ಸಂಪಾದಕರು :
ಶ್ರೀ ಎ.ಎಸ್.ಮಕಾನದಾರ
ಶ್ರೀ ಎಂ.ಆಯ್. ಕಣಕೆ
ನಿರಂತರ ಪ್ರಕಾಶನ
ಗಾಂಧಿ ನಗರ ಲೋಯೆಲಾ ಕಾನ್ವೆಂಟ್ ಹಿಂಭಾಗ ಬೆಟಗೇರಿ-ಗದಗ 582102
(೯೯೧೬೪೮೦೨೯೧)
ಹೊರತಂದಿರುವ ಈ ಕೃತಿ ಏಳು ಮುದ್ರಣ ಕಂಡಿದೆ.೨೪೮ ಪುಟಗಳದ್ದು.
ಬೆಲೆ ರೂ. ೨೦೦/-
‘ ವಿಶ್ವ ಭ್ರಾತೃತ್ವದ ಸೂಫಿ ದೂದಪೀರಾಂ ‘ ಕೃತಿಯು ಸೂಫಿ ಸಂಪ್ರದಾಯದ ಮೇಲೆ ಬೆಳಕು ಚೆಲ್ಲುವ ಅನೇಕ ಲೇಖನಗಳನ್ನು ಒಳಗೊಂಡಿದೆ. ಸಮಕಾಲೀನ ಸಾಹಿತ್ಯಲೋಕದ ಅನೇಕ ಮನಸ್ಸುಗಳು ಈ ಸಂಪ್ರದಾಯದತ್ತ ಒಲಿದಿರುವುದು ವಿಶೇಷ.
ಈ ಪಂಥ ಕೂಡ ಪವಾಡ, ಮೂಢನಂಬಿಕೆಗಳಿಗೆ ಬಲಿಯಾಗದೆ ತನ್ನ ವೈಚಾರಿಕ ಪ್ರಖರತೆಯನ್ನೂ ಆಧ್ಯಾತ್ಮಿಕ ಪ್ರಾಮಾಣಿಕತೆಯನ್ನೂ ಉಳಿಸಿಕೊಂಡಿರುವುದೂ ಮುಖ್ಯ ಎಂಬುದನ್ನು ಮರೆಯಲಾಗದು’ ಎಂದಿದ್ದಾರೆ ಪ್ರೊ. ಚಂಪಾ ಅವರು.
ಗೌರಿ ಲಂಕೇಶರ ನುಡಿಗಳಿವು:-” ‘ಸೂಫಿ’ ಎಂಬ ಪದದ ನಿಜವಾದ ಅರ್ಥ ‘ಪ್ರೇಮ’. ಮನುಷ್ಯ ಪ್ರೇಮದಲ್ಲಿ ದೈವತ್ವ ಕಾಣುವುದೇ ಸೂಫಿ ಸಂತರ ಬದುಕಿನ ತತ್ತ್ವ. ಕಂದಾಚಾರಗಳು, ಮತದ್ವೇಷಗಳು ‘ಧರ್ಮ’ ವೆಂದು ಆಚರಣೆಯಾಗುತ್ತಿರುವ ಈ ಹೊತ್ತಿನಲ್ಲಿ ನೊಂದ ಜನರ ಬದುಕಿನ ನಡುವೆ ಅರಳಿದ ಸೂಫಿ,ಶರಣ,ನಾಥ,ವಾರಕರಿ ಧರ್ಮ ಪಂಥಗಳು ಮನುಷ್ಯರ ನಡುವಿನ ಏಕತೆಯನ್ನೇ ಬೋಧಿಸಿದವು”.
ಶ್ರೀ ರಂಜಾನ್ ದರ್ಗಾ ಅವರ ನುಡಿಗಳಿವು:-” ಎಲ್ಲ ಕಷ್ಟಗಳಿಂದ ದಾಟಿಸಿ ನೆಮ್ಮದಿಯ ಬದುಕನ್ನು ಕೊಡುವವನೇ ಸೂಫಿ. ಕ್ಷೀರಸಾಗರದಿಂದ ಅಮೃತ ಮತ್ತು ವಿಷ ಹುಟ್ಟುವ ಹಾಗೆ ಸ್ವರ್ಗ-ನರಕಗಳು ಮತ್ತು ಸುಖ-ದುಃಖಗಳು ನಮ್ಮ ಮನಸ್ಸಿನಲ್ಲೇ ಹುಟ್ಟುವಂಥವು ಎಂಬುದನ್ನು ತೋರಿಗೊಟ್ಟವ ಸೂಫಿ. ನರಕದ ದಾರಿಯನ್ನು ತುಳಿಯುತ್ತ, ತುಳಿಯುತ್ತ ಸಾಗುವ ನಮ್ಮನ್ನು ಸ್ವರ್ಗದ ಹೆಬ್ಬಾಗಿಲಿಗೆ ತಂದು ನಿಲ್ಲಿಸುವವನೇ ಸೂಫಿ. ಆತ್ಮದ ಭಾಷೆಯನ್ನು ಕಲಿಸಿದಾತ ಸೂಫಿ.ಆತ್ಮ ಸಂವಾದದೊಂದಿಗೆ ಪರಮಾತ್ಮನ ಜೊತೆಗೂ ಸಂವಾದ ಮಾಡುವುದನ್ನು ಕಲಿಸಿದ ಗುರು ಸೂಫಿ”.
ಈ ಕೃತಿಯ ಸಂಪಾದಕದ್ವಯರು ತಮ್ಮ ನುಡಿಗಳಲ್ಲಿ,”ಮನುಷ್ಯನ ನಡುವೆ ಸ್ನೇಹ, ಸಾಮರಸ್ಯ, ಸೌಹಾರ್ದತೆ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸ ಬೇಕಾದ ಧರ್ಮದ ಹೆಸರಿನಲ್ಲಿ ಹರಿದಷ್ಟು ರಕ್ತ ಇನ್ನಾವ ಕಾರಣಕ್ಕೂ ಹರಿದಿಲ್ಲ.ಭಾರತದಲ್ಲಂತೂ ಜಾತಿ-ಧರ್ಮಗಳನ್ನು ಯಾವುದೇ ನೈಜ ಸಮಸ್ಯೆಗಳಿಂದ ಪ್ರತ್ಯೇಕಿಸುವುದು ಅಸಾಧ್ಯವೇನೋ ಅನ್ನಿಸುವಂತಹ ಪರಿಸ್ಥಿತಿ ಇದೆ. ಜಾತಿ,ಧರ್ಮವನ್ನು ಬಿಟ್ಟು, ಓರ್ವ ಮನುಷ್ಯನನ್ನು ಗುರುತಿಸಲಾರದಂತಹ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಸಂವಿಧಾನದಲ್ಲಿರುವ ಜಾತ್ಯತೀತ ಪದಕ್ಕೆ ನಿಜವಾದ ಅರ್ಥವನ್ನು ಕಲ್ಪಿಸಿಕೊಟ್ಟು, ಹಿಂದು- ಮುಸ್ಲಿಂ ಸಾಮರಸ್ಯಕ್ಕಾಗಿ ಶ್ರಮಿಸಿದ ಸೂಫಿ ಸಂತರ,ದಾರ್ಶನಿಕರ ಕೊಡುಗೆ ಅಪಾರವಾದದ್ದು” ಎಂದಿದ್ದಾರೆ.
ಈ ಕೃತಿಯ ‘ಸೌಹಾರ್ದತೆ’ ಭಾಗದಲ್ಲಿ ೦೪, ‘ಸೂಫಿವಾದ’ ಭಾಗದಲ್ಲಿ ೦೫, ‘ಪುಣ್ಯನೆಲ ಪುಲಿಗೆರೆ’ ಭಾಗದಲ್ಲಿ ೦೪, ‘ಮಾನವದೇವ ದೂದಪೀರಾಂ’ ಭಾಗದಲ್ಲಿ ೨೪, ‘ಅನುಬಂಧ’ದಲ್ಲಿ ೦೬, ಲೇಖನಗಳಿವೆ.
ಈ ಕೃತಿಯ ಲೇಖನಗಳಲ್ಲಿ ಅಲ್ಲಲ್ಲಿ ಬಿತ್ತರಗೊಂಡ ವಿಶೇಷಗಳಿವು :-”
” ಭಾರತೀಯ ಸಂಸ್ಕೃತಿ ಶ್ರೇಷ್ಠ ಸಂಸ್ಕೃತಿ. ಇಲ್ಲಿ ಎಲ್ಲರನ್ನು ಗೌರವಿಸುತ್ತೇವೆ. ಎಲ್ಲವನ್ನು ಪ್ರೀತಿಸುತ್ತೇವೆ. ನಾವೀಗ ಮನುಷ್ಯರನ್ನು ಕೂಡಿಸುವಂತಹ, ಪ್ರೀತಿಸುವಂತಹ ವೇದಿಕೆಯನ್ನು ನಿರ್ಮಾಣ ಮಾಡಬೇಕಿದೆ”.(ಪು.೪-೬)
* ಜಟಿಲಗೊಂಡಿರುವ ಸಾಮಾಜಿಕ ಸಂಬಂಧಗಳಲ್ಲಿ ಸೌಹಾರ್ದತೆ, ಬಾಂಧವ್ಯದ ಕೊಂಡಿ ಕಳಚದಂತೆ ನೋಡಿ ಕೊಳ್ಳುವುದು ನಮ್ಮ ಜವಾಬ್ದಾರಿ”(ಪು.೦೯)
* ಸಮಸ್ತ ಜೀವರಾಶಿಯನ್ನು ಕೊಂದು ಪೃಥ್ವಿಯನ್ನೂ, ನಿಸರ್ಗವನ್ನೂ ನಾಶಮಾಡುವ ಜೀವವಿರೋಧಿ ಯುದ್ಧಗಳನ್ನು ‘ಅಮ್ಮ’ ತನ್ನೆಲ್ಲ ಶಕ್ತಿಮೀರಿ ವಿರೋಧಿಸುತ್ತಾಳೆ. ಏಕೆಂದರೆ ಅವಳು ಸೃಷ್ಟಿಯನ್ನೂ, ಬದುಕನ್ನೂ ಪ್ರೀತಿಸುತ್ತಾಳೆ. ತನ್ನ ಮಡಿಲಲ್ಲಿ ಜೀವವನ್ನು ರಕ್ಷಿಸಿದ್ದಾಳೆ. ಪೋಷಿಸಿದ್ದಾಳೆ. ಸಂಸ್ಕೃತಿಯನ್ನು ಕಟ್ಟಿದ್ದಾಳೆ” (ಪು.೨೧)
* ನಾವು ನಮ್ಮ ಮಕ್ಕಳನ್ನು ಎಂಜಿನಿಯರ್, ಡಾಕ್ಟರ್ ಮುಂತಾದ ಹಣ ಮಾಡುವ ಉದ್ಯೋಗಗಳಿಗೆ ತಯಾರು ಮಾಡುತ್ತೇವೆ. ಆದರೆ, ಮಾನವರಾಗುವ ಶಿಕ್ಷಣವನ್ನು ಕೊಡುವುದಿಲ್ಲ. ಸಮಾಜವನ್ನು ಪ್ರೀತಿಸುವ ಮಾರ್ಗದರ್ಶನ ಮಾಡುವುದಿಲ್ಲ”(ಪು.೨೩)
* ಸೂಫಿಯ ಅನುಭಾವಿ ಗುಣ ಒಂದು ಪಕ್ಷಿಯಂತೆ ಗಡಿಗಳನ್ನು ಮೀರುತ್ತಾ ಅನಂತತೆಯನ್ನು ಮುಖ್ಯ ಗುರಿಯನ್ನಾಗಿಸುಕೊಂಡು ಹಾರುತ್ತಿರುವ ಒಂದು ಶೋಧನಾ ಪಥ”(ಪು.೪೨)
* ಸೂಫಿಸಂ ಇಸ್ಲಾಂ ಹಾಗೂ ಈಗಿನ ಇತರ ಪ್ರಮುಖ ಧರ್ಮಗಳಿಗಿಂತಲೂ ಪ್ರಾಚೀನವಾದುದು. ಅದು ಆತ್ಮಕ್ಕೆ ಸಂಬಂಧಿಸಿದ ಒಂದು ಪ್ರಾಚೀನ ವಿದ್ವತ್ತು “(ಪು. ೪೪).
* ಕರ್ನಾಟಕದ ಕಬೀರದಾಸರೆಂದೆ ಕರೆಯಿಸಿಕೊಳ್ಳುವ ಮಹಾನ್ ತತ್ತ್ವಪದಕಾರ ಸಂತ ಶಿಶುನಾಳ ಶರೀಫ್ ಮತ್ತು ಗುರುಗೋವಿಂದ ಭಟ್ಟರ ಗುರು-ಶಿಷ್ಯ ಜೋಡಿಯೇ ಈ ನಾಡಿಗೆ ಭಾವೈಕ್ಯತೆಯ ಭವ್ಯತೆಗೆ ಹಿಡಿದ ಬಹುದೊಡ್ಡ ಕನ್ನಡಿ ” (ಪು.೬೫)
* ಭಾರತ ದೇಶವು ಆಧ್ಯಾತ್ಮಿಕ ಸಂಸ್ಕೃತಿಯ ನೆಲೆಯಾಗಿದೆ. ದೇಶವಾಸಿಗಳ ಮೇಲೆ ಸದಾ ಪ್ರಭಾವ ಬೀರುತ್ತಿರುವವರು ಸತ್ಪುರುಷರು,ಸಾಧುಸಂತರು ಮಾತ್ರ”(ಪು.೭೧)
* ಯಾವುದೇ ಸಂತರಾಗಿರಲಿ ಅವರ ಅಂತರಂಗದಲ್ಲಿ ಪ್ರೇಮದ ಅಲೆಗಳೆ. ಅವರೆಲ್ಲ ಸುತ್ತು ಸುತ್ತೆಲ್ಲ ಸೌರಭ ಸೂಸುವ ಮಂದಾರಗಳು. ಎಲ್ಲರಿಗೂ ಪ್ರಾತಃಸ್ಮರಣೀಯರು. ಈ ಸಾಲಿನಲ್ಲಿ ವಿಜೃಂಭಿಸುವವರು ಲಕ್ಷ್ಮೇಶ್ವರದ ದೂದ ಪೀರಾಂ ಅವರು”.(ಪು.೭೩)
*_ಲಕ್ಷ್ಮೇಶ್ವರದ ಮಹಾನ್ ಸೂಫಿ ಸಂತ ದೂದಪೀರಂ ಅವರ ನುಡಿಗಳಿವು,” ಜೀವನದ ನಿಜವಾದ ಉದ್ದೇಶವನ್ನು ಅರಿತುಕೊಂಡು ನಾವು ಮಾನವಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು”,” ದೇವರಿಗೆ ಶರಣಾಗುವುದು ಅಮರತ್ವವನ್ನು ಸಾಧಿಸಲು ಒಂದು ಮಾರ್ಗ,” ಮನಸ್ಸು ಹಾಗೂ ಹೃದಯ, ಎರಡನ್ನೂ ಶುಭ್ರವಾಗಿರಿಸಿ ಕೊಂಡಾಗ ಜೀವನ ಆನಂದಮಯವಾಗಿರುತ್ತದೆ “,” ನಿರಂತರ ದೇವರ ಪ್ರಾರ್ಥನೆ ಮಾಡಿರಿ. ನಮ್ಮ ಹಾಗೂ ದೇವರ ನಡುವೆ ಮಧ್ಯವರ್ತಿಯ ಅಗತ್ಯವಿಲ್ಲ “,” ನಮ್ಮ ಕರ್ತವ್ಯವನ್ನು ಪಾಲಿಸಿದರೆ ಅದುವೇ ಮುಕ್ತಿಯ ದಾರಿ”,” ಧ್ಯಾನದ ಗುಣ ಮುಖ್ಯವೇ ಹೊರತು ಪ್ರಮಾಣವಲ್ಲ”,”ಜೀವನದಲ್ಲಿ ಏನು ದೊರಕಿದೆಯೋ ಅದನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸಬೇಕು”….
ಈ ಕೃತಿ ಸೂಫಿ ದೂಧಪೀರಾಂ ಅವರ ವಿಶ್ವ ಭ್ರಾತೃತ್ವತನ ಹಾಗೂ ದೇವರನ್ನು ನಮ್ಮವನಾಗಿಸಿ ಕೊಳ್ಳುವ ದಾರಿಯನ್ನು ತುಂಬ ಸರಳವಾಗಿ ಬಿತ್ತರಿಸಿದೆ. ಈ ಕೃತಿಯ ಲೇಖಕರೆಲ್ಲರಿಗೆ ಹಾಗೂ ಸಂಪಾದಕರಾದ ಶ್ರೀ ಎ.ಎಸ್.ಮಕಾನದಾರ ಹಾಗೂ ಶ್ರೀ ಎಂ.ಆಯ್. ಕಣಕೆ ಅವರಿಗೆ ಹಾರ್ದಿಕ ಅಭಿನಂದನೆಗಳು. ಈ ಕೃತಿಯನ್ನು ಕೊಂಡು ಓದುವುದರ ಮೂಲಕ ವಿಶ್ವಭ್ರಾತ್ವತೆಗೆ ನಾವೂ ನಮ್ಮೊಲವ ತೋರಬಹುದು.
ಡಾ ಪ್ರದೀಪ ಕುಮಾರ್
ಹೆಬ್ರಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.