ಲೇಖಕರು: ಪದ್ಮನಾಭ.ಡಿ
ಮೊಬೈಲ್ ಸಂಖ್ಯೆ: 9741731582
ಬೆಲೆ 140₹
ಪುಟಗಳು ೧೧೨
ಪುಟ ವಿನ್ಯಾಸ ಹರೀಶ್ ಕೆ ಆರ್
ಪ್ರಕಾಶಕರು ಸ್ನೇಹ ಬುಕ್ ಹೌಸ್ ಬೆಂಗಳೂರು
ಮುಖಪುಟದ ಮೂಲಕ ಪರಿಚಯವಾದ ಹಿರಿಯ ಲೇಖಕರಾದಂತ ಪದ್ದು ಎಂದೇ ಕರೆಯುವ ಪದ್ಮನಾಭ ಡಿ ರವರ ಇದು ಎಂಟನೇ ಕೃತಿಯಾದ ಸೂರ್ಯಾಸ್ತ ಕಾದಂಬರಿ ಇದೊಂದು ಕಾಲ್ಪನಿಕವಾದದ್ದು.
ಸಂತೋಷ- ಸಂದೇಶ,
ಭಾವಲಹರಿ, ಹೂಬನ, ತರಂಗಿಣಿ, ಮನಲಹರಿ ಇವು ಐದು ಕವನ ಸಂಕಲನಗಳು ಮತ್ತು ಭಾವಸರಿತೆ ಕಥಾ ಸಂಕಲನ, ಪ್ರೇಮಕ್ಕೆ ಜಯ ಕಾದಂಬರಿ ಹೀಗೆ ಒಟ್ಟು ಎಂಟು ಕೃತಿಗಳನ್ನು ಸಾಹಿತ್ಯದ ಒಡಲಿಗೆ ಉಣಬಡಿಸಿದ್ದಾರೆ.
ಮೊದಲನೆಯದಾಗಿ ಇದೊಂದು ಕಾಲ್ಪನಿಕ ಕಥೆ, ಸಾತ್ವಿಕ ಮನರಂಜನೆಯ ಜೊತೆ ನಾಡು ನುಡಿಯ ಅಭಿಮಾನ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುವಂತಹ ಕಥಾನಕವನ್ನು ಓದುಗರಿಗೆ ನೀಡಬೇಕೆಂಬ ಉದ್ದೇಶದಿಂದ ಒರಿಸ್ಸಾ ಹಾಗೂ ವಿಜಯನಗರದ ಇತಿಹಾಸದ ಬಗ್ಗೆ ಉಲ್ಲೇಖಿಸಿದ್ದ ಎಳೆಯೊಂದನ್ನು ಆಧಾರವಾಗಿಟ್ಟುಕೊಂಡು ಈ ಕತೆಯನ್ನು ಹೆಣೆದಿದ್ದಾರೆ.
ಅ. ನ. ಕೃ. ರವರ ಮಾತಿನಂತೆ “ಸಾಹಿತ್ಯ ಕೆಲಸ ಉಪದೇಶ ನೀಡುವುದೇ ಅಲ್ಲ ಆತ ಸೃಷ್ಟಿಸುವ ಪಾತ್ರಗಳು ಅವುಗಳ ವರ್ಣನೆ ಸಂಭಾಷಣೆಗಳಿಂದ ಸಮಾಜಕ್ಕೆ ಸಂದೇಶ ರವಾನೆಯಾಗಬೇಕು “ಎಂಬ ಸಾಲುಗಳನ್ನು ಇವರು ಬಹುವಾಗಿ ಮೆಚ್ಚಿ ತಮ್ಮ ಕಾದಂಬರಿಯಲ್ಲಿ ಅಳವಡಿಸಿಕೊಂಡಿದ್ದಾರೆ.
ಯಾವುದೇ ಮೂಲತಹ ಅಧ್ಯಯನವಿಲ್ಲದೆ ಯಾವುದೇ ಕೃತಿಗಳನ್ನು ರಚಿಸಲು ಸಾಧ್ಯವಾಗುವುದಿಲ್ಲ ಅದೇ ರೀತಿಯಾಗಿ ಈ ಕಾದಂಬರಿಯನ್ನು ಬರೆಯುವ ಮುನ್ನ ಲೇಖಕರು ಹಲವು ಕೃತಿಗಳನ್ನು ಅಧ್ಯಯನ ಮಾಡಿದ್ದಾರೆ. ಅದಕ್ಕಾಗಿ ಒರಿಸ್ಸಾದ ಇತಿಹಾಸ ಕುರಿತು ಹರಿಹರ್ ಪಾಂಡ ಬರೆದ ಹಿಸ್ಟರಿ ಆಫ್ ಕೈಸ ಪುಸ್ತಕದಲ್ಲಿ ಉಲ್ಲೇಖಿಸಿದ ರೋಮ್ಯಾಂಟಿಕ್ ಕಂಚೀ ಕಾವೇರಿ ಟ್ರೆಡಿಷನ್ ಗಮನ ಸೆಳೆದು ಕೃತಿಯಲ್ಲಿನ ವಿಜಯನಗರದ ಸಾಳ್ವ ನರಸಿಂಹನ ಪ್ರಸಂಗವೆ ಈ ಕಾದಂಬರಿ ರಚಿಸಲು ಕಾರಣವಾಗಿದೆ.
ಭಾರತದ ಇತಿಹಾಸದಲ್ಲಿ ದಕ್ಷಿಣ ಭಾರತದ ವಿಜಯನಗರ ಸಾಮ್ರಾಜ್ಯವನ್ನು ಯಾರು ಮರೆಯುವಂತಿಲ್ಲ. ಅದೇ ರೀತಿ ಉತ್ತರ ಭಾರತದಲ್ಲಿ ಕಳಿಂಗ ಸಾಮ್ರಾಜ್ಯವು ಕೂಡ ಅಷ್ಟೇ ಹೆಸರುವಾಸಿಯಾಗಿದ್ದು. ಭವ್ಯ ಪರಂಪರೆ ವೈಭವವನ್ನು ನೋಡಿದ ಕೂಡಲೇ ಯಾರ ಮನಸ್ಸಿಗಾದರೂ ಅದು ನಾಟುವಂತದ್ದೇ.
ಅದೇ ರೀತಿ ವಿಜಯನಗರದ ವೈಭವವನ್ನು ಕಣ್ಣಾರೆ ಕಂಡ ಗಜಪತಿ ದೇಗುಲದ ವೈಭವಕ್ಕೆ ಮಾರುಹೋದುದಲ್ಲದೆ, ಅದೇ ದೇಗುಲದಲ್ಲಿ ನೃತ್ಯ ಮಾಡುತ್ತಿರುವ ನಂದಿನಿ ರಾಜಕುಮಾರಿಯ ನೃತ್ಯಕ್ಕೆ ಮನ ಸೋಲುತ್ತಾನೆ. ತಾನು ಬಂದಿರುವ ಉದ್ದೇಶವನ್ನೇ ಮರೆತು ಆಕೆ ಮೋಹ ಪಾಶದಲ್ಲಿ ಸಿಲುಕುತ್ತಾನೆ.
ಗಜಪತಿಯು ತನ್ನ ರಾಜ್ಯಕ್ಕೆ ತೆರಳಿದ ನಂತರ ಮಂತ್ರಾಲೋಚನೆ ನಡೆಸಿ ಸಂಬಂಧ ಬೆಳೆಸುವದರೊಂದಿಗೆ ವಿಜಯನಗರದ ಮೇಲೆ ತನ್ನ ಹಿಡಿತ ಸ್ಥಾಪಿಸುವ ಹೊಸ ಯೋಜನೆಯನ್ನು ರೂಪಿಸಿ ಓಲೆ ಕಳಿಸುವುದರೊಂದಿಗೆ ಮುಂದಡಿಯಿಡುತ್ತಾನೆ.
ಒಂದು ಸಂಪತ್ಬರಿತ ರಾಜ್ಯವು ಹೇಗೆ ಕುಹುಕಗಳಿಂದ ಮೋಸಗಳಿಂದ ನಾಶ ಹೊಂದುತ್ತದೆ ಎಂಬುದು ಇಲ್ಲಿ ಕಂಡು ಬರುತ್ತದೆ.
ಹಾಗೆ ಒಂದು ಹೆಣ್ಣು ಸಮಯ ಬಂದಾಗ ಹೇಗೆ ದಿಟ್ಟ ಹೆಜ್ಜೆಯನ್ನು ಇಡುವಳು ಎನ್ನುವುದು ಕೂಡ ಇದರಲ್ಲಿ ಲೇಖಕರು ಹೇಳಿದ್ದಾರೆ.
ರಾಜ್ಯ ಕುಟುಂಬದಲ್ಲಿ ಅದು ರಾಜನಿಗೆ ಒಬ್ಬಳೇ ಹೆಣ್ಣು ಮಗಳು ಮುದ್ದಾಗಿ ಬೆಳೆಸಿ ಅವಳನ್ನು ಒಂದು ಸಾಮ್ರಾಜ್ಯದ ರಾಜನಿಗೆ ಮದುವೆ ಮಾಡಿಕೊಡಲು ನೂರಾರು ಬಾರಿ ಯೋಚಿಸವ ಜೊತೆಗೆ ತನ್ನ ಸಾಮ್ರಾಜ್ಯಕ್ಕೆ ತಕ್ಕಂತೆ ಹುಡುಕುವ ಯೋಚನೆ ಮತ್ತು ಜವಾಬ್ದಾರಿಯುತ ರಾಜನ, ತಂದೆಯ ಪ್ರೀತಿಯ ಪರಿಯನ್ನು ತುಂಬಾ ಸೊಗಸಾಗಿ ಸೆರೆಹಿಡಿಯಲಾಗಿದೆ.
ಇನ್ನೊಂದು ವಿಶೇಷವೆಂದರೆ ಪುರಿ ಜಗನ್ನಾತನ ಮಂದಿರರದ ವಿಶೇಷತೆಗಳನ್ನು ತುಂಬಾ ಕುತೂಹಲಕಾರಿಯಾದ ಸಂಗತಿಗಳನ್ನು ಬಿಂಬಿಸುವ ಕಾರ್ಯವಿಲ್ಲಿದೆ.
ಸೂರ್ಯಸ್ತದಲಿ ಸಾಳ್ವ ನರಸಿಂಹನ ಮಗಳು ರಾಜಕುಮಾರಿ ನಂದಿನಿಯು ತನ್ನ ವಿವಾಹವಾದ ಬಳಿಕ ತನ್ನ ಬಯಕೆಯನ್ನು ಗಜಪತಿ ರಾಜನ್ ಮೂಲಕ ಅವನಿಗೆ ಜೀವನದಲ್ಲಿ ಹೇಗೆ ಪಶ್ಚತ್ತಾಪವಾಗುವ ರೀತಿಯಲ್ಲಿ ಕೊನೆಗೊಳ್ಳುತ್ತದೆ ಅನ್ನುವುದೇ ಇಲ್ಲಿಯ ಮುಖ್ಯ ಕಥಾವಸ್ತುವಾಗಿದೆ.
ಸೂರ್ಯಾಸ್ತ ಕಾದಂಬರಿಯಲ್ಲಿ ಒಟ್ಟು ಮೂವತ್ತಾರು ಅಧ್ಯಾಯಗಳ ರೂಪದಲ್ಲಿ ಬಲು ಸುಸಜ್ಜಿತವಾದ ಓದುಗರಿಗೆ ಕ್ಷಣವು ಬಿಡದೆ ಓದಿಸಿಕೊಂಡು ಹೋಗುವ ಕಥಾವಸ್ತುವಾಗಿದೆ.
ಕೃತಿಗೆ ಮುನ್ನುಡಿಯನ್ನು ಹರಿನರಸಿಂಹ ಉಪಾಧ್ಯಾಯರು, ಹಿರಿಯ ಲೇಖಕರು , ಕವಿಗಳು ಶಂಭೂರು, ಬಂಟ್ವಾಳ ತಾಲೂಕು, ದಕ್ಷಿಣಕನ್ನಡ ಜಿಲ್ಲೆ ಇವರು ಬರೆದಿದ್ದಾರೆ. ಬೆನ್ನುಡಿಯನ್ನು ಕವಯತ್ರಿ ಸುರಭಿ ಲತಾ ಬೆಂಗಳೂರು, ಇವರು ಬರೆದು ಹಾರೈಸಿದ್ದಾರೆ.
ಲೇಖಕರಿಗೆ ಶುಭಾಶಯಗಳನ್ನು ಕೋರುತ್ತಾ ಹೆಚ್ಚಿನ ರೀತಿಯಲ್ಲಿ ಇನ್ನಷ್ಟು ಕೃತಿಗಳು ಹೊರ ಹೊಮ್ಮಲಿ ಜೊತೆಗೆ ಪ್ರಶಸ್ತಿಗಳು ಲಭಿಸಲಿ ಎಂದು ಹಾರೈಸುವೆ.
ಸವಿತಾ ಮುದ್ಗಲ್
ಗಂಗಾವತಿ
ಕೊಪ್ಪಳ ಜಿಲ್ಲೆ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.