ಸಾಹಿತ್ಯ ಕ್ಷೇತ್ರವು ಸಮುದ್ರದಂತೆ ತುಂಬಾ ವಿಶಾಲವಾದದ್ದು. ಈ ತೀರದಲ್ಲಿ ನಿಂತು ನೋಡಿದರೆ ಆ ತೀರ ಕಣ್ಣಿಗೆ ಕಾಣದೇ ಇರುವಷ್ಟು ದೂರ. ಹಲವಾರು ಪ್ರಕಾರದ ರಚನೆಗಳನ್ನು ಹೊಂದಿದ ಒಂದು ಭಂಡಾರವೆಂತಲೂ ಹೇಳಬಹುದು. ಅವುಗಳಲ್ಲಿ “ಕಥೆಗಳು” ಕೂಡ ಒಂದು ಪ್ರಕಾರ. ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಹೋದಂತೆ, ಮನಸ್ಸಿನಲ್ಲಿ ಪುಟಿದೇಳುವ ಕಲ್ಪನೆಗಳಿಗೆ ಗದ್ಯ ರೂಪವನ್ನು ಕೊಟ್ಟಾಗ ಕಥೆಗಳು ಜನ್ಮ ತಾಳುತ್ತವೆ.
ಕಥೆಗಳನ್ನು ಹೆಣೆಯುವುದು ಒಂದು ಕುಸುರಿಯ ಕಲೆ ಇದ್ದಂತೆ. ಕಲ್ಪನಾ ಲೋಕದಲ್ಲಿ ಸುದೀರ್ಘವಾಗಿ ಗಮನವನ್ನು ಕೇಂದ್ರೀಕರಿಸಿದಷ್ಟು, ಸೂಕ್ಷ್ಮ ಸಂವೇದನೆಯ ಕಥೆಗಳು ಮೂಡುತ್ತವೆ. ಹೆಚ್ಚೆಚ್ಚು ಅರ್ಥಗರ್ಭಿತವಾಗಿರುತ್ತವೆ. ಇಲ್ಲಿ ಸೃಜನಶೀಲತೆಯು ಕೂಡ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಇಂತಹ ಸೃಜನ ಬರಹಗಾರರಲ್ಲಿ ಶ್ರೀ ಕಂಚುಗಾರನಹಳ್ಳಿ ಸತೀಶ್ (ಕಂಸ) ಅವರು ಕೂಡ ಒಬ್ಬರು. ಈಗಾಗಲೇ ಸಾಹಿತ್ಯ ವಲಯದಲ್ಲಿ ತಮ್ಮ ಪ್ರಥಮ ಕೃತಿ “ಸ್ಯಾನಿಟರಿ ಪ್ಯಾಡ್” ಕಾದಂಬರಿಯ ಮೂಲಕ ಒಂದು ಸಂಚಲನವನ್ನೇ ಸೃಷ್ಟಿಸಿದ್ದಾರೆ. ಲೇಖನಿಯಿಂದ ಮೂಡುವ ಪ್ರತಿ ಅಕ್ಷರಕ್ಕೂ ಬೆಲೆ ಇದೆ ಎಂಬ ಸಾರಾಂಶವನ್ನು ಹೊಂದಿರುವ “ಬಂಗಾರದ ಹನಿಗಳು” ಕವನ ಸಂಕಲನವೂ ಕೂಡ ಅಷ್ಟೇ ಅರ್ಥಗರ್ಭಿತವಾದ ಕವನಗಳನ್ನು ಒಳಗೊಂಡಿದೆ.
“ಮುಂದೇನಾಯ್ತು…?” ಎಂಬ ಕಥಾ ಸಂಕಲನದ ಮೂಲಕ ಮತ್ತೊಂದು ಕೃತಿಯ ರೂವಾರಿಗಳಾಗುತ್ತಿದ್ದಾರೆ ಕಂಸ ಅವರು. ಮೊಟ್ಟ ಮೊದಲನೆಯದಾಗಿ ಅವರಿಗೆ ಹಾರ್ದಿಕ ಅಭಿನಂದನೆಗಳು. ಕಂಸ ಅವರ ಸ್ವರಚಿತ ಕಥೆಗಳು ಒಂದಕ್ಕೊಂದು ಭಿನ್ನವಾಗಿವೆ. ಸಣ್ಣ ಕಥೆಗಳು,ದೊಡ್ಡ ಕಥೆಗಳು ಎನ್ನುವ ಭೇದವಿಲ್ಲದೆ ಕೃತಿಯ ಮೆರುಗನ್ನು ಹೆಚ್ಚಿಸುತ್ತವೆ. ಬಹುತೇಕ ಕಥೆಗಳು ಕಲ್ಪಿತ ಕಥೆಗಳಾಗಿದ್ದರೂ ಕೂಡ, ವಾಸ್ತವತೆಗೆ ಸಮೀಪದಲ್ಲಿವೆ. ಪ್ರತಿ ಕಥೆಯಲ್ಲೂ ನಡೆಯುವ ಸರಣಿ ಘಟನೆಗಳಲ್ಲಿ ಕೊಂಡಿಯು ಎಲ್ಲಿಯೂ ಕಳಚಿ ಬೀಳದಂತೆ ಲೇಖಕರು ತುಂಬಾ ಮುತುವರ್ಜಿಯನ್ನು ವಹಿಸಿ ನವೀರಾದ ಕಥೆಗಳನ್ನು ರಚಿಸಿದ್ದಾರೆ. ವಿಷಯ ವಸ್ತುವಿನ ಆಯ್ಕೆಯಲ್ಲೂ ಕೂಡ ಭಿನ್ನತೆ ಇದೆ. ಪ್ರೇಮ ನಿವೇದನೆ,ನಿಗೂಢ,ಸಾಮಾಜಿಕ,ನೈತಿಕ….. ಹೀಗೆ ಹತ್ತು ಹಲವಾರು ರೀತಿಯ ವಿಷಯಗಳು ಒಳಗೊಂಡಿವೆ. ಕಥೆಗೆ ತಕ್ಕಂತೆ ನಿರೂಪಣಾ ಶೈಲಿಯನ್ನು ಲೇಖಕರು ಮೈಗೂಡಿಸಿಕೊಂಡಿದ್ದಾರೆ. ಅವರ ಸೃಜನಶೀಲತೆಯಿಂದಾಗಿ ಎಲ್ಲಿಯೂ ಕೂಡ ಬೇಸರವಾಗದಂತೆ ಕಥೆಗಳು ಓದಿಸಿಕೊಂಡು ಹೋಗುತ್ತವೆ. ಓದಿದ ನಂತರ ಓದುಗರಿಗೆ ಮನೋ ರಂಜನೆಯನ್ನು ಕೊಡುವುದಷ್ಟೇ ಅಲ್ಲದೇ, ಜ್ಞಾನದ ಜೊತೆಯಲ್ಲಿ ವ್ಯಕ್ತಿತ್ವ ವಿಕಸನವನ್ನು ಉಂಟು ಮಾಡುವಂತಹ ಕಥೆಗಳನ್ನು ರಚಿಸಿದ್ದಾರೆ ಕಂಸ ಅವರು. ಸಾಹಿತ್ಯ ಲೋಕದಲ್ಲಿ ದಾಪುಗಾಲು ಇಡುತ್ತಿರುವ ಯುವ ಸಾಹಿತಿ ಆಗಿದ್ದರೂ ಕೂಡ, ಕಥಾ ರಚನೆಗಳು ಮಾತ್ರ ತುಂಬಾ ಅನುಭವದಿಂದ ಕೂಡಿವೆ.
ಬಿತ್ತಿದ ಬೀಜದಿಂದ ಫಲವನ್ನು ನಿರೀಕ್ಷಿಸುವುದು ಸಹಜ ಎಂಬಂತೆ, ಕಂಸ ಅವರ ಈ ಕಥಾ ಸಂಕಲನ ಹೆಚ್ಚು ಓದುಗರನ್ನು ತಲುಪಿ ಯಶಸ್ವಿಯಾಗಲಿ. ಅವರ ಸಾಹಿತ್ಯ ಕೃಷಿ ಮುಂದುವರೆದು, ಅವರ ಲೇಖನಿಯಿಂದ ಸಾಹಿತ್ಯ ಕ್ರಾಂತಿಯ ಕಹಳೆಯು ಮೊಳಗಲಿ ಎಂದು ಮನದಾಳದಿಂದ ಶುಭಾಶಯವನ್ನು ಕೋರುತ್ತೇನೆ.
ಭುವನೇಶ್ವರಿ. ರು. ಅಂಗಡಿ
ನರಗುಂದ,ಗದಗ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.