ನಾವು ಹಿಂದೂ-ಮುಸ್ಲಿಂ ಕ್ರೈಸ್ತರು ಯಾವ
ವೈಮನಸ್ಸುಗಳಿಲ್ಲದೆ ಚೆನ್ನಾಗಿ ಇದ್ದೇವೆ
ಏಕತೆಯ ಗೀತೆ ಹಾಡಿ ಸರ್ವ ಜನಾಂಗವೂ
ಸಾಮರಸ್ಯದಿಂದ ಕೂಡಿ ಬದುಕುತ್ತಿದ್ದೇವೆ
ನೀವೀಗ ಮಧ್ಯೆ ಬಂದು ಭಾವೈಕ್ಯತೆ
ಗೂಡಿಗೆ ಕಲ್ಲು ಹೊಡೆಯಬೇಡಿ ನಿಮ್ಮ
ಸ್ವಾರ್ಥದ ಬೆಳೆ ಬೇಯಿಸಿಕೊಳ್ಳಲು
ಇತಿಹಾಸದ ಕಂತೆಗಳನ್ನು ತಂದು
ಒಂದು ಜನಾಂಗದ ಹಣೆಗೆ ಅಂಟಿಸಬೇಡಿ
ನಾವು ಭಾರತೀಯರು ಸೌಹಾರ್ದ ನಾಡಲ್ಲಿ
ಒಂದು ಕಿವಿಯಲ್ಲಿ ಅಜಾನ್ ಕೇಳಿದರೆ ಮತ್ತೊಂದು
ಕಿವಿಯಲ್ಲಿ ಸುಪ್ರಭಾತ ಕೇಳಿ ಬೆಳೆದವರು
ಧರ್ಮವನ್ನು ಪಕ್ಕಕ್ಕಿಟ್ಟು ಮಾನವೀಯತೆಯನ್ನು
ಮುನ್ನೆಲೆಗೆ ತಂದು ಎಲ್ಲರನ್ನೂ ಪ್ರೀತಿಸುತ್ತಾ,
ಗೌರವಿಸುತ್ತಾ ಜೊತೆಗೂಡಿ ಬದುಕಿದವರು
ನೀವೀಗ ಮಧ್ಯೆ ಬಂದು
ಎಲ್ಲದಕ್ಕೂ ಧರ್ಮದ ಲೇಬಲ್
ಹಚ್ಚಿ ನಮ್ಮನ್ನ ಬೇರ್ಪಡಿಸುವ ಪ್ರಯತ್ನ
ಮಾಡಬೇಡಿ. ನಾವು ಮತ್ತು ಅವರು
ನಿತ್ಯ ಬೆಳಗಾದರೆ ಎದುರುಗೊಳ್ಳುತ್ತೇವೆ
ನಾವು ಸಲಾಮ್ ಹೇಳುತ್ತೇವೆ
ಅವರು ಶರಣು ಎನ್ನುತ್ತಾರೆ
ಈರ್ವರೂ ಕೈ ಕುಲಕಿ ನಡೆಯುತ್ತೇವೆ
ಎಲ್ಲರೂ ಕೂಡಿ ದುಡಿಯುತ್ತೇವೆ.
ನೀವೀಗ ಮದ್ಯೆ ಬಂದು ಹೊಟ್ಟೆಪಾಡಿನ
ದುಡಿಮೆಗೆ ನಿರ್ಭಂಧ ವಿಧಿಸಬೇಡಿ
ಜನಾಂಗಗಳ ಮಧ್ಯೆ ಗೋಡೆ ಕಟ್ಟಬೇಡಿ
ನಾವು ಶರಣರು ಮತ್ತು ಸೂಫಿ ಸಂತರು
ನಡೆದಾಡಿದ ನೆಲದಲ್ಲಿ ಬದುಕುತ್ತಿರುವರು
ನಾವು ಗುಡಿಗೆ ಹೋಗಿ ಪೂಜೆ ಸಲ್ಲಿಸುತ್ತೇವೆ
ಅವರು ದರ್ಗಾಕ್ಕೆ ಬಂದು ಸಕ್ಕರೆ ಓದಿಸುತ್ತಾರೆ
ನಮ್ಮ ಮಧ್ಯ ಯಾವ ಭೇದವಿಲ್ಲ
ನೀವೀಗ ಮಧ್ಯೆ ಬಂದು ಪ್ರಖರ ವಾಗ್ಮಿಗಳು
ಎನಿಸಿಕೊಂಡವರ ಉದ್ದುದ್ದವಾದ ಭಾಷಣಗಳಿಂದ
ಜನರ ಮನಸ್ಸುಗಳನ್ನು ಹೊಡೆಯಬೇಡಿ.
ನಾವು ಅವರ ಹಬ್ಬ ಹರಿದಿನಗಳಲ್ಲಿ
ಮನೆಗೆ ಹೋಳಿಗೆ ಊಟ ಸವಿಯುತ್ತೇವೆ
ಅವರು ಸಹ ನಮ್ಮನೆಗೆ ಬಂದು ಪಾಯಸ
ಕುಡಿಯುತ್ತಾರೆ. ಯಾವ ಸಂಕೋಚಗಳಿಲ್ಲದೆ
ನಾವೆಲ್ಲರೂ ಒಟ್ಟೊಟ್ಟಿಗೆ ಸಾಗುತ್ತವೆ
ನೀವೀಗ ಮಧ್ಯೆ ಬಂದು ಹಿಂದೂ-ಮುಸ್ಲಿಂ
ಬೇರೆ ಬೇರೆ ಎಂದು ಸಮಾಜದ ಸ್ವಾಸ್ತ್ಯವನ್ನು
ಕೆಡಿಸಬೇಡಿ ಸಾಮರಸ್ಯದ ಸಹಬಾಳ್ವೆಯನ್ನ ಕೊಲ್ಲಬೇಡಿ.
ಹುಸೇನಸಾಬ ವಣಗೇರಿ
ಸಂಶೋಧನಾ ವಿದ್ಯಾರ್ಥಿ
ಕ. ವಿ. ವಿ ಧಾರವಾಡ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.