ಅಧ್ಯಯನ ಶೀಲ, ಪ್ರಖರ ಪ್ರಗತಿಪರ ವಿಚಾರವಾದಿ, ಸೌಜನ್ಯ ಸರಳತೆ ಗಳೇ ಮೈವೆತ್ತ ಪ್ರತಿ ಭಾನ್ವಿತ ಉಪನ್ಯಾಸಕ ಡಾ ಸಣ್ಣ ವೀರಣ್ಣ ದೊಡ್ಡ ಮನಿ ಅವರು ಶಿಳ್ಳೇಕ್ಯಾತ ಸಮುದಾಯದ ಬಡ ಕುಟುಂಬದಲ್ಲಿ ಜನಿಸಿ ಪರಿಶ್ರಮ ಪಟ್ಟು ಓದಿ , ಉಪನ್ಯಾಸಕರಾಗಿ ನಿರಂತರ ಅಧ್ಯಯನ ಅಧ್ಯಾಪನ ಸಂಶೋಧನೆಗಳಲ್ಲಿ ತೊಡಗಿದ್ದಲ್ಲದೆ ಕಾವ್ಯ, ವೈಚಾರಿಕ ಸಾಹಿತ್ಯ ರಚನೆ ಮಾಡಿದ್ದಾರೆ. ಪದವಿ ತರಗತಿಗಳ ಪಠ್ಯಗಳ ಸಂಪಾದಕರಾಗಿ ಇಂದು ವಿದ್ವತ್ ಲೋಕದ ಸಂಪನ್ಮೂಲವೆನಿಸಿದ್ದಾರೆ.
ಇವರ ಪ್ರಸ್ತುತ ಕೃತಿವಿ ಅರಿವು ಆಚಾರ ಅನುಭಾವವಿ ದಲ್ಲಿ ವಿಭಿನ್ನ ವಿಷಯಗಳಿರುವ ಮೂರು * ಭಾಗಗಳಿವೆ ಆರಿವು ಶೀರ್ಷಿಕೆಯ ಮೊದಲ ಭಾಗದಲ್ಲಿ ವೈಚಾರಿಕ ಸಾಹಿತ್ಯದ ಅರ್ಥ ವಿವರಣೆಯನ್ನು ನೀಡುವ ಲೇಖಕರು ಸ್ಕೂಲವಾಗಿ ಒಂದು ವಿಷಯದ ಕುರಿತಾದ ತರ್ಕಬದ್ಧ ಆಲೋಚನೆಗಳ ಅಭಿವ್ಯಕ್ತಿಯೇ ವಿಚಾರ ಸಾಹಿತ್ಯವಾಗಿದೆ, ಅದು ಕಾರ್ಯ ಕಾರಣ ಸಂಬಂಧ ದಂತಹ ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ. ವಿಜ್ಞಾನದ ನಿಜವಾದ ಅರ್ಥವಾಗುವುದು ಅದರ ವೈಚಾರಿಕತೆ | (Reasoning)ದಲ್ಲಿ ಎಂದು ಅಭಿಪ್ರಾಯಪಡುತ್ತಾರೆ. ವಿಚಾರ ಸಾಹಿತ್ಯದ ಗುಣಲಕ್ಷಣಗಳನ್ನು ವಿವರಿಸುವ ಲೇಖಕರು, ಪರಂಪರೆಯ ನಂಬಿಕೆ ಮತ್ತು ಆಚರಣೆಗಳನ್ನು ತಲಸ್ಪರ್ಶಿಯಾಗಿ ಶೋಧಿಸಿ, ತರ್ಕದ ಒರೆ ಗಲ್ಲಿಗೆ ಹಚ್ಚಿ ಪರೀಕ್ಷಿಸಿ ಸ್ವೀಕರಿಸುವದು ವೈಚಾರಿಕತೆಯ ಲಕ್ಷಣ ಎಂದು ಭಗತ್ ಸಿಂಗ್ ಮತ್ತು ಕವಿ ಕಾಳಿದಾಸ ಹೇಳಿದ್ದನ್ನು ಉಲ್ಲೇಖಿಸುತ್ತಾರೆ.
ವಿಚಾರ ಸಾಹಿತ್ಯದ ಸ್ವರೂಪ ಮತ್ತು ವ್ಯಾಪ್ತಿಯ ಕುರಿತು ಬರೆಯುವ ಲೇಖಕರು, ನಿರ್ಭಯದ ಭಾವ ತಳೆಯಲು ಮತ್ತು ಬೌದ್ಧಿಕ ಪ್ರಗತಿಗೆ ವೈಚಾರಿಕತೆಯು ಅವಶ್ಯಕ, ರಸೆಲ್ ಹೇಳಿದಂತೆ ವೈಚಾರಿಕತೆ ಯಿಂದ ಮನುಷ್ಯ ಅನೇಕ ಕಷ್ಟಗಳಿಂದ ವಿಮುಕ್ತನಾಗುತ್ತಾನೆ. ವಿಚಾರ ಸಾಹಿತ್ಯವು ಪ್ರಮಾಣವಾದ ಪ್ರಮೇಯಗಳನ್ನು ಸೃಷ್ಟಿಸುವಾಗ ಇತಿಹಾಸವನ್ನು ಕದಡಿ ಪ್ರಶ್ನಿಸುತ್ತದೆ. ಕಾಲದ ಘಟನೆಗಳನ್ನು ಮುಖಾಮುಖಿಯಾಗಿಸಿ ದಾಖಲೀಕರಣಗೊಳಿಸುತ್ತದೆ ಎನ್ನುವ ಮಹತ್ವದ ವಿಚಾರಗಳನ್ನು ತಿಳಿಸುತ್ತಾರೆ. ವಿಚಾರ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ ಮತ್ತು ವೈಚಾರಿಕ ಸಾಹಿತ್ಯದ ಪ್ರಾಮುಖ್ಯತೆಯನ್ನು ಪ್ರಸ್ತಾಪಿಸಿದ ನಾಡಿನ ಧೀಮಂತ ಸಾಹಿತಿಗಳಾಡ ಕುವೆಂಪು ,ಜಿ. ಎಸ್. ಎಸ್ ತತ್ವಜ್ಞಾನಿಗಳಾದ ಬುದ್ಧ. ಮಹಾವೀರ, ಸಾಕ್ರೆಟಿಸ್, ಕಾಂಟ್ ಮುಂತಾದ ಇಂಗ್ಲಿಷ್ ಫ್ರೆಂಚ್, ಜರ್ಮನ್ ಮತ್ತು ಭಾರತೀಯ ವಿಚಾರವಾದಿಗಳು ತಮ್ಮ ಕೃತಿಗಳಲ್ಲಿ ಪ್ರಜಾಸತ್ತೆ, ಸನಾತನ ಧರ್ಮ, ದೇವರು ಮುಂತಾದ ವಿಷಯಗಳ ಕುರಿತು ವ್ಯಕ್ತ ಪಡಿಸಿದ ವೈಚಾರಿಕ ಚಿಂತನೆಗಳನ್ನು ಲೇಖಕರು ಅಭ್ಯಾಸ ಪೂರ್ಣವಾಗಿ ವಿವೇಚಿಸಿದ್ದುಂಟು. ಕನ್ನಡ ವೈಚಾರಿಕ ಸಾಹಿತ್ಯ ಪರಂಪರೆಯನ್ನು ಮುಂದುವರೆಸುವುದರ ಜೊತೆಗೆ ಈ ಪ್ರಕಾರದ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ. ಡಾ ಅಂಬೇಡ್ಕರ್, ಬಸವರಾಜ ಕಟ್ಟಿಮನಿ,ಕುವೆಂಪು, ಕಾರಂತ,ಕಾಯ್ಕಿಣಿ, ಪಂಡಿತ್ ತಾರಾನಾಥ್, ಶಂ. ಭಾ. ಜೋಶಿ, ಡಾ. ಗೋಕಾಕ ಅವರನ್ನು ಒಳಗೊಂಡು ಇಂದಿನ ಮಹತ್ವದ ವೈಚಾರಿಕ ಸಾಹಿತ್ಯ ರಚನಾಕಾರರ ಸಮಗ್ರ ಪಟ್ಟಿಯನ್ನು ನೀಡಿ ಅವರು ವೈಚಾರಿಕ ಸಾಹಿತ್ಯಕ್ಕೆ ನೀಡಿದ ಕೊಡುಗೆಯ ಸ್ವರೂಪವನ್ನು ಲೇಖಕರು ನಲಿವಿನಿಂದ ವಿವೇಚಿಸಿದ್ದು ವಿಶೇಷ. ‘ಆಚಾರ’
ಎನ್ನುವ ಪುಸ್ತಕದ ಎರಡನೆಯ ಭಾಗದಲ್ಲಿ ತಮ್ಮ ಅರಿವನ್ನು ಆಚಾರಕ್ಕಿಳಿಸಿದ್ದ ಹನ್ನೆರಡನೇ ಶತಮಾನದ ಪ್ರಮುಖ ವಚನಕಾರರಾದ ಬಸವಣ್ಣನವರ ಬ್ರಷ್ಟಾಚಾರ ವಿರೋಧಿ ನಿಲುವು, ಬೋಧಿಸಿ ಸಾಧಿಸಿದ ಕಾಯಕ, ದಾಸೋಹದ ಪರಿಕಲ್ಪನೆ, ಅವರು ಬದುಕಿ ಬಾಳಿದ ನೈತಿಕ ಮೌಲ್ಯಗಳೊಂದಿಗೆ ಮಾದಾರ ಚನ್ನಯ್ಯ ಮತ್ತು ಜೇಡರ ದಾಸಿಮಯ್ಯನವರ ವೈಚಾರಿಕ ನಿಲುವನ್ನು ಲೇಖಕರು ಸೂಕ್ತ, (Relevent) ವಚನಗಳ ಉಲ್ಲೇಖ ಮತ್ತು ವಿಶ್ಲೇಷಣೆ ಯೊಂದಿಗೆ ಅನಾವರಣಗೊಳಿಸಿರುವುದು ಸಚಿತ್ರ (Picturesque) ಆಗಿದೆ.
ಅನುಭಾವ: ಗುರು ಪರಂಪರೆ ಎನ್ನುವ ಗ್ರಂಥದ ಮೂರನೆಯ ಭಾಗದಲ್ಲಿ ಯಾವುದನ್ನು ಅರಿತರೆ ಎಲ್ಲವನ್ನೂ ಅರಿತಂತೆಯೋ ಅದನ್ನು ಅರಿತು ಆಚರಿಸಿದ ಅನುಭಾವಿಯಾಗಿದ್ದ, ಶತಮಾನದ ಶ್ರೇಷ್ಟ ಸತ್ಯಶೋಧಕ, ಅಪ್ರತಿಮ ಚಿಂತಕ ಮತ್ತು ಮಾದರಿ ಅಧ್ಯಾಪಕರಾಗಿದ್ದ ಡಾ ಎಂ. ಎಂ. ಕಲಬುರ್ಗಿ ಅವರು ಲೇಖಕರ ಆದರ್ಶ ಗುರುಗಳು. ಅವರ ವ್ಯಕ್ತಿತ್ವದ ಹಲವಾರು ಅಂಶಗಳಿಂದ ಪ್ರಭಾವಿತರಾಗಿರುವ ಲೇಖಕ ಡಾ. ಸಣ್ಣವೀರಣ್ಣನವರು ತಾವು ಮೆಚ್ಚಿಕೊಂಡ ಹಚ್ಚಿಕೊಂಡ ಗುರು ಶ್ರೇಷ್ಠ ಕಲಬುರ್ಗಿಯವರ ಮೇರು ವ್ಯಕ್ತಿತ್ವದ ಚಿತ್ರಣವನ್ನು ಭಯ ಭಕ್ತಿ ಮತ್ತು ಆರಾಧನಾ ಭಾವದಿಂದ ನೀಡಿದ್ದು ಹೀಗೆ: ‘ಪ್ರಖರ ವಿಚಾರವಾದಿಗಳಾಗಿದ್ದ ಡಾ ಕಲಬುರ್ಗಿ ಅವರು ಎಡ ಪಂಥೀಯ ಆಲೋಚನಗಳನ್ನು ಎಗ್ಗಿಲ್ಲದೆ ಹಿಗ್ಗಿನಿಂದ ಪಸರಿಸುತ್ತಿದ್ದರು. ಸಂಶೋಧಕನಾದವನು ಸತ್ಯಕ್ಕಾಗಿ ತಾನು ಮೊದಲು ಚಿಕ್ಕ ಚಿಕ್ಕ ಶಿಲುಬೆಗೇರಬೇಕಾಗುತ್ತದೆ ಎಂದ ಅವರು ಜ್ಞಾತಿ ಜಂಗಮವಿಡಿದು ಬಸವಣ್ಣನ ಒಲವಿನಂತಾಗಿದ್ದರು ಅಧ್ಯಯನ ಶೀಲ ಮನಸ್ಸುಗಳಿಗೆ ಮಹಾಮಾರ್ಗದರ್ಶಿಯಾಗಿದ್ದಾರೆ.
ಕವಿರಾಜ ಮಾರ್ಗ ಪರಿಸರವನ್ನು ಅಧ್ಯಯನ ಮಾಡಿ, ಆಳವಾದ ಸಾಹಿತ್ಯ ಸಂಶೋಧನೆಯಲ್ಲಿ ತೊಡಗಿಕೊಂಡು ಕುಲ ಪತಿಗಳಾಗಿ ದಕ್ಷ ಆಡಳಿತ ನಡೆಸಿ, ಆಗಲೂ ಅಧ್ಯಯನದ ಶಿಸ್ತು ರೂಢಿಸಿ ಕೊಂಡಿದ್ದು ಅವರ ಶ್ರಮ ಸಂಸ್ಕೃತಿಯ ಪ್ರತೀಕ. ಕ್ರಿಯಾಶೀಲರನ್ನು ಪ್ರೀತಿಸುತ್ತಿದ್ದ ಅವರಿಗೆ ಅಲಸಿಗಳೆಂದರೆ ಸಿಟ್ಟು, ಅವರು ವಿದ್ವನ್ಮಣಿಗಳ ದೊಡ್ಡ ಪರಂಪರೆಯನ್ನೇ ಸೃಷ್ಟಿಸಿರುವುದು ವಿಶೇಷ. ಬಸವಣ್ಣ ಕಲ್ಯಾಣವನ್ನು ಕತ್ತಲಲ್ಲಿ ತೇಲಿ ಬಿಟ್ಟಂತೆ ಆಧುನಿಕ ಬಸವಣ್ಣನಂತೆ ಇದ್ದು, ಬಸವ ಬೆಳಕನ್ನು ತನ್ನ ಹಿಡಿಯಲ್ಲಿ ತುಳುಕಿಸಿದ ಕಲಬುರ್ಗಿಯವರು ದಿವ್ಯ ಚೇತನರು’.
ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಸ್ಥಾಪನೆಯ ಕುರಿತು ಚರ್ಚಿಸಲು ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಕರೆದಿದ್ದ ಸಭೆಯಲ್ಲಿ ಲೇಖಕರು ಜಾನಪದ ವಿಶ್ವವಿದ್ಯಾಲಯದಲ್ಲಿ ತೊಗಲು ಬೊಂಬೆ ಕಲೆಯ ಬೆಳವಣಿಗೆಗಾಗಿ ಒಂದು ಪ್ರತ್ಯೇಕ ಅಧ್ಯಯನ ಪೀಠ ಸ್ಥಾಪನೆ ಮಾಡಲು ನೀಡಿದ ಸೂಚನೆಯನ್ನು ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ. ಕಲಬುರ್ಗಿ ಅವರು ಅನುಮೋದಿಸಿದ್ದನ್ನು, ಮಹಾಲಿಂಗಪುರದ ಚಿತ್ರಮಂದಿರದಲ್ಲಿ ಕಲಬುರ್ಗಿ ಅವರ ಖರೇ ಖರೇ ಸಂಗ್ಯಾ ಬಾಳ್ಯಾ ನಾಟಕ ಪ್ರದರ್ಶನವನ್ನು ಕಲಬುರ್ಗಿಯವರ ಶಿಷ್ಯ ಬಳಗದೊಂದಿಗೆ ನೋಡಿ ಆನಂದಿಸಿದ್ದನ್ನು ಪಂಪನ ತಮ್ಮ ಜಿನ ವಲ್ಲಭನನೆಡೆಸಿದ ಕುರ್ಕಿಯಾಲ ಶಾಸನ ನೋಡಲು ಪರಿಶ್ರಮಿಸಿದ ಅವರ ಕ್ಷೇತ್ರ ಕಾರ್ಯ ಬದ್ಧತೆಯನ್ನು ಲೇಖಕರು ಅಭಿಮಾನದಿಂದ ಪ್ರಸ್ತಾಪಿಸಿದ್ದುಂಟು.
ಲೇಖಕರು ತಮ್ಮ ಗುರು ಕಲಬುರ್ಗಿಯವರ ಸಾನ್ನಿಧ್ಯದಲ್ಲಿ ಅರಿತ ವಿಚಾರ ಪಡೆದ ಅನುಭವಗಳನ್ನು ಧನ್ಯತೆಯಿಂದ ಸ್ಮರಿಸಿಕೊಂಡಿದ್ದುಂಟು. ನಾಡಿನ ಇನ್ನೋರ್ವ ಘನ ವಿದ್ವಾಂಸ ರಾಗಿರುವ ಡಾ ವೀರಣ್ಣ ರಾಜೂರ ಅವರು ನನ್ನ ಸ್ಮತಿ ಪಟಲದಲ್ಲಿ ಅಚೊತ್ತಿದ ವಿದ್ಯಾ ಗುರುಗಳು, ಅವರ ವಿದ್ವತ್ತು,ಸರಳ ಸಜ್ಜನಿಕೆ ಸಂಪತ್ತು, ಮೃದುಧೋರಣೆಯ ಮಂದಹಾಸ ಅದ್ಭುತ ಎಂದು ತಿಳಿಸುವ ಲೇಖಕರು ಡಾ ವೀರಣ್ಣ ರಾಜೂರ ಅವರು ತುಂಬ ಶ್ರಮವಹಿಸಿ ಸಂಪಾದಿಸಿ 65 ಪುಟದ ವಿಸ್ತ್ರತ ಸಂಶೋಧನಾತ್ಮಕ ಪ್ರಸ್ತಾವನೆ ನೀಡಿದ ವೀರಶೈವ ತಾರಾವಳಿ ಸಾಹಿತ್ಯ ಕೃತಿಯ ಪ್ರಮುಖ ಅಂಶಗಳನ್ನು ಅಭ್ಯಾಸ ಪೂರ್ಣವಾಗಿ ನೀಡಿರುವುದು ತಾರಾವಳಿ ಸಾಹಿತ್ಯ (classic, ಶ್ರೇಷ್ಟ ಕೃತಿಯ), ಸಂಪಾದನೆಯ ಅವಶ್ಯಕತೆ ಇದ್ದುದನ್ನು ಲೇಖಕರು ಪ್ರಸ್ತಾಪಿಸಿ ಗುರುಗಳಾದ ಸಂಶೋಧಕ ಡಾ ವೀರಣ್ಣ ಅವರನ್ನು ಹೃದಯ ದುಂಬಿ ಅಭಿನಂದಿಸಿದ್ದಾರೆ.
ತಮ್ಮ ಆರಾಧ್ಯ ಗುರುಗಳಾದ ಡಾ ವೀರಣ್ಣ ರಾಜೂರ ಅವರನ್ನು ಡಾ ಎಂ ಎಂ ಕಲಬುರ್ಗಿ ಅವರ ವಾರಸುದಾರ, ಅವರ ಅಂತರಂಗದ ಶಿಷ್ಯರು, ಬಸವಾದಿ ಶರಣ ಸಾಹಿತ್ಯ ಸಂಶೋಧಕ, ಮಾತನ್ನು ಜ್ಯೋತಿರ್ಲಿಂಗ ಮಾಡಿಕೊಂಡ ಕ್ರಿಯಾಶೀಲ, ವಿದ್ಯಾರ್ಥಿ ಸ್ನೇಹಿ ನಿಶ್ಚಲ ಮನದ ಪ್ರತಿಭಾನ್ವಿತರು ಎಂದೆಲ್ಲ ಗೌರವ ಪ್ರೀತಿಯಿಂದ ಸಂಬೋಧಿಸಿ ಅವರ ಶೈಕ್ಷಣಿಕ ಜೀವನದ ಸಾಧನೆಯ ಮೈಲುಗಲ್ಲುಗಳನ್ನು ‘ಶರಣ ಧರ್ಮದ ಧೃವ ತಾರೆ’ ಎನ್ನುವ ಇನ್ನೊಂದು ಅಧ್ಯಾಯದಲ್ಲಿ ಅಭಿಮಾನದಿಂದ ನೀಡಿದ್ದು ಗುರುವಿನ ಕುರಿತಾದ ಲೇಖಕರ ಪ್ರೀತಿ ಗೌರವದ ಆಳಗಲಕ್ಕೆ ಕನ್ನಡಿ ಹಿಡಿಯುತ್ತದೆ.
ಲೇಖಕರು ತಮ್ಮ ಇನ್ನೊಬ್ಬ ಪ್ರೀತಿಯ ವಿದ್ಯಾ ಗುರುಗಳಾದ ಬಿ ವ್ಹಿ ಶಿರೂರ ಅವರ thumb nail sketch ಸಂಕ್ಷಿಪ್ತ ಆಂದರೆ ಸುಂದರ ಪರಿಚಯವನ್ನು ಕೃತಿಯ ‘ಬಾನಂಗಳದ ಬೆಳಕು’ ಲೇಖನದಲ್ಲಿ ಪರಿಚಯ ಪರಿಚಯ ಮಾಡಿಕೊಟ್ಟದ್ದುಂಟು. ಅವರನ್ನು ಕನ್ನಡ ನಾಡಿನಲ್ಲಿ ಶ್ರವಣ ಬೆಳಗೊಳದ ಸಾಂಸ್ಕೃತಿಕ ಮಹತ್ವವನ್ನು ಬಾನೆತ್ತರಕ್ಕೆ ಪಸರಿಸಲು ಶ್ರಮಿಸಿದವರು, ಕರ್ನಾಟಕದ ಇತಿಹಾಸವನ್ನು ತೆರೆದಿಡುವುದರಲ್ಲಿ, ಅದರ ಆತ್ಮ ಗೌರವವನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖರು ಎಂದು ಅಭಿಮಾನದಿಂದ ತಿಳಿಸಿ, ಅವರ ಸಂಶೋಧನಾ ಪ್ರಬಂಧವಾದ ‘ಶ್ರವಣ ಬೆಳಗೊಳದ ರಾಜಕೀಯ, ಸಾಹಿತ್ಯಕ ಸಾಂಸ್ಕೃತಿಕ ಮಹತ್ವ’ ಎನ್ನುವ ಕೃತಿಯ ಪ್ರಮುಖ ಅಂಶಗಳನ್ನು ಶ್ರದ್ಧೆಯಿಂದ ಪ್ರಸ್ತಾಪಿಸಿದ್ದಾರೆ. ಅಲ್ಲದೆ ಡಾ ಶಿರೂರ ಅವರ ಮೊಲ್ಲೆ ಬೊಮ್ಮಯ್ಯಗಳ ಕಾವ್ಯ, ರತ್ನ ಕರಂಡಕದ ಕತೆಗಳು ಸಂಶೋಧನ ಸ್ವರೂಪ ಮುಂತಾದ ಹಲವಾರು ಕೃತಿಗಳ ರಸ ವಿಮರ್ಶೆ ನೀಡಿ ಸುಮಾರು 45ಸಾವಿರ ರೂಪಾಯಿ ಬೆಲೆಯ ಪುಸ್ತಕಗಳನ್ನು ಕನ್ನಡ ಅಧ್ಯಯನ ಪೀಠಕ್ಕೆ ನೀಡಿದ್ದನ್ನು ಲೇಖಕರು ಗೌರವ ಪೂರ್ವಕವಾಗಿ ಸ್ಮರಿಸಿದ್ದಾರೆ.
ಡಾ ಬಿ ವಿ ಶಿರೂರ ಅವರಿಗೆ ಅವರ ಶಿಷ್ಯ ಬಳಗವು ಅರ್ಪಿಸಿದ ‘ಸಿರಿಸಂಪದ’ ‘ಅಭಿನಂದನಾ ಗ್ರಂಥದ ಸ್ಕೂಲ ಪರಿಚಯವನ್ನೂ ಲೇಖಕರು ಪ್ರತ್ಯೇಕ ಲೇಖನದಲ್ಲಿ ಮಾಡಿದ್ದು ವಿಶೇಷವಾಗಿದೆ. ‘ತಪೋವನ ತಿಲಕರ ರಸಗಂಗೆ’ ಎನ್ನುವ ಲೇಖನದಲ್ಲಿ ನಾಡಿನ ಪ್ರಮುಖ ಅನುಭಾವಿ, ಸಾಹಿತಿ ಉತ್ತಮ ಶಿಕ್ಷಕ ಡಾ ಗುರುಲಿಂಗ ಕಾಪಸೆ ಅವರು ಧಾರವಾಡದ ಆಧ್ಯಾತ್ಮಿಕ ಶಕ್ತಿ ಕೇಂದ್ರ ವಾಗಿರುವ ತಪೋವನದ ಆಧ್ಯಾತ್ಮಿಕ ಪರಿಸರದಲ್ಲಿ ಮಿಂದು ಮುಳುಗಿದ್ದನ್ನು, ಲೇಖಕ ಡ್ತಾ ಸಣ್ಣವೀರಣ್ಣನವರನ್ನು ಕಾಪಸೆ ಅವರು ಸಮಾರಂಭವೊಂದರಲ್ಲಿ ಕನ್ನಡದ ‘ವೇರಿಯರ್ ಎಲ್ವಿನ್’ಎಂದು ಕರೆದು ಬೆನ್ನು ತಟ್ಟಿದ್ದನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಲೇಖಕರ ಕುರಿತು ಪ್ರಶಂಸೆಯ ಮಾತುಗಳನ್ನು ಆಡಿ ಆಶೀರ್ವದಿಸಿದ್ದನ್ನು, ಕಾಪಸೆ ಅವರು ಬೇಂದ್ರೆ ಮತ್ತು ಮಧುರ ಚೆನ್ನರ ಕುರಿತು ವ್ಯಕ್ತಪಡಿಸಿದ ವಿಚಾರಗಳನ್ನು ಲೇಖಕರು ಕೃತಜ್ಞತೆಯಿಂದ ನೆನಪಿಸಿಕೊಂಡಿದ್ದುಂಟು.ಪ್ರಸ್ತುತ ಕೃತಿಗೆ ನಾಡಿನ ಶ್ರೇಷ್ಟ ಚಿಂತಕರಾದ ಡಾ ಬರಗೂರು ರಾಮಚಂದ್ರಪ್ಪ ಅವರು ಬೆನ್ನುಡಿಯನ್ನು ಇನ್ನೋರ್ವ ಚಿಂತಕರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಪುರುಷೋತ್ತಮ ಬಿಳಿಮಲೆ ಅವರು ಅಂದವಾದ ಮುನ್ನುಡಿಯನ್ನು ನೀಡಿದ್ದು ವಿಶೇಷ ಕಳೆ ನೀಡಿದೆ.
ಲೇಖಕ ಡಾ ಸಣ್ಣ ವೀರಣ್ಣ ಅವರು ಸಾಹಿತ್ಯ ಮತ್ತು ಸಂಶೋಧನೆಯ ಶಿಖರಗಳೆನಿಸಿ ನಾಡು ನುಡಿಗೆ ಮೌಲಿಕ ಕೊಡುಗೆ ನೀಡಿದ ಮಹನೀಯರನ್ನು ಅವರ ಸಾಹಿತ್ಯ ಸೇವೆಯನ್ನು ಬಂಧುರ ಭಾಷಾ ಶೈಲಿಯಲ್ಲಿ ಪ್ರೀತಿಯಿಂದ ಪ್ರಸ್ತಾಪಿಸಿದ್ದು ಮೆಚ್ಚುವಂತಿದೆ. ಈ ಕೃತಿಯನ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಕಾಲೇಜಿನ ಸಮಾರಂಭವೊಂದರಲ್ಲಿ ಅತ್ಯಂತ ಗೌರವದಿಂದ ನೀಡಿ ಓದಲ್ಹಚ್ಚಿದ ಸೌಜನ್ಯದ ಸನ್ಮೂರ್ತಿ ಡಾ ಸಣ್ಣವೀರಣ್ಣ ಅವರಿಗೆ ವಿಶ್ವದ ಎಲ್ಲ ಶುಭವನ್ನೂ ಹಾರೈಸುತ್ತೇನೆ. ಅವರ ಸಾಹಿತ್ಯ ಕೃಷಿ ನಿರಂತರವಾಗಿರಲಿ.
ಡಾ ಗುರುದೇವಿ ಹುಲೆಪ್ಪನವರಮಠ
ವಿಶ್ರಾಂತ ಇಂಗ್ಲಿಷ್ ಪ್ರಾಧ್ಯಾಪಕಿ
ಬೆಳಗಾವಿ
ಪೋ 9845751621