You are currently viewing ನವ ಯುಗಾದಿ

ನವ ಯುಗಾದಿ

ಯುಗಾದಿಯು ಬರುತಿದೆ
ಜಗಕೆ ಹೊಸ ಹಾದಿಯ ತರುತಿದೆ
ಉರುಳುವ ಗಾಲಿಯಂದದಿ
ತಿರುತಿರುಗಿ ಬರುತಿದೆ

ವಸುಧೆಗೆ ಹೊಸ ವಸನವ ತೊಡಿಸಲು ಬರುತಿದೆ
ಹೊಸ ಚೇತನದಿ ಇಳೆಗೆ ನವ ಚೈತನ್ಯವ ಮರಳಿ ತರುತಿದೆ
ಭೂರಮೆಯ ಒಡಲ ತಂಪೆರೆಯಲು ಎಲ್ಲೆಡೆ ಹಸಿರ ತೊಡಿಸಿದೆ
ತರು, ಲತೆಗಳು ಚಿಗುರುವ ಸಮಯವದು ಪ್ರಕೃತಿಗೆ ಸಂತಸವ ತಂದಿದೆ

ಇಳೆಯ ಕಳೆಯ ಕಳೆಯಲೆಂದು ಹೊಸ ಖಳೆಯೊಳು ಬರುತಿದೆ
ಬರವ, ತಾಪವ ನೀಗಲೆಂದು ಚೈತ್ರವು ಮಳೆರಾಯನ ಕರೆದಿದೆ
ಬರಿದಾದ ಭೂತಾಯ ಒಡಲ ಭರಿಸಲು ಹೊಸತನದಿ ಬರುತಿದೆ
ಜೀವ ಜಗದಿ ಚೈತ್ರದ ಹೊಸತನವು ನಿತ್ಯವೂ ಇರಬಾರದೆ

ಬಂದನು ವಸಂತ ತಂದನು ಹೊಸ
ಹೊನ್ನ ಹೂವ ಧರಣಿಯ ಮುಡಿಗೆ
ಹಸಿರ ಹಂದರ ನೆಟ್ಟನು ಜೀವ ಸೆಲೆಯ ವಸುಂಧರೆಯ ಮಡಿಲಿಗೆ
ಹಸಿರ ಹರಿಸಿ ಬರದ ಬಿಸಿಯ ತೊಳೆಯಲು ಬಂದನು ನಾಡಿಗೆ
ನವ ಜೀವದುಸಿರ ತಂದನು ಭೂಚರ _ ಖೇಚರಗಳ ಪಾಲಿಗೆ

ನೆಲ ಜಲವೆಲ್ಲಾ ತುಂಬಲು ಇನ್ನೇತರ ಭಯವು ಜೀವ ಸಂಕುಲಕೆ
ಮುದಗೊಂಡಿವೆ ಸುಮ ಸಂಕುಲಗಳು ವಸಂತನಾಗಮನಕೆ
ಹರುಷದಿ ಸ್ವಾಗತಿಸುವೆವು ಚೈತ್ರದಿ ಬರುವ ಯುಗಾದಿ ಪರ್ವಕೆ
ಮನೆ_ಮನವ ಸಿಂಗರಿಸುವೆವು ಮರಳಿ ಮರಳಿ ಬರುವ ಯುಗಾದಿ ಸಂಭ್ರಮಕೆ

ವೈಷ್ಣವಿ ಹುಲಗಿ
ಕೊಪ್ಪಳ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.