ನಮಗ್ಯಾಕ ಬೇಕ್ರಿ ಈ ಪಗಾರ ಇಲ್ಲದ ನೌಕ್ರಿ
ನಮಗ ಸಾಕು ಸಾಕಾಗಿ ಹೋಗೈತ್ರಿ ಈ ನೌಕ್ರಿ
ದಿನವೆಲ್ಲ ಗಾಣದಎತ್ತಿನಂಗ ದುಡಿಬೇಕ್ರಿ
ಮನೆಯವರ ಕೈಯಿಂದ ಬೈಸ್ಕೊಬೇಕ್ರಿ
ಅತ್ತೆ ಮಾವರ ಸೇವೆ ಮಾಡಬೇಕ್ರಿ
ಬಂದವರ ಹೋದವ್ರ ಚಾಕ್ರಿ ನೋಡ್ಕೋಬೇಕ್ರಿ
ಬೆಳ್ಳಿ ಚುಕ್ಕಿ ಮೂಡುವಾಗ ಏಳಬೇಕ್ರಿ
ಸಗಣಿಯಿಂದ ಬಾಗ್ಲನು ಸಾರಿಸ್ಬೇಕ್ರಿ
ಚುಕ್ಕಿ ಇಟ್ಟು ರಂಗೋಲಿ ಬಿಡಿಸಬೇಕ್ರಿ
ಜಳಕಮಾಡಿ ಶಿವ ಪೂಜೆ ಮಾಡಬೇಕ್ರಿ
ಬೇಗ ಬೇಗ ಚಹಾ ನಾಷ್ಟ ಮಾಡಬೇಕ್ರಿ
ಮಕ್ಕಳಿಗೆಲ್ಲ ಶಾಲೆಗಾಡಿಗಿ ಕಳಿಸಬೇಕ್ರಿ
ಅಡುಗೆ ಮಾಡಿ ಗಂಡಗ ಬಡಿಸಬೇಕ್ರಿ
ಟಾಯ್ ಬೆಲ್ಟ್ ಕರ್ಚೀಫ್ ಕೊಟ್ಟು ಕಳಿಸ್ಬೇಕ್ರಿ
ಪಳಪಳ ಹೊಳೆವಂಗ ಪಾತ್ರೆ ತೊಳಿಬೇಕ್ರಿ
ಮಿರಿ ಮಿರಿ ಮಿಂಚಂಗ ಬಟ್ಟೆ ಒಗಿಬೇಕ್ರಿ
ಥಳಥಳ ಹೊಳವಂಗ ಮನೆ ತಿಕ್ಬೇಕ್ರಿ
ಗರಿ ಗರಿ ನೋಟಿನಂಗ ಇಸ್ತ್ರಿ ಮಾಡಬೇಕ್ರಿ
ಇಷ್ಟು ಮಾಡದ್ರಾಗ ಹೊತ್ತ ಹೋಗೈತ್ರಿ
ಗೋಧೂಳಿ ಟೈಮ ಆಗ್ಬಿಟೈತ್ರಿ ಗ್ಯಾಸ್
ಮ್ಯಾಲ ಚಾ ಮಾಡಕ್ ಇಟೈತ್ರಿ ಕಣ್ಣ
ಗಂಡ ಬರೋದಾರಿನೇಕಾಯ್ತೈತ್ರಿ
ಬರಾಗ ಮೈಸೂರು ಮಲ್ಲಿಗೆ ತಂದಾರ್ರೀ
ಗಿರ ಗಿರನೆ ತಿರುಗಿ ಜಡೆಗೆ ಮುಡಿಶಾರ್ರೀ
ಗಲ್ಲದ ಮ್ಯಾಲೊಂದು ಬೆಲ್ಲದಮುತ್ತ ಕೊಟ್ಟರ್ರಿ
ಮುಂಜಾನಿಂದ ಮಾಡಿದ ಕೆಲಸ ಮರೆತ್ಹೋಯ್ತ್ರಿ
“ನಮಗೆ ಪಗಾರ ಯಾಕ ಬೇಕ್ರಿ”
“ಗಂಡನ ಪ್ರೀತಿ ಒಂದಿದ್ರೆ ಸಾಕ್ರಿ”
ಜೋಡಿಲಿ ಹುಬ್ಬಳ್ಳಿ ಮಠಕ್ಕೆ ಹೋಗ್ತೇವ್ರಿ
ಅಜ್ಜನ ಪಾದ ಸೇವೆ ಮಾಡ್ತೇವ್ರಿ
ಸಿದ್ಧಾರೂಡ ಅಜ್ಜಗ ವರ ಬೇಡ್ತಿವ್ರಿ
ಕಡಿತನ ಹಿಂಗೆ ಇಡುವಂತೆ ಕೇಳ್ತಿ
ಶಿವಲೀಲಾ ಎಸ್ ಧನ್ನಾ
ಜವಳಿ (ಡಿ) ಜಿಲ್ಲಾ :-ಕಲ್ಬುರ್ಗಿ
ಕಲ್ಯಾಣ ಕರ್ನಾಟಕ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.