You are currently viewing ಕನಸುಗಳೊಂದಿಗೆ ಕಾವ್ಯಯಾನ

ಕನಸುಗಳೊಂದಿಗೆ ಕಾವ್ಯಯಾನ

ವೃತ್ತಿಯಲ್ಲಿ ಕ್ರಿಯಾಶೀಲ ಶಿಕ್ಷಕಿಯಾದ ಶ್ರೀಮತಿ ಭುವನೇಶ್ವರಿ.ರು.ಅಂಗಡಿಯವರು ಪ್ರವೃತ್ತಿಯಲ್ಲಿ ಸಾಹಿತಿಯಾಗಿ ಈಗಾಗಲೇ ಹೊಸ ಚಾಪನ್ನು ಮೂಡಿಸಿ ಸಾಕಷ್ಟು ಕಥೆ,ಕವನ, ಹನಿಗವನ,ಹೈಕು,ಟಂಕಾ, ಲೇಖನಗಳನ್ನು ಬರೆಯುವಲ್ಲಿ ಯಶಸ್ವಿಯಾಗಿ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಮುತ್ತು ಹೇಗೆ ಕಪ್ಪೆಚಿಪ್ಪಿನೊಳಗೆ ಅಡಗಿರುತ್ತದೆಯೋ ಹಾಗೆಯೇ ಎಲೆಮರೆ ಕಾಯಿಯಂತಿದ್ದ ಕವಿಯತ್ರಿಯರು ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸುತ್ತಿದ್ದಾರೆ. ಕವನ ಸಂಕಲನದ ಅಡಿ ಬರಹದಂತೆ ಅವರ ಕವನಗಳಲ್ಲಿ ಕನಸುಗಳ ಬೆನ್ನು ಹತ್ತಿ ಹೊರಟಂತೆ ಭಾಸವಾಗುತ್ತದೆ. ಅಲ್ಲದೇ ನೂರು ಕವಿತೆಗಳನ್ನು ಒಳಗೊಂಡ “ಕಪ್ಪೆಚಿಪ್ಪಿನೊಳಗಿನ ಮುತ್ತು” ಎಂಬ ತಮ್ಮ ಚೊಚ್ಚಲ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿದ್ದು, ಕವಿತೆ ಎನ್ನುವುದು ಬರಿ ಮನಸ್ಸಿಗೆ ಬಂದದ್ದನ್ನು ಗೀಚುವುದಲ್ಲ, ಹೃದಯಾಂತರಾಳದ ಭಾವನೆಗಳನ್ನು ಹೊರ ಹಾಕುವುದು ಎಂಬುದನ್ನು ತಮ್ಮ ಕವಿತೆಗಳ ಮೂಲಕ ಸಾದರಪಡಿಸಿದ್ದಾರೆ. ಕವಿಯತ್ರಿಯ ನೆಚ್ಚಿನ ಶಿಕ್ಷಕಿಯರಾದ ಶ್ರೀಮತಿ ಹೇಮಾ. ಭೀ. ಮೆಣಸಗಿಯವರ ಆಶೀರ್ವಾದದ ಶುಭಹಾರೈಕೆಯ ಮುನ್ನುಡಿಯಿಂದ ಮೊದಲ್ಗೊಂಡು ಶ್ರೀ ಆರ್. ಎಸ್. ಬುರುಡಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಶುಭಾಶಯ ನುಡಿ ಹಾಗೂ ಡಾ// ಕರವೀರಪ್ರಭು ಕ್ಯಾಲಕೊಂಡರವರ ಬೆನ್ನುಡಿಯೊಂದಿಗೆ ಕವನಸಂಕಲನ ಮೂಡಿ ಬಂದಿದೆ.
ಅವರ ಗುರು ಶಿಷ್ಯರು, ಬಾಳ ಹೂಬನ, ಕಲಿಕಾ ಹಬ್ಬ, ಕಲಿಕಾ ಚೇತರಿಕೆ ಎಂಬ ಕವನಗಳಲ್ಲಿ ಗುರು ಶಿಷ್ಯರಿಗಿರುವ ಅವಿನಾಭಾವ ಸಂಬಂಧವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಕವನಗಳನ್ನು ವಿದ್ಯಾರ್ಥಿಗಳು ತಪ್ಪದೇ ಓದಲೇಬೇಕು. ಅವ್ವಂದಿರು, ತವರೂರ ಹಬ್ಬ, ಹತ್ತು ಮಕ್ಕಳ ತಾಯಿ, ಕರುಳ ಬಳ್ಳಿಯಿಂದ ಮಾಡಿದ ಗೊಂಬೆಗಳು ಮುಂತಾದ ಕವನಗಳಲ್ಲಿ ತಾಯ್ತನದ ಸಂಬಂಧವನ್ನು ಬಿಡಿಸಲಾಗದ ಕೊಂಡಿ ಎಂದು ಚಿತ್ರಿಸಿದ್ದಾರೆ. ಸಾಗರದ ಆಳದಲ್ಲಿ ಸಿಗುವ ಅಮೂಲ್ಯ ಮುತ್ತಿನಂತೆ ಶ್ರೀಮತಿ ಭುವನೇಶ್ವರಿ ಅಂಗಡಿಯವರ ಕಪ್ಪೆಚಿಪ್ಪಿನೊಳಗಿನ ಮುತ್ತು ಕವನ ಸಂಕಲನದಲ್ಲಿ ಸಾಕಷ್ಟು ಮೌಲ್ಯಯುತ ಮಾನವೀಯತೆಯನ್ನು ಒಳಗೊಂಡ ಕವನಗಳನ್ನು ಕಾಣಬಹುದು.

ಬೆತ್ತಲೆ ಜಗತ್ತಿನ ನಡುವೆ ತುತ್ತು ಅನ್ನಕ್ಕಾಗಿ ಪರದಾಟ
ಕತ್ತಲೆ ಬಾಳಿನ ತುಂಬೆಲ್ಲ ಹಸಿವಿನ ದೊಂಬರಾಟ
ಕ್ರೂರಿ ಹಸಿವೆಂಬುದು ಊಟ ಸಿಗದಿರೋ ಸಂಕಟ
ಬೆತ್ತಲು ಇಲ್ಲಿ ಮೈಯಲ್ಲ ಮನಸುಗಳೆಂಬುದು ದಿಟ

“ತುತ್ತಿನ ಚೀಲ” ಎಂಬ ಶೀರ್ಷಿಕೆಯ ಕವನ ನನ್ನ ಮನ ಕಲಕಿತು.



ಅಲ್ಲದೇ ಚಂದದ ಸಾಲಿಗೆ ಅಂದದ ಅನಿರೀಕ್ಷಿತ ಪ್ರಾಸಗಳನ್ನು ಒಳಗೊಂಡ ಕವನಗಳು ಮನಸ್ಸಿಗೆ ಮುದ ನೀಡುತ್ತಾ ಓದುಗರನ್ನು ಲೀಲಾ ಜಾಲವಾಗಿ ಓದಿಸಿಕೊಂಡು ಹೋಗುತ್ತವೆ. ಪ್ರೀತಿಯ ಬಾನಾಡಿಗಳು, ವಿಜಾತಿಗಳ ಪ್ರೀತಿ, ಹೇಳಿ ಹೋಗು ಕಾರಣ, ಹೇಗಿದ್ದರೇನು ಪ್ರಿಯೆ, ಮಸುಕು ಭಾವನೆಗಳ ಮುಸುಕು, ನೀನೇಕೆ ಬದಲಾದೆ, ಅಂದು-ಇಂದು, ನಲ್ಲನಿಂದ ಬಾಳು ಬೆಲ್ಲ ಮುಂತಾದ ಕವನಗಳು ಪ್ರೀತಿಸುವ ಮನಸ್ಸುಗಳಿಗೆ ಇಷ್ಟವಾದರೆ, ಕನ್ನಡವೇ ನಮ್ಮಮ್ಮ, ಕರುನಾಡಿಗೆ ಸಿರಿಯಾಗು ಬಾ ಕಂದ, ಲಿಪಿಗಳ ರಾಣಿ, ಖುಷಿಯ ಭಾಷೆ ಕನ್ನಡ ಕವನಗಳು ಕವಿಯತ್ರಿಗೆ ಇರುವ ಕನ್ನಡದ ಬಗೆಗಿನ ಪ್ರೀತಿ ಮತ್ತು ಕಾಳಜಿಯನ್ನು ತೋರಿಸುತ್ತವೆ. ಕವಿಯತ್ರಿಯರ ಕವನ ಸಂಕಲನದಲ್ಲಿ ಹೆತ್ತವರ ಮೇಲಿನ ಕಾಳಜಿಯ ಜೊತೆಗೆ ಶಾಲಾ ಮಕ್ಕಳ ಮೇಲಿನ ಪ್ರೀತಿ, ವಾತ್ಸಲ್ಯ, ಮಕ್ಕಳ ಜೊತೆಗಿನ ಒಡನಾಟ ಎದ್ದು ಕಾಣುತ್ತದೆ.
ಇವಿಷ್ಟೆ ಅಲ್ಲದೇ ಸಮಾಜದ ಓರೆ ಕೋರೆಗಳನ್ನು ಸಾಹಿತ್ಯದ ಮೂಲಕ ಸೂಕ್ಷ್ಮವಾಗಿ ತಿದ್ದುವ ಕೆಲಸ ಮಾಡಿದ್ದಾರೆ. ಮನದಾಳದ ಮಾತುಗಳು ಅಕ್ಷರ ರೂಪ ಪಡೆದುಕೊಂಡಿರುವುದು ಇಲ್ಲಿ ವಿಶೇಷವೆನಿಸುತ್ತದೆ. ಅಪ್ಪನ ಪ್ರೇಮ, ರೈತನ ಶ್ರಮ, ಪರಿಸರ ಕಾಳಜಿಯ ಕ್ರಮ, ದೇಶಭಕ್ತಿಯ ಪರಾಕ್ರಮಗಳ ಬಗ್ಗೆ ಮನ ಮುಟ್ಟುವಂತೆ ಕವನಗಳು ರಚನೆಯಾಗಿವೆ. ಈ ಕವನ ಸಂಕಲನವು ನಮ್ಮ ಮನೆಯ ಗ್ರಂಥಾಲಯವನ್ನು ಸೇರಲೇಬೇಕಾದ ಮಹತ್ವದ ಕೃತಿಗಳಲ್ಲಿ ಒಂದು ಎಂದು ಎನಿಸಿಕೊಳ್ಳುವಲ್ಲಿ ಎರಡು ಮಾತಿಲ್ಲ. ಇಂತಹ ನೂರಾರು ಮೌಲಿಕ ಕೃತಿಗಳು ಕವಿಯತ್ರಿಯರ ಕರದಿಂದ ಹೊರ ಬಂದು, ಕೋಟ್ಯಂತರ ಓದುಗರನ್ನು ತಲುಪಿ ಸಾಹಿತ್ಯ ಕ್ಷೇತ್ರದಲ್ಲಿ ಮೇರು ಕವಿಯತ್ರಿಯಾಗಿ ಮೆರೆಯಲಿ ಎಂಬ ಶುಭ ಹಾರೈಕೆಗಳೊಂದಿಗೆ

ನಿಮ್ಮ ಪ್ರೀತಿಯ
ಕಂಸ
ಕಂಚುಗಾರನಹಳ್ಳಿ ಸತೀಶ್
ತಾ||ನರಗುಂದ ಜಿ||ಗದಗ
9972932126


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.