ನಗುವಿನ ಮನವು
ಅರೋಗ್ಯ ಸ್ಥಿರವು
ಮಗುವಿನ ಮನವು
ಖುಷಿಯ ಜಗವು
ಎಲ್ಲಿ ನಗುವಿರುವುದೋ ಅಲ್ಲಿ ಮನಸ್ಸು ಅಹ್ಲಾದಕರವಾಗಿರುತ್ತದೆ. ದೇಹವು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿರುತ್ತದೆ. ಜ್ಞಾನವು ತನಗರಿವಿಲ್ಲದಂತೆ ಕೂಡಿಕೊಳ್ಳುತ್ತದೆ. ಮಗುವಿನ ಮನವು ಹೂವಿನಂತೆ ಕೋಮಲವಾಗಿರುವುದು. ಮೃದುವಾದ ಮನಕ್ಕೆ ಅತಿಯಾದ ಒತ್ತಡ ಹೇರದೆ, ಸೂರ್ಯನ ಕಿರಣಗಳಂತೆ ಮನದ ಹೂ ಅರಳಲು ಸಹಕರಿಸಬೇಕು.
ಪ್ರಸ್ತುತವಾಗಿ ಎಲ್ಲಾ ತರಗತಿಗಳ ಮೌಲ್ಯಮಾಪನ ಮುಗಿದು ರಜೆಯೂ ಸಿಕ್ಕಿದೆ. ರಜೆ ಎಂದರೆ ಬಿಡುವು. ವಿಶ್ರಾಂತಿ ಅಲ್ಲ. ನಮ್ಮ ನಿತ್ಯ ಜೀವನದ ಕಾರ್ಯ ಚಟುವಟಿಕೆಗಳಿಗೆ ಸ್ವಲ್ಪ ವಿಶ್ರಾಂತಿ ನೀಡಿ ಮನಕ್ಕೆ ಮುದ ನೀಡುವ ಉಪಯುಕ್ತ ಕಾರ್ಯಗಳನ್ನು ಮಾಡುವುದು ಎಂದರ್ಥ. ರಜಾ ಸಮಯವು ವಿದ್ಯಾರ್ಥಿಗಳಿಗೆ ಬಿಡುವಿನ ವೇಳೆಯ ಸದುಪಯೋಗದ ಜೊತೆಗೆ ಹೋಂ ವರ್ಕ್, ಪರೀಕ್ಷೆ ಇತ್ಯಾದಿ ಶೈಕ್ಷಣಿಕ ಚಟುವಟಿಕೆಗಳಿಂದ ಹೊರಬಂದು ತಮಗಿಷ್ಟವಾದ ಆಟ ಆಡಿ ಕುಣಿದು ಕುಪ್ಪಳಿಸುವ ಸಮಯ.
ಕಲಿಕೆ ಎಂಬುದು ಸದಾ ಹರಿಯುವ ತೊರೆಯಂತೆ ನಿರಂತರ. ಅದು ಕೇವಲ ಪಠ್ಯಪುಸ್ತಕದಿಂದಲ್ಲದೆ ತಮ್ಮ ಸ್ವಕಾರ್ಯಚಟುವಟಿಕೆಗಳಿಂದ ಕಲಿಯುವ ಶಿಕ್ಷಣ. ಆದ್ದರಿಂದ ನಮ್ಮ ಮಗುವಿನ ರಜಾ ಸಮಯವನ್ನು ಅರ್ಥಪೂರ್ಣವಾಗಿಸುವುದು ನಮ್ಮ ಕರ್ತವ್ಯ.ಈ ನಿಟ್ಟಿನಲ್ಲಿ ಹೇಗೆ ರಜೆಯನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂಬುದನ್ನು ಅವಲೋಕನ ಮಾಡೋಣ.
* ಇಷ್ಟು ದಿನದವರೆಗೆ ಶಾಲೆಗೆ ಹೊರಡುವ ಅವಸರದಲ್ಲಿದ್ದ ಮಗುವಿಗೆ, ಬೆಳಗ್ಗಿನ ಎಳೆ ಬಿಸಿಲು ಮತ್ತು ಸಂಜೆಯ ಹೊಂಗಿರಣಗಳಿಗೆ ಮೈಯೊಡ್ದುವ ಅವಕಾಶ ನೀಡಬೇಕು. ನಡಿಗೆ, ಆಟ,ಯೋಗ, ಸರಳ ವ್ಯಾಯಾಮ, ಸೈಕ್ಲಿಂಗ್ ಗೆ ಅನುವು ಮಾಡಬೇಕು. ಇದರಿಂದ ವಿಟಮಿನ್ ಡಿ ದೇಹಕ್ಕೆ ಹೇರಳವಾಗಿ ಸಿಗುವುದರ ಜೊತೆಗೆ ಮಗುವು ದಿನವಿಡೀ ಖುಷಿಯಿಂದ ನಲಿಯಲು ಸಾಧ್ಯ.
* ನೆರೆಕೆರೆಯ ಗೆಳೆಯರೊಂದಿಗೆ ಆಟವಾಡಲು ಬಿಡಬೇಕು. ಈ ಸಮಯದಲ್ಲಿ ಬಿಸಿಲು, ನೀರು, ಧೂಳು, ಮಣ್ಣು, ಗಾಯ, ಜಗಳ, ಸುಸ್ತು ಇವೆಲ್ಲವೂ ಸರ್ವೇ ಸಾಮಾನ್ಯ ಮತ್ತು ನೈಸರ್ಗಿಕವಾದವುಗಳು. ಇದರಿಂದ ದೇಹದಲ್ಲಿ ಪ್ರತಿರೋಧ ಕಾಯಗಳು ಹೆಚ್ಚುತ್ತವೆ. ಹಾಗಾಗಿ ಮಕ್ಕಳ ಸ್ವಚ್ಛತೆ ಮತ್ತು ಸುರಕ್ಷತೆ ಕಾಯ್ದುಕೊಂಡು ಸರ್ವತೋಮುಖ ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕು. ಇದರಿಂದ ಮಕ್ಕಳಿಗೆ ಸಹಕಾರ, ಸಹಬಾಳ್ವೆ ಮುಂತಾದ ಸಾತ್ವಿಕ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಾಯಕವಾಗುವುದು. ಹಾಗೆಯೇ ಜೀವನ ಕೌಶಲವನ್ನು ಕರಗತ ಮಾಡಿಕೊಳ್ಳಲು ನೆರವಾಗುತ್ತದೆ.
* ನೆಲ ಗುಡಿಸಿ ಒರೆಸುವುದು, ಪಾತ್ರೆ ತೊಳೆಯುವುದು,ಬಟ್ಟೆ ಒಗೆಯುವುದು, ವೈಯಕ್ತಿಕ ಸ್ವಚ್ಛತೆ ಇತ್ಯಾದಿ ಸಣ್ಣ ಪುಟ್ಟ ಕೆಲಸಗಳನ್ನು ಮಕ್ಕಳಿಂದ ಮಾಡಿಸಬೇಕು. ದೈಹಿಕ ವ್ಯಾಯಾಮದಿಂದ ಆರೋಗ್ಯದ ಸದೃಢತೆಯ ಜೊತೆಗೆ ಶ್ರಮದ ಮಹತ್ವವನ್ನು ತಿಳಿಯುತ್ತಾರೆ.
* ಮನೆಯಲ್ಲಿರುವ ವ್ಯಕ್ತಿಗೆ ಕರಕುಶಲ ಕಲೆಗಳ ಬಗ್ಗೆ ಗೊತ್ತಿದ್ದರೆ ಅದನ್ನು ತಮ್ಮ ಮಗುವಿಗೆ ಧಾರೆಯೆರೆಯಬೇಕು. ಇದು ಪೀಳಿಗೆಯಿಂದ ಪೀಳಿಗೆಗೆ ಕಲೆಗಳ ವರ್ಗಾವಣೆಯ ಜೊತೆಗೆ ಮುಂದೆ ಅವರು ತಮ್ಮ ಜೀವನವನ್ನು ಕಟ್ಟಿಕೊಳ್ಳಲು ನೆರವಾಗ ಬಹುದು.
* ಸಂಗೀತ, ಭರತನಾಟ್ಯ, ಡ್ಯಾನ್ಸ್, ನಾಟಕ ಇತ್ಯಾದಿ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಬಹುದು. ಇದು ಮಕ್ಕಳ ತುಂಟಾಟಕ್ಕೆ ಅಡ್ಡಿಯಾಗಬಾರದು. ಒಟ್ಟಿನಲ್ಲಿ ಅವರಿಷ್ಟವು ಇಲ್ಲಿ ಮುಖ್ಯವಾಗಿರುತ್ತದೆ.
* ನಾವೇನು ಓದುತ್ತೇವೆಯೋ ಅಂತಹ ವಿಚಾರಗಳೇ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿ ನಮ್ಮ ಕಾರ್ಯಗಳನ್ನು ಪ್ರಚೋದಿಸುತ್ತವೆ. ಆದ್ದರಿಂದ ನಮ್ಮ ಮಕ್ಕಳಿಗೆ ಒಳ್ಳೆಯ ಗ್ರಂಥಗಳು, ನೀತಿಯುಕ್ತ ಪುಸ್ತಕಗಳು, ವ್ಯಕ್ತಿಯ ಸಾಹಸ ಯಶೋಗಾಥೆಗಳಿರುವ ಪುಸ್ತಕಗಳನ್ನು ಓದಲು ನೀಡೋಣ. ಈ ಓದು ಮುಂದೆ ತಾನೇನಾಗಬೇಕು ಎಂಬುದನ್ನು ಅರಿತು ಅದಕ್ಕೊಂದು ರೂಪ ನೀಡಲು ಸಹಕಾರಿಯಾಗುತ್ತದೆ.
* ಓದು, ಬರಹ, ಚಿತ್ರ ಬಿಡಿಸುವುದು ಇತ್ಯಾದಿ ಹವ್ಯಾಸಗಳನ್ನು ಅಭ್ಯಾಸವಾಗುವಂತೆ ಪೋಷಿಸುವುದರಿಂದ ಬಿಡುವಿನ ಸಮಯದ ಸದುಪಯೋಗವಾಗುವುದಲ್ಲದೆ ಕಲಿಕೆಯು ನಿರಂತರತೆಯನ್ನು ಕಾಯ್ದುಕೊಳ್ಳುತ್ತದೆ.
* ಕಲಿತ ವಿಷಯಗಳು ಅನ್ವಯವಾಗುವಂತೆ ತಮ್ಮ ಊರಿನಲ್ಲಿರುವ ಅಂಗಡಿ, ಸಂತೆ, ಹಬ್ಬ, ದೇವಸ್ಥಾನ, ಹಾಲುಡೈರಿ ಇತ್ಯಾದಿ ಸ್ಥಳಗಳಿಗೆ ಪೋಷಕರೊಂದಿಗೆ ತೆರಳಬೇಕು.
* ಗದ್ದೆ, ಚಿಕ್ಕ ಚಿಕ್ಕ ಬೆಟ್ಟಗಳು, ಹತ್ತಿರದ ನೀರಿನ ಮೂಲಗಳು, ಗಿಡ ಮರಗಳ ಸಮೀಪಕ್ಕೆ ನಮ್ಮ ಮಕ್ಕಳನ್ನು ಕರೆದುಕೊಂಡು ಹೋದಾಗ ಅವರು ನಿಸರ್ಗದ ನೈಜತೆಯನ್ನು ಆನಂದಿಸಿ ವೈಜ್ಞಾನಿಕವಾಗಿ ವಿಕಸಿಸುತ್ತಾರೆ.
* ಸಾಧ್ಯವಾದರೆ ರಾಜ್ಯದ ವಿವಿಧ ಪ್ರದೇಶಗಳಿಗೆ ಪ್ರವಾಸವನ್ನು ಕೈಗೊಳ್ಳಬಹುದು. ಇದರಿಂದ ಮಕ್ಕಳಿಗೆ ಅಲ್ಲಿನ ಕಲೆ,ಸಂಸ್ಕೃತಿ,ವೈಭವ, ಆಚಾರ ವಿಚಾರಗಳು, ಭಾಷೆ, ಭೌಗೋಳಿಕ ಪರಿಸರ, ಪ್ರಕೃತಿ ವಿಸ್ಮಯದ ನೈಜ ಅನುಭವವಾಗುತ್ತದೆ. ಆಗ ಕಲಿಕೆಯು ಸ್ವಯಂ ದೃಢಗೊಳ್ಳುತ್ತದೆ.
* ಪ್ರತಿನಿತ್ಯ ಪತ್ರಿಕೆಗಳನ್ನು ಓದುವುದು, ಗಿಡಗಳಿಗೆ ನೀರು ಹಾಕುವುದು, ಸಾಕು ಪ್ರಾಣಿಗಳಿಗೆ ನೆರವಾಗುವುದು, ವಯಸ್ಸಾದವರಿಗೆ ಅವರ ಕೆಲಸಗಳಲ್ಲಿ ಸಹಕರಿಸುವುದು,ಸಂಜೆ ಭಜನೆ ಮಾಡುವುದು, ಹಬ್ಬ ಹರಿದಿನಗಳನ್ನು ಮಕ್ಕಳ ಸಹಭಾಗಿತ್ವದೊಂದಿಗೆ ಆಚರಿಸೋಣ. ಇದು ಮಕ್ಕಳಲ್ಲಿ ಓದುವ ಹವ್ಯಾಸ, ತಾಳ್ಮೆ, ಸಹಕಾರ ಮನೋಭಾವನೆಯ ಬೆಳವಣಿಗೆ ಜೊತೆಗೆ ತಮ್ಮ ಧರ್ಮದ ಮೆರುಗನ್ನು ಅಸ್ವಾದಿಸಲು ಸಹಾಯಕ.
* ಕಥೆ ಕೇಳುವುದೆಂದರೆ ಸಾಮಾನ್ಯವಾಗಿ ಅಬಾಲ ವೃದ್ಧರೂ ಕೂಡ ತುಂಬಾ ಇಷ್ಟಪಡುತ್ತಾರೆ.ಅಜ್ಜಿ, ಅಜ್ಜಂದಿರು ತಮ್ಮ ಮೊಮ್ಮಕ್ಕಳಿಗೆ ನೀತಿಕಥೆಗಳನ್ನು ಹೇಳಬಹುದು. ತನ್ಮೂಲಕ ಮಕ್ಕಳು ನೀತಿವಂತರಾಗಿ ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಲು ಸಾಧ್ಯ.
ಒಟ್ಟಿನಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಪೋಷಕರ ಪಾತ್ರ ಅತೀ ಮುಖ್ಯವಾಗಿರುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಇತರ ಮಕ್ಕಳ ಜೊತೆ ಹೋಲಿಸಬಾರದು. ಇದು ಮಕ್ಕಳಲ್ಲಿ ಮಾನಸಿಕವಾಗಿ ಕುಂಠಿತ ಬೆಳವಣಿಗೆ, ಕೀಳರಿಮೆಯ ಜೊತೆಗೆ ಮುಂದೆ ದೊಡ್ಡ ಅಪಾಯವನ್ನು ಎದುರಿಸಬಹುದು. ಹಾಗೆ ಮುಂದೆ ಬರುವ ಫಲಿತಾಂಶದ ಬಗ್ಗೆಯೂ ನಿರ್ಲಿಪ್ತರಾಗಿರಬೇಕು. ಕೇವಲ ಅಂಕಗಳ ರಾಶಿಯಿಂದಲೇ ಜೀವನ ನಡೆಯುವುದಿಲ್ಲ. ‘ಅನುಭವವೇ ಶಿಕ್ಷಣ’ ಎನ್ನುವಂತೆ ತನ್ನ ಜೀವನ ರೂಪುಗೊಳ್ಳಲು ಅನುಭವದ ಜ್ಞಾನ ಅತೀ ಅಗತ್ಯ. ಕಲಿತ ಜ್ಞಾನವು ಜೀವನದ ಕಷ್ಟದ ಸಮಯದಲ್ಲಿ ಉಪಯೋಗವಾದರೆ ಅದುವೇ ನೈಜ ಶಿಕ್ಷಣ ಎಂಬುದನ್ನು ಸಮಾಜ ಅರಿತಿರಬೇಕು.ರಜೆಯಲ್ಲಿ ಮಕ್ಕಳಿಗೆ ಖುಷಿ ಕೊಡುವ ವಿಚಾರಗಳ ಮೂಲಕ ಕಲಿಕೆ ಆಗುವಂತೆ ಪ್ರೇರೇಪಿಸಬೇಕು. ಅನುಭವದ ಕಲಿಕೆಗೆ ಹೆಚ್ಚಿನ ಅನುವು ನೀಡೋಣ. ರಜೆಯಲ್ಲಿ ಮಗುವಿಗೆ ಮನೆಯು ಅರಮನೆಯಾಗಬೇಕೇ ಹೊರತು ಸೆರೆಮನೆಯಾಗಬಾರದು. ಒಟ್ಟಿನಲ್ಲಿ ರಜೆಯು ಮಜವಾಗಬೇಕೇ ಹೊರತು ಸಜೆಯಾಗಬಾರದು.
ಚಿಟ್ಟೆಗಳಾದ ನಮ್ಮಯ ಮಕ್ಕಳು
ರಜೆಯ ರಂಗಿನ ಕನಸುಗಳು
ಕಲಿಕೆಯ ರೆಕ್ಕೆ ಪಟ ಪಟ ಬಡಿಯುತ
ಆಟದಿ ಕುಣಿದು ಬಾನಿಗೆ ಜಿಗಿಯುತ
ಅನುಭವಾಮೃತ ಮಧುವ ಹೀರುತ
ಜೀವನದಲಿ ಯಶವ ಕಾಣುತ
ಗಾಯತ್ರಿ ನಾರಾಯಣ ಅಡಿಗ
ಶಿಕ್ಷಕರು, ಸ. ಹಿ. ಪ್ರಾ ಶಾಲೆ ಕರ್ಕುಂಜೆ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
- Sale! Add to basket
- ಕವನ ಸಂಕಲನ (Poetry Collection)
ಚಿಗುರೆಲೆ ಸಂಭ್ರಮ
- Original price was: ₹85.00.₹80.00Current price is: ₹80.00.
-
- Sale! Add to basket
- ಕವನ ಸಂಕಲನ (Poetry Collection)
ಮಧುರ ಮೋಹನ
- Original price was: ₹120.00.₹110.00Current price is: ₹110.00.