You are currently viewing ಬುದ್ಧನಾದೆ ನಾನು ಬುದ್ಧನಾದೆ

ಬುದ್ಧನಾದೆ ನಾನು ಬುದ್ಧನಾದೆ

ಬುದ್ಧನಾಗು ಹೋಗು ಬುದ್ಧನಾಗು ಹೋಗು
ಎಂದು ಎದ್ದು ಓಡಿಸಿದರು ಮನೆಯವರು
ಹೇಗೆ ಬುದ್ಧನಾಗಲಿ ಹೇಗೆ ಬುದ್ಧನಾಗಲಿ
ಚಿಂತಿಸುತ ದಾರಿಯಲಿ ಪಯಣವ ಬೆಳೆಸಿದೆ

ರೋಗವ ಮೈಗಂಟಿಸಿಕೊಂಡು ನರಳುತ್ತಿದ್ದನೊಬ್ಬ
ಪಕ್ಕದ ಆಸ್ಪತ್ರೆಯಲಿ ಹೋಗಿ ಚಿಕಿತ್ಸೆ ಕೊಡಿಸಿದೆ
ಮುದುಕನೊಬ್ಬನು ಹಸಿವ ತಾಳದೆ ಸಂಕಟದಲ್ಲಿದ್ದ
ಊಟದ ಮನೆಯಿಂದ ಊಟ ತಂದು ಕೊಟ್ಟೆ

ವಿಧಿ ಲಿಖಿತಕ್ಕೆ ಶರಣಾದನೊಬ್ಬನ ಹೆಣ ಬಂತು
ಕೈ ಮುಗಿದು ನಮಿಸಿ ಆತ್ಮಕ್ಕೆ ಶಾಂತಿ ಕೋರಿದೆ
ಅಣ್ಣ-ತಮ್ಮಂದಿರು ಆಸ್ತಿಗಾಗಿ ಜಗಳ ಕಾದಿದ್ದರು
ಸಮನಾಗಿ ಪಾಲು ಮಾಡಿ ಶಾಂತಿಯ ತಂದೆ

ಸಂಜೆಯಾಯಿತು ಬುದ್ಧನಾಗುವುದು ಹೇಗೆ
ತಿಳಿಯಲಿಲ್ಲ ಆ ಹೊತ್ತಿಗೆ ಮನೆ ದಾರಿ ಹಿಡಿದೆ
ಮನೆಯಲೆಲ್ಲ ನನ್ನ ನೋಡಿ ಬುದ್ಧನೆಂದು ತಿಳಿದು
ಹೊಗಳಿದ್ದೇ ಹೊಗಳಿದ್ದು ಭೇಷ್ ಭೇಷ್ ಎಂದಿದ್ದೇ

ಆಶ್ಚರ್ಯ ನಾನಿನ್ನೂ ಬುದ್ಧನಾಗಿಲ್ಲ ದಾರಿ ಗೊತ್ತಿಲ್ಲ
ಊರ ಜನರ ಬಾಯಲ್ಲಿ ಪರೋಪಕಾರಿಯಾಗಿದ್ದೆ
ಅದಕೆ ನಮ್ಮ ಮನೆಯವರಿಗೆ ನಾನು ಬುದ್ಧನಾಗಿದ್ದೆ
ಮನೆ ಬಿಟ್ಟು ಹೋಗಲಿಲ್ಲ ಹೆಂಡತಿ ಮಕ್ಕಳ ಬಿಡಲಿಲ್ಲ

ಕೊನೆಗೂ ಬುದ್ಧನಾದೆ ನಾನು ಬುದ್ಧನಾದೆ
ನನ್ನ ಮನಸಿಗೆ ಬದ್ಧನಾಗಿರುವ ಬುದ್ಧನಾದೆ!

ಭುವನೇಶ್ವರಿ.ರು.ಅಂಗಡಿ
ನರಗುಂದ,ಗದಗ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.