ಗುರುಗಳಾದ ಶಿರಸಿಯ ಹಿರಿಯ ಸಾಹಿತಿ ವಾಸುದೇವ ಶಾನಭಾಗರವರ 75 ನೇ ಜನ್ಮದಿನದ ಸುಸಂದರ್ಭದಲ್ಲಿ ಇವರ 50 ವರ್ಷಗಳ ಸಾಹಿತ್ಯಿಕ, ಸಾಂಸ್ಕೃತಿಕ, ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಅಭಿನಂದನಾ ಗ್ರಂಥವೊಂದು ಲೋಕಾರ್ಪಣೆಗೊಳ್ಳುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ.
ಇತ್ತೀಚೆಗೆ ಆಗಾಗ ಶಿರಸಿಗೆ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಹೋದಾಗ ಪರಿಚಯವಾದವರು ಮೃದು ಹೃದಯಿ ದ್ವಿಭಾಷಾ ಸಾಹಿತಿ, ಕಲಾವಿದರೂ ಆದ ವಾಸುದೇವ ಶಾನಭಾಗರು . ಎಪ್ಪತ್ತು ದಾಟಿದರೂ ಸದಾ ಲವಲವಿಕೆಯಿಂದಿರುವ ಇವರು ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಸುಮಾರು 30 ಕೃತಿಗಳನ್ನು ಹೊರತಂದಿದ್ದಾರೆ. ಇವರ ಅಭಿನಂದನಾ ಗ್ರಂಥಕ್ಕಾಗಿ “ಭಾವತರಂಗ” ಎಂಬ ಕೊಂಕಣಿ ಭಾವಗೀತೆಗಳ ಸಂಕಲನವನ್ನು ಓದಿ ನನ್ನ ಅನಿಸಿಕೆಯನ್ನು ವ್ಯಕ್ತಪಡಿಸುವ ಚಿಕ್ಕ ಪ್ರಯತ್ನ ಮಾಡಿದ್ದೇನೆ.
ಪ್ರಸಿದ್ಧ ಸಾಹಿತಿ ಶಾ ಮಂ ಕೃಷ್ಣರಾಯರು ಮುನ್ನುಡಿ ಬರೆದು ಹರಸಿದ ‘ಭಾವತರಂಗ’ ಐವತ್ತು ಕೊಂಕಣಿ ಭಾವಗೀತೆಗಳ ಗುಚ್ಛವಾಗಿದ್ದು ಬಹು ಸರಾಗವಾಗಿ ಓದಿಸಿಕೊಂಡು ಹೋಗುವ ಹಾಗೂ ರಾಗ ಲಯಬದ್ಧವಾಗಿ ಗಾಯನ ಯೋಗ್ಯವಾಗಿದೆ. ಮಕ್ಕಳಿಗೆ, ಯುವಕರಿಗೆ , ಹಿರಿಯರಿಗೂ ಸೆಳೆದಿಟ್ಟುಕೊಳ್ಳುವ ಶಕ್ತಿ ಈ ಭಾವಗೀತೆಗಳಿಗೆ ಇವೆ ಎಂದರೆ ತಪ್ಪಾಗಲಾರದು.
ಇದರಲ್ಲಿ ಲಾಲಿ ಹಾಡು, ಪ್ರೇಮ ಕಾವ್ಯ, ಜೀವನಾದರ್ಶ ಸಾರುವ, ದೇಶಭಕ್ತಿ ಬಿಂಬಿಸುವ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸುವ ಗೀತೆಗಳು ಮೂಡಿ ಬಂದಿವೆ. ಶಾನಭಾಗರ ಹೆಚ್ಚಿನ ಗೀತೆಗಳು ಮಾತ್ರಭಾಷೆ ಕೊಂಕಣಿಯ ಕುರಿತು ಇರುವುದು ಸ್ಮರಣೀಯವಾಗಿದೆ. ಈ ಮೂಲಕ ಭಾಷಾ ಪ್ರೇಮ ಹರಡುವುದರೊಂದಿಗೆ ಕೊಂಕಣಿ ಸಾಹಿತ್ಯವನ್ನೂ ಬೆಳೆಸುತ್ತಿದ್ದಾರೆ. ಇದರಲ್ಲಿ ಅತುಲ್ ದೇಶಪ್ರೇಮ ಸೂಸುವ ‘ ಕೊಂಕಣಿ ಆಂತ ಹೆಂ,ಭಾಂಗರಾಚೇ ಪ್ರಾಂತ ಹೇಂ ‘ ಗೀತೆಯಲ್ಲಿ ಜಾತಿ, ಧರ್ಮ, ಭೇದ ಭಾವ ಮರೆತು ಸಮಾಜದ ಉದ್ಧಾರಕ್ಕಾಗಿ, ಕೊಂಕಣಿ ಭಾಷೆಯ ಉನ್ನತಿಗಾಗಿ ಜೀವ ಅರ್ಪಿಸೋಣ ಎಂದು ಕರೆ ನೀಡಿದ್ದರೆ ‘ಉಜವಾಡು ‘ ಕವಿತೆಯಲ್ಲಿ ಸೂರ್ಯ ಜಗವನ್ನು ಬೆಳಗಿದರೆ ಗುರು ಶಿಷ್ಯನ ಬದುಕು ಬೆಳಗುವನು, ಪುಸ್ತಕವು ಜ್ಞಾನ ಬೆಳೆಸಿದರೆ ಗುರು ವಚನದಿಂದ ಭಕ್ತಿಯ ಬೆಳಕು ಮನದಲ್ಲಿ ಮೂಡುವುದು ಎಂದಿದ್ದಾರೆ. ರಂಗ ಪಂಚಮಿ, ವಾಜೈರೇ ಹರೀ ಮುರಲೀ ತುಗೇಲೀ, ಕೊಂಕಣಿ ಜಾಗೃತಿ ಗೀತ ಮುಂತಾದವು ಭಕ್ತಿಯಲ್ಲಿ ಭಾವ ಬೆರೆಸಿದ್ದಾರೆ. ‘ಧರ್ಮೂ ಧರ್ಮೂ ಮ್ಹಣತಾ ಸಗಳೇ ‘ಗೀತೆಯಲ್ಲಿ ಧರ್ಮದ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನು, ಸಮಾಜದ ಹುಳುಕುಗಳನ್ನು ನಿರ್ಭೀತಿಯಿಂದ ಬಿಂಬಿಸಿದ್ದಾರೆ. ಈ ಗೀತೆಗಳ ಗುಚ್ಛದಲ್ಲಿ ನನ್ನ ಭಾವ ತರಂಗದ ಪರಮಾವಧಿಗೆ ತಲುಪಿದ ಕವನ ಎಂದರೆ ‘ಜೀವನ’. ಸುಖ ದುಃಖಗಳೆಂಬ ಎರಡು ಮಜಲಿನ ಜೀವನವನ್ನು ಒಮ್ಮೆ ಉಕ್ಕಿ ಹರಿದು ಮತ್ತೊಮ್ಮೆ ಒಣಗುವ ತೊರೆಗೆ ಹೋಲಿಸಿದ್ದಾರೆ. ಹೀಗೆ ಭಾವಗೀತೆಗಳ ಗುಚ್ಛದಲ್ಲಿ ಅರಳಿದ ಪ್ರತಿಯೊಂದು ಭಾವ ಕುಸುಮ ಕವಿಯ ಅತಿ ಮಧುರ ಭಾವವನ್ನು ಬಿಂಬಿಸುವ ಕಾವ್ಯ ಮಾಲೆಯಾಗಿದೆ. ಇಂತಹ ಇನ್ನೂ ಹೆಚ್ಚಿನ ಕೃತಿಗಳು ಇವರಿಂದ ಕನ್ನಡ ಹಾಗೂ ಕೊಂಕಣಿ ಸಾಹಿತ್ಯ ಲೋಕಕ್ಕೆ ಸಿಗಲಿ ಎಂಬ ಸದಾಶಯದೊಂದಿಗೆ ಶ್ರೀಯುತರ ಅಭಿನಂದನಾ ಗ್ರಂಥದಲ್ಲಿ ನಾನು ಕೂಡ ನನ್ನ ಅಕ್ಷರ ನಮನ ಸಲ್ಲಿಸುವ ಅವಕಾಶ ದೊರೆತಿದ್ದು ನನ್ನ ಭಾಗ್ಯವೆಂದು ಭಾವಿಸುವ ನಿಮ್ಮ ಪ್ರೀತಿಯ
ದೀಪಾಲಿ ಸಾಮಂತ
ದಾಂಡೇಲಿ