You are currently viewing ಶ್ರಾವಣದ ಪೋರಿಯ ಬಹುಮುಖಿ ವಿಚಾರಧಾರೆ

ಶ್ರಾವಣದ ಪೋರಿಯ ಬಹುಮುಖಿ ವಿಚಾರಧಾರೆ

ಲೇಖಕರು

ಪಿ.ಯು.ಸಿ ಯಲ್ಲಿ ಕಾಲೇಜಿನಲ್ಲಿ ನನಗೆ ವಾಣಿಜ್ಯ ಮತ್ತು ಲೆಕ್ಕ ಶಾಸ್ತ್ರದ ಉಪನ್ಯಾಸಕರಾಗಿ ಬಂದ ಪ್ರೊ. ಶ್ರೀರಂಗ ಕಟ್ಟಿಯವರ “ಶ್ರಾವಣದ ಪೋರಿ” ಕವನ ಸಂಕಲನ ಇತ್ತೀಚೆಗೆ ತವರೂರು ಯಲ್ಲಾಪುರದಲ್ಲಿ ಬಿಡುಗಡೆಗೊಂಡಿತು. ಅವರ ಮೊದಲೆರಡು ಕೃತಿ ಬಿಡುಗಡೆಗೆ ಹೋಗಲಾಗದ ನಾನು ಈ ಬಾರಿ ತಪ್ಪದೇ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಲವು ಹಿರಿಯ ಸಾಹಿತಿಗಳ ಹಾಗೂ ಸಾಂಸ್ಕೃತಿಕ ರೂವಾರಿಗಳ ಸಾಂಗತ್ಯ ಪಡೆಯುವಂತಾಯಿತು. ಬಹಳ ಕಾಲದ ನಂತರ ಪ್ರೌಢ ಶಾಲಾ ಶಿಕ್ಷಕರು ಹಾಗೂ ಉಪನ್ಯಾಸಕರ ಭೇಟಿ ಮಾಡಿ ಸಂತಸಪಟ್ಟೆ. ಸೊಗಸಾದ ಕೃತಿ ಪರಿಚಯ, ಕವಿಗೋಷ್ಠಿಯಲ್ಲಿ ಹಿರಿಕಿರಿಯ ಸಾಹಿತಿಗಳ ಕವನ ವಾಚನ ,ಗಾಯನ ಮನತುಂಬಿ ಆ ಕ್ಷಣದಲ್ಲಿ ಲೋಕಾರ್ಪಣೆಗೊಂಡ ಶ್ರಾವಣದ ಪೋರಿ ಕೃತಿಯ ಬಗ್ಗೆ ಹಾಗೂ ಜರುಗಿದ ಕಾರ್ಯಕ್ರಮದ ಕುರಿತು ಆಶು ಮುಕ್ತಕ ರಚಿಸಿ ಗಾಯನ ಮಾಡಿ ಗುರುಗಳಿಗೆ ಒಂದು ಅಕ್ಷರ ನಮನ ಸಲ್ಲಿಸಿದ ಧನ್ಯತಾಭಾವ ನನ್ನಲ್ಲಿ ಮೂಡಿತ್ತು.

ಮುಕ್ತಕ

ಶ್ರಾವಣದ ಪೋರಿಯಾ ಕಾವ್ಯರಸ ಸವಿಸುತಲಿ
ಭಾವನೆಯ ರಸಧಾರೆ ಹೊಳೆಯಾಗಿ ಹರಿದು
ಪಾವನವು ಯಲ್ಲಾಪುರದ ಧರೆಯು ಇಂದಾಯ್ತು
ಭಾವಿತರ ಒಡಗೂಡಿ ಪೂರ್ಣತನಯೆ

ಸ್ವರಚಿತ ಮುಕ್ತಕ ನಮನದೊಂದಿಗೆ ಇನ್ನು ಶ್ರಾವಣದ ಪೋರಿಯನ್ನೊಮ್ಮೆ ಓದಿ ಅವಲೋಕನ ಮಾಡುವ ಚಿಕ್ಕ ಪ್ರಯತ್ನ ಇಲ್ಲಿ ಮಾಡಿದ್ದೇನೆ. “ಶ್ರಾವಣದ ಪೋರಿ ” ಕವನ ಸಂಕಲನ ಕಟ್ಟಿ ಗುರುಗಳು ತಮ್ಮ ಮನದಾಳದಿಂದ ಹೊಮ್ಮಿದ ಭಾವಕ್ಕೆ ಅಕ್ಷರ ರೂಪ ನೀಡಿ ಬರೆದ ಕವನಗಳು ಹಾಗೂ ಹನಿಗವನಗಳ ಗುಚ್ಛವಾಗಿದೆ. ಶ್ರೀ ಸತೀಶ ಯಲ್ಲಾಪುರರವರ ಬಹು ಸುಂದರ ಮುಖಪುಟ ವಿನ್ಯಾಸ ಹೊಂದಿರುವ ಈ ಕವನ ಸಂಕಲನಕ್ಕೆ ಡಾ.ದತ್ತಾತ್ರೇಯ ಗಾಂವಕರ ರವರು ಕವನಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಮುನ್ನುಡಿಯಲ್ಲಿ ಅದರೊಳಗಿನ ಒಳಹೊರಹುಗಳನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ನಮ್ಮ ಹೆಮ್ಮೆಯ ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ ಎಂದೇ ಪ್ರಖ್ಯಾತರಾದ ಶ್ರೀ ಪ್ರಮೋದ ಹೆಗಡೆಯವರು ಬೆನ್ನುಡಿ ಬರೆದು ಪ್ರೋತ್ಸಾಹಿಸಿದ ಈ ಕೃತಿಯನ್ನು ಗುರುಗಳು ತಮ್ಮ ಬರವಣಿಗೆಗೆ ಸ್ಪೂರ್ತಿಯಾದ ಅವರ ಧರ್ಮಪತ್ನಿ ಶ್ರೀಮತಿ ಜಾನ್ಹವಿಯವರಿಗೆ ಅರ್ಪಿಸಿದ್ದಾರೆ. ಇದನ್ನು ಓದುತ್ತಾ ಹೋದಂತೆ ವಿಭಿನ್ನ ಭಾವದಲ್ಲಿ ಮೂಡಿ ಬಂದ ಕವಿತೆಗಳು ಮನಸೆಳೆಯುತ್ತವೆ.

ಆತ್ಮಕ್ಕೆ ಆತ್ಮ ಬೆಸೆಯೆ ಸಮರಸದ ಸೊಗಸು
ಚಿದ್ವಿಕಾಸಕೆ ತುಡಿವ ಬದುಕು ಪ್ರೀತಿ ಕರುಣಿಸು
ಕಾಪಿಡುವೆ ಸಾನುರಾಗ ತೆರೆದು ಎದೆಯೊಳಗೆ
ಅನುರಣಿಸಲಿ ಪ್ರೇಮ ಸರಿಗಮ ಜಗದೊಳಗೆ

ಇವರ ‘ಕೋರಿಕೆ’ ಕವನದಲ್ಲಿ ಈ ಸಾಲುಗಳಲ್ಲಿ ಇವರು ಆತ್ಮ ಬೆರೆತರೆ ಮಾತ್ರ ಅಲ್ಲಿ ಸಮರಸ ಸಾಧ್ಯವಿದೆ. ಅಂತೆಯೇ ಸದಾ ಚಿತ್ತ ವಿಕಾಸ ಬಯಸುವ ಬದುಕನ್ನು ಪ್ರೀತಿಸುವ ಶಕ್ತಿಯನ್ನು ನೀಡೆಂದು, ಪ್ರೇಮವೆಂಬ ಸಂಗೀತ ಜಗದಲ್ಲಿ ಮೊಳಗುವಂತಾಗಲಿ ಎಂದು ಮಾಧವನಲ್ಲಿ ಮೊರೆಯಿಡುವ ಪರಿ ಮನಕ್ಕೆ ಹತ್ತಿರವೆನಿಸುತ್ತದೆ. ಮುಂದುವರೆದು ‘ಕವಿಯಾಗುವ ಮುನ್ನ ಕಿವಿಯಾಗೋಣ’ ಕವನದಲ್ಲಿ ಬರೆಯುವುದಕ್ಕೂ ಮುನ್ನ ತನ್ನ ಮನದ ಮಾತು ಮೊದಲು ಆಲಿಸಲು ಕಲಿಯಬೇಕು ಹಾಗೂ ನಿರ್ಗತಿಕರಿಗೆ ಸಹಾಯ ಹಸ್ತ ಚಾಚಬೇಕೆಂಬ ಸಾಮಾಜಿಕ ಕಳಕಳಿಯ ಸಂದೇಶ ರವಾನಿಸಿದ್ದಾರೆ.



ನಿನ್ನ ಕಾಲ್ಗಳ ಮೊದಲು ಗಟ್ಟಿ ಮಾಡಿಕೊ ನೀನೆ
ನಡೆಯಲು ಸಜ್ಜಾಗು ಬಿಡದೆ ಸುಮ್ಮನೆ

‘ಹೆಜ್ಜೆ ಹಾಕು ಸುಮ್ಮನೆ ‘ ಈ ಕವನದಲ್ಲಿ ಮೂಡಿ ಬಂದ ಈ ಸಾಲುಗಳು ಮನುಷ್ಯ ಪರಾವಲಂಬಿಯಾಗದೇ ಮೊದಲು ತನ್ನನ್ನು ತಾನು ನೆಲೆಗೊಳಿಸುವುದನ್ನು ಕಲಿಯಬೇಕೆಂಬ ನೀತಿ ಬೋಧಿಸುತ್ತವೆ.
‘ನಾನೊಂದು ಹಣತೆ’ ಕವನದಲ್ಲಿ ತೊಟ್ಟಿಲ ಮುಂದೆ, ದೇವರ ಗುಡಿಯಲ್ಲಿ ಹಾಗೂ ಕೊನೆಗೆ ನಿರ್ಜೀವ ದೇಹದ ಮುಂದೆಯೂ ಬೆಳಗುವ ಹಣತೆಯು ಹುಟ್ಟು ಸಾವಿಗೆ ಸಾಕ್ಷಿಯಾಗಿದೆ ಎನ್ನುವ ಅರ್ಥಪೂರ್ಣ ಭಾವವನ್ನು ಮೂಡಿಸಿದ್ದಾರೆ. ಕೃತಿಯ ಸಂಪೂರ್ಣ ಆಶಯ ಹೊತ್ತಅಪ್ಟಟ ಉತ್ತರ ಕರ್ನಾಟಕದ ಭಾಷೆಯ ಸೊಗಡಿನಲ್ಲಿ ಮೂಡಿ ಬಂದ ಕವನ ‘ಶ್ರಾವಣದ ಪೋರಿ ‘ ಯಲ್ಲಿ ದ. ರಾ. ಬೇಂದ್ರೆಯವರ ಕಾವ್ಯದ ಝಲಕು ಕಾಣ ಸಿಗುತ್ತದೆ. ಅಂತರ್ ಯಾನ, ಸುಖಾ ಬೇಕೆನೊ ಸುಖಾ, ಹೃದಯ ಕಣಜದ ಪ್ರೀತಿ, ಶವದ ಸ್ವಗತ, ಬಾಪು ಮತ್ತೆ ರಿಸ್ಕ್ ತೊಗೊಳ್ತೀರಾ ಹಾಗೂ ಅನುವಾದಿತ ಕವನ ಆ ಕಾಲವೊಂದಿತ್ತು,ಯಾರವರು ಮುಂತಾದ ಕವನಗಳು ಜೀವನದ ಬೇರೆ ಬೇರೆ ಮಜಲುಗಳನ್ನು ಬಿಂಬಿಸುವ ಕವನಗಳಾಗಿವೆ. ‘ಪುನಃ ಒಂದು ಸಲ’ ಕವನವು ಪ್ರತಿಯೊಬ್ಬರೂ ಆಸೆ ಪಡುವ ಬಾಲ್ಯದ ದಿನದ ಮೆಲುಕು ಹಾಕುವ ಅದ್ಬುತ ಭಾವನೆಯಿಂದ ಮೇಳೈಸಿದೆ.

ಇವರು ರಚಿಸಿದ ‘ಹುಡುಗಿ’ಎಂಬ ಶೀರ್ಷಿಕೆಯಡಿ ಸುಮಾರು ಮುನ್ನೂರಕ್ಕೂ ಹೆಚ್ಚು ಹನಿಗವನಗಳು ವಿಶಿಷ್ಟ ಮಾದರಿಯಲ್ಲಿ ಹೊರಹೊಮ್ಮಿದ್ದು ಓದುಗನ ಮನದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿವೆ. ಸುಲಭವಾಗಿ ಅರ್ಥವಾಗುವಂತೆ ಸರಳ ಪದಗಳಲ್ಲಿ ಕಟ್ಟಿದ ಹನಿಗವನಗಳು ಇವರ ಹಾಸ್ಯಪ್ರಜ್ಞೆ, ಎಂದಿಗೂ ಬತ್ತದ ಜೀವನ ಪ್ರೀತಿಯ ಸೆಲೆ,
ಸರಸ, ವಿರಸ ಹಾಗೂ ಕನಸಿನ ಒಡತಿಯ ಬಗೆಗಿನ ಮನದ ಮಾತು ಬಿಂಬಿಸುವ, ಓದುಗನನ್ನು ಹಿಡಿದಿಟ್ಟು ಮಧುರ ಭಾವ ಬಿತ್ತುವ ರಸಾನುಭವದ ಖಜಾನೆಯೇ ಆಗಿದೆ. ಈ ಹನಿಗವನಗಳನ್ನು ಬಿಂಕದ ಹುಡುಗಿ, ಮುನಿದ ಹುಡುಗಿ, ಒಲಿದ ಹುಡುಗಿ ಮತ್ತು ಕೈಹಿಡಿದ ಹುಡುಗಿ ಎಂದು ವಿಭಾಗಿಸಿ ಬಹು ಸೊಗಸಾಗಿ ಬದುಕಿನ ಸತ್ಯಗಳನ್ನು ಅನಾವರಣಗೊಳಿಸುತ್ತ ನವಿರಾದ ಹಾಸ್ಯದೊಂದಿಗೆ ಅಕ್ಷರಬುತ್ತಿ ಕಟ್ಟಿ ಕೊಟ್ಟಿದ್ದಾರೆನ್ನಬಹುದು. ಇಂತಹ ಸುಂದರ ಭಾವ ಹಂದರವಾದ ಈ ಶ್ರಾವಣದ ಪೋರಿ ಕವನ ಸಂಕಲನವು ಓದುಗರ ಮೆಚ್ಚುಗೆ ಗಳಿಸದೇ ಇರದು.

ಒಟ್ಟಾರೆಯಾಗಿ ಈ ಶ್ರಾವಣದ ಪೋರಿ ಕವನ ಸಂಕಲನದಲ್ಲಿ ಶ್ರೀರಂಗ ಕಟ್ಟಿಯವರ ಬಹುಮುಖಿ ವಿಚಾರಧಾರೆಗಳು ಅನಾವರಣವಾಗಿದೆ ಎನ್ನಲು ಅಡ್ಡಿಯಿಲ್ಲ. ಇಂತಹ ಉತ್ತಮ ಕೃತಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಗುರುಗಳ ಇನ್ನೂ ಹೆಚ್ಚಿನ ಕೃತಿ ಹೊರಬರಲಿ ಎಂಬ ಆಶಯದೊಂದಿಗೆ ಮನಃ ಪೂರ್ವಕವಾಗಿ ವಂದಿಸುತ್ತೇನೆ.

ಶ್ರೀಮತಿ ದೀಪಾಲಿ ಸಾಮಂತ
ದಾಂಡೇಲಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.