You are currently viewing ಪಂಚಭೂತ

ಪಂಚಭೂತ

ಬೆಳದಿಂಗಳ ಬೆಳಕಿನಲಿ
ಕೈ ತುತ್ತಿನ ಅಮೃತದಲಿ
ಕಣ್ಣೀರಿನ ಕಷ್ಟಗಳ ಕರಗಿಸಿ
ಹಮ್ಮೀರ ಬದುಕನು ಕಲಿಸಿ
ಬೆಳಕಿನ ಹಾಲ್ತೊರೆ ನನ್ನ ಸಾಕವ್ವ

ಅಮಲಿನ ಮಧ್ಯ ಮಾರಾಟ ಕಾಯಕದಲಿ
ಅಮಲಿನ ಜನಗಳಿಗೆ ವಾಸ್ತವ ಬದುಕಿನಲಿ
ಬೆಂಗಾಡಿನ ದುರಂತದ ಚಿತ್ರಣ ಕಂಡರಿಸಿ
ಬೈಗುಳದ ಬೋಗುಣಿಯಲ್ಲೇ ಪಯಣಿಸಿ
ಬದುಕುವ ಬತ್ತಿ ನನ್ನ ಸಾಕವ್ವ

ಮಡಿಲೊಳಗೆ ಮಕ್ಕಳಿಲ್ಲವೆಂಬ ಜೀವನ ಕಟುಸತ್ಯ
ಮಡಿಲೊಳಗೆ ಮಕ್ಕಳಿಲ್ಲವೆಂಬುದನು ಅಳಿಸಿದಾಕೆ ನಿತ್ಯ
ಜಗದ ಜನರ ಬಿರುನುಡಿಗಳಿಗೆ ಬಾಗದಾಕೆ
ಜಗದ ಜನರೊಳಗೆ ತ್ಯಾಗವನು ತಣ್ಣಗೆ ಕಲಿಸಿದಾಕೆ
ಅರಿವಿನ ಹಣತೆ ನನ್ನ ಸಾಕವ್ವ

ತಾನೊಬ್ಬಳೇ ಹಾಯಾಗಿ ಅರಮನೆ ಕಟ್ಟಿಕೊಳ್ಳಬಹುದಾಗಿತ್ತು.
ತಾನೊಬ್ಬಳಿರದೇ ತಬ್ಬಲಿಗಳನು ತಬ್ಬಿಕೊಂಡು
ನೊಂದವರ ಬಾಳಿಗೆ ಕರುಣೆಯ ಕಡಲಾಗಿ
ತಾಯ್ತತನಕೆ ತ್ಯಾಗದ ಪ್ರತೀಕವಾಗಿ

ಬಾಳ ಬದುಕಿಗೆ ಬಂಗಾರದ ರೇಖೆಯಾಗಿ
ಬಾಡದ ಬತ್ತದ ಅನಂತಾನಂತ ವ್ಯೋಮಾತೀತದ ಉಸಿರಾಗಿ
ಪಂಚಭೂತವಾಗಿದ್ದಾಳೆ ನನ್ನ ಸಾಕವ್ವ

ಡಾ. ನಾಹೀರಾ
ಕುಷ್ಟಗಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.