You are currently viewing ‘ಮತ’ ವನ್ನು ಮೀರಿದ ಮಹಾಮಾನವ ವಿಶ್ವಬಂಧು ಬಸವಣ್ಣ

‘ಮತ’ ವನ್ನು ಮೀರಿದ ಮಹಾಮಾನವ ವಿಶ್ವಬಂಧು ಬಸವಣ್ಣ

ಕೆಲವರ ಹುಟ್ಟು ಚರಿತ್ರೆಯಾಗುತ್ತದೆ, ಜನಾಂಗದ ಚಾರಿತ್ರ್ಯವಾಗುತ್ತದೆ. ವರ್ತಮಾನದ ಕಣ್ಣಾಗುತ್ತದೆ. ಭವಿಷ್ಯದ ಬೆಳಕಾಗುತ್ತದೆ. ಅರಿವಿನ ದಾರಿಯಾಗುತ್ತದೆ, ಬಾಳಿನ ದೀವಿಗೆಯಾಗುತ್ತದೆ. ಸಕಲ ಜೀವಾತ್ಮರಿಗೂ ಲೇಸ ಬಯಸಿದ ಶರಣ ದಾರ್ಶನಿಕರಲ್ಲಿ ವಿಭೂತಿಪುರುಷ ವಿಶ್ವಗುರು ಬಸವಣ್ಣನವರು ಅಗ್ರಗಣ್ಯರು. ಪ್ರಾರ್ಥಃಸ್ಮರಣೀಯರಾದ ಬಸವಣ್ಣನವರ ಬದುಕು ಸಮಸ್ತ ಮಾನವಕುಲಕೋಟಿಗೆ ಮಹಾಮಾರ್ಗ. ಆದರೆ ಅಂಥ ಘನಮಹಿಮರನ್ನು ಒಂದು ‘ಮತ’ಕ್ಕೆ ಸಿಲುಕಿಸುವ ಸಂಕುಚಿತತೆ ನಮ್ಮಲ್ಲಿ ಸೇರಿಕೊಂಡಿರುವುದು ವಿಪರ್ಯಾಸ.

ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಎಂಬ ಪ್ರತ್ಯೇಕ ಧರ್ಮದ ಜಿಜ್ಞಾಸೆ ನೂರಾರು ವರ್ಷಗಳ ಹಿಂದಿನಿಂದಲೂ ನಡೆಯುತ್ತ ಬಂದಿದೆ. ಕರ್ನಾಟಕ ರಾಜ್ಯ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು 2018 ರಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಆಗ ಲಿಂಗಾಯತ ಮತ್ತು ವೀರಶೈವರಲ್ಲಿ ತೀವ್ರ ಚರ್ಚೆ ನಡೆಯಿತು. ರಾಜಕೀಯವು ಇಲ್ಲಿ ಹೆಚ್ಚು ಕ್ರಿಯಾಶೀಲವಾಗಿತ್ತು. ಆಗ ಪ್ರತ್ಯೇಕ ಧರ್ಮದ ಪ್ರಸ್ತಾವವನ್ನು ವೀರಶೈವ ಪರಂಪರೆಯ ಸ್ವಾಮೀಜಿಗಳು ವಿರೋಧಿಸಿ, “ಲಿಂಗಾಯತ ಮತ್ತು ವೀರಶೈವ ಧರ್ಮಗಳ ಮಧ್ಯೆ ಭಿನ್ನತೆಯಿಲ್ಲ; ಇದು ರಾಜಕೀಯ ಲಾಭಕ್ಕಾಗಿ ಧರ್ಮ ಒಡೆಯುವ ಹುನ್ನಾರ” ಎಂದು ಆರೋಪಿಸಿದ್ದು ಈಗ ಇತಿಹಾಸ. ಆ ವಿಷಯ ಇನ್ನೂ ಅಸ್ಪಷ್ಟವೇ. ಜಿಜ್ಞಾಸೆ ಜಾರಿಯಲ್ಲಿದೆ. ಆದರೆ ‘ಇವನಾರವ’ ಎನ್ನದೆ ಎಲ್ಲರನ್ನು ‘ನಮ್ಮ’ವನೆಂಬ ಬಸವನಂತರಂಗ ಮಾತ್ರ ಪರಿಶುದ್ಧ. ಪರಿಶುದ್ಧದ ಪರೀಕ್ಷೆಯಲ್ಲಿ ಬಸವಣ್ಣನವರನ್ನು ಮತಕ್ಕೆ ಸೀಮಿತಗೊಳಿಸುವ ಸಂಕುಚಿತತೆ ಸಲ್ಲ. ಸಮಾಜಕ್ಕೆ ಅಂಟಿದ ಕೊಳೆಯನ್ನು ತೊಳೆಯಲು ತಮ್ಮ ಜೀವನಪೂರ್ತಿ ಹೋರಾಡಿದ ಬಸವಣ್ಣನವರನ್ನು ಒಂದು ನಿರ್ಧಿಷ್ಟ ಮತದ ಬೇಲಿಯೊಳಗೆ ಬಂಧಿಸುವ ಪ್ರಯತ್ನಗಳು ನಡೆಯುತ್ತಿರುವ ಇಂತಹ ಸಂಕರದ ಸನ್ನಿವೇಶದಲ್ಲಿ ಬಸವಣ್ಣನವರ ನಿಜದ ನೆಲೆಯನ್ನು, ಅವರ ವ್ಯಕ್ತಿತ್ವವನ್ನು ಅವರ ವಚನಗಳ ಮೂಲಕವೇ ಅರ್ಥೈಸಿಕೊಳ್ಳುವ, ಅನುಸಂಧಾನಗೊಳಿಸುವ ಪ್ರಯತ್ನ ಮಾಡುವುದು ಹೆಚ್ಚು ಔಚಿತ್ಯಪೂರ್ಣ.

ಅದು ಸಾಮಾಜಿಕ ವಿಸಂಗತಿಗಳು ನೆಲೆಗೊಂಡ ಕಾಲ. ಮನುಷ್ಯ ಬದುಕನ್ನು ತೀವ್ರವಾಗಿ ಕಾಡಿದ ಅಂದಿನ ಸಾಮಾಜಿಕ, ರಾಜಕೀಯ, ಧಾರ್ಮಿಕ ಶೋಷಣೆಯುಕ್ತ ಸನ್ನಿವೇಶಗಳು ಸಜ್ಜನ, ಸಾತ್ವಿಕರನ್ನು ಕಂಗೆಡಿಸಿ ಪ್ರತಿರೋಧವನ್ನೊಡ್ಡುವಂತೆ ಪ್ರೇರೇಪಿಸಿರುವುದು ಚಾರಿತ್ರಿಕವಾಗಿ ಮಹತ್ವದ್ದಾಗಿದೆ.
ಈ ಹಿನ್ನೆಲೆಯಲ್ಲಿ ಮನುಕುಲ ಉದ್ಧಾರ, ಸಮ ಸಮಾಜದ ಸಮಗ್ರ ಸುಧಾರಣೆಯಂತಹ ಬಹು ಮಹತ್ವಾಕಾಂಕ್ಷೆಯ ಕಾರ್ಯಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಶರಣಪರಂಪರೆಯಲ್ಲಿ ಮಹಾ ಮಾನವತಾವಾದಿ ಬಸವಣ್ಣನವರೂ ಪ್ರಮುಖರಾಗಿದ್ದಾರೆ.

ಅಂದು ರಾಜಸತ್ತೆಯು ಎಲ್ಲವನ್ನೂ ಎಲ್ಲರನ್ನೂ ನಿಯಂತ್ರಿಸಿತ್ತು. ಆಳುವವರ ತೊತ್ತಾಗಿ ಶ್ರೀಸಾಮಾನ್ಯರು ನಿಟ್ಟುಸಿರಿಡುತ್ತಿದ್ದರು. ಶೋಷಣೆಗೆ ಒಳಗಾಗಿ ನೊಂದವರ ಸ್ವಾಭಿಮಾನ ಬಲಿಯಾಗುತ್ತಿತ್ತು. ವೈದಿಕಶಾಹಿಗಳ ಪ್ರಭಾವ ಢಾಳವಾಗಿತ್ತು. ಧರ್ಮಸೂಕ್ಷ್ಮಗಳು ತಲೆದೋರಿ ಜನಸಾಮಾನ್ಯರ ಬದುಕು ಹಿಂಸೆಗೊಳಗಾಗಿತ್ತು. ಜಾತೀಯತೆ, ಲಿಂಗಭೇದ, ವರ್ಗ ತಾರತಮ್ಯ, ಮೂಢನಂಬಿಕೆ ನೆಲೆಯೂರಿ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ ಬಿಕ್ಕಟ್ಟುಗಳ ತಮಂಧ ಕಳೆಯಲು ಬಸವಣ್ಣನವರು ಬೆಳಕಾಗಿ ಬಂದರು, ಲೋಕ ಬೆಳಗಿದರು.

‘ಲಿಂಗ’ ಎಂಬ ಸಾಂಕೇತಿಕ ಕುರುಹು ನೀಡಿದ ಬಸವಣ್ಣನವರು ಲಿಂಗಾಂಗ ಸಾಮರಸ್ಯದ ಮೂಲಕ ‘ಜೀವ ಮತ್ತು ಶಿವ’ ಒಂದೇ ಎಂಬ ತಾತ್ವಿಕತೆಯ ‘ಶಕ್ತಿ ವಿಶಿಷ್ಟಾದ್ವೆತ’ ಸಿದ್ಧಾಂತವನ್ನು ಮಂಡಿಸಿದರು.



ಬಸವಣ್ಣ ಮೂಲತಃ ವೈದಿಕನಾದರೂ ವೈದಿಕ ಧರ್ಮದಲ್ಲಿರುವ ಡಾಂಭಿಕತೆಯನ್ನು ‘ವೇದವನೋದಿದ ಬ್ರಾಹ್ಮಣನ ಶಿರ ಹಾರಿ ಹೋಯಿತ್ತು’ ಎಂದು ಟೀಕಿಸುವ ಮೂಲಕ ಬ್ರಹ್ಮತ್ವವನ್ನರಿತ ನಿಜ ಬ್ರಾಹ್ಮಣನನ್ನು ಸಮರ್ಥಿಸುತ್ತಾರೆ. ‘ಕೊಲ್ಲುವವನೇ ಮಾದಿಗ, ಹೊಲಸು ತಿಂಬುವವನೇ ಹೊಲೆಯ, ಸಕಲ ಜೀವಾತ್ಮರಿಗೆ ಲೇಸನೇ ಬಯಸುವವನೇ ಕುಲಜ’ ಎನ್ನುವ ಬಸವಣ್ಣನವರು ಹುಟ್ಟುತ್ತಲೇ ಯಾರ ಕುಲವೂ ನಿರ್ಧಾರವಾಗುವುದಿಲ್ಲ. ಮಾಡುವ ಹೇಯ ವೃತ್ತಿಯೇ ಕುಲವನ್ನು ನಿರ್ಧರಿಸುತ್ತದೆ. ಆದ್ದರಿಂದ ಎಲ್ಲರಿಗೂ ಒಳಿತು ಬಯಸುತ್ತಲೇ ನಿಜವಾದ ಕುಲಜನಾಗಬೇಕು ಎಂಬುದನ್ನು ತಿಳಿಸುತ್ತಾರೆ. ಅಧಿಕಾರಶಾಹಿ ವಿರೋಧಿ ನಿಲುವು ಹಾಗೂ ಅಧಿಕಾರರಹಿತ ವರ್ಗಪರ ಚಿಂತನೆ ಹಾಗೂ ಸಾಮೂಹಿಕ ಹೋರಾಟ ಬಸವತತ್ತ್ವದ ಮೂಲಬೀಜ. ಭವಿ ಬಿಜ್ಜಳನ ಭವದ ಭಂಡಾರದ ಮಂತ್ರಿಯಾಗಿದ್ದ ಬಸವಣ್ಣ ಅರಸೊತ್ತಿಗೆಯನ್ನು ತಿರಸ್ಕರಿಸುತ್ತ ‘ಅರಸರ ಮನೆಯಲ್ಲಿ ಅರಸಿಯಾಗಿಪ್ಪುದರಿಂದ ಭಕ್ತರ ಮನೆಯಲ್ಲಿ ತೊತ್ತಾಗಿಪ್ಪುದು ಲೇಸಯ್ಯಾ’ ಎಂದು ಭಕ್ತರ ಸರಳತೆ, ಹೃದಯಂವಂತಿಕೆಗೆ ಹವಣಿಸುವ ಹಂಬಲ ಎದ್ದು ತೋರುತ್ತದೆ.

‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವಲ್ಲಿ ಅಹಂಅನ್ನು ಪ್ರಕಟಿಸದೇ ಶಿವಭಕ್ತರ ಶ್ರೇಷ್ಠತೆಯನ್ನು ಮೆರೆಯುತ್ತಾರೆ. ಜನಸಾಮಾನ್ಯರಲ್ಲಿದ್ದ ಕಂದಾಚಾರಗಳನ್ನು ಹೊಡೆದೋಡಿಸುವ ನಿಟ್ಟಿನಲ್ಲಿ ‘ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು, ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರು. ಉಂಬ ಜಂಗಮ ಬಂದರೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯ…’, ‘ನೀರ ಕಂಡಲ್ಲಿ ಮುಳುಗುವರಯ್ಯ, ಮರವ ಕಂಡಲ್ಲಿ ಸುತ್ತುವರಯ್ಯ..’ ಎಂಬ ವಚನಗಳಲ್ಲಿ ಪ್ರಖರ ವೈಚಾರಿಕತೆಯ ಕಿಡಿ ಹೊತ್ತಿಸುತ್ತಾರೆ. ಪ್ರತಿದಿನ ಬೆಳಿಗ್ಗೆ ದೂರದರ್ಶನದ ಪರದೆಯಲ್ಲಿ ಪ್ರತ್ಯಕ್ಷವಾಗಿ ಮನುಷ್ಯರ ದೌರ್ಬಲ್ಯವನ್ನು ತಮ್ಮ ದಾಳವನ್ನಾಗಿ ಬಳಸಿಕೊಳ್ಳುವ ಜ್ಯೋತಿಷಿ, ಕೆಲ ಡಾಂಭಿಕ ಸ್ವಾಮಿಗಳು ಹೇಳುವ ಜ್ಯೋತಿಷ್ಯ, ರಾಹುಕಾಲ, ಗುಳಿಕಾಲಗಳೆಂಬ ಮೌಢ್ಯತೆಯನ್ನು ವಿರೋಧಿಸುವ ಬಸವಣ್ಣ ‘ತಿಥಿ ವಾರವೆಂದರಿಯೆ, ಲಗ್ನ ವಿಲಗ್ನವೆಂದರಿಯೆ; ಇರುಳೊಂದು ವಾರ ಹಗಲೊಂದು ವಾರ; ಭವಿಯೊಂದು ಕುಲ, ಭಕ್ತನೊಂದು ಕುಲ’ ಎಂದು ಕಟುವಾಗಿ ಟೀಕಿಸುತ್ತಾರೆ. ‘ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ, ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ…, ಛಲವಿಲ್ಲದವರ ಮೆಚ್ಚ ನಮ್ಮ ಕೂಡಲಸಂಗಮದೇವ’ ಎಂಬ ವಚನದ ಮೂಲಕ ಪರರ ಯಾವುದನ್ನೂ ನಿರಾಕರಿಸುವ ನಿಶ್ಚಲ ಮನಸ್ಥಿತಿಯನ್ನು ರೂಢಿಸಿಕೊಳ್ಳವ ಕುರಿತು ತಿವಿದು ತಿಳಿಸುತ್ತಾರೆ.

ಲೋಕದ ಲೋಪಗಳ ಕುರಿತು ಮಾತನಾಡುವ ಮನುಷ್ಯನ ಕೀಳು ಗುಣವನ್ನು ವ್ಯಂಗಿಸುವ ಬಸವಣ್ಣ ‘ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ; ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವ’ ಎಂದು ನಮ್ಮನ್ನೆಲ್ಲ ಆತ್ಮಾವಲೋಕನಕ್ಕೀಡು ಮಾಡುತ್ತಾರೆ.

ಸಮಾನತೆಯ ಸಮಪಾತಳಿಯ ಮೇಲೆ ಸಮಾಜ ನಿರ್ಮಾಣ ಮಾಡಬೇಕೆಂಬ ಕನಸು ಕಂಡಿದ್ದ ಬಸವಣ್ಣ ‘ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ…ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ’ ಎಂದು ಹೇಳುವ ಮೂಲಕ ಜಾತಿ, ಮತ, ಪಂಥಗಳ ಹಂಗನ್ನು ಹರಿದು, ಎಲ್ಲರನ್ನೊಂದುಗೊಳಿಸಲು ಹವಣಿಸುತ್ತಾರೆ. ‘ಕಾಯಕವೇ ಕೈಲಾಸ’ ಎನ್ನುವ ಬಸವಣ್ಣ ಪ್ರತಿಯೊಬ್ಬರೂ ತಮ್ಮ ದುಡಿಮೆಯನ್ನು ನಿಷ್ಠೆ, ಶ್ರದ್ಧೆಯಿಂದ ಗೈಯಬೇಕು. ಸದಾಚಾರವೇ ಸದಾಶಿವನ ಒಲುಮೆಗೆ ಸಾಧನ ಎಂದು ಅರುಹಿದ್ದಾರೆ. ‘ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ ಇದಿರ ಹಳಿಯಲುಬೇಡ, ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ’ ಎಂಬಲ್ಲಿ ಮನುಷ್ಯನಿಗೆ ನೈತಿಕ ನೆಲೆಗಟ್ಟು ಅತ್ಯಾವಶ್ಯ. ವ್ಯಕ್ತಿ ಘನತೆ ಹಾಗೂ ಸಾಮಾಜಿಕ ಘನತೆಗಳ ಪೋಷಣೆಗೆ ನೈತಿಕತೆಯೇ ದೊಡ್ಡ ಅಸ್ತç ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ. ಮಾನವತೆಯ ಪ್ರತಿರೂಪದಂತಿದ್ದ ಬಸವಣ್ಣ ಸಮಾಜದ ಕೆಡುಕುಗಳಿಗೆ ಕಿವಿಗೊಟ್ಟು ಅವುಗಳ ನಾಶಕ್ಕೆ ಬೇಕಿರುವ ಆತ್ಮಸ್ಥೈರ್ಯವನ್ನು ನಿಜಶರಣ ಹೊಂದಬೇಕಾಗುತ್ತದೆ ಎಂಬುದನ್ನು ‘ನ್ಯಾಯ ನಿಷ್ಠುರಿ, ದಾಕ್ಷಿಣ್ಯಪರನು ನಾನಲ್ಲ; ಲೋಕ ವಿರೋಧಿ ಶರಣನಾರಿಗಂಜುವವನಲ್ಲ..’ ಎಂದು ದೃಢತೆಯಿಂದ ನುಡಿದಿದ್ದಾರೆ.
ಜಾತೀಯತೆ, ಮತ ಸಂಘರ್ಷ, ಕ್ಷುಲ್ಲಕ ರಾಜಕೀಯ, ಕೋಮು ವೈಷಮ್ಯ, ವರ್ಗತಾರತಮ್ಯ, ಲಿಂಗಭೇದ, ಅಸಮಾನತೆ, ಶೋಷಣೆ, ಸ್ವಾರ್ಥ, ಮೋಸ, ವಂಚನೆ, ಅನ್ಯಾಯ, ಅನಾಚಾರಗಳ ಕೂಪವಾಗಿರುವ ಮನುಷ್ಯ ಮೃಗೀಯತನದ ಮೂರ್ತರೂಪದಂತೆ ಭಾಸವಾಗುತ್ತಿದ್ದಾನೆ. ಸೃಷ್ಟಿತ ಸೀಮೆಗಳನ್ನು ಸವರಿಕೊಂಡು, ಕೆಡುಕುಗಳನ್ನು ಕಳಚಿಕೊಂಡು, ಸಂಬಂಧಗಳನ್ನು ಬೆಸೆಯುತ್ತಲೇ ಮಾನವೀಯಗೊಳ್ಳಬೇಕಾದ ಪರಿಸ್ಥಿತಿಯಲ್ಲಿ ಬಸವಣ್ಣನವರು ಮುಖ್ಯವೆನಿಸುತ್ತಾರೆ. ಸಮ ಸಮಾಜದ ನಿರ್ಮಾಣ ಹಾಗೂ ಮನುಕುಲ ಉದ್ಧಾರಕ್ಕಾಗಿ ಹೋರಾಡಿದ ಬಸವಣ್ಣನವರನ್ನು ನಿರ್ಧಿಷ್ಟವಾದ ಮತದ ಚೌಕಟ್ಟಿಗೆ ಒಳಪಡಿಸುವುದು ತರವಲ್ಲ. ಮಾನವತ್ವದ, ವಿಶ್ವಬಂಧುತ್ವದ ವಿಶಾಲ ಪರಿಕಲ್ಪನೆಯಲ್ಲಿ ಬಸವಣ್ಣನವರನ್ನು ಪರಿಭಾವಿಸಿದಾಗ ಮಾತ್ರ ಅವರ ಘನತೆ ಹೆಚ್ಚುತ್ತದೆ. ಅದು ಮನುಷ್ಯರಾದವರು ಮಾಡುವ ನಿಜವಾದ ಕರ್ತವ್ಯ. ಬಸವನೆಂಬ ಬೆಳಕು ಸಮಸ್ತ ಮಾನವಕುಲವನ್ನು ಬೆಳಗಬಲ್ಲುದು.

ಡಾ. ಸಂಗಮೇಶ ಎಸ್. ಗಣಿ
ಕನ್ನಡ ಉಪನ್ಯಾಸಕರು,
ಹೊಸಪೇಟೆ
ಮೊ :9743171324


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.