ಮಿನಿ ಮಿನಿ ಕತೆ – 1
“ನೀವು ಮಾತ್ರ ಬದಲಾಗಬೇಡಿ. ನನ್ನ ಮೇಲಿನ ಪ್ರೀತಿ ಯಾವತ್ತೂ ಕಡಿಮೆಯಾಗಬಾರದು. ನನಗೆ ನೀವು ಬೇಕು” ಎಂದಳು ತ್ರಿವೇಣಿ.
ಅವಳು ತನ್ನ ಮೇಲಿಟ್ಟಿದ್ದ ಪ್ರೀತಿಯನ್ನು ಕಂಡು ಸಂತೋಷಪಟ್ಟ ಪವನ್, ತ್ರಿವೇಣಿಯನ್ನು ಮನಸಾರೆ ಮೆಚ್ಚಿದ್ದ.
###
ಈಗ ತ್ರಿವೇಣಿ ಬದಲಾಗಿದ್ದಾಳೆ.ಪವನ್ ಎದುರಿಗಿದ್ದರೂ ಕ್ಯಾರೇ ಎನ್ನುತ್ತಿಲ್ಲ! ಪವನ್ ನೊಂದಿದ್ದಾನೆ. ಆಕಾಶದ ಕಡೆ ಮುಖ ಮಾಡಿದ್ದಾನೆ. ಕಂಬನಿಯ ಹನಿಗಳು ಜಿನುಗುತ್ತಿವೆ.
ಎಲ್ಲೋ ಹಾಡೊಂದು ಕೇಳಿ ಬರುತ್ತಿದೆ
” ಪ್ರೇಮ ಗೀಮ ಜಾನೇ ದೋ ನಂಬಬಾರದೋ”
ಮಿನಿ ಮಿನಿ ಕತೆ – 2
” ಏಯ್ ಏನಿದೆಲ್ಲ? ನಿನ್ನ ಪರ್ಸ್ ನಲ್ಲಿ ಬರೀ ಚಾಕಲೇಟ್, ಖಾಲಿ ಕವರ್, ಖಾಲಿ ಬಾಕ್ಸ್ ಇದ್ದಾವಲ್ಲ
ಏನು ವಿಶೇಷ?” ಎಂದು ಪವನ್, ತ್ರಿವೇಣಿಯನ್ನು ಕಿಚಾಯಿಸಿದ.ಇಬ್ಬರೂ ಪಾರ್ಕೊಂದರಲ್ಲಿ ಕುಳಿತಿದ್ದರು.
” ಹಾಗೆಲ್ಲ ಮಾತಾಡಬೇಡಿ.ಆ ಒಂದೊಂದು ಖಾಲಿಯಲ್ಲೂ ಒಂದೊಂದು ಮಧುರವಾದ ನೆನಪುಗಳಿವೆ. ಅವು ನೀವೇ ನನಗೆ ಫಸ್ಟ್ ಟೈಮ್ ಕೊಡಿಸಿದ ಚಾಕಲೇಟ್, ಸ್ವೀಟ್ ಬೀಡಾ, ಕಿಟ್ ಕ್ಯಾಟ್ ಮುಂತಾದವುಗಳ ಪಳಿಯುಳಿಕೆಗಳು” ಎಂದಳು.
ತ್ರಿವೇಣಿಯ ಈ ಹವ್ಯಾಸವನ್ನು ಕಂಡು ಅವಳ ಬಗ್ಗೆ ಪವನ್ ಗೆ ಮತ್ತಷ್ಟು ಪ್ರೀತಿ ಹೆಚ್ಚಾಯಿತು, ಅಭಿಮಾನ ಮೂಡಿ ಬಂತು. ತನ್ನ ಆಯ್ಕೆಯ ಬಗ್ಗೆ ಅವನಿಗೇ ಹೆಮ್ಮೆ ಎನ್ನಿಸಿತು. ಅದೇ ಖುಷಿಯಲ್ಲಿ ಅವಳ ಮುಂಗೈಗೊಂದು ಹೂ ಮುತ್ತನಿಟ್ಟ.
ದೂರದಲ್ಲೆಲ್ಲೋ ಹಾಡೊಂದು ಕೇಳಿ ಬರುತ್ತಲಿತ್ತು.
” ಸವಿ – ಸವಿ ನೆನಪು ಸಾವಿರ ನೆನಪು……..”
ಮಿನಿ ಮಿನಿ ಕತೆ – 3
ಕಾಲ್ಗೆಜ್ಜೆಯ ಸದ್ದು ಕೇಳಿ ಬಂದತ್ತ ಪವನ್ ಕಣ್ಣು ಹಾಯಿಸಿದ, ಹಂಸ ನಡಿಗೆಯಲ್ಲಿ ನಡೆದು ಬರುತ್ತಿದ್ದಳು ಅವನ ಕಾವ್ಯ ಕನ್ನಿಕೆ ತ್ರಿವೇಣಿ. ಮುಗುಳ್ನಕ್ಕು ಸ್ವಾಗತಿಸಿದ.
” ಹಾಯ್ ಪವನ್, ನಾಳೆ ಏನು ಸ್ಪೆಷಲ್ ಗೊತ್ತಾ?
” ಇನ್ನೇನು ಅದೇ ಪ್ರೇಮಿಗಳ ದಿನಾಚರಣೆ ತಾನೆ”
” ಏನು ಅಷ್ಟು ಹಗುರಾಗಿ ಮಾತಾಡ್ತೀರಾ? ಪ್ರೇಮಿಗಳ ದಿನಾಚರಣೆ ತಪ್ಪಾ? ಎಂದು ಮುನಿಸು ತೋರಿದಳು.
” ಪ್ರೀತಿಸೋದು ತಪ್ಪಲ್ಲ, ದಿನಾಚರಣೆ ನನಗಿಷ್ಟ ಇಲ್ಲ! ”
“ನಿಮ್ಮದು ಬರೀ ಇದೇ ಆಯ್ತು, ನಾಳೆ ನನಗೊಂದು
ವಿಶೇಷವಾದ ಗಿಫ್ಟ್ ಬೇಕು ತರ್ತೀರಾ ? ”
” ಅದೇನು ಕೇಳು, ಆದರೆ ನನ್ನ ಯೋಗ್ಯತೆ ನೋಡಿ ಕೇಳು” ಎಂದ ಪವನ್ ಅವಳನ್ನೇ ದಿಟ್ಟಿಸಿದ.
” ನಾನು ಕೇಳೋ ಗಿಫ್ಟ್ ಗೊತ್ತಾದರೆ ನೀವು ನಕ್ಕ ಬಿಡ್ತೀರಾ! ಏನಿಲ್ಲ ನಾನು ಒಂದು ಸಾರಿನೂ ಸ್ವೀಟ್ ಬೀಡಾ ತಿಂದಿಲ್ಲ ,ನಾಳೆ ಅದನ್ನೇ ತನ್ನಿ” ಎಂದಳು.
ಅಂದು ಪ್ರೇಮಿಗಳ ದಿನ ತ್ರಿವೇಣಿ ಸ್ವೀಟ್ ಬೀಡಾ ಸವಿದಳು, ಪವನ್ ಅವಳ ಅಧರ ಸವಿಯನ್ನು!!
ಮಿನಿ ಮಿನಿ ಕತೆ – 4
ನನಗೇ ಯಾಕೆ ಹೀಗಾಗ್ತಿದೆ, ಎಲ್ಲರೂ ನನ್ನಿಂದ ದೂರ ಹೋಗ್ತಾ ಇದ್ದಾರಲ್ಲ, ನನ್ನಿಂದೇನು ತಪ್ಪಾಗಿದೆ ಎಂದು ಪವನ್ ಚಿಂತಾಕ್ರಾಂತನಾಗಿದ್ದ.
ಅವನಿಗೆ ಬೇರೆ ಯಾರೂ ದೂರವಾಗಿದ್ದಕ್ಕೆ ಆಗಿದ್ದ ನೋವಿಗಿಂತ, ಪ್ರೇಮದರಮನೆ ಕಟ್ಟಿ, ಕನಸುಗಳನ್ನು ಬಿತ್ತಿ, ಇದ್ದಕ್ಕಿದ್ದಂತೆ ದೂರಾದ ತ್ರಿವೇಣಿಯ ಬಗ್ಗೆ, ಅವಳ ನಿಲುವಿನ ಬಗ್ಗೆಯೇ ಹೆಚ್ಚು ಚಿಂತೆ ಕಾಡುತ್ತಿತ್ತು.
ಪ್ರೇಮಿಗಳಾಗಿ ವರುಷಗಳೇ ಉರುಳಿದ ನಂತರ,
ಪವನ್ ಅವಳಿಗೆ ” ಲವ್ ಯು” ಎಂದು ಮೆಸೇಜ್ ಮಾಡಿದ್ದೇ ಆತನಿಗೆ ಮುಳುವಾಗಿತ್ತು!
” ನಮ್ಮ ಮಾಮ ನನ್ನ ಫೋನ್ ಫಾಲೋ ಮಾಡ್ತಿರ್ತಾನೆ,ಇಂತಹ ಮೆಸೇಜ್ ಮಾಡಬೇಡಿ” ಎಂದು ಮರು ಮೆಸೇಜ್ ಹಾಕಿ ಮೌನವಾಗಿಬಿಟ್ಟಿದ್ದಳು.
” ಪ್ರೇಮಿಗೆ ಲವ್ ಯು ಎಂದು ಹೇಳಿದ್ದೇ ತಪ್ಪಾಯಿತೆ?” ಎಂಬ ಪ್ರಶ್ನೆಗೆ ಪವನ್ ಗೆ ಉತ್ತರವಾಗಿ ಸಿಕ್ಕಿದ್ದು
ಬರೀ ನಿರಾಸೆ, ಮೌನ, ನೋವು, ದುಖಃ!!
ಪರಮೇಶ್ವರಪ್ಪ ಕುದರಿ
ಚಿತ್ರದುರ್ಗ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಎಸ್.ವಿ.ಪಾವಟೆ ಯವರ ವಚನಾಮೃತ-1ಕೃತಿಯ ಪರಿಚಯ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ