ಕನ್ನಡ ರಾಜ್ಯೋತ್ಸವ ವಿಶೇಷ
ಎಸ್ ಎನ್ ಬಾರ್ಕಿ
” ಕನ್ನಡ ಎನೆ ಕುಣಿದಾಡುವುದೆನ್ನದೆ
ಕನ್ನಡ ಎನೆ ಕಿವಿ ನಿಮಿರುವುದು
ಕಾಮನಬಿಲ್ಲನು ಕಾಣುವ ಕವಿಯೊಲು
ತೆಕ್ಕೇನೆ ಮನ ಮೈ ಮರೆಯುವುದು “
ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ಈ ಕವಿತೆ ಓದಿದಾಗಲೊಮ್ಮೆ ಮೈ ನವಿರೇಳುತ್ತದೆ ಎಂದರೆ ಅದರಲ್ಲಿ ಅತಿಶಯೋಕ್ತಿ ಏನಿಲ್ಲ. ಕನ್ನಡ ನಾಡು ನುಡಿ ಜಲ ನೆಲದ ವಿಷಯದಲ್ಲಿ ಕನ್ನಡಿಗರು ನಿಜಕ್ಕೂ ಹೆಮ್ಮೆಪಡುವಂತಹ ನಾಡು. ಕಬ್ಬಿಗರುದಿಸಿದ ಮಂಗಳಧಾಮ, ಕವಿ ಕೋಗಿಲೆಗಳ ಪುಣ್ಯ ರಾಮ ಎಂದು ಕವಿ ಕುವೆಂಪು ಅವರೇ ಇನ್ನೊಂದೆಡೆ ಹಾಡಿ ಹೊಗಳಿದ್ದಾರೆ.
ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ,ಕನ್ನಡವೇ ನಿತ್ಯ ಎಂದು ಜನಮನ ಸೂರೆಗೊಂಡ ಕವಿತೆಯನ್ನು ರಚಿಸಿ ಆ ಮೂಲಕ ಕನ್ನಡಿಗರ ಅಂತರ್ಯದಲ್ಲಿನ ಭಾಷಾ ಪ್ರೇಮವನ್ನು ಉದ್ದೀಪನಗೊಳಿಸುವ ಕಾರ್ಯವನ್ನೂ ಕವಿ ಕುವೆಂಪು ಮಾಡಿದ್ದಾರೆ.
ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕ ಇಂದು ಒಂದಾದ ನೆಲದಲ್ಲಿ ಕಂಗೊಳಿಸುತ್ತಿದೆ ಎಂದರೆ ಅದಕ್ಕೆ ಕಾರಣ ಹರಿದು ಹಂಚಿ ಹೋಗಿದ್ದ ರಾಜ್ಯವನ್ನು ಏಕೀಕರಣಗೊಳಿಸಿದ ಕನ್ನಡದ ದಿಗ್ಗಜರಿಗೆ ಅದರ ಶ್ರೇಯಸ್ಸು ಸಲ್ಲುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ಹಲವಾರು ಮಹಿಳಾ ಹೋರಾಟಗಾರರು ಪ್ರಮುಖ ಪಾತ್ರವನ್ನು ವಹಿಸಿರುವುದು ಕಂಡುಬರುತ್ತದೆ.
ಸ್ವಾತಂತ್ರ ಸಂಗ್ರಾಮದಲ್ಲಿ ಹೋರಾಡಿದ ಅನೇಕ ಮಹಿಳೆಯರ ಸ್ಮರಣೆ ಇದ್ದಷ್ಟು ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಭಾಗವಹಿಸಿದ ಮಹಿಳೆಯರ ಹೆಸರು ಅಷ್ಟೊಂದು ಮುಂಚೂಣಿಯಲ್ಲಿ ಇಲ್ಲ ಎನ್ನುವುದು ಬಹಳ ಜನರ ಆರೋಪ.
ಹಾಗೆ ನೋಡಿದರೆ ಸ್ವಾತಂತ್ರ್ಯ ಚಳುವಳಿಯ ಪ್ರೇರಣೆಯಿಂದ ಏಕೀಕರಣಕ್ಕೆ ಹುರುಪು ದೊರೆಯಿತು. ಕರ್ನಾಟಕ ಏಕೀಕರಣಕ್ಕಾಗಿಯೂ ಮಹಿಳೆಯರು ಗಂಡುಗಚ್ಚೆ ಹಾಕಿ ನಿಂತು ಹೋರಾಡಿದರು.
ಅಂಥವರನ್ನು ಸ್ಮರಿಸದಿದ್ದರೆ ಕರ್ನಾಟಕದ ಏಕೀಕರಣದ ಇತಿಹಾಸ ಕ್ಷಮಿಸುವುದಿಲ್ಲ—
ವೇನೋ…. ಏಕೀಕರಣ ಎಂದಾಕ್ಷಣ ಉತ್ತರ ಕರ್ನಾಟಕದ ಹೆಸರು ಬಲವಾಗಿ ಕೇಳಿ ಬರುತ್ತದೆ. ಅವರಲ್ಲಿ ಬಳ್ಳಾರಿ ಸಿದ್ದಮ್ಮರ ಹೆಸರು ಕೂಡ ಪ್ರಮುಖವಾದದ್ದು. ಆಗ ಉತ್ತರ ಕರ್ನಾಟಕದಲ್ಲಿ ಏಕೀಕರಣದ ಕಾವು ಹೆಚ್ಚಾಗಿತ್ತು. ಹುಬ್ಬಳ್ಳಿ, ಧಾರವಾಡ ಮುಂತಾದ ಕಡೆಗಳಲ್ಲಿ ಮೇಲಿಂದ ಮೇಲೆ ಸಭೆಗಳು ನಡೆಯುತ್ತಿದ್ದವು .ಈ ಸುದ್ದಿ ಅವರಿವರಿಂದ ಬೇರೆ ಊರಿನವರಿಗೂ ತಲುಪುತ್ತಿತ್ತು. ಆಲೂರು ವೆಂಕಟರಾಯರು ಮಹಿಳೆಯರು ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಮಹಿಳೆಯರು ಹೊರಗಡೆ ಬರಬಾರದು ಎಂಬ ಅಲಿಖಿತ ನಿಯಮವಿದ್ದರೂ ಕೆಲವೊಂದು ಕಡೆ ಮನೆಯ ಗಂಡಸರೇ ಹೆಣ್ಣು ಮಕ್ಕಳನ್ನು ಹೊರಗೆ ಕರೆದುಕೊಂಡು ಬಂದು ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಕರ್ನಾಟಕದ ಏಕೀಕರಣವಾಗದಿದ್ದರೆ ಮುಂದಿನ ದಿನಗಳಲ್ಲಿ ಏನು ಸಮಸ್ಯೆಗಳಾಗುತ್ತವೆ ಎಂದು ಮನೆ – ಮನೆಯಲ್ಲಿ ಮಕ್ಕಳಿಗೆತಿಳಿಸಿಕೊಡ —
–ಲಾಗುತ್ತಿತ್ತು ಹೆಣ್ಣು ಮಕ್ಕಳು ಮತ್ತು ಮಕ್ಕಳು ಈ ಬಗ್ಗೆ ಚಿಂತನೆ ನಡೆಸತೊಡಗಿದರು. ಹಳ್ಳಿ ಹಳ್ಳಿಗಳಲ್ಲಿ ಮಹಿಳೆಯರು ಹೋರಾಟ ಮಾಡಲು ಸಜ್ಜಾದರು ಹೀಗೆ ಮಹಿಳೆಯರು ಸಹ ಏಕೀಕರಣದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನುವುದು ಇತಿಹಾಸ ಹೇಳುತ್ತದೆ.
ಹಲವಾರು ಊರುಗಳಲ್ಲಿ ನೂರಾರು ಮಹಿಳೆಯರು ಏಕೀಕರಣಕ್ಕಾಗಿ ಹೋರಾಡಿದರು ಆದರೆ ಕೆಲವರ ಹೆಸರು ಮಾತ್ರ ತೀರ ನೆನಪಿನಲ್ಲಿ ಉಳಿಯುತ್ತವೆ. ಅಂತವರನ್ನು ಸ್ಮರಿಸಬೇಕಾಗಿರುವುದು ನಮ್ಮ ಕರ್ತವ್ಯವೂ ಹೌದು. ಕಲಬುರುಗಿಯ ವಿಮಲಾಬಾಯಿ ಮೇಲುಕೋಟೆ, ಮಲ್ಲವ್ವ, ಬಳ್ಳಾರಿಯ ಲಿಂಗಮ್ಮ, ಸುಮಂಗಲಮ್ಮ ತೊಗರಿ ,ಸರ್ವಮಂಗಳಮ್ಮ, ಗೋರ್ಲೆ ರುದ್ರಮ್ಮ, ಕಾಸರಗೋಡಿನ ಸರಸ್ವತಿ ಬಾಯಿ, ಸುಹಾಸಿನಿ ಭಂಡಾರಿ ,ಕಮಲಾಶೆಟ್ಟಿ, ರಾಧಾ ಕಾಮತ್ ಬೆಳಗಾವಿಯ ಆಶಾತಾಯಿ, ಡಾ. ಮಂದಾಕಿನಿ ಪಟ್ಟಣ ಪ್ರಮುಖರು. ಇವರಷ್ಟೇ ಅಲ್ಲದೆ ಸಾವಿತ್ರಿ ದೇವಿ, ಹಳ್ಳಿಕೇರಿ ವೀರಮ್ಮ ಪಾಟೀಲ, ಭಾಗೀರಥಿ ಪಾಟೀಲ, ಶಾಂತಾದೇವಿ ಜತ್ತಿ, ಬಸಮ್ಮ ಉಪ್ಪಿನ ,ಚಂಪಾ ತಾಯಿ ಭೋಗಲೆ, ಡಾ. ಶಾಂತಾದೇವಿ ಮಾಳವಾಡ,ನಾಗಮ್ಮ ವೀರನಗೌಡ ಪಾಟೀಲ, ಲೀಲಾವತಿ ಮಾಗಡಿ, ಗಂಗಮ್ಮ ಗುದ್ಲೆಪ್ಪ ಹಳ್ಳಿಕೇರಿ ,ಶಾಂತ ಕುರ್ತ್ಕೋಟಿ, ಪ್ರಮೀಳಾತಾಯಿ ಕಾಮತ, ಸರೋಜಿನಿ ಶಿಂತ್ರಿ,ಸರಸ್ವತಿ ಗೌಡರ, ಪದ್ಮಾವತಿ ದೇಸಾಯಿ ,ಚಂದ್ರಾಬಾಯಿ ವಾಲಿ ಚನ್ನಮ್ಮ ಇಟಗಿ ,ಗೌರಮ್ಮ ಸಾವಳಗಿ, ಬಸಲಿಂಗಮ್ಮ ಬಾಳೆಕುಂದ್ರಿ ,ಬಳ್ಳಾರಿಯ ಯಶೋದಮ್ಮ ಹೀಗೆ ಹಲವಾರು ಮಹಿಳೆಯರ ಹೆಸರು ಮೈಲುದ್ದ ಸಾಗುತ್ತದೆ. ಇವರಲ್ಲಿ ಕೆಲವು ಮಹಿಳಾ ಹೋರಾಟಗಾರರನ್ನು ಮಾತ್ರ ನಾನು ತಿಳಿಸಪಡಿಸುತ್ತೇನೆ.
ಬಳ್ಳಾರಿ ಕಾಪಾಡಿದ ಸಿದ್ದಮ್ಮ
“”””””””””””””””””””””””””””””””””””
ಉತ್ತರ ಕರ್ನಾಟಕದಲ್ಲಿ ಏಕೀಕರಣದ ಕಾವು ದಿನೇ ದಿನೇ ಪ್ರಖರವಾಗುತ್ತಿತ್ತು. ಇತ್ತ ಮೈಸೂರು ಪ್ರಾಂತ್ಯದ ಜನರು ಹೆಚ್ಚಾಗಿ ಈ ಬಗ್ಗೆ ಒಲವು ತೋರಲಿಲ್ಲ .ರಾಜಕೀಯ ಪರಿಸ್ಥಿತಿ ತಿಳಿಯಾದ ಮೇಲೆ ಏಕೀಕರಣದ ಬಗ್ಗೆ ಚಿಂತಿಸೋಣ ಎಂದು ಮೈಸೂರು ಪ್ರದೇಶ ಕಾಂಗ್ರೆಸ್ ಉಪಸಮಿತಿ ನಿರ್ಧರಿಸಿತ್ತು ಆದರೆ ಈ ವರದಿಯನ್ನು ಅರಸೀಕೆರಿಯಲ್ಲಿ ನಡೆದ ಸರ್ವ ಪಕ್ಷಗಳ ಸಭೆ ತಿರಸ್ಕರಿಸಿತ್ತು. ಆಗ ಇದರ ಅಧ್ಯಕ್ಷತೆಯನ್ನು ಇದೆ ಬಳ್ಳಾರಿ ಸಿದ್ದಮ್ಮನವರು ವಹಿಸಿಕೊಂಡಿದ್ದರು. ಆಗ ರಾಜ್ಯ ಪುನರ್ ವಿಂಗಡಣಾ ಆಯೋಗದ ವರದಿ ಪ್ರಕಾರ ಬಳ್ಳಾರಿ ಆಂಧ್ರಪ್ರದೇಶಕ್ಕೆ ಸೇರುವುದಿತ್ತು. ಹಳ್ಳಿ-ಹಳ್ಳಿಗಳಿಗೆ ಹೋಗಿ ಮಹಿಳೆಯರಿಗೆ ಮನವರಿಕೆ ಮಾಡಿಕೊಟ್ಟರು. ಒಂದು ವೇಳೆ ಬಳ್ಳಾರಿ ಆಂಧ್ರಕ್ಕೆ ಹೋದರೆ ಪರಿಸ್ಥಿತಿ ಏನಾಗುತ್ತದೆ ಎಂದು ತಿಳಿಸಿಕೊಟ್ಟರು.
ಇದರ ನಂತರ ಆಯೋಗದ ರಾಷ್ಟ್ರೀಯ ಸಮಿತಿಯ ಮುಖಂಡರು ಚಿತ್ರದುರ್ಗಕ್ಕೆ ಬಂದಿದ್ದರು. ಆಗ ಸಿದ್ದಮ್ಮ ಸಾವಿರಾರು ಮಹಿಳೆಯರನ್ನು ಕಟ್ಟಿಕೊಂಡು ಚಿತ್ರದುರ್ಗಕ್ಕೆ ಬಂದು ಮುಖಂಡರನ್ನು ಭೇಟಿಯಾಗಿ ವಸ್ತುವನ್ನು ವಿವರಿಸಿ ಬಳ್ಳಾರಿ ಕರ್ನಾಟಕಕ್ಕೆ ಸೇರಬೇಕು ಎಂದು ಸಮರ್ಥ ವಾದ ಮಂಡಿಸಿದರು. ಹೀಗಾಗಿ ಬಳ್ಳಾರಿ ಕರ್ನಾಟಕದಲ್ಲಿ ಉಳಿಯಿತು ಎಂದು ಇತಿಹಾಸದ ಪುಟಗಳು ಹೇಳುತ್ತವೆ.
ಜಯದೇವಿ ತಾಯಿ ಲಿಗಾಡೆ:-
”””'”””””””””””””””””””””””””””””’
1912 ರಲ್ಲಿ ಸೋಲಾಪುರದಲ್ಲಿ ಪ್ರತಿಷ್ಠಿತ ‘ಮಖಾಡೆ’ ಕುಟುಂಬದಲ್ಲಿ ಜನಿಸಿದ ಜಯದೇವಿ ತಾಯಿ ಅವರು ಕಲಿತಿದ್ದು ಕೇವಲ ನಾಲ್ಕನೇ ತರಗತಿ ಮಾತ್ರ. ಆ ಸಂದರ್ಭದಲ್ಲಿ ಮರಾಠಿ ಪ್ರಾಬಲ್ಯ ಹೆಚ್ಚಿತ್ತು .ಜಯದೇವಿ ಅವರು ಕಲಿತಿದ್ದು ಕಡಿಮೆಯಾದರೂ ಸಹ ಅದು ಅವರ ಯಾವ ಚಟುವಟಿಕೆಗಳಿಗೂ ಅಡ್ಡಿಯಾಗಲಿಲ್ಲ ಕನ್ನಡದಲ್ಲಿ ಆಗಲೇ ಬರವಣಿಗೆಯನ್ನು ಕಲಿತಿದ್ದರು.
ಏಕೀಕರಣದ ಕಿಚ್ಚು ಆಗಲೇ ಹತ್ತಿತ್ತು ಕೇವಲ ಬೀದಿಗೆ ಇಳಿದು ಹೋರಾಟ ಮಾಡುವುದೊಂದೇ ಅಲ್ಲ, ಕನ್ನಡದ ಪರವಾಗಿ, ನಾಡನ್ನು ಒಂದುಗೂಡಿಸುವ ಸಲುವಾಗಿ ಯಾವುದೇ ಕ್ಷೇತ್ರದ ಮೂಲಕ ಹೋರಾಟ ಮಾಡಿದರೂ ಸೈ ಎಂದು ಬೀದರ, ಬೆಳಗಾವಿ ,ಸಾಂಗ್ಲಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಕನ್ನಡ ಶಾಲೆಗಳನ್ನು ತೆರೆದು ಏಕೀಕರಣದ ಬಗ್ಗೆ ಪಾಠ ಮಾಡಿಸ ತೊಡಗಿದರು ಹೀಗೆ ತಮ್ಮ ಹೋರಾಟವನ್ನು ಅಕ್ಷರಗಳ ಮೂಲಕ ಮಾಡಿ ತೋರಿಸಿದರು.
ಶ್ರೀ ಎಸ್ ಎನ್ ಬಾರ್ಕಿ
ರಾಜ್ಯಶಾಸ್ತ್ರ ಉಪನ್ಯಾಸಕರು ಆದರ್ಶ ಸಂಯುಕ್ತ ಪ ,ಪೂ
ಕಾಲೇಜು ಬೇವೂರ
9538695030.
-
ನೆರಳಿಗಂಟಿದ ಭಾವ
ಕವನ ಸಂಕಲನ (Poetry Collection)₹100.00Original price was: ₹100.00.₹90.00Current price is: ₹90.00.
ಪ್ರಕಟಣೆಗಾಗಿ ಸಂಪರ್ಕಿಸಿ
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.