ಉಣ್ಣೊ ತಾಟನ್ನು ಹರಾಜು ಹಾಕುವ ದಿನ

ಲೇಖಕರು : ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಈಗಾಗಲೇ

ಒಳ-ಹೊರಗಿನ

ಗಾಳಿಯನು ಗುತ್ತಿಗೆ ಪಡೆದಿದ್ದಾರೆ,

ನಮ್ಮ ಗುಡಿಸಲಿನ-

ಹಣತೆಯ ಬೆಳಕು

ಅವರು……

ನುಂಗುವದೆಷ್ಟೊತ್ತು….?

 

ಯಾರು…ಯಾರವರು..?

 

ಚುಕ್ಕಿ ಚಂದ್ರಮರ

ನೆರಳ ಕೊರಳಿಗೆ-

ನೋಟಿಸ್ ಕೊಟ್ಟಿದ್ದಾರಂತೆ

ಹೊಳೆ,ಹಳ್ಳ,ಕೊಳಗಳ

ಹಕ್ಕಿಪಿಕ್ಕಿ ಜೀವ ಸಂಕುಲಗಳ

ಝರಾಕ್ಷ್ ಪ್ರತಿ ತೆಗೆಸಿ,

ಹುಟ್ಟು-ಸಾವಿನ ಬೆಳೆಗಾರರೇ ಅವರಾಗಿದ್ದಾರಂತೆ

 

ಯಾರು…ಯಾರವರು..?

 

ಗುಡುಗು,ಮಿಂಚಿಗೆ

ಮುತ್ತಿಗೆ ಹಾಕಿ,

ಸಂಚುಗಾರರಾಗಿದ್ದಾರಂತೆ

ಭ್ರಮೆಗೊಳಗಾದ ಮೋಡವು,

ಅರುಣನೆದೆಯ ಕದ ತಟ್ಟಿ-

ತನ್ನಾತ್ಮವನು ತೆರೆದಿಟ್ಟು,

ತನಗೆ ತಾನೆ ತಲೆ ಬೋಳಿಸಿಕೊಂಡಿದೆಯಂತೆ

ನಿದ್ರೆಯಿರದ ಸೂರ್ಯ ನಿಸ್ತೇಜವಾಗಿದ್ದಾನಂತೆ

 

ಯಾರು…ಯಾರವರು..?

 

ಕಡಲ ಆಳ,ಅಗಲ,

ವಿಸ್ತಾರವನು ಲೆಕ್ಕ-

ತೆಗೆದುಕೊಂಡಿದ್ದರಂತೆ

ಹಿಮ ಗಿರಿ ಶಿಖರಗಳ ಆಯುವನು-

ನಿಷ್ಕ್ರಿಯಗೊಳಿಸಿ,

ಮೂರ್ತ ಅಮೂರ್ತದ

ಹಂಗನ್ನು ಶೂನ್ಯಗೊಳಿಸಿದ್ದಾರಂತೆ.,

ಕಾಡು,ಗುಡ್ಡ,ಬೆಟ್ಟ ಗವಾರಗಳ ಸಣ್ಣ ಉಸಿರಾಟಕ್ಕೂ ತೆರಿಗೆ ವಿಧಿಸುತ್ತಾರಂತೆ

 

ಯಾರು…ಯಾರವರು…?

 

ಸತ್ಯದ ತಲೆಗಳ

ಪ್ರಶ್ನಿಸುವ ಮನಗಳ

ಸಭ್ಯಸ್ಥರ ದಿನಗಳ ಬಾಳನು

ಡಿಲಿಟ್ ಮಾಡುತ್ತಾ….

ಈ ಮಣ್ಣಿನ ಕಣ್ಣೀರು ಹರಿದಂತೆಲ್ಲಾ..‌.ನಿರಂತರ

ನೆಕ್ಕುತ್ತಿರುತ್ತಾರಂತೆ

 ಆಗ…….ನಮ್ಮೆಲ್ಲರ ಕಣ್ಣು

ನೆಲ ಬರೆಯುತ್ತವೆ.

ಆಪತ್ಕಾಲದಲಿ

ಸೂಲಗಿತ್ತಿಯು ಸ್ಕಲಿಸಿದ ಹಾಗೆ ಮೆತ್ತಗಿರುತ್ತೇವೆ.

 

ಯಾರು….ಯಾರವರು..?

 

ಬಂಡವಾಳಶಾಯಿಗಳು

ರಾಜಕಾರಣಿಗಳು

ಕುಂಟಲಗಿತ್ತೆಯರು

 

ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಪ್ರಕಟಣೆಗಾಗಿ ಸಂಪರ್ಕಿಸಿ

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.