You are currently viewing ವಚನವಾಙ್ಮಯದ ಆದ್ಯಪುರುಷ :  ಮನುಕುಲದ ದಾರಿಯೂ ದೀಪವೂ ದೇವರ ದಾಸಿಮಯ್ಯ

ವಚನವಾಙ್ಮಯದ ಆದ್ಯಪುರುಷ : ಮನುಕುಲದ ದಾರಿಯೂ ದೀಪವೂ ದೇವರ ದಾಸಿಮಯ್ಯ

ದೇವರ ದಾಸಿಮಯ್ಯನವರ ಜಯಂತಿ ಪ್ರಯುಕ್ತ ಈ ಲೇಖನ

ಮನುಷ್ಯ ಬದುಕು ತೀವ್ರ ತಲ್ಲಣಕ್ಕೀಡಾದ ಹೊತ್ತಿದು. ಮತಧರ್ಮಗಳ ಹೆಸರಿನಲ್ಲಿ ಮನುಷ್ಯ-ಮನುಷ್ಯರ ನಡುವಿನ ಕಂದಕಗಳು ಹೆಚ್ಚಾಗಿ, ನಾಡಬದುಕು ಒಡೆಯುತ್ತಿರುವ ಕೇಡಿನ ಕಾಲವಿದು. ಶಾಂತಿ, ಸೌಹಾರ್ದತೆ, ಸಾಮರಸ್ಯದ ಬದುಕಿಗೆ ಹಸಿದಿರುವ ಸಂದರ್ಭದಲ್ಲಿ ಅರಿವು – ಆಚರಣೆ ಒಂದುಗೂಡಬೇಕು. ಅಂತಃಕರುಣ ಅರಳಬೇಕು. ಶರಣರ ಸೂಳ್ನುಡಿಯ ಮರೆತರೆ ಮರಣವೇ ಗತಿ ಎಂಬರಿವು ಚಿತ್ತದಲ್ಲಿ ಹುತ್ತಗಟ್ಟಬೇಕು. ಇಂಥ ಅರಿವಿನ ಬಟ್ಟೆ ನೇಯುವ ಗುರುಮಾರ್ಗದಲ್ಲಿ ಶರಣ, ದಾರ್ಶನಿಕ ಮಹಾ ಪರಂಪರೆಯಲ್ಲಿ ಆದ್ಯ ವಚನಕಾರ, ನೇಕಾರ ಸಂತ ದೇವರ ದಾಸಿಮಯ್ಯನವರು ಮನುಕುಲಕೆ ಬೆಳಕಾಗಿ ದಾರಿ ತೋರಬಲ್ಲ ಮಹಾಗುರು.

ಜಾತಿ ನಿರಾಕರಣೆ, ಮತ ಮೌಢ್ಯದ ಉಲ್ಲಂಘನೆ, ಸಮ ಸಮಾಜದ ನಿರ್ಮಾಣ, ಪ್ರಜಾಪ್ರಭುತ್ವದ ಆಶಯಗಳ ಸಾಕಾರ, ಲಿಂಗ ಸಮಾನತೆ, ಸ್ಥಾವರವನ್ನು ಜಂಗಮಗೊಳಿಸುವ ಪ್ರಾಮಾಣಿಕ ಪ್ರಯತ್ನ, ಆತ್ಮೋದ್ಧಾರ ತನ್ಮೂಲಕ ಲೋಕ ಕಲ್ಯಾಣದ ಕನಸಿನ ಸಾಕಾರಕ್ಕೆ ಶ್ರಮಿಸಿದ ಶಿವಶರಣರನ್ನು ಜಾತಿ ಮತಗಳ ಸಂಕೋಲೆಯಲ್ಲಿ ಬಂಧಿಸಿಡುವ ಪರಿಕ್ರಮಗಳು ಜಾರಿಯಲ್ಲಿರುವ ಈ ದುರಂತದ ಘಳಿಗೆಯಲ್ಲಿ ದಾಸಿಮಯ್ಯನವರನ್ನು ಅದರಾಚೆಗೂ ಅರ್ಥಮಾಡಿಕೊಳ್ಳುವುದು ಅವಶ್ಯವಿದೆ.

ಕಲಬುರ್ಗಿ ಜಿಲ್ಲೆಯ ಸುರಪೂರ ತಾಲ್ಲೂಕಿನ ಮುದನೂರು ದಾಸಿಮಯ್ಯನವರ ಜನ್ಮಸ್ಥಳ. ನೇಯ್ಗೆ ಕಾಯಕದ ಶಿವಭಕ್ತರಾಗಿದ್ದ ಕಾಮಯ್ಯ ಹಾಗೂ ಶಂಕರೀ ಅವರ ಪುಣ್ಯ ಉದರದಲ್ಲಿ (ಕ್ರಿ.ಶ. ೧೦೪೦) ಹನ್ನೊಂದನೇ ಶತಮಾನದ ಪೂರ್ವಾರ್ಧದ ಚೈತ್ರಮಾಸದಲ್ಲಿ ಜನ್ಮವೆತ್ತಿದ ದಾಸಿಮಯ್ಯ ಬಾಲ್ಯದಲ್ಲಿಯೇ ಅಪಾರ ಅಧ್ಯಾತ್ಮಿಕ ತೃಷೆಯನ್ನು ಹೊಂದಿದ್ದರು. ಮುಂದೆ ಶ್ರೀಶೈಲದ ಚಂದ್ರಗುಂಡ ಶಿವಾಚಾರ್ಯರಿಂದ ಶಿವದೀಕ್ಷೆಯನ್ನು ಪಡೆದು ಮಹಾ ಸಾಧಕರಾಗಿ ರೂಪುಗೊಂಡಿರುವುದು ಈಗ ಇತಿಹಾಸ.

ಹನ್ನೆರಡನೆಯ ಶತಮಾನದ ವಚನಪರಂಪರೆಗೆ ನಾಂದಿ ಹಾಡಿದ ದಾಸಿಮಯ್ಯನವರು ತಮ್ಮ ವಿಶಿಷ್ಟ ಮತ್ತು ಅನನ್ಯ ಮಾನವ್ಯ ಕಾಳಜಿಯಿಂದ, ವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವನೆಯಿಂದ, ಕ್ರಾಂತಿಕಾರಕ ಚಿಂತನೆಗಳಿಂದ ಗಮನ ಸೆಳೆಯುತ್ತಾರೆ. ಹನ್ನೆರಡನೇ ಶತಮಾನದಲ್ಲಿದ್ದ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ವೈರುಧ್ಯಗಳನ್ನು ಮೆಟ್ಟಿನಿಲ್ಲುವ ಛಾತಿಯನ್ನು ಪ್ರಕಟಪಡಿಸುವ ಅವರು, ಸುವ್ಯವಸ್ಥಿತ ಸಮಾಜ ನಿರ್ಮಾಣಕ್ಕೆ ಹಂಬಲಿಸಿದವರು. ಮತಧರ್ಮಗಳ ಸಂಕೋಲೆಯಲ್ಲಿ ಸಿಕ್ಕು, ಧರ್ಮದ ವ್ಯಾಖ್ಯಾನಗಳೇ ಸಂಕುಚಿತಗೊಳ್ಳುತ್ತಿರುವ ಇಂದಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ದಾಸಿಮಯ್ಯ ಧರ್ಮಸಂಬಂಧವಾಗಿ ಕೇಳುವ ಪ್ರಶ್ನೆ ಮಾರ್ಮಿಕವಾಗಿದೆ;
“ಧರ್ಮವನೆತ್ತುವವರ ಮಹಾಧರ್ಮಿಗಳೆಂದೆಂಬಿರಿ ನಿಮ್ಮ ಧರ್ಮವನಾರು ಅರಿದವರಿಲ್ಲ”. ಸ್ವಧರ್ಮದ ಉಳಿವಿಗಾಗಿ ಇನ್ನೊಬ್ಬರನ್ನು ಹತ್ತಿಕ್ಕುವ, ಕೊಲ್ಲುವ, ನಾಶಪಡಿಸುವ ಮೂಲಕ ಧರ್ಮಪಾಲನೆ ಮಾಡುವುದಾಗಿ ಭ್ರಮಿಸುವ ಸಂಕುಚಿತ ಮನಸ್ಸುಗಳಿಗೆ ತಿವಿದು ತಿಳಿಸುವ ದಾಸಿಮಯ್ಯನ ನಿಲುವು ಪ್ರಗತಿಪರವಾದುದಾಗಿದೆ ಎಂಬುದನ್ನು ಇಲ್ಲಿ ಮನಗಾಣಬೇಕು.

ಅರಿವು ಮತ್ತು ಆಚಾರಗಳ ಮೂರ್ತರೂಪದಂತಿರುವ ದಾಸಿಮಯ್ಯ ಉದ್ದಕ್ಕೂ ಸಾತ್ವಿಕ ಬದುಕನ್ನು ಅನುಸರಿಸಿದವನು.

‘ಕರಿಯನಿತ್ತಡೆ ಒಲ್ಲೆ ಸಿರಿಯನಿತ್ತಡೆ ಒಲ್ಲೆ, ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ, ನಿಮ್ಮ ಶರಣರ ಸೂಳ್ನುಡಿಯನರಘಳಿಗೆಯಿತ್ತಡೆ ನಿಮ್ಮನಿತ್ತೆ ಕಾಣಾ ರಾಮನಾಥ’ ಎಂದು ಹೇಳುವ ಮೂಲಕ ಭೌತಿಕ ಶ್ರೀಮಂತಿಕೆಯನ್ನು ನಿರಾಕರಿಸಿ, ಬೌದ್ಧಿಕ ಸಿರಿವಂತಿಕೆಗೆ ಅಗತ್ಯವಿರುವ ಸಾತ್ವಿಕ, ಸದ್ಧರ್ಮದ ವಿಚಾರಗಳ ಕುರಿತು ಪ್ರತಿಪಾದಿಸುತ್ತಾನೆ.

ಸಮಾಜವನ್ನು ಕಾಡುವ ಬಡತನ, ಹಸಿವು ಮುಂತಾದ ಜ್ವಲಂತ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ವಿವೇಚಿಸುವ ದಾಸಿಮಯ್ಯನು ಅವುಗಳ ನಿವಾರಣೆಗೆ ತುಡಿದಿರುವುದು ವೇದ್ಯವಾಗುತ್ತದೆ.
‘ಒಡಲುಗೊಂಡವ ಹಸಿವ ಒಡಲುಗೊಂಡವ ಹುಸಿವ; ಒಡಲುಗೊಂಡನೆಂದು ನೀನೆನ್ನ ಜಡಿದೊಮ್ಮೆ ನುಡಿಯದಿರ! ನೀ ಎನ್ನಂತೆ ಒಮ್ಮೆ ಒಡಲುಗೊಂಡು ನೋಡಾ ! ರಾಮನಾಥ’ ಎಂದು ಹಸಿವಿನಿಂದ ಬಳಲುತ್ತಿರುವ ಕೆಳವರ್ಗದ, ನೊಂದವರ ಪರವಾಗಿ ಧ್ವನಿಯೆತ್ತುವ ಮೂಲಕ ದೇವರನ್ನೇ ಪ್ರಶ್ನಿಸುವ ಎದೆಗಾರಿಕೆಯನ್ನು ಪ್ರಕಟಿಸುತ್ತಾನೆ ದಾಸಿಮಯ್ಯ.

ಅಲ್ಲದೆ, ‘ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿದಡೆ ವಿಷವೇರಿತ್ತಯ್ಯ ಆಪಾದ ಮಸ್ತಕಕ್ಕೆ, ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲಡೆ ವಸುಧೆಯೊಳಗಾತನೇ ಗಾರುಡಿಗ ಕಾಣಾ ರಾಮನಾಥ’ ಎಂದು ಹಸಿವಿನ ಪರಿಣಾಮವನ್ನು ಹೆಬ್ಬಾವಿನ ಪ್ರತಿಮೆ ಮೂಲಕ ಹೇಳುತ್ತ, ಹಸಿವೆಯಿಂದ ಬಳಲುತ್ತಿರುವ ಕೋಟ್ಯಾನುಕೋಟಿ ಜನರಿಗೆ ಅನ್ನ ನೀಡುವಾತನೇ ನಿಜವಾದ ದೇವರು ಎಂದು ಅರುಹುದರಲ್ಲಿಯೇ ಅವನ ಸಾಮಾಜಿಕ ಪ್ರಜ್ಞೆ ಕಾಳಜಿ ವ್ಯಕ್ತವಾಗುತ್ತದೆ.

ಮಹಿಳೆಯರನ್ನು ಮೂಲೆಗುಂಪು ಮಾಡಿದ್ದ ಅಂದಿನ ಪುರುಷಪ್ರಧಾನ ಸಾಮಾಜಿಕ ವ್ಯವಸ್ಥೆಯನ್ನು ತೀವ್ರವಾಗಿ ಟೀಕಿಸಿ, ಲಿಂಗತಾರತಮ್ಯ ವಿರೋಧಿ ನಿಲುವನ್ನು ಹೊಂದಿದ್ದ ದಾಸಿಮಯ್ಯ ‘ಮೊಲೆ ಮೂಡಿ ಬಂದರೆ ಹೆಣ್ಣೆಂಬರು ಗಡ್ಡ ಮೀಸೆ ಬಂದರೆ ಗಂಡೆಂಬರು; ಒಳಗೆ ಸುಳಿವಾತ್ಮ ಗಂಡೂ ಅಲ್ಲ ಹೆಣ್ಣೂ ಅಲ್ಲ’ ಎನ್ನುವ ಮೂಲಕ ಮಹಿಳೆಗೂ ಸಮಾನ ಸ್ಥಾನ-ಮಾನಗಳನ್ನು ನೀಡುವ ಅವನ ಪ್ರಗತಿಪರ ನಿಲುವು ಸಮಾಜದ ಆರೋಗ್ಯಕ್ಕೆ ಮಹತ್ವದ ಮದ್ದಾಗಿ ತೋರುತ್ತದೆ.

ಕೌಟುಂಬಿಕ ಸಂಬಂಧಗಳು ಬಿರುಕು ಬಿಡುತ್ತಿರುವ ಈ ಹೊತ್ತಿನಲ್ಲಿ
‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ, ಸತಿಪತಿಗಳೊಂದಾಗದ ಭಕ್ತಿ ಅಮೃತದೊಳು ವಿಷ ಬೆರೆಸಿದಂತೆ ಕಾಣಾ ರಾಮನಾಥ’ ಎಂಬ ದಾಸಿಮಯ್ಯನ ವಚನ ಗಂಡ-ಹೆಂಡತಿಯರ ಸಾಮರಸ್ಯದ ಬದುಕಿಗೆ ದಾರಿದೀವಿಗೆಯಾಗಿರುವುದು ಗಮನಾರ್ಹ.

ವರ್ಗ-ವರ್ಣ ಸಂಘರ್ಷ, ಸಾಮಾಜಿಕ ಅಸಮಾನತೆ, ಡಾಂಭಿಕತೆ ಕುರಿತು ಗಂಭೀರವಾಗಿ ಉದ್ದಕ್ಕೂ ಚಿಂತಿಸಿದ ದಾಸಿಮಯ್ಯ,
‘ಒಡೆಯನ ಪ್ರಾಣಕ್ಕೆ ಇದ್ದಿತ್ತೆ ಯಜ್ಞೋಪವೀತ? ಕಡೆಯಲ್ಲಿದ್ದ ಅಂತ್ಯಜನು ಹಿಡಿದಿದ್ದನೇ ಹಿಡಿಗೋಲ…?’ ಎಂದು ಪ್ರಶ್ನಿಸುವ ದಾಸಿಮಯ್ಯ, ಸಾಮಾಜಿಕ ಸಮಾನತೆಯನ್ನು ಆಶಿಸುತ್ತಾನೆ.



ಭಕ್ತಿ ಎಂಬುದು ಶರೀರ ವ್ಯಾವಹಾರವಲ್ಲ, ಅದು ಮನದ ವ್ಯಾವಹಾರ. ಮನದ ಮುಂದಿನ ಆಶೆಯನ್ನು ಗೆಲ್ಲದೆ ಡಾಂಭಿಕತೆಯನ್ನು ಪ್ರದರ್ಶಿಸುವವರಿಗೆ

‘ಕತ್ತೆ ಬಲ್ಲುದೇ ಕತ್ತುರಿಯ ವಾಸನೆಯ, ತೊತ್ತು ಬಲ್ಲಳೇ ಗುರುಹಿರಿಯರುತ್ತಮರೆಂಬುದ; ಭಕ್ತಿಯನರಿಯದೇ ವ್ಯರ್ಥ ಜೀವಿಗಳು ನಿಮ್ಮವರನೆತ್ತ ಬಲ್ಲರಯ್ಯ ರಾಮನಾಥ’ ಎಂದು ಛೇಡಿಸುತ್ತಾನೆ.

ಕ್ರಿಯೆ ಮತ್ತು ಜ್ಞಾನಗಳ ಮಹತ್ವವನ್ನು ಅರ್ಥ ಮಾಡಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂಬುದನ್ನು ‘ಚಿನ್ನದೊಳಗನ ಬಣ್ಣವ ಆ ಚಿನ್ನ ತನ್ನ ತಾನರಿವುದೇ, ಕಬ್ಬು ರುಚಿಸಬಲ್ಲುದೇ ತನ್ನ ತಾನೇ?; ಈ ಪರಿಯಂತೆ ನರರು ಅರಿವರೆ ಕ್ರಿಯಾಜ್ಞಾನ ಭೇದವ’ ಎನ್ನುವ ಮೂಲಕ ನರನು ನಾರಾಯಣನಾಗುವ ಸಾಧ್ಯತೆಯನ್ನು ದಾಸಿಮಯ್ಯ ತಿಳಿಸುವರು.

ದಾಸಿಮಯ್ಯನವರು ‘ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ, ಸುಳಿದು ಸೂಸುವ ಗಾಳಿ ನಿಮ್ಮ ದಾನ ನಿಮ್ಮ ದಾನವನುಂಡು ಅನ್ಯರನು ಹೊಗಳುವ ಕುನ್ನಿಗಳನೇನೆಂಬೆ ಕಾಣಾ ರಾಮನಾಥ’ ಎನ್ನುವ ವಚನದಲ್ಲಿ ಮನುಷ್ಯನ ಸ್ವಾರ್ಥ, ಸಂಕುಚಿತ ದುರ್ಬುದ್ಧಿಯನ್ನು ಬಯಲುಗೊಳಿಸುವ ಛಾತಿ ತೋರುತ್ತಾರೆ.

ಜಾತಿ ಮತ ಪಂಥ ಪಂಗಡ ದೇವರು ಧರ್ಮ ಅಂದಶ್ರದ್ಧೆ ಮೂಢನಂಬಿಕೆ ಲಿಂಗತಾರತಮ್ಯ ಇತ್ಯಾದಿ ಜೀವವಿರೋಧಿ ಜಾಡ್ಯಗಳೂ ಮನುಕುಲವನ್ನು ತೀವ್ರ ತಲ್ಲಣಕ್ಕೀಡು ಮಾಡುತ್ತಿವೆ. ಸಾಮಾಜಿಕ ಸ್ವಾಸ್ಥ್ಯ ಹದಗೆಡುತ್ತಿರುವ ಈ ಕಾಲಘಟ್ಟದಲ್ಲಿ ಅಂಟಿರುವ ಕಂಟಕಗಳನ್ನು ದೂರಮಾಡಿ, ಸಮಸ್ತ ಮಾನವ ಸಮಾಜವನ್ನು ಸಂತೈಸುವ ಸಂತರಾಗಿ ದೇವರ ದಾಸಿಮಯ್ಯನವರ ಕಾಣಿಸುತ್ತಾರೆ.

ಸದ್ಯದ ಕಾಲ ಸಂಕೀರ್ಣವಾದುದು, ಸಂದಿಗ್ಧವಾದುದು. ಪರಸ್ಪರ ಸ್ವಾರ್ಥ, ದ್ವೇಷ ವೈಷಮ್ಯ, ಕೋಮುವಾದ, ಅರಾಜಕತೆ, ಅಸಮಾನತೆ, ಬಡತನ, ಹಸಿವು ಇನ್ನೂ ಉಸಿರಾಡುತ್ತಿವೆ. ನರ ನಾರಾಯಣನಾಗುವ ಪ್ರಾಮಾಣಿಕ ಪ್ರಯತ್ನಗಳು ಕಾಣೆಯಾಗಿವೆ. ಇಂಥ ಸಂಘರ್ಷಾತ್ಮಕ ಸನ್ನಿವೇಶದಲ್ಲಿ ಸಮಾಜದ ಸಂಕಟ, ಸಮಸ್ಯೆಗಳಿಗೆ ಸ್ಪಂದಿಸಿದ ದಾಸಿಮಯ್ಯನವರ ಜೀವನ ಮಾದರಿಯಾಗಿದೆ. ಜೇಡರ ಕುಲದಲ್ಲಿ ಜನಿಸಿ, ದೇವರ ‘ದಾಸ’ನಾಗಿ ‘ದೇವರ ದಾಸಿಮಯ್ಯ’ನೆನಿಸಿರುವುದು ಇಡೀ ಚರಿತ್ರೆಯೇ ಮತ್ತೆಮತ್ತೆ ದೃಢಪಡಿಸುತ್ತದೆ. ಅಲ್ಲದೇ ಇದು ಇಡೀ ಮನುಕುಲವೇ ನೆನಪಿಡುವ ಸತ್ಯ.
ಮಾನವ ಸಹಜ ದೌರ್ಬಲ್ಯಗಳನ್ನು ಮೀರಿ, ಮಹಾ ಮಾನವನಾಗುವ ಮಾರ್ಗವನ್ನು ಅರುಹಿದ ದಾಸಿಮಯ್ಯನವರ ಸಮಸ್ತ ಬದುಕು-ಬರೆಹಗಳು ಹಿಂದೆಂದಿಗಿಂತ ಇಂದು ಹೆಚ್ಚು ಪ್ರಸ್ತುತ ಎಂಬ ಅರಿವು ಅಂತರಂಗದಲ್ಲಿ ನೆಲೆಗೊಂಡೊಡೆ ದಾಸಿಮಯ್ಯನವರ ನೆನಹು ಸಾರ್ಥಕವಾಗುತ್ತದೆ, ಜಯಂತ್ಯುತ್ಸವ ಅರ್ಥಪೂರ್ಣವಾಗುತ್ತದೆ.

ಡಾ. ಸಂಗಮೇಶ ಎಸ್. ಗಣಿ
ಮುಖ್ಯಸ್ಥರು,
ಕನ್ನಡ ವಿಭಾಗ,
ಟಿಎಂಎಇಎಸ್ ಅಕಾಡೆಮಿ ಆಫ್ ಸೈನ್ಸ್ ಆಂಡ್ ಕಾಮರ್ಸ್ ಕಾಲೇಜು,
ಹೊಸಪೇಟೆ
ಮೊ : ೯೭೪೩೧೭೧೩೨೪


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.