ಅವನೇನು ನನ್ನಪ್ಪನೇ
ಹೊಡೆದು ಬುದ್ಧಿ ಹೇಳಲು ಅವನಿಗಾರು
ಅಧಿಕಾರ ಕೊಟ್ಟೋರು?
ಅವಳೇನು ನನ್ನವ್ವಳೇ
ತಲೆ ನೇವರಿಸಿ ಹೊಟ್ಟೆಯಲಿನ ಸಂಕಟವ
ಕೇಳಿ ತಾ ನೊಂದುಕೊಳ್ಳಲು ಅವಳ್ಯಾರು?
ಅವನೇನು ನನ್ನಣ್ಣನೇ
ಸಂಜೆ ಬೇಗ ಮನೆ ಸೇರುವ ತನಕ
ನನ್ನ ರಕ್ಷಣೆಗೆ ನಿಲ್ಲುವ ಅವನ್ಯಾರು?
ಅವಳೇನು ನನ್ನಕ್ಕಳೇ
ತುಂಡು ಸಿಹಿಯ ಹಂಚಿ ತಿಂದು ಹೆಚ್ಚು
ಖುಷಿಯ ಪಡಲು ಅವಳ್ಯಾರು?
ಯಾರು ಅವನು
ಯಾರು ಅವಳು
ಅಪ್ಪ ಅವ್ವ ಅಣ್ಣ ಅಕ್ಕ ಎಲ್ಲರಿಗೂ ಮೀರಿದವರು
ಸಕಲ ಬಂಧಗಳ ಮೀರಿಸಿದವರು
ಅವರೇ ನನ್ನ ಗುರುಗಳು
ಬೈದವರು ಬಡಿದವರು
ಕಿವಿ ಹಿಂಡಿದವರು ತಲೆ ತಿವಿದವರು
ಅಕ್ಷರ ಬೀಜವ ಬಿತ್ತಿದವರು
ಶ್ರಮದ ಫಲ ಬೆಳೆದವರು
ದೂರ ಇದ್ದರು ನಿತ್ಯ ಸಾವಿರ ಸಲ
ಮನದ ಬಾಗಿಲ ಬಡಿಯುವವರು
ಹೊತ್ತು ಹೊತ್ತಿಗೂ ತುತ್ತು ತುತ್ತಿಗೂ ನೆನಪಾಗುವವರು
ಬತ್ತದ ಸೆಲೆಯವರು
ಅವರೇ……
ಅವರೇ……
ಅವರೇ ನನ್ನ ಗುರುಗಳು
ಅಂದಿಗೂ ಇಂದಿಗೂ ಎಂದೆಂದಿಗೂ
ಅವರೇ ನನ್ನ ಗುರುಗಳು
ಭುವನೇಶ್ವರಿ ರು. ಅಂಗಡಿ
ನರಗುಂದ, ಗದಗ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ ಕವನ ಸಂಕಲನ ಕೃತಿಯ ಪರಿಚಯ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ