ಬ್ರಹ್ಮನಿಗೆ ಒಂದು ಕ್ಷಣವಂತೆ
ಜನ್ಮನಿಗೆ ಒಂದು ಮನ್ವಂತರವಂತೆ
ಜೀವ ವಿಕಾಸಕೆ ಒಂದು ಆರಂಭ ಬೇಕಂತೆ,
ಸೃಷ್ಟಿಸಲು ಬ್ರಹ್ಮಾಂಡ, ಬ್ರಹ್ಮ ಮೊದಲಿಟ್ಟನಂತೆ,
ಆರಂಭದ ದಿನವೇ ಯುಗಾದಿಯಂತೆ,
ಯುಗಕೆ ಆದಿ, ಸೃಷ್ಟಿಗೆ ಅದು ಪ್ರಥಮವಂತೆ
ಚೈತ್ರ ಶುದ್ಧ ಪಾಡ್ಯದ ದಿನವೇ ಆದಿ ದಿನವಂತೆ
ಸಂತಸದ ವಸಂತಾಗಮನದ ಪರ್ವ ದಿನ ವಂತೆ,
ಹಸಿರು ಚಿಗುರು ಮನಕೆ ಮುದ ನೀಡುವುದಂತೆ,
ಉಸಿರನೆಳೆದು ಹೀರುವ ಸುವಾಸನೆ ಕಂಪಂತೆ,
ಕೋಗಿಲೆಯ ಮಧುರ ಗಾನದಿಂಚರವು ಬಲು ಇಂಪಂತೆ,
ನೇಗಿಲಹೂಡುತ ರೈತ ಮೂಸುವ ಸಂತಸದಿ ಹಸಿ ಮಣ್ಣ ಕಂಪಂತೆ,
ಮಾವಿನ ಹಸಿರು ತೋರಣ ರಂಗನೊಲಿವ. ರಂಗವಲ್ಲಿ,
ಬೇವಿನ ಚಿಗುರು, ಬೆಲ್ಲದ ಜೊತೆ ಸಿಹಿಕಹಿಯ ರುಚಿಯಲ್ಲಿ,
ಅಡಗಿಹುದು ಅಜ್ಞಾತ ಸಂಕೇತ ಸಮರಸವ ಸವಿಯಬೇಕಿಲ್ಲಿ, ,
ಬೆಡಗು ತುಂಬುವುದು ಅರಿತರಿದನು ನಮ್ಮ ಬಾಳಲ್ಲಿ,,
ಅಭ್ಯಂಗ ಸ್ನಾನ, ಪೂಜೆ ಜಪ, ತಪ ಧ್ಯಾನ,
ಅಭ್ಯುದಯಕೆ ಆಯುವಿಗೆ, ಧನಕೆ ,ಸೋಪಾನ,
ಅಣಿಮಾಡು ಮನಕೆ ಕಷ್ಟ ಸಹಿಸುವ ದಿಟ್ಟತನ,
ಅವರಿವರ ಕಟು ನುಡಿಗಳಿಗೆ ನೋಯದಿರಲಿ,ಮನ,
ಉದಯಿಸಲಿ ಬೆಳಗಿಸಲಿ ಹೊಸ ಯುಗಾದಿಯ ರವಿ,
ಸದಯದಲಿ ಹರಸಲಿ ,ನೀಡಲಿ ಜಗಕೆಲ್ಲ ಸವಿ,
ನವೋದಯವಾಗಲಿ ಶುಭ ಶೋಭಿತಳಾಗಲಿ ಭುವಿ,
ಶುಭೋದಯವಾಗಲಿ ವಸಂತನು ಮಾಡಲಿ ಜನರೆಲ್ಲರ ಕವಿ,
ಶೋಭಕೃತನಾಮ ಸಂವತ್ಸರ ಎಲ್ಲರಿಗೂ ಶುಭವಾಗಲಿ,
ರಾಜೇಶ್ವರಿ ದೇವೇಂದ್ರ
ತುಮಕೂರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.