You are currently viewing ನೀ ಇನ್ನೊಮ್ಮೆ ಭೂಮಿಗೆ ಬರಬೇಡ ಬಸವಣ್ಣ

ನೀ ಇನ್ನೊಮ್ಮೆ ಭೂಮಿಗೆ ಬರಬೇಡ ಬಸವಣ್ಣ

ನೀ ಕಂಡ ಕನಸುಗಳನ್ನು
ಗಾಳಿಗೆ ತೂರಿದ್ದೇವೆ..!
ನಿನ್ನನ್ನೊಂದು ವಿಗ್ರಹಮಾಡಿ
ವಿಹಾರದಲ್ಲಿ ಇರಿಸಿದ್ದೇವೆ..!
ಕಾಯ,ವಾಚಾ,ಮನಸಾ
ಶುದ್ದರಂತೆ ನಟನೆ ಮಾಡುತ್ತ,
ವಿಶ್ವಶಾಂತಿಯ ಹಾಳುಮಾಡಿದ್ದೇವೆ,
ಈ ಕೃತ್ಯಗಳ ನೋಡಿ
ಮೂಕನಾಗಲು,
ನೀ ಇನ್ನೊಮ್ಮೆ ಭುವಿಗೆ ಬರಬೇಡ ಬಸವಣ್ಣ..!

ಸ್ವಾರ್ಥದ ಹಾದಿಯಲ್ಲಿ,
ಬರಿ ಕಲ್ಲು ಮುಳ್ಳುಗಳ ತುಂಬಿಸಿ..!
ಮಂತ್ರ ,ಯಂತ್ರ, ತಂತ್ರದಿಂದ
ಲೋಗರ ನಂಬಿಸಿ..?
ಕುಹಕ ಕೊಂಕಿನ ನಗೆಯಾಡಿ
ನಿಂತಿದ್ದೇವೆ,ನೋಡಲು,
ನೀ ಇನ್ನೊಮ್ಮೆ ಭುವಿಗೆ ಬರಬೇಡ ಬಸವಣ್ಣ.!

ಪ್ರಜಾರಾಜ್ಯದಲಿ ಸರ್ವಾಧಿಕಾರ
ತೋರುತ ಮೆರೆದಿದ್ದೇವೆ…..!
ನಿನ್ನ ಉಪದೇಶಗಳನ್ನು ಗೋಡೆಗೆ
ನೇತು ಹಾಕಿದ್ದೇವೆ…!
ಉದ್ದಾರದ ಹೆಸರಿನಲ್ಲಿ ಸರ್ವವೂ
ನಿರ್ನಾಮ ಮಾಡುತ್ತಲಿ…!
ದರ್ಪತೋರುವ ದುರುಳನ
ಕರಾಳ ಕೂಪದಲ್ಲಿದ್ದೇವೆ,
ವೀಕ್ಷಿಸಲು,
ನೀ ಇನ್ನೊಮ್ಮೆ ಭುವಿಗೆ ಬರಬೇಡ ಬಸವಣ್ಣ..!

ಕೊಲೆ ಸುಲಿಗೆಗಳ ಮೋಸದಂತ
ಜಾಲಗಳನು ಸೃಷ್ಠಿಸಿ,…!
ನೆಮ್ಮದಿಯ ಮನಸುಗಳಲ್ಲಿ ವಿಷದ
ಬೀಜಗಳನ್ನು ಬಿತ್ತಿ,…!
ಕೊಳಕು ಜಿರುಂಡೆ ಸೀರುಂಡೆಗಳ
ಸದ್ದು ಗದ್ದಲವಿರುವ,
ಪರಿಸರವ
ಅವಲೋಕಿಸಲು,
ನೀ ಇನ್ನೊಮ್ಮೆ ಭುವಿಗೆ ಬರಬೇಡ ಬಸವಣ್ಣ..!

ಹೊಗಳು ಭಟ್ಟರಂತೆ ನಾವು,
ನಮ್ಮದು ಶಾಂತಿ ಸಾರಿದ ದೇಶ,
ಶಾಂತಿಯ ಹೆಸರಲ್ಲಿ ಕ್ರಾಂತಿಯ
ಅಲೆಯ ಎಬ್ಬಿಸಿ ಮೋಜು,
ನೋಡುವ ಪರಿ ಇದರ ಭ್ರಾಂತಿಯಲ್ಲಿ…!
ಮುಳುಗಿದ ನಮ್ಮನ್ನು ,
ಗಮನಿಸಲು,
ನೀ ಇನ್ನೊಮ್ಮೆ ಭುವಿಗೆ ಬರಬೇಡ ಬಸವಣ್ಣ…!

ಅಹಿಂಸೆಯ ಮಾರ್ಗತೋರಿದವರ
ಉಳಿಸಿಕೊಂಡಿಲ್ಲ ನಾವು..!
ನೀ ಮತ್ತೊಮ್ಮೆ ಬಂದರೆ ನಿನಗೂ
ಅಪವಾದ ಹೊರಿಸಿ,
ಗಲ್ಲಿಗೇರಿಸಿ, ಫಾಶಿ ಕೊಡಿಸಲು
ಹೇಸದ ನಮ್ಮನ್ನು
ಸಲುಹಲು,
ನೀ ಇನ್ನೊಮ್ಮೆ ಭುವಿಗೆ ಬರಬೇಡ ಬಸವಣ್ಣ..!

ಶಂಕರಾನಂದ ಹೆಬ್ಬಾಳ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ



Leave a Reply