You are currently viewing ತಂದೆ ತಾಯಿಗಳಿಗೆ ಮಕ್ಕಳೇ ಭವಿಷ್ಯ

ತಂದೆ ತಾಯಿಗಳಿಗೆ ಮಕ್ಕಳೇ ಭವಿಷ್ಯ

ಅದೊಂದು ದೊಡ್ಡ ಬೆಟ್ಟ. ಬೆಟ್ಟದ ಪಕ್ಕದಲ್ಲೇ ಜುಳು ಜುಳು ಹರಿಯುವ ನದಿ.ನದಿ ತೀರದಲ್ಲಿ ಪುಟ್ಟ ಹಳ್ಳಿ.ಹಳ್ಳಿಯ ಜನರು ಬಹಳ ಶ್ರಮಜೀವಿಗಳು.ಆದರೇನು ಪ್ರಯೋಜನ?ಹಳ್ಳಿಯ ಜನರಿಗೆ ದುಡಿಯಲು ಸೂಕ್ತವಾದ (ಜಮೀನು) ಭೂಮಿಯೇ ಇಲ್ಲ.ಏಕೆಂದರೆ ಗುಡ್ಡ-ಗಾಡು ಪ್ರದೇಶವಾಗಿದ್ದರಿಂದ ಎಲ್ಲಿ ನೋಡಿದರೂ ಬರೀ ಕಲ್ಲು. ಎಷ್ಟೇ ಮಳೆ ಬಂದರೂ ವ್ಯವಸಾಯ ಮಾಡಲು ಯೋಗ್ಯವಲ್ಲದ ಭೂಮಿ. ಆದ್ದರಿಂದ ಹಳ್ಳಿಯ ಜನರು ಬೆಟ್ಟಕ್ಕೆ ಹೋಗಿ ಮರ-ಗಿಡಗಳನ್ನು ಕಡಿದು ಅವುಗಳನ್ನೇ ಮಾರಿ ಜೀವನ ಸಾಗಿಸುತ್ತಿದ್ದರು.ಬೆಳಗಿನಿಂದ ಸಂಜೆಯವರೆಗೂ ಬಿಸಿಲಿನಲ್ಲಿ ಬೆವರು ಸುರಿಸಿ ಎಷ್ಟೇ ಮರ-ಗಿಡಗಳನ್ನು ಕಡಿದರೂ,ಅವರಿಗೆ ಸಿಗುತ್ತಿದ್ದು ಕೇವಲ ಪುಡಿಗಾಸು.ಅದರಲ್ಲೇ ಜೀವನ ಸಾಗಿಸುತ್ತಾ ಮಕ್ಕಳನ್ನು ಸಾಕುತ್ತಾ ಹಾಗೂ ಹೀಗೂ ದಿನ ಕಳೆಯುತ್ತಿದ್ದರು.ಹೀಗಿರುವಾಗ ಅದೇ ಹಳ್ಳಿಯಲ್ಲಿ ಒಂದು ಚಿಕ್ಕ ಬಡ ಕುಟುಂಬ ವಾಸವಾಗಿತ್ತು. ಬಡತನಕ್ಕೆ ಮನೆ ತುಂಬಾ ಮಕ್ಕಳು ಎಂಬಂತೆ ಒಂದರ ಹಿಂದೊಂದರಂತೆ ಮೂರು ಹೆಣ್ಣು ಮಕ್ಕಳಾದರು.ಅನಂತರ ಕೊನೆಗೊಂದು ಗಂಡು ಮಗು ಆಯಿತು.ತಂದೆ-ತಾಯಿಗಳಿಗೆ ಬಡತನದಲ್ಲೂ ಹೇಳತೀರದ ಸಂತೋಷವಾಯಿತು.ಒಂದು ದಿನ ತಂದೆ-ತಾಯಿಗಳು ಪರಸ್ಪರರು ಚರ್ಚಿಸಿ,ನಾವಂತೂ ಓದು-ಬರಹ ಕಲಿಯಲಿಲ್ಲ. ಕೂಲಿ-ನಾಲಿ ಮಾಡಿ ಜೀವನ ಸಾಗಿಸುವುದೇ ನಮ್ಮ ಬದುಕಾಗಿದೆ. ನಮ್ಮ ಮಕ್ಕಳನ್ನು ಹೊಟ್ಟೆ ಬಟ್ಟೆ ಕಟ್ಟಿಯಾದರೂ ವಿದ್ಯಾಭ್ಯಾಸ ಕೊಡಿಸಬೇಕು ಎಂದು ತೀರ್ಮಾನಿಸಿದರು. ಅದರಂತೆ ತಂದೆ-ತಾಯಿಗಳು ಹಗಲಿರುಳು ಬೆಟ್ಟದಲ್ಲಿ ಮರ-ಗಿಡಗಳನ್ನು ಕಡಿದು ತಮ್ಮ ಜೀವನ ಸಾಗಿಸುವುದರ ಜೊತೆಗೆ,ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಮುಂದಾದರು. ಬೆಟ್ಟದ ತಪ್ಪಲಿನಲ್ಲಿರುವ ಹಳ್ಳಿಯಿಂದ ಶಾಲೆಗೆ ಬೇರೆ ಊರಿಗೆ ಸುಮಾರು ಐದಾರು ಕಿಲೋಮೀಟರ್ ಕಾಲು ದಾರಿಯಲ್ಲಿ ಹೋಗಬೇಕಿತ್ತು.



ಆದ್ದರಿಂದ ಮಕ್ಕಳ ಜವಾಬ್ದಾರಿ ಹೊತ್ತ ತಂದೆ ತನ್ನ ಎಲ್ಲಾ ಮಕ್ಕಳನ್ನು ಶಾಲೆಗೆ ಕಳುಹಿಸಿ,ವಾಪಾಸಾದ ನಂತರ ತನ್ನ ನಿತ್ಯದ ಕಾಯಕವನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಹಾಗೂ ಹೀಗೂ ಮಕ್ಕಳು ಬೆಳೆದು ದೊಡ್ಡವರಾದರು. ತಂದೆ-ತಾಯಿಗಳ ಶ್ರಮಕ್ಕೆ ತಕ್ಕಂತೆ ಓದಿ ವಿದ್ಯಾವಂತರಾದರು. ಪ್ರಾಪ್ತ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಸಾಲ ಸೂಲಾ ಮಾಡಿ ಒಳ್ಳೆಯ ಮನೆ ಸೇರಿಸಿದರು.ಅಷ್ಟೊತ್ತಿಗಾಗಲೇ ಮಗ ಪದವಿಯನ್ನು ಪೂರ್ಣಗೊಳಿಸಿದ್ದ. ವಿದ್ಯಾಭ್ಯಾಸ ಮುಗಿದ ನಂತರ ಮುಂದೇನು ಎಂದು ಯೋಚಿಸುವ ಹೊತ್ತಿಗಾಗಲೇ ಭಾರತೀಯ ಸೈನ್ಯದಲ್ಲಿ ಸೈನಿಕರಿಗಾಗಿ ಅರ್ಜಿ ಕರೆದಿದ್ದರು.ಪದವಿ ಮುಗಿಸಿದ್ದ ಯುವಕ ಆಕರ್ಷಕ ಸದೃಢ ದೇಹವನ್ನು ಹೊಂದಿದ್ದ.ಜೊತೆಗೆ ಸೇನಾ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ತೆಗೆದುಕೊಂಡು ಭಾರತೀಯ ಸೈನ್ಯಕ್ಕೆ ಆಯ್ಕೆಯಾಗಿದ್ದ. ಸೈನ್ಯ ಸೇರಿದ ಸಂತೋಷಕ್ಕೆ ತಂದೆ-ತಾಯಿಗಳಿಗೆ ಪಾರವೇ ಇರಲಿಲ್ಲ. ತಂದೆ-ತಾಯಿಗಳು ತಮ್ಮ ಮಗ ಸೈನ್ಯಕ್ಕೆ ಆಯ್ಕೆಯಾದ ವಿಷಯವನ್ನು ಮನೆ ಮನೆಗೂ ತಲುಪಿಸಿ ಆನಂದಿಸಿದರು. ಅಷ್ಟೊತ್ತಿಗಾಗಲೇ ಮಗ ಭಾರತೀಯ ಸೈನ್ಯಕ್ಕೆ ಸೇವೆ ಸಲ್ಲಿಸಲು ಹೊರಡಲು ಸಿದ್ಧನಾಗುತ್ತಿದ್ದ. ತಂದೆ-ತಾಯಿಗಳು ಪ್ರೀತಿಯಿಂದ ಮಗನನ್ನು ಆಶೀರ್ವದಿಸಿ ಕಳಿಸಿಕೊಟ್ಟರು.ಸದೃಢ ದೇಹವನ್ನು ಹೊಂದಿದ್ದ ಯುವಕ ಸೈನ್ಯದಲ್ಲಿ ವೀರಾವೇಶದಿಂದ ಹೋರಾಡಿ ಶತ್ರುಗಳನ್ನು ಸದೆ ಬಡಿಯುತ್ತಿದ್ದನು.ಹೀಗೆ ಸುಮಾರು ದಿನಗಳು ಕಳೆದು ಹೋದವು.ಇದ್ದಕ್ಕಿದ್ದಂತೆ ಶತ್ರು ರಾಷ್ಟ್ರದೊಡನೆ ಯುದ್ಧ ಘೋಷಣೆಯಾಯಿತು.ಎಲ್ಲೆಲ್ಲೂ ಗುಂಡಿನ ಕಾಳಗ,ಚಕಮಕಿ ನಡೆಯತೊಡಗಿದವು. ಶತ್ರುಗಳು ಕಂಡ ಕಂಡಲ್ಲಿ ನುಸುಳತೊಡಗಿದರು. ಗುಡ್ಡಗಾಡು ಪ್ರದೇಶಗಳಲ್ಲಿ, ಹಿಮಾಲಯದ ತಪ್ಪಲುಗಳಲ್ಲಿ ಶತ್ರುಗಳನ್ನು ಹಿಂಬಾಲಿಸಿಕೊಂಡು ಹೋರಾಟ ಮಾಡುತ್ತಿದ್ದರು. ಹೀಗಿರುವಾಗ ಶತ್ರುಗಳನ್ನು ಬೆನ್ನಟ್ಟುತ್ತಾ ಬೆನ್ನಟ್ಟುತ್ತಾ ಹೋಗುತ್ತಿರುವಾಗ ಶತ್ರುಗಳು ಬಾರಿ ಗಾತ್ರದ ಸಿಡಿಮದ್ದು,ಗುಂಡುಗಳನ್ನು ಹಾರಿಸತೊಡಗಿದರು. ಹಠಾತ್ತನೆ ಸಿಡಿಮದ್ದು ಯುವಕನಿಗೆ ತಾಗಿ, ಮಧ್ಯದಲ್ಲಿ ಸೀಳಿಕೊಂಡಿರುವ ಒಂದು ದೊಡ್ಡ ಬಂಡೆಯ ಮಧ್ಯದಲ್ಲಿ ಹಾರಿ ಹೋಗಿ ಸಿಲುಕಿಕೊಳ್ಳುತ್ತಾನೆ. ಸಿಡಿಮದ್ದು ಸಿಡಿದ ರಭಸಕ್ಕೆ ಯುವಕನ ಮುಖ ಗುರುತು ಸಿಗಲಾರದಷ್ಟು ವಿಕಾರವಾಗಿ ಹೋಗುತ್ತದೆ. ಬಂಡೆಯ ಮಧ್ಯದಲ್ಲಿ ಸಿಲುಕಿದ ಯುವಕನನ್ನು ನೋಡದ ಶತ್ರುಗಳು ಯುದ್ಧ ಮುಂದುವರಿಸಿಕೊಂಡು ಮುಂದೆ ಮುಂದೆ ಸಾಗಿ ಬಿಡುತ್ತಾರೆ.ಕೆಲವೇ ಗಂಟೆಗಳಲ್ಲಿ ನೂರಾರು ಸೈನಿಕರ ಮಾರಣ ಹೋಮವಾಗಿ ಬಿಡುತ್ತದೆ. ಅವರ ದೇಹಗಳೆಲ್ಲಾ ಛಿದ್ರ ಛಿದ್ರವಾಗಿ ಗುರುತು ಹಿಡಿಯಲಾರದಷ್ಟು ವಿಕಾರವಾಗಿರುತ್ತವೆ. ಇದನ್ನು ಗಮನಿಸಿದ ಭಾರತೀಯ ಸೈನ್ಯ ಪತ್ತೆಯಾಗದವರನ್ನು ಯುದ್ಧದಲ್ಲಿ ಹುತಾತ್ಮರಾಗಿದ್ದಾರೆಂದು ಘೋಷಣೆ ಮಾಡಿಬಿಡುತ್ತಾರೆ. ಅದರಲ್ಲಿ ಈ ಯುವಕನು ಸೇರಿಬಿಡುತ್ತಾನೆ.ತಂದೆ-ತಾಯಿಗಳಿಗೆ ವಿಷಯ ತಿಳಿಯುತ್ತಿದ್ದಂತೆ ಮಗನನ್ನು ಕಳೆದುಕೊಂಡ ತಂದೆ-ತಾಯಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.ಆದರೂ ತಮ್ಮ ಮಗನ ಸಾವನ್ನು ಕಣ್ಣಾರೆ ನೋಡದೆ ಒಪ್ಪಲು ಸಿದ್ಧರಿರಲಿಲ್ಲ. ಸಮಾಧಾನ,ಸಾಂತ್ವನ ಹೇಳಿದರೂ ತಂದೆ-ತಾಯಿಗಳಿಗೆ ದುಃಖ ಉಮ್ಮಳಿಸಿ ಬರುತ್ತಿತ್ತು. ಮಗನ ದೇಹವನ್ನು ಪಡೆಯದೆ ಸಾವನ್ನು ಒಪ್ಪಿಕೊಳ್ಳುವುದಾದರೂ ಹೇಗೆ?ಎಂದು ಚಿಂತಾಕ್ರಾಂತರಾದರು. ಮಗನ ಸಾವನ್ನು ಸಹಿಸಿದ ತಂದೆ-ತಾಯಿಗಳು ಯುದ್ಧ ಮುಗಿದು ಶಾಂತವಾಗಿದ್ದ ಸ್ಥಳಕ್ಕೆ ಮಗನನ್ನು ಹುಡುಕಿಕೊಂಡು ಹೊರಟರು. ಅದರಂತೆ ಎಷ್ಟೇ ದೂರ ಕ್ರಮಿಸಿದರೂ,ಯುದ್ಧದಿಂದ ಹಾನಿಗೊಳಗಾಗಿರುವ ಗಿಡ,ಕಲ್ಲು-ಮಣ್ಣುಗಳನ್ನು ಕಂಡರೆ ಹೊರತು,ಮಗನ ಸುಳಿವೇ ಇರಲಿಲ್ಲ. ಆದರೂ ಧೃತಿಗೆಡದ ತಂದೆ-ತಾಯಿ ಮಗನ ಶವವನ್ನು ಹುಡುಕುತ್ತಲೇ ಹೊರಟರು.ಗುಡ್ಡ ಬೆಟ್ಟಗಳನ್ನು ಸುತ್ತಿ ಸುತ್ತಿ ಸಾಕಾದ ತಂದೆ-ತಾಯಿಗಳಿಗೆ ಆಶ್ಚರ್ಯ ಒಂದು ಕಾದಿತ್ತು. ಅಲ್ಲೊಂದು ಎತ್ತರವಾದ ಬಂಡೆ ಇತ್ತು.ಆ ಬಂಡೆಯ ಮೇಲೆ ಹತ್ತಿ ನೋಡಿದರೆ ಏನಾದರೂ ಸುಳಿವು ಸಿಗಬಹುದು ಎಂದು ಬಹಳ ಪ್ರಯಾಸಪಟ್ಟು ಬಂಡೆ ಏರಿದರು. ಆಶ್ಚರ್ಯವೆಂಬಂತೆ ಆ ಸೀಳು ಬಂಡೆಯ ಮಧ್ಯದಲ್ಲಿ ಮಗ ಸಿಲುಕಿಕೊಂಡಿರುವುದು ಕಣ್ಣಿಗೆ ಬಿದ್ದಿತು.ಮಗನನ್ನು ನೋಡಿದ ತಕ್ಷಣ ಅಯ್ಯೋ!ನನ್ನ ಕಂದ ಎಂದು ಗೋಳಾಡತೊಡಗಿದರು. ಒಂದೆರಡು ದಿನಗಳಿಂದ ಹಸಿವಿನಿಂದ ಕಂಗೆಟ್ಟು ಸಿಡಿಮದ್ದಿನಿಂದ ಉಂಟಾದ ರಕ್ತ ಸಿಕ್ತ ದೇಹದಿಂದ ಕಂಗಾಲಾಗಿ ಹೋಗಿದ್ದ ಮಗನ ಪ್ರಾಣ ಪಕ್ಷಿ ತಕ್ಷಣ ಹಾರಿ ಹೋಗಿತ್ತು.ಮಗನ ಸ್ಥಿತಿಯನ್ನು ಸಾವನ್ನು ಕಣ್ಣಾರೆ ಕಂಡು ತಂದೆ-ತಾಯಿಗಳು ದಿಢೀರನೆ ಹೃದಯಾಘಾತದಿಂದ ಪ್ರಾಣಬಿಟ್ಟರು.
ಹೌದು,ತಂದೆ-ತಾಯಿಗಳು ಮಕ್ಕಳೇ ಭವಿಷ್ಯ ಎಂದು ಬದುಕುತ್ತಿರುತ್ತಾರೆ. ತಮ್ಮ ಬದುಕನ್ನು ಮಕ್ಕಳಿಗಾಗಿ ಮೀಸಲಿಟ್ಟಿರುತ್ತಾರೆ.ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿಗಳ ಗೋಳಾಟ ಹೇಳತೀರದು.

ಕಂಸ
ಕಂಚುಗಾರನಹಳ್ಳಿ ಸತೀಶ್
ತಾ||ನರಗುಂದ ಜಿ||ಗದಗ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.