You are currently viewing ನೂರಾರು ಶ್ರೀರಕ್ಷೆಯ ದಾರಗಳಲ್ಲಿ ಯಾವುದು ಶ್ರೇಷ್ಠ?

ನೂರಾರು ಶ್ರೀರಕ್ಷೆಯ ದಾರಗಳಲ್ಲಿ ಯಾವುದು ಶ್ರೇಷ್ಠ?

ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಬರುವ ಹುಣ್ಣಿಮೆಯೇ ನೂಲಹುಣ್ಣಿಮೆ. ಈ ನೂಲ ಹುಣ್ಣಿಮೆಯಂದು ಆಚರಿಸುವ ವಿಶೇಷ ಹಬ್ಬವೇ ರಕ್ಷಾಬಂಧನ. ಬಹಳಷ್ಟು ಜನಕ್ಕೆ ರಕ್ಷಾಬಂಧನದ ಕಲ್ಪನೆಯು ಮೂಡುವಷ್ಟು ಬೇಗ ನೂಲ ಹುಣ್ಣಿಮೆಯ ಅರಿವಿಲ್ಲ. ಅದೇನೇ ಇರಲಿ ಸಹೋದರಿ ಮತ್ತು ಸಹೋದರರ ಬಾಂಧವ್ಯದ ಮಹತ್ವವನ್ನು ಸಾರುವ ರಕ್ಷಾಬಂಧನ ಹಬ್ಬದ ಶುಭಾಶಯಗಳು.

ಏನಿದು ರಕ್ಷಾಬಂಧನ? ಒಂದು ಮನೆಯ ಹೆಣ್ಣುಮಗಳು ತನ್ನ ಅಣ್ಣಂದಿರ ಮತ್ತು ತಮ್ಮಂದಿರ ಕೈಗೆ ನೂಲಿನ ಎಳೆಯನ್ನು ಕಟ್ಟುವ ಹಬ್ಬ. ಅಣ್ಣ-ತಮ್ಮಂದಿರು ತಮ್ಮ ಸಹೋದರಿಯನ್ನು ಎಂತಹ ಕಷ್ಟದ ಪರಿಸ್ಥಿತಿ ಬಂದರೂ ಕೊನೆವರೆಗೂ ಕಾಪಾಡಬೇಕೆಂಬುದು ಈ ಹಬ್ಬದ ಮಹತ್ವ. ಸುಮಾರು 30-40 ವರ್ಷಗಳ ಹಿಂದೆ ಈ ಹಬ್ಬ ಇಷ್ಟೊಂದು ವಿಜೃಂಭಣೆಯಿಂದ ನಡೆಯುತ್ತಿರಲಿಲ್ಲ. ನಮ್ಮ ಬಾಲ್ಯದ ಆ ದಿನಗಳಲ್ಲಿ ಅಣ್ಣ-ತಮ್ಮಂದಿರಿಗೆ ರಾಖಿ ಕಟ್ಟಿ ಅವರು ಕೊಡುತ್ತಿದ್ದ ಹತ್ತೋ ಇಪ್ಪತ್ತೋ ರೂಪಾಯಿಯ ನೋಟನ್ನು ಕೈಯಲ್ಲಿ ಬಿಚ್ಚಿ ಹಿಡಿದುಕೊಂಡು ಇಡೀ ಊರಲ್ಲೆಲ್ಲ ಅಡ್ಡಾಡಿ ತೋರಿಸಿ ಬರುತ್ತಿದ್ದ ಸಂಭ್ರಮದ ಹಬ್ಬ ಆಗಿತ್ತು. ಅದು ಕೂಡ ಪರದೆಯ ಹಿಂದೆ ಅಪ್ಪನ ಪ್ರೀತಿಯಾಗಿರುತ್ತಿತ್ತು. ಶ್ರೀಮಂತರ ಮನೆಯಲ್ಲಿ ಮಾತ್ರ ನೂರು ರೂಪಾಯಿಯ ಉಡುಗೊರೆ ಸಿಗುತ್ತಿತ್ತು. ಆ ದುಡ್ಡು ಸುಮಾರು ಏನಿಲ್ಲ ಅಂದ್ರೂ ಕನಿಷ್ಠ ಒಂದು ವಾರನೋ ಅಥವಾ ಹದಿನೈದು ದಿನಗಳ ಕಾಲನೋ ನಮ್ಮ ಕಂಪಾಸ್ ಬಾಕ್ಸ್ ನಲ್ಲಿ ಗೂಡು ಕಟ್ಟಿಕೊಂಡು ಬೆಚ್ಚಗೆ ಇರುತ್ತಿತ್ತು. ಅಷ್ಟೇ ಅಲ್ಲದೆ ಅಣ್ಣ ಇರಲಿ, ತಮ್ಮ ಇರಲಿ ರಾಖಿ ಕಟ್ಟಿದ ನಂತರ ಅವರಿಂದ ನಮ್ಮ ಕಾಲುಗಳಿಗೆ ನಮಸ್ಕಾರ ಮಾಡಿಸಿಕೊಳ್ಳುವುದೆಂದರೆ ಅತೀ ಹುರುಪು. ಕೆಲವೊಮ್ಮೆ ಕಾಡಿ ಬೇಡಿ ಮೂರು-ನಾಲ್ಕು ಸಲ ನಮಸ್ಕಾರ ಮಾಡಿಸಿಕೊಂಡ ನೆನಪುಗಳು ಕೂಡ ಅಚ್ಚಳಿಯದೆ ಹಸಿರಾಗಿವೆ. ಕೊನೆಯಲ್ಲಿ ಒಂದು ಚಮಚ ಸಕ್ಕರೆಯನ್ನು ಬಾಯಲ್ಲಿ ಹಾಕಿ ಬಾಯಿ ಸಿಹಿ ಮಾಡಿಕೊಳ್ಳುವ ಪದ್ಧತಿ. ಆದರೆ ಈಗೀಗ ರಕ್ಷಾಬಂಧನವೆಂದರೆ ಅದೊಂದು ದೊಡ್ಡ ಹಬ್ಬವಾಗಿದೆ. ಹೆಣ್ಣುಮಗಳನ್ನು ಗಂಡನ ಮನೆಯಿಂದ ಕರೆಯಿಸಿ, ಅವಳಿಂದ ರಾಖಿ ಕಟ್ಟಿಸಿಕೊಂಡು ಉಡುಗೊರೆಯನ್ನು ಕೊಡುವುದು. ಅದೇ ರೀತಿ ಅಕ್ಕ/ತಂಗಿಯೂ ಕೂಡ ಅಣ್ಣ/ತಮ್ಮನಿಗೆ ಹಬ್ಬದ ಉಡುಗೊರೆಯನ್ನು ಕೊಡುತ್ತಾಳೆ.



ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ನೋಡುವುದಾದರೆ ಇತ್ತೀಚೆಗೆ ರಕ್ಷಾಬಂಧನ ಬೇರೆಯೇ ಆಯಾಮದಲ್ಲಿ ತನ್ನ ತಿರುವನ್ನು ಪಡೆದುಕೊಳ್ಳುತ್ತಿದೆ. ಸ್ವಂತ ಸಹೋದರರಿಗೆ ಮಾತ್ರ ಸೀಮಿತವಾಗಿದ್ದ ಹಬ್ಬ ಇಂದು ಸಾರ್ವತ್ರಿಕವಾಗುತ್ತಿದೆ.
ಹೆಣ್ಣುಮಕ್ಕಳು ಈಗೀಗ ಓಣಿಯಲ್ಲಿರುವ ಹುಡುಗರಿಗೆ, ತನ್ನ ಜೊತೆ ಓದುತ್ತಿರುವ ಹುಡುಗರಿಗೆ, ತಮ್ಮ ಜೊತೆ ಕೆಲಸ ಮಾಡುತ್ತಿರುವ ಪುರುಷರಿಗೆ, ಸಹೋದರಿಯರನ್ನು ಹೊಂದಿರದ ಪರಿಚಯಸ್ಥ ಹುಡುಗರಿಗೆ….ಹೀಗೆ ಬಹುತೇಕ ಸಂಬಂಧಗಳನ್ನು ಹುಡುಕಿಕೊಂಡು ನೂರಾರು ರಾಖಿಗಳನ್ನು ಕಟ್ಟುತ್ತಿದ್ದಾರೆ. ಕೆಲವು ಪ್ರತಿಷ್ಠಿತ ಶಾಲೆಗಳಲ್ಲಂತೂ ಎಲ್ಲಾ ವಿದ್ಯಾರ್ಥಿಗಳು ರಕ್ಷಾಬಂಧನ ಹಬ್ಬವನ್ನು ಆಚರಿಸುವಂತೆ ಒಂದು ದೊಡ್ಡ ಕಾರ್ಯಕ್ರಮವನ್ನೇ ಆಯೋಜಿಸಿರುತ್ತಾರೆ. ಅಂದು ಕೆಲವು ಗಂಡು ಮಕ್ಕಳ ಕೈಯನ್ನು ನೋಡಿ ಬಿಟ್ಟರೆ ಸಾಕು, ಹೆಚ್ಚು ಕಡಿಮೆ ಮೊಣಕೈವರೆಗೂ ರಾಖಿಗಳನ್ನು ಕಟ್ಟಿಸಿಕೊಂಡಿರುತ್ತಾರೆ. ರಕ್ಷಾಬಂಧನವೆಂದರೆ ಅದೊಂದು ಪವಿತ್ರ ಹಬ್ಬ ಎನ್ನುವುದೇನೋ ಸರಿ. ಆದರೆ ಹೀಗೆ ಕಟ್ಟುವ ನೂರಾರು ನೂಲುಗಳಲ್ಲಿ ಯಾವುದು ಶ್ರೇಷ್ಠ? ಎನ್ನುವುದನ್ನು ಒಮ್ಮೆ ತಿಳಿಯಬೇಕಾಗಿದೆ. ಇಂದಿನ ಹುಡುಗರು ಮತ್ತು ಹುಡುಗಿಯರು ಸ್ನೇಹ ಸಂಬಂಧಗಳಲ್ಲಿಯೂ ಕೂಡ ರಾಖಿಯನ್ನು ತಂದು ಅದನ್ನು ಭ್ರಾತೃತ್ವ ಸಂಬಂಧಕ್ಕೆ ತಿರುಗಿಸುತ್ತಿದ್ದಾರೆ. ರಾಖಿ ಕಟ್ಟಿದ ಮಾತ್ರಕ್ಕೆ ಅದು ಪರಿಶುದ್ಧ ಸ್ನೇಹವೇ? ಹೀಗೆ ಯೋಚಿಸಿದ್ದರೆ ಅದು ಖಂಡಿತ ಅಲ್ಲ. ಕೆಲಸ ಮಾಡುವ ಸ್ಥಳಗಳಲ್ಲಿ ಕೆಲವೊಂದು ಸಲ ಒತ್ತಡಕ್ಕೆ ಒಳಗಾಗಿ ರಾಖಿಯನ್ನು ಕಟ್ಟಬೇಕಾಗುತ್ತದೆ. ಇಲ್ಲದಿದ್ದರೆ ಉಳಿದ ಸಹ ಕೆಲಸಗಾರರು ಅದನ್ನು ಬೇರೇನೇ ರೀತಿಯಲ್ಲಿ ವಿಷಯವನ್ನು ಹೆಣೆಯುತ್ತಾರೆ. ಒಂದು ಸಲ ವಿಚಾರ ಮಾಡಿ ನೋಡಿ. ಹೀಗೆ ರಾಖಿ ಕಟ್ಟಿಸಿಕೊಂಡವರೆಲ್ಲ ನಮ್ಮ ಕಷ್ಟದ ಪರಿಸ್ಥಿತಿಗಳಲ್ಲಿ ಅದೆಷ್ಟು ಸಲ ಸಹಾಯಕ್ಕೆ ಬಂದು ನಿಲ್ಲುವರು. ಅವರ ಸಮಸ್ಯೆಗಳೇ ಬೆಟ್ಟದಷ್ಟು ಇರುವಾಗ ನಮ್ಮ ಸಮಸ್ಯೆಗಳಿಗೆ ಅವರು ಹೇಗೆ ಸ್ಪಂದಿಸುವರು? ಇಂತಹ ಸಂಬಂಧಗಳೆಲ್ಲ ಅಂದಿನ ದಿನಕ್ಕೆ ಮಾತ್ರ ಸೀಮಿತ. ಅದಕ್ಕೆ ಹೇಳುವುದು ಸ್ವಂತ ಅಣ್ಣ ಅಥವಾ ಸ್ವಂತ ತಮ್ಮ ಆದವರು ನಮಗೆ ಅದೇನೇ ಸಮಸ್ಯೆ ಬರಲಿ ಜೊತೆಯಾಗಿ ನಿಲ್ಲುವರು. ಕಣ್ಣೀರು ಬರದಂತೆ ನೋಡಿಕೊಳ್ಳುವರು. ಆದ್ದರಿಂದ ನೂರಾರು ನೂಲುಗಳಲ್ಲಿ ಸ್ವಂತ ಎಂದು ಕರೆಸಿಕೊಳ್ಳುವ ನೂಲೇ ಶ್ರೇಷ್ಠವಾದ ನೂಲು. ತೂಕವಾದದ್ದು ಕೂಡ.

ಇಂದಿನ ಮಾರುಕಟ್ಟೆಗಳಲ್ಲಿ ತರತರದ ರಾಖಿಗಳು ಲಭ್ಯ ಇವೆ. ಹತ್ತು ರೂಪಾಯಿಯಿಂದ ಹಿಡಿದು ಹತ್ತು ಸಾವಿರ ರೂಪಾಯಿಗಳವರೆಗೂ ವಿಭಿನ್ನ ವಿನ್ಯಾಸಗಳಲ್ಲಿ ಮನ ಸೆಳೆಯುತ್ತವೆ. ಆರ್ಥಿಕವಾಗಿ ಸಬಲವಾಗಿರುವ ಸಹೋದರಿಯರು ಚಿನ್ನ ಮತ್ತು ಬೆಳ್ಳಿಯ ರಾಖಿಗಳನ್ನು ಕೂಡ ಕಟ್ಟುತ್ತಾರೆ. ಕಟ್ಟುವ ಎಳೆ ಯಾವುದಾದರೇನು? ಅದು ಸಾರುವ ಸಂದೇಶ ಒಂದೇ ತಾನೇ. ಪ್ರಿಯ ಸಹೋದರಿಯರೇ, ರಕ್ಷಾಬಂಧನಕ್ಕೆಂದು ತವರು ಮನೆಗೆ ಬಂದು ಉಡುಗೊರೆಗಾಗಿ ಪೀಡಿಸಬೇಡಿ. ಉಡುಗೊರೆ ಏನೇ ಆಗಿರಲಿ ತವರು ಮನೆಯಿಂದ ಸಿಕ್ಕಿದ್ದು ಎನ್ನುವುದೇ ಒಂದು ದೊಡ್ಡ ಅದೃಷ್ಟ ಎಂದುಕೊಂಡು ಖುಷಿಪಡಿ. ಒಂದು ಹೆಣ್ಣಿಗೆ ತವರುಮನೆ ಮತ್ತು ಗಂಡನಮನೆಗಳು ಒಂದನ್ನೊಂದು ಹೋಲದ, ವಿಶಾಲ ವ್ಯಾಪ್ತಿಯುಳ್ಳ ಎರಡು ಮನೆಗಳು. ಗಂಡನ ಮನೆಯ ಶ್ರೀಮಂತಿಕೆ ಅದೇನೇ ಇರಲಿ, ತವರು ಮನೆಯಲ್ಲಿ ತೋರಿಸಬಾರದು. ತವರುಮನೆಯ ಐಸಿರಿ ಏನೇ ಇದ್ದರೂ ಮದುವೆ ಆಗುವ ತನಕ ಮಾತ್ರ. ನಿಮ್ಮದೊಂದು ಶುಭ ಹಾರೈಕೆ ಯಾವಾಗಲೂ ತವರು ಮನೆಯ ಬಳಗದ ಮೇಲೆ ಇರಲಿ. ಉಡುಗೊರೆಗಳು ಶಾಶ್ವತವಲ್ಲ, ಮುಖದ ಮೇಲಿನ ನಗುವು ಉಡುಗದಂತೆ ರಕ್ಷೆ ಮಾಡಿಕೊಳ್ಳುವ ಜವಾಬ್ದಾರಿ ಇದೆಯಲ್ಲ ಅದು ದೊಡ್ಡದು. ತಾಯಿ ಇದ್ದಾಗಲೂ, ತಾಯಿ ಮರೆಯಾದ ಮೇಲೆಯೂ ಅಣ್ಣ-ತಮ್ಮಂದಿರ ಜವಾಬ್ದಾರಿ ತಪ್ಪಿದ್ದಲ್ಲ. ಶ್ರೀರಕ್ಷೆ ಎಂಬುದು ಇಲ್ಲಿ ಒಬ್ಬರ ಕರ್ತವ್ಯವಲ್ಲ. ಸಹೋದರಿಯರ ಶುಭ ಹಾರೈಕೆಗಳೇ ತವರು ಮನೆಗೆ ಶ್ರೀರಕ್ಷೆ. ಅದೇನೇ ಬರಲಿ ತವರು ಮನೆಯ ಬಳಗವೊಂದು ಜೊತೆಗಿದೆ ಎನ್ನುವ ಆತ್ಮವಿಶ್ವಾಸದ ಮುಂದೆ ಬೇರೆಲ್ಲವೂ ಶೂನ್ಯ. ಇಲ್ಲಿ ರಾಖಿ ಎಂಬುದು ಒಂದು ನೆಪ ಮಾತ್ರ. ಅದನ್ನು ಕಟ್ಟಿದರೂ, ಕಟ್ಟದೇ ಹೋದರೂ ಅಣ್ಣ-ತಮ್ಮಂದಿರ ಶ್ರೀರಕ್ಷೆ ಯಾವಾಗಲೂ ಜೊತೆ ಇದ್ದೇ ಇರುತ್ತದೆ. ಅಣ್ಣನ ಕಾಳಜಿ ತಂಗಿಯ ಮೇಲೆ, ಅಕ್ಕನ ಕಾಳಜಿ ತಮ್ಮನ ಮೇಲೆ… ಹೀಗೆ ದ್ಯಾಟ್ ಈಸ್ ನೆವರ್ ಎಂಡಿಂಗ್ ಬಾಂಡ್….ಹ್ಯಾಪಿ ರಕ್ಷಾ ಬಂಧನ….

ಭುವನೇಶ್ವರಿ. ರು. ಅಂಗಡಿ
ನರಗುಂದ, ಗದಗ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.