರಿ ಬರಿದಾಗಬಹುದು

ಜಗವೆಲ್ಲಾ ಡಂಗುರ ಸಾರಿ

ಶಬ್ದ ಮಾಡಬಹುದು

ದ್ವೇಷದಲಿ ಅಚ್ಚಾದ ಚಿತ್ರ

ಮಾಸದೇ ಗುಮಾನಿಯಾಗಿಬಹುದು

 

ಇಲ್ಲವಾದರೆ……

ನಮ್ಮಗಳ ನಡುವೆ

ಮೋಡ ಸರಿದು

ಕೊಡವಿ ನಿಂತ ಕನಸುಗಳೆಲ್ಲ

ಹಕ್ಕಿಯಂತೆ ಹಾರಬಹುದು

ಮಡುಗಟ್ಟಿದ ನೋವು

ನೀರಾಗಿ ಕರಗಲೂಬಹುದು

 

 ಅಥವಾ……

ಪ್ರೀತಿಯ ಕನ್ನಡಿಯಲಿ

ನಿನ್ನ ಮುಖ ಕಮಲವರಳಿ

ಜೀವಚ್ಛವಾಗಿ ನಗಬಹುದು

ಹಾದಿಯಲೆನ್ನ ಹೆಜ್ಜೆ ಮೂಡಿ

ಹನಿಗಟ್ಟಿದ ನೋವು ಬಟಾ

ಬಯಲಾಗಿಬಿಡಬಹುದು

 

ನಾಳೆ ಅಥವಾ ನಾಡಿದ್ದು

ನೀನೇ  ಗೆಲ್ಲಬಹುದು

ತೇವ ಆರಿದ ನಾಲಿಗೆಯಿಂದ ಎನ್ನ…..

ಗಂಟಲು ಒಣಗಬಹುದು

ಗೆದ್ದು ಬೀಗಲು  ನನಗಿಷ್ಟವಿಲ್ಲ

ಕದ ತಟ್ಟಿ ಬಡಿದೆಬ್ಬಿಸಿದರೂ

ನನಗೆಚ್ಚರವಾಗದಿರುವಾಗ

ಅಲ್ಲಿಗೆ……ನನ್ನ ನಿನ್ನ

ಲೆಕ್ಕ ಚುಕ್ತವಾಗಬಹುದು

 

ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಪ್ರಕಟಣೆಗಾಗಿ ಸಂಪರ್ಕಿಸಿ

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.