ಅದೊಂದು ಕಾಲ ಇತ್ತು.ಮದುವೆ ಅಂದ್ರೆ ಸಂಭ್ರಮವೋ ಸಂಭ್ರಮ. ಮದುವೆ ಮನೆ ಅಂದ್ರೆ ಸಾಕು ಗಲಗಲ ಗಲಗಲ ಅಂತ ಸದ್ದು ಗದ್ದಲದಿಂದ ತುಂಬಿರುತ್ತಿತ್ತು. ಸುಮಾರು ಹದಿನೈದು ದಿನಕ್ಕುಾ ಮುಂಚೆ ಸಂಬಂಧಿಕರು, ನೆಂಟರಿಷ್ಟರು ಮದುವೆ ಮನೆಗೆ ಬಂದು ಜಮಾಯಿಸಿ ಬಿಡ್ತಾ ಇದ್ರು. ಊರಿನಲ್ಲಿರುವ ಹೆಣ್ಣುಮಕ್ಕಳು ಮನೆಗೊಬ್ಬರಂತೆ ಬಂದು ಕುಟ್ಟೋರು ಕುಟ್ಟೋರು,ಬೀಸೋರು ಬೀಸೋರು,ಹರಿಯೋರು ಹರಿಯೋರು, ಕೇರೂರು ಕೇರೂರು, ಬೀಸೋರು ಬೀಸೋರು.ಮನೆ ತುಂಬೆಲ್ಲ ಸಡಗರದಿಂದ ಕೆಲಸವೋ ಕೆಲಸ.ಒಬ್ಬರಿಗೊಬ್ಬರು ಹಂತಿ ಪದಗಳನ್ನು,ಜನಪದ ಹಾಡುಗಳನ್ನು, ಸೋಬಾನ ಪದಗಳನ್ನು, ತಿಳಿಹಾಸ್ಯವನ್ನು ಮಾಡುತ್ತಾ ಕೆಲಸ ಮಾಡಿದ್ದೇ ಗೊತ್ತಾಗ್ತಿರ್ಲಿಲ್ಲ.ಮದುವೆ ದಿನ ಬಂತು ಅಂದ್ರೆ ಸಾಕು,ಒಂದಿಷ್ಟು ಜನ ಹಿರಿಯರು ಊರಿನಲ್ಲಿರುವ ಹುಡುಗರಿಗೆ ಹುಡುಗಿಯರನ್ನು, ಹುಡುಗಿಯರಿಗೆ ಹುಡುಗರನ್ನು ತೋರಿಸುವುದು ಸಾಮಾನ್ಯವಾಗಿರುತ್ತಿತ್ತು. ಮದುವೆಯಲ್ಲೆ ಮತ್ತೊಂದಿಷ್ಟು ಮದುವೆಗಳು ನಿಶ್ಚಯವಾಗಿ ಬಿಡುತ್ತಿದ್ದವು.ಮದ್ವೆ ಆಯ್ತು ಅಂದ್ರೆ ಸಾಕು,ಹುಡುಗಿಯ ಮನೆಯಲ್ಲಿ ಅಳಿಯ ಮುಾರು ತಿಂಗಳು ಝಾಂಡ ಹೂಡಿ ಬಿಡ್ತಾ ಇದ್ದ.ಆಗಿನ ಕಾಲ ಹೆಂಗಿತ್ತು ಅಂದ್ರೆ ಅಳಿಯ ಅವರ ಮನೆಗೆ ಮಾತ್ರ ಅಳಿಯ ಅಲ್ಲ,ಇಡೀ ಊರಿಗೆ ಅಳಿಯನಾಗಿರುತ್ತಿದ್ದ. ಅವನ ವೇಷ ಭೂಷಣ ನೋಡಿದ್ರೆ ಸಾಕು,ಇವನು ಹೊಸದಾಗಿ ಮದುವೆ ಆಗಿರೋ ಊರಿನ ಅಳಿಯ ಅನ್ನಿಸ್ ಬಿಡೋದು.ಎಷ್ಟು ಚೆನ್ನಾಗಿ ಗರಿಗರಿಯಾದ ಬಿಳಿಯ ಅಂಗಿ ಮತ್ತು ಬಿಳಿ ಪಂಚೆಯನ್ನುಟ್ಟು ಹೆಗಲ ಮೇಲೊಂದು ಟರ್ಕಿ ಟವೆಲನ್ನು ಹಾಕಿಕೊಂಡು ಮನೆ ಮನೆ ಸುತ್ತೋನು ಅಂದ್ರೆ ಪ್ರತಿ ಮನೆಯಲ್ಲೂ ಊರ ಅಳಿಯನಿಗೆ ಆದರಾತಿಥ್ಯ ಹೇಳತೀರದು. ಹೆಂಡತಿಯ ಮನೆಯಲ್ಲಿ ಪ್ರತಿ ದಿನ ಬೆಳಗಾದರೆ ಸಾಕು ಅಳಿಯನಿಗೆ ಅರಿಶಿನ ಎಣ್ಣೆ ಹಾಕಿ ಮೈ ಕೈ ಯನ್ನು ತಿಕ್ಕಿದ್ದೇ ತಿಕ್ಕಿದ್ದು.
ಪ್ರತಿದಿನ ತಪ್ಪದೇ ಹೆಂಡತಿಯೇ ತನ್ನ ಗಂಡನಿಗೆ ಪ್ರೀತಿಯಿಂದ ಬೆನ್ನುಜ್ಜಿ ಮೈಕೈ ಒರಸಿ, ತನ್ನ ಗಂಡನಿಗೆ ಔತಣ ರೆಡಿ ಮಾಡುತ್ತಿದ್ದಳು.ಅತ್ತೆ ಮಾವಂದಿರೆಲ್ಲ ಅಳಿಯುಾಟಕ್ಕೆ ಬಂದ ಅಳಿಯನಿಗೆ ಪ್ರತಿದಿನ ಬಗೆಬಗೆಯ ಭಕ್ಷ್ಯ ಭೋಜನಗಳನ್ನು ಉಣಬಡಿಸುತ್ತಿದ್ದರು.ವಾವ್! ನೆನೆಸಿಕೊಂಡ್ರೆ ಅದ್ಭುತ ಎನಿಸಿಬಿಡುತ್ತದೆ.ಆದ್ರೆ ಕಾಲ ಈಗ ಹಂಗಿಲ್ಲ.ಎಲ್ಲ ಬದಲಾಗಿ ಹೋಗಿದೆ. ಮದುವೆಗಳು ಸಂಭ್ರಮಗಳನ್ನು ಕಳೆದುಕೊಂಡಿವೆ.ಈಗೇನಿದ್ರೂ ದಿಢೀರ್ ಮದುವೆ,ದಿಢೀರ್ ವಿಚ್ಛೇದನ.ಈಗ ಹುಡುಗಿ ಹುಡುಗನನ್ನು,ಹುಡುಗ ಹುಡುಗಿಯನ್ನು ಆಯ್ಕೆ ಮಾಡಿಕೊಂಡು ಬಿಡ್ತಾರೆ.ಅದಕ್ಕೆ ಈಗ ಸಂಪೂರ್ಣ ಸ್ವಾತಂತ್ರ್ಯವಿದೆ. ಈಗಿನ್ ಕಾಲ್ದಲ್ಲಿ ಯಾರು ಯಾರನ್ನು ಕೇಳೋದಿಲ್ಲ.ಸ್ವತಃ ತಾವೇ ಆಯ್ಕೆ ಮಾಡಿ ನಿರ್ಧರಿಸಿಬಿಡುತ್ತಾರೆ. ಅಯ್ಯೋ!ಮದುವೆಗಳು ಸಂಭ್ರಮಗಳನ್ನು ಕಳೆದುಕೊಳುತ್ತಿವೆ ಅಂತ ಹಿರಿಯರು ಬೇಸರಪಡುವ ಅಗತ್ಯವಿಲ್ಲ.ಯಾಕಂದ್ರೆ ಅವರ ಇಷ್ಟದ ಆಯ್ಕೆಯನ್ನೇ ಅವರೇ ಮಾಡಿಕೊಂಡಿರುತ್ತಾರೆ. ಜೀವನಪೂರ್ತಿ ಜೊತೆಯಾಗಿರುವವರು ಅವರೇ ಅಂದ ಮೇಲೆ ಅವರ ಆಸೆ ಕನಸುಗಳಿಗೆ ಹಿರಿಯರಾದವರು ನೀರೆರೆದರೆ ಸಾಕು. ಅಯ್ಯೋ!ನಮ್ ಕಾಲದಲ್ಲಿ ಹಂಗಿರಲಿಲ್ಲ,ಹಿಂಗ್ ಇರ್ಲಿಲ್ಲ ಅಂಥ ಕೊರಗುತ್ತ ಕೂರುವ ಬದಲು ಈಗಿನ ಕಾಲದ ಮದುವೆ ಮೋಜು ಮಸ್ತಿಯ ಸಂಭ್ರಮವನ್ನು ನೋಡಿ, ಮುಗುಳ್ನಕ್ಕು ಸುಮ್ಮನಾಗಿ ಬಿಡೋಣ.ಯಾಕೆಂದ್ರೆ ಕಾಲಚಕ್ರ ಮುಂದೆ ಸಾಗತ್ತೆ ಹೊರತು ಹಿಂದೆ ಬರೋದಕ್ಕೆ ಸಾಧ್ಯವೇ ಇಲ್ಲ. ನಾವೇನಿದ್ರೂ ಮುಂದಿನ ಪೀಳಿಗೆಗೆ ಹೊಂದಿಕೊಳ್ಳಬೇಕೇ ಹೊರತು, ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ.ಇನ್ನು ಕಿರಿಯರಾದ ನಾವು ಹೊಸ ಹೊಸ ಅಪ್ ಡೇಟ್ ಗಳಿಗೆ ಹೊಂದಿಕೊಂಡು ಸರಿ ಎನಿಸಿದ ದಾರಿಯಲ್ಲಿ ನಡೆಯೋಣ ಎಂದು ನಿರ್ಧರಿಸೋಣ.
ಕಂಸ
ಕಂಚುಗಾರನಹಳ್ಳಿ ಸತೀಶ್
ತಾ||ನರಗುಂದ ಜಿ||ಗದಗ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.