You are currently viewing ಕಾವ್ಯ ರಸಧಾರೆ ಹರಿಸಿದ ಸುಂದಕುವರನ ಕಗ್ಗಗಳು

ಕಾವ್ಯ ರಸಧಾರೆ ಹರಿಸಿದ ಸುಂದಕುವರನ ಕಗ್ಗಗಳು

ಕೃತಿ – ಸುಂದಕುವರನ ಕಗ್ಗಗಳು
ಲೇಖಕರು – ಶ್ರೀ ಕೃಷ್ಣ ದ ಪದಕಿ
ಪುಟಗಳು -224
ಬೆಲೆ -225

ಸಹೋದರ ಶ್ರೀ ಕೃಷ್ಣ ಪದಕಿಯವರ ಇತ್ತೀಚೆಗೆ ಬಿಡುಗಡೆಯಾದ “ಸುಂದಕುವರನ ಕಗ್ಗಗಳು ” ಮುಕ್ತಕ ಸಂಕಲನ ಕಣ್ಣಾಡಿಸಿದಾಗ ಸುಂದರ ಮುಖಪುಟ ವಿನ್ಯಾಸದೊಂದಿಗೆ ಗುರುಗಳಾದ ಶ್ರೀ ವನರಾಗ ಶರ್ಮಾ ರವರ ಅಭಿನಂದನೀಯ ಮುನ್ನುಡಿ, ಲೇಖಕಿ ಶ್ರೀಮತಿ ಯಶಸ್ವಿನಿ ಶ್ರೀಧರಮೂರ್ತಿಯವರ ವಿಶ್ಲೇಷಣೆಯಿಂದ ಕೂಡಿದ ಆಶಯ ನುಡಿ ಹಾಗೂ ಅತ್ಯುತ್ತಮ ಭಾಷಾ ಪಂಡಿತರಾದ ಶ್ರೀ ಅನಂತ ತಾಮ್ಹನ್ಕರ್ ರವರ ಬೆನ್ನುಡಿಯು ಸಂಪೂರ್ಣ ಸಂಕಲನದ ಸಾರ ಹೊಂದಿದೆ. ಸಹೋದರ ಕೃಷ್ಣ ಪದಕಿಯವರು ನನ್ನ ಛಂದೋಬದ್ದ ಸಾಹಿತ್ಯದ ಗುರುಗಳಾಗಿದ್ದು ,ಇವರ ಸೂಕ್ತ ಮಾರ್ಗದರ್ಶನ ಹಾಗೂ ಸಲಹೆಗಳಿಂದ ಎಲ್ಲ ಪ್ರಕಾರದ ಷಟ್ಪದಿ ಹಾಗೂ ಮುಕ್ತಕ ರಚನೆಯಲ್ಲಿ ನಾನು ತೊಡಗಿಸಿಕೊಂಡಿದ್ಧೇನೆ ಎಂದು ಹೇಳಲು ಸಂತಸವಾಗುತ್ತಿದೆ.



ಸಂಚಲನ ಮೂಡಿಸುತ ಸಾಹಿತ್ಯ ಕ್ಷೇತ್ರದಲಿ
ಮಿಂಚಿನಾ ಗತಿಯಲ್ಲಿ ಮುನ್ನುಗ್ಗುತ
ಕಿಂಚಿತ್ತು ದಣಿಯದಲೆ ಸಂಘಟನೆ ಮಾಡುತಲಿ
ಕಾಂಚನಕೆ ಸಮನೀತ ಪೂರ್ಣತನಯೆ

ಎಂದು ಮುಕ್ತಕ ನಮನ ಸಲ್ಲಿಸುತ್ತಿದ್ದೇನೆ. ಈಗಾಗಲೇ ಇವರ ಸಾವಿರಕ್ಕೂ ಮೀರಿ ಮುಕ್ತಕಗಳನ್ನು ಪ್ರತಿದಿನ ವಾಟ್ಸಾಪ್ ಬಳಗದಲ್ಲಿ ಓದಿ ಪ್ರೇರಣೆ ಪಡೆದು ಹಲವರು ಮುಕ್ತಕ ರಚನೆಯಲ್ಲಿ ತೊಡಗಿದ್ದಾರೆ.
ಕರ್ನಾಟಕ ರಾಜ್ಯ ಮುಕ್ತಕ ಕವಿ ಪರಿಷತ್ತು ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ಇವರು ಜಿಲ್ಲೆಯ ಹಲವು ಮುಕ್ತಕ ರಚನಾ ಆಸಕ್ತರಿಗೆ ಸೂಕ್ತ ಮಾಹಿತಿ ಒದಗಿಸಿ , ತಪ್ಪುಗಳ ತಿದ್ದಿ ಪ್ರೋತ್ಸಾಹ ನೀಡುತ್ತ ಮುಕ್ತಕ ಸಾಹಿತ್ಯ ಪ್ರಕಾರ ಹುಲುಸಾಗಿ ಬೆಳೆಯುವಂತೆ ಮಾಡಿ ಮುಕ್ತಕ ಕವಿಯೆಂದೇ ಜನಮನದಲ್ಲಿ ನೆಲೆಸಿದ್ದಾರೆ. ಈಗ ಅವೆಲ್ಲ ಒಂದೆಡೆ ಸೇರಿಸಿ ಮಾಡಿದ ಈ ಮುಕ್ತಕ ಸಂಕಲನ ಓದಿ ಕಿರು ಅವಲೋಕನ ಮಾಡುವ ಸಣ್ಣ ಪ್ರಯತ್ನ ಮಾಡಿದ್ದೇನೆ.

‘ಸುಂದಕುವರನ ಕಗ್ಗಗಳು’ ಕೃತಿಯಲ್ಲಿ ಸಾವಿರ ಮುಕ್ತಕಗಳಿದ್ದು ಪ್ರತಿಯೊಂದು ಮುಕ್ತಕವು ಅದ್ಭುತವಾದ ಸಾರವನ್ನು ಒಳಗೊಂಡಿದ್ದು ಭಕ್ತಿ ,ಪರಿಸರ ಪ್ರೀತಿ,ಸಾಮಾಜಿಕ ಕಳಕಳಿ, ಸನ್ನಡತೆ ಹಾಗೂ ಉತ್ತಮ ನೀತಿಯನ್ನು ಬಿಂಬಿಸುವಂತಿವೆ.

ಹೆಣ್ಣೆಂದು ಬಗೆಯದಿರು ನೀ ತಾರತಮ್ಯವನು
ಹೆಣ್ಣೊಂದು ಜಗದೊಳಗೆ ಚಾಲನದ ಶಕ್ತಿ
ಹೆಣ್ಣಿಲ್ಲದಾ ವಿಶ್ವ ಕಲ್ಪನೆಗೆ ನಿಲುಕದ್ದು
ಹೆಣ್ಣು ರಚನೆಯ ಮೂಲ ಸುಂದಕುವರ

ಹೆಣ್ಣಿನ ಬಗ್ಗೆ ಅದ್ಭುತವಾಗಿ ಮೂಡಿ ಬಂದ ಈ ಮುಕ್ತಕದಲ್ಲಿ ಜಗದ ಪ್ರತಿಯೊಂದು ಕಣದಲ್ಲಿಯೂ ಹೆಣ್ಣು ಜೀವ ತುಂಬುವ ಶಕ್ತಿ ಹೊಂದಿದ್ದಾಳೆ, ಅವಳಿಲ್ಲದ ವಿಶ್ವವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ ಎಂದು ಹೆಣ್ಣು ಕುಲಕ್ಕೆ ಗೌರವ ಸಲ್ಲಿಸಿರುವುದು ಅಭಿನಂದನೀಯ.

ಪುಟ್ಟ ವಿಷಯಗಳಿಂದ ತಪ್ಪು ಸಂದೇಶಗಳು
ಕೆಟ್ಟ ಪರಿಣಾಮಗಳ ಹುಟ್ಟಿಸುವ ಮುನ್ನ
ದಿಟ್ಟತನವನು ತೋರಿ ಮನವರಿಕೆ ಮಾಡು ನೀ
ನೆಟ್ಟಗಾಗಲು ಬಂಧ ಸುಂದಕವರ

ಅತಿ ಚಿಕ್ಕ ವಿಚಾರಗಳಿಗೆ ಮನಸ್ತಾಪ ಬಂದು ದೂರವಾಗುವ ಮುನ್ನ ದಿಟ್ಟತನದಿಂದ ತಾನೇ ಮುಂದುವರಿದು ನಡೆದ ವಿಚಾರಗಳ ಬಗ್ಗೆ ಮನವರಿಕೆ ಮಾಡಿಸುವುದು ಬಹು ಮುಖ್ಯ. ಹೀಗೆ ಮಾಡಿದಾಗ ತಪ್ಪು ಗ್ರಹಿಕೆಯಿಂದಾಗುವ ದುಷ್ಪರಿಣಾಮವನ್ನು ತಡೆದು ಸಂಬಂಧಗಳನ್ನು ಸರಿಪಡಿಸಲು ಸಾಧ್ಯವಿದೆಯೆಂದು ಸಾರಿದ ಈ ಮುಕ್ತಕ ಮನಸ್ಸಿಗೆ ನಾಟಿತು.

ಎಡಬಲ ಪಂಥದಲಿ ಒಡೆಯದಿರಿ ಸಾಹಿತ್ಯ
ಎಡವಿ ಹಿಮ್ಮೆಟ್ಟುವುದು ಭಾಷೆ ಪಾಂಡಿತ್ಯ
ಬುಡಬುಡಿಕೆ ಬರಹಗಳು ಕಳೆದು ಹೋಗುವವಿಲ್ಲಿ
ಮಡಿವಂತಿಕೆಯ ಬಿಸುಡು ಸುಂದಕುವರ

ಈ ಮುಕ್ತಕದಲ್ಲಿ ಸಾಹಿತ್ಯ ಪ್ರೀತಿಯ ಜೊತೆಗೆ ಎಡಪಂಥೀಯರು , ಬಲಪಂಥೀಯರೆಂದು ಗುರುತಿಸಿಕೊಳ್ಳುವ ಕೆಲವರು ಸಾಹಿತ್ಯವನ್ನು ಇಬ್ಭಾಗ ಮಾಡಲು ಹೊರಟರೆ ನಿಜವಾದ ಭಾಷಾ ಪಾಂಡಿತ್ಯದಿಂದ ಕೂಡಿದ ಬರಹಗಳು ಮಾತ್ರ ಉಳಿದುಕೊಳ್ಳುತ್ತವೆ ಎಂದು ಕಿವಿಮಾತು ಹೇಳಿದ ಪರಿ ಅನನ್ಯವಾಗಿದೆ.

ನೆರೆಮನೆಯ ವೈಭವಕೆ ಮನ ಸೋಲುವುದು ಸಲ್ಲ
ತರತರದ ಪೀಡೆಯಿದು ತುಲನೆ ಮಾಳ್ಪರಿಗೆ
ಅರಸನನು ಕಾಣುತಲಿ ಪುರುಷನನು ಮರೆಯುವಾ
ವರಸೆಯನು ಬಿಟ್ಟುಬಿಡು ಸುಂದಕುವರ

ಅದ್ಬುತವಾದ ಸಾರವನ್ನು ಹೊಂದಿರುವ ಈ ಮುಕ್ತಕದ ಮೂಲಕ ಪರರ ಸಿರಿವಂತಿಕೆಯನ್ನು ತುಲನೆ ಮಾಡುತ್ತ ತಮ್ಮ ಬಳಿಯಿಲ್ಲವೆಂದು ಒಳಗೊಳಗೆ ಕಳವಳ ಪಡುವುದು ಸರಿಯಲ್ಲ. ಇರುವುದರಲ್ಲೇ ಸಂತಸ ಪಟ್ಟು ಬದುಕುವ ಕಲೆ ಕಲಿಯಬೇಕು ಎಂದು ಹೇಳುತ್ತ ಉತ್ತಮ ಮಾರ್ಗದ ದರ್ಶನ ಮಾಡಿಸಿದ್ದಾರೆ.

ಹರತತ್ವ ಹರಿತತ್ವ ಪರತತ್ವಗಳನೆಲ್ಲ
ಅರಿವ ಯತ್ನದಿ ಸೋತ ನರರು ಬಹಳಿಹರು
ಮುರಿದು ಬೀಳುವ ಮುನ್ನ ಬಾಳಿನಾ ಹಂದರವು
ನರತತ್ವಗಳನರಿಯೊ ಸುಂದಕವರ

ಆ ದೇವರು ಈ ದೇವರೆಂದು ಹವಣಿಸುತ್ತಿರುವ ಜಗದ ಜನರ ಪಾರಮಾರ್ಥಿಕ ತತ್ವಾನ್ವೇಷಣೆಯಲ್ಲಿ ಸೋತಿರುವ ಈ ಲೋಕದಲ್ಲಿ ನಮ್ಮ ಬದುಕೆಂಬ ಮಂಟಪ ಮುರಿದು ಬೀಳುವ ಮುನ್ನ ನಿಜವಾದ ಮನುಜ ಗುಣವನ್ನು ಅರಿಯಬೇಕು.ಅದನ್ನು ಅರಿತಾಗಲೇ ನಮ್ಮ ಬದುಕು ಸಾರ್ಥಕವಾಗಿಸಿಕೊಳ್ಳಲು ಸಾಧ್ಯ ಎಂಬ ಭಾವದಲ್ಲಿ ಬರೆದ ಈ ಮುಕ್ತಕದ ಸಾಲುಗಳು ಚಿಂತನೆಗೆ ಒಳಪಡಿಸುವಂತೆ ಇವೆ.

ಹೀಗೆ ಹತ್ತು ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲಿ ಬರೆದ ಮುಕ್ತಕಗಳು ಜೀವನದಲ್ಲಿ ಅಳವಡಿಸಿಕೊಂಡರೆ ಒಬ್ಬ ಮನುಷ್ಯ ಆದರ್ಶವಾದ ಬದುಕು ಸಾಗಿಸುವುದು ಸುಲಭವೆಂದು ಹೇಳಿದರೆ ಅತಿಶಯೋಕ್ತಿಯಲ್ಲ. ಹೀಗೆ ಶಬ್ದಗಳನ್ನು ಲೀಲಾಜಾಲವಾಗಿ ಬಳಸಿ ಅರ್ಥಗರ್ಭಿತವಾದ ಕಾವ್ಯ ಕಟ್ಟುವ ಕಲೆಯನ್ನು ಅರಗಿಸಿಕೊಂಡು, ಪಳಗಿಸಿಕೊಂಡು ಕಾವ್ಯ ರಸಧಾರೆಯನ್ನೇ ಹರಿಸಿರುವ ಈ ಕೃತಿಯ ಸಂಪೂರ್ಣ ವಿಮರ್ಶೆಯನ್ನು ಒಮ್ಮೆಯೇ ಮಾಡುವುದು ಅಸಾಧ್ಯ. ಆದ್ದರಿಂದ ಕೆಲವು ಮುಕ್ತಕಗಳನ್ನು ಆಯ್ದುಕೊಂಡು ಅವಲೋಕಿಸಿ ನನ್ನ ಅನಿಸಿಕೆ ವ್ಯಕ್ತಪಡಿಸಿದ್ದೇನೆ.

ತಮ್ಮ ಅನುಭವದ ಸಾರ ,ಸುಜ್ಞಾನದ ಸದ್ಬಳಕೆ ಹಾಗೂ ಅನುಪಮ ಭಾಷಾ ಪಾಂಡಿತ್ಯ ಮೆರೆದ ಪದಕಿಯವರ ಈ ‘ಸುಂದಕುವರನ ಕಗ್ಗಗಳು ‘ ಕೃತಿ ಸಾಹಿತ್ಯ ಲೋಕದಲ್ಲಿ ಸದಾಕಾಲ ಸ್ಥಾಯಿಯಾಗಿ ಉಳಿಯಲಿ ಹಾಗೂ ಇಂಥಹ ಹತ್ತು ಹಲವು ಕೃತಿಗಳು ಇವರಿಂದ ಕನ್ನಡ ಸಾರಸ್ವತ ಲೋಕಕ್ಕೆ ಸೇರಲೆಂದು ಹಾರೈಸುತ್ತೇನೆ .

ದೀಪಾಲಿ ಸಾಮಂತ
ದಾಂಡೇಲಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ