ಅಂಬೇಡ್ಕರ್ ಅವರ ಮುದ್ದಿನ ಸತಿ ರಮಾಯಿ
ಪತಿಯ ಶ್ರೇಯಸ್ಸಿಗೆ ಬಿಡದೆ ದುಡಿದ ತ್ಯಾಗಮಯಿ
ಅನಾಥ ಮಕ್ಕಳ ಬಾಳ ಬೆಳಕಾದ ಕರುಣಾಮಯಿ
ಮನದರಸನ ಓದಿಗೆ ಬೆನ್ನುಲುಬಾದ ಸಹನಾಮಯಿ
ಭಾರತಾಂಬೆಯ ಉದರದ ಹೆಮ್ಮೆಯ ತನುಜಾತೆ
ಮದುವೆಗೂ ಅಡ್ಡಿಯಾಯಿತು ಜಾತಿ ಅಸ್ಪೃಶ್ಯತೆ
ಸತಿ-ಪತಿಯರು ಕಟ್ಟಿದರು ಪ್ರಬುದ್ಧ ಭಾರತ ಚರಿತೆ
ಅಚ್ಚಳಿಯದು ರಮಾಬಾಯಿಯ ಮಾನವೀಯತೆ
ಅಕ್ಕರೆ ತುಂಬಿ ಬರುತ್ತಿತ್ತು ರಾಮು ಪತಿಯ ಒಲವಲಿ
ಪ್ರತಿಗೌರವವದು ಸಾಹೇಬ್ ಸತಿಯ ಪರಿಪಾಠದಲಿ
ಮಕ್ಕಳ ಸರಣಿ ಸಾವುಗಳು ಕರಾಳ ಬಾಳ ನೌಕೆಯಲಿ
ದಿಟ್ಟತನದಿ ಜಟ್ಟಿಯಂತೆ ಮೆಟ್ಟಿ ನಿಂತಳು ಸಮಾಜದಲಿ
ಹೇಳಿದರಷ್ಟೇ ತಪ್ಪಾಗಬಹುದು ಬಾಳಸಂಗಾತಿ ಎಂದು
ಅಂಬೇಡ್ಕರರ ಬದುಕಿನ ಬಹುದೊಡ್ಡ ಗೆಳತಿ ಎಂದೆಂದು
ನಸುಕಿನ ಮುಸುಕಿನಲಿ ಉರುವಲಿಗಾಗಿ ಸುತ್ತಿದಳಂದು
ಹತ್ತಡಿ ಜಾಗದಲಿ ಸಂವಿಧಾನ ಶಿಲ್ಪಿಯ ಚೆಲುವೆ ಅಂದು
ಉಟ್ಟ ಸೀರೆಯನು ಹರಿದು ಮಗನ ಶವಕ್ಕೆ ಮುಚ್ಚಿದಳು
ಶೋಷಿತರ ಹಿತ ಕಾಪಾಡಲು ಗಂಡನೊಂದಿಗೆ ದುಡಿದಳು
ಕೋಟಿ ಕೋಟಿ ಶೋಷಿತ ಮಕ್ಕಳ ಹಿತಚಿಂತಕಳಾದಳು
ಭಾರತದ ಸಂವಿಧಾನ ಶಿಲ್ಪಿಯ ಜೀವನ ಶಿಲ್ಪಿಯಾದಳು
ಭುವನೇಶ್ವರಿ.ರು.ಅಂಗಡಿ (ಶಿಕ್ಷಕಿ)
ಸ.ಹಿ.ಪ್ರಾ ಶಾಲೆ ಸಂಕಧಾಳ (ಗದಗ)
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.