ನಾ ಧರೆಯ ಕಂಡಾಗ ಜೊತೆಗಿದ್ದ ಜೀವ
ನನ್ನ ಪಡೆಯಲು ನೀ ಒತ್ತಿ ಇಟ್ಟಿಯಾ ಸಾವ
ಕ್ಷಣದಲ್ಲಿ ಕಂಡೆ ನೀನು ನೋವು ನಲಿವ
ನೀನಾದೆ ಜಗದಲ್ಲಿ ಮಿಗಿಲಾದ ಮಾತೃ ದೇವ
ನಿನ್ನುದರ ಗುಡಿ ಗರ್ಭದಿ ನವಮಾಸ ಇಟ್ಟೆ
ರಕ್ತದಿಂದ ಅಭಿಷೇಕ ನೀ ಮಾಡಿಬಿಟ್ಟೆ
ಕರುಳಿನ ಮಾಲೆ ಕಾಯಕ್ಕೆ ಕಾವಲಿಟ್ಟೆ
ಅಮೃತ ಪಾನವ ಪೋಷಣೆಗೆ ಕೊಟ್ಟೆ
ಅತ್ತಾಗ ಎದೆಗಪ್ಪಿಕೊಂಡು ಅಳು ನಿಲ್ಲಿಸಿದವಳು
ಹೇಸಿಗೆಯ ಹಾಸಿಗೆ ಹೇಸದೆ ಬಾಚಿದವಳು
ಮಜ್ಜಿಸಿ ಜೋಗುಳ ಹಾಡಿ ತೊಟ್ಟಿಲ ತೂಗಿದವಳು
ಜನಪದ ಸಾಹಿತ್ಯಕ್ಕೆ ಜೀವ ತುಂಬಿದವಳು
ಕಣ್ಣಿಗೆ ಕಪ್ಪು ಹಚ್ಚಿ ದೃಷ್ಟಿ ಚಿಕ್ಕೆ ಇಟ್ಟವಳು
ಎಣ್ಣೆ ಹಚ್ಚಿ ಎರದು ಗುಂಜ ತೆಲೆ ಬಾಚಿದವಳು
ಬಾಚಿ ತಬ್ಬಿಕೊಂಡು ಹಣೆಗೆ ಮುತ್ತಿಟ್ಟವಳು
ಕೈಚಾಚಿ ಮಮತೆಯಿಂದ ಕೈ ತುತ್ತು ಇಟ್ಟವಳು
ಮಮತೆಯಿಂದ ಮಡಿಲಿನಲ್ಲಿ ಆಸರೆ ನೀಡಿದವಳು
ಬೇಸರ ಕಳೆಯಲು ಮಗುವಿಗೆ ಆಟಿಕೆಯಾದವಳು
ತನ್ನ ಉಸಿರಿನಲ್ಲಿ ಉಸಿರು ನೀಡಿದವಳು
ತನ್ನ ಹೆಸರು ಹೇಳದ ತ್ಯಾಗಿ ಅವ್ವ ಇವಳು
ಇಂದು ವಿಶ್ವದ ಎಲ್ಲಾ ಅಮ್ಮಂದಿರ ಮೇಳ
ನಿನ್ನೆತರ ಪದಕ್ಕಾಗಿ ಹುಡುಕಿದೆ ಶಬ್ದಗಳ ಆಳ
ಸಿಗಲಿಲ್ಲ ನಿನಗೆ ಸರಿಸಾಟಿಯಾದ ದಾಳ
ನೀನೇ ಈ ಜಗದ ಮಿಗಿಲಾದ ಸೃಷ್ಟಿ ಜೀವಾಳ
ಶಿವಲೀಲಾ ಎಸ್ ಧನ್ನಾ