You are currently viewing ಡಾ ಸಂತೋಷ ಹಾನಗಲ್ಲರ ಸಂವಿಧಾನ ನುಡಿ ಸಂಹಿತೆ: ನುಡಿ ಭಾಷ್ಯದ ಸಂವಿಧಾನಿಕ ಜಿಜ್ಞಾಸೆ

ಡಾ ಸಂತೋಷ ಹಾನಗಲ್ಲರ ಸಂವಿಧಾನ ನುಡಿ ಸಂಹಿತೆ: ನುಡಿ ಭಾಷ್ಯದ ಸಂವಿಧಾನಿಕ ಜಿಜ್ಞಾಸೆ

ಭಾರತೀಯ ಭಾಷೆಗಳ ಕುರಿತು ಸಂವಿಧಾನಿಕ ಜಿಜ್ಞಾಸೆಯ ನಿಲುವು ಪ್ರತಿಪಾದಿಸಿವ ಡಾ ಸಂತೋಷ ಹಾನಗಲ್ಲರ ‘ಸಂವಿಧಾನ ನುಡಿ ಸಂಹಿತೆ’ ನುಡಿಗಾಗಿ ಸಂಸತ್ತಿನ ಪ್ರಶ್ನೋತ್ತರಗಳ ಆಖ್ಯಾನವಾಗಿದೆ.

ನಮ್ಮ ಸಂವಿಧಾನದಲ್ಲಿ ಭಾರತೀಯ ಭಾಷೆಗಳು ನಡೆದ ಹಾದಿಯನ್ನು ಪ್ರತಿಪಾದಿಸುವ ಕೃತಿ. ಇದನ್ನು ಆತ್ಮೀಯ ಗೆಳೆಯರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಕಾಯಕ ಮಾಡುವ ಕಾರ್ಯದರ್ಶಿ ಡಾ ಸಂತೋಷ ಹಾನಗಲ್ಲರ ಶ್ರದ್ದೆಯ ಸಂಕೇತವಾಗಿ ಮೂಡಿ ಬಂದಿದೆ.
ಡಾ ಸಂತೋಷ ಅವರು ನನ್ನೊಂದಿಗೆ ಪದವಿ ಓದಿದ ಗೆಳೆಯರು. 1995 ರಿಂದ 2005ರ ವರೆಗೆ ಧಾರವಾಡದ ವಿದ್ವತ್ತಿನ ನೆಲದಲ್ಲಿ ಬೀದಿ ಬೀದಿ ಸುತ್ತಿ ಅಲ್ಲಿನ ಚಾರಿತ್ರಿಕ ಮತ್ತು ವೈಚಾರಿಕ ಚಹರೆಗಳನ್ನು ಕುತೂಹಲದಿಂದ ಅರಿತವರು. ಸ್ನಾತಕ ಪದವಿಯಲ್ಲಿ ಇತಿಹಾಸ ಓದಿದ ಅವರು ಸ್ಪರ್ಧಾತ್ಮಕ ಮನೋಭಾವದಿಂದ ಬೆಳೆದು, ನನ್ನೊಂದಿಗೆ ಕನ್ನಡದ ಸ್ನೇಹ ವೈಶಾಲ್ಯವನ್ನು ಇಟ್ಟುಕೊಂಡು ಚರಿತ್ರೆಯನ್ನು ಮೆಲಕು ಹಾಕಿದವರು. ಮುಂದೆ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಂಡು ಇಂದು ಕನ್ನಡದ ಅಸ್ತಿತ್ವ ಕುರಿತು ಚಿಂತಿಸುವ ಮತ್ತು ಕಾರ್ಯರೂಪಗೊಳಿಸುವ ಸರ್ಕಾರದ ಮಹತ್ವದ ಸ್ಥಾನದಲ್ಲಿದ್ದಾರೆ. ಶಾಸಕಾಂಗಕ್ಕೆ ಕನ್ನಡ ‘ನಾಡವರ್ಗಳ್’ ಕಾಳಜಿ ಸೂಕ್ತ. ಅಧ್ಯಕ್ಷರು ವೈಚಾರಿಕ ಚಿಂತಕರಾದ ಡಾ ಪುರುಷೋತ್ತಮ ಬಿಳಿಮಲೆ ಅವರ ನುಡಿ ಜಿಜ್ಞಾಸೆಯ ಶಕ್ತಿ ಇವರಿಗೆ ಸಾತ್ ನೀಡಿದಂತಾಗಿದೆ. ಏಕೆ ಈ ಮಾತು ಹೇಳಿದ್ದೇನೆಂದರೆ, ಕನ್ನಡ ಭಾಷಾ ಚರಿತ್ರೆಯ ನೆಲದಲ್ಲಿ ಐಕ್ಯಗೊಂಡಿರುವ ವಿವೇಕ, ಔದಾರ್ಯ ಮತ್ತು ನಿರ್ಧಾರವನ್ನು ಅನುಸಂಧಾನ ಗೊಳಿಸುವ ಕೊಂಡಿಯಾಗಿ ಕೆಲಸ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ. ಪ್ರಭುತ್ವ (ಸರ್ಕಾರ),ಆಡಳಿತ ಹಾಗೂ ಸಮುದಾಯದ ಉಸಿರಿನ ಪ್ರಜ್ಞೆಯಾಗಿ ಕನ್ನಡ ಉಳಿಸಿ ಬೆಳೆಸುವ ಮಹತ್ಕಾರ್ಯ ಶಾಸಕಾಂಗದಲ್ಲಿ ನಡೆಯಲೇಬೇಕು. ನಡೆಯುವಂತೆ ಮಾಡುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಉಸಿರ ಧ್ಯೇಯ. ಇಂತಹ ಆಶಯದ ಅವಧಿ ಸಾರ್ಥಕವೆನಿಸುತ್ತದೆ. ಮಹತ್ವದ ಜವಾಬ್ದಾರಿ ಸ್ಥಾನದ ಡಾ ಸಂತೋಷ ಅವರು ಐತಿಹಾಸಿಕ ಕಿತ್ತೂರಿನ ಚರಿತ್ರೆ ಮತ್ತು ಬೆಳಗಾವಿ ಜಿಲ್ಲೆಯ ಪ್ರಭುತ್ವಶಾಹಿ ಸ್ಥಾನಗಳಾದ ವಾಡೆಗಳನ್ನು ತಮ್ಮ ಜ್ಞಾನದ ಕುತೂಹಲದಿಂದ ಕಂಡು ವ್ಯಾಖ್ಯಾನಿಸಿದ್ದಾರೆ. ನುಡಿ ಕಾರ್ಯ ಜಾರಿಗೊಳ್ಳಲು ಮಾತಿಗಿಂತ ಕೃತಿ ಮೇಲು ಅವರ ಮಾತು ಕಡಿಮೆ. ಕಾರ್ಯಶೀಲತೆ ಹೆಚ್ಚಿಸಿದ ಅವರ ವಿವೇಕ ಮಾತೃ ಪ್ರೇಮದ ಸಂಕೇತವೆನಿಸಿದೆ. ನುಡಿ ಬದ್ಧತೆಯ ಕಾನೂನಿನ ಚೌಕಟ್ಟು ಏನು ಎಂಬುದನ್ನು ಮತ್ತು ಇತ್ತೀಚಿಗೆ ಬಹು ಚರ್ಚಿತವಾಗುತ್ತಿರುವ ರಾಷ್ಟ್ರೀಯ ಭಾಷಾ ಯಜಮಾನಿಕೆಯ ಚಿಂತನೆಗೆ ಉತ್ತರ ಸಾಮಾನ್ಯರಿಗೂ ತಲುಪಬೇಕು. ಸಾಮಾನ್ಯರ ಭಾಷಾಮಾನ್ಯತೆ ಹೆಚ್ಚಬೇಕು. ಪ್ರಾದೇಶಿಕ ಉಸಿರನ್ನುಳಿಸಿ, ಸಂವಿಧಾನ ಮಾನ್ಯತೆ ಪಡೆದಿರುವ ಭಾಷಾ ಚರ್ಚೆ ಮತ್ತು ಪ್ರಶ್ನೋತ್ತರಗಳ ದಾಖಲೆಯ ಪ್ರತೀಕವಾಗಿ ರಚನೆಗೊಂಡಿರುತ್ತದೆ. ಇದರಲ್ಲಿ ಸೃಜನಶೀಲತೆ ಪ್ರಜ್ಞೆ ಗಿಂತಲೂ ಹೆಚ್ಚು ಸಂಪಾದನ ಪ್ರಜ್ಞೆ ಮುಖ್ಯ ಎನಿಸಿದೆ.

ಇದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ ಪುರುಷೋತ್ತಮ ಬಿಳಿಮಲೆಯವರು ತಮ್ಮ ದೃಢ ನಿಲುವು ಮತ್ತು ಸಾಕಾರಗೊಳ್ಳುವಲ್ಲಿ ಕನ್ನಡ ಆಲೋಚನೆಗಳು ಹೇಗಿರಬೇಕು ಮತ್ತು ಆಡಳಿತಕ್ಕೆ ಇರಬೇಕಾದ ಕನ್ನಡ ದೃಷ್ಟಿಯನ್ನು ತಮ್ಮ ಮನದ ಮಾತಾದ ಅಧ್ಯಕ್ಷೀಯ ನುಡಿಯನ್ನಾಗಿಸಿದ್ದಾರೆ. ಅಲ್ಲದೆ ಸಂವಿಧಾನಿಕ ಚಿಂತನೆಗಳನ್ನು ಗಂಭೀರವಾಗಿ ಚರ್ಚಿಸಿದ್ದಾರೆ. ಇದು ಕೃತಿಗೆ ದಿಕ್ಸೂಚಿಯಾಗಿದೆ. ಭಾಷೆ ಕುರಿತು ಸಂವಿಧಾನಿಕ ಚಿಂತನೆಗಳನ್ನು ಗಂಭೀರವಾಗಿ ಚರ್ಚಿಸಿದ್ದಾರೆ. ಇಲ್ಲಿ ಮಾತಿನ ಖಚಿತತೆ ಎದ್ದು ಕಾಣುತ್ತದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಡಿಯಲ್ಲಿ ಬರುವ ಸಂಸ್ಥೆಗಳ ಕನ್ನಡ ಬಳಕೆಗೆ ಇರುವ ತೊಡಕನ್ನು ಪರಿಶೀಲಿಸಿ, ಸೂಕ್ತ ಸಲಹೆ ನೀಡುವುದರೊಂದಿಗೆ ಇಲ್ಲಿನ ಸರಕಾರದ ಅಧಿಸೂಚನೆ-ಆದೇಶಗಳು ಭಾಷಾ ಅಸ್ತಿತ್ವ ಉಳಿಸಿಕೊಳ್ಳಬೇಕು. ಕಲಿಕಾ ಕೇಂದ್ರಗಳಾಗಿರುವ ಶಿಕ್ಷಣ ಸಂಸ್ಥೆಗಳನ್ನು ತಿದ್ದಿ ಹಾದಿಗೆ ತರುವ ಚಿಂತನೆ ಹೇಳಿದ್ದಾರೆ. ಅದರಲ್ಲೂ ಕನ್ನಡ ಭಾಷಾ ಕಲಿಕಾ ಅಧಿನಿಯಮ -೨೦೧೫ ಮತ್ತು ಕನ್ನಡ ಅಭಿವೃದ್ಧಿ ನಿಯಮ- ೨೦೨೨ ಇವುಗಳ ಕುರಿತು ಹಾಕಿಕೊಂಡ ಜಾಗೃತಿ ಅಭಿಯಾನದ ಮಾತಿದೆ.ಇವುಗಳಿಗಿಂತ ಭಾಷಾ ನೀತಿಯನ್ನು ನಿರ್ಲಕ್ಷಿಸುವ ಮತ್ತು ಕನಿಷ್ಠತೆಯಿಂದ ಕಾಣುವ ಯಾರೇ ಆದರೂ ಅವರನ್ನು ಶಿಕ್ಷೆಗೊಳಪಡಿಸುವ ಕಟ್ಟುನಿಟ್ಟಿನ ಕ್ರಮ ಸೂಚಿಸಿದ್ದು ಕಾಲದ ಅತ್ಯಗತ್ಯ. ಅಷ್ಟೇ ಸ್ತುತ್ಯಾರ್ಹ.



ಸರ್ಕಾರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇರುವುದೇ ಕನ್ನಡತನ ಗಟ್ಟಿಗೊಳಿಸಲು. ಇಂದಿನ ಅಧ್ಯಕ್ಷರು ಭಾಷಾ ಸಬಲೀಕರಣಕ್ಕಾಗಿ ಮಹತ್ವದ ಯೋಜನೆ ತಂದಿದ್ದಾರೆ. ಕನ್ನಡ ಭಾಷಾ ಸಮನ್ವಯ ಗುಣ ಎದ್ದು ಕಾಣುವ ಹಿರಿಯ ಚಿಂತನಾ ಗ್ರಹಿಕೆಯಲ್ಲಿ ‘ಕನ್ನಡಸಿರಿ’ ಹೆಚ್ಚಿಸಿದ, ಕನ್ನಡ ವಿಶ್ಲೇಷಣಾತ್ಮಕ ಹೊರಳು ದಾರಿ ಕಂಡುಕೊಂಡಿರುವ ಮಾತುಗಳಿವೆ. ಮಾತೃ ಭಾಷಾ ಉಸಿರಿನ ಪ್ರತೀಕವಾದ ದೇಸಿ (ಮಾತೃ) ಸಾಂಸ್ಥಿಕ ನೆಲೆಗಳು ನಾಡಿನಲ್ಲಿ ಲಕ್ಷಕ್ಕೂ ಹೆಚ್ಚಿವೆ. ಅವುಗಳ ಮಾತೃಭಾಷೆ ಬಳಕೆ ನೈಜ ಧ್ಯೇಯವಾಗಬೇಕು.ಕನ್ನಡತನವಿರುವ ಲಕ್ಷಕ್ಕೂ ಹೆಚ್ಚಿನ ಸ್ಥಳನಾಮಗಳು ಜತನವಾಗಬೇಕು. ಕನ್ನಡ ಅರಿಯದ ಗಂಟಲೊಳಗೆ ಕನ್ನಡ ಉಸಿರಾಗಿಸಿ, ಕನ್ನಡ ಪ್ರಜ್ಞೆ ಎಚ್ಚರಿಸಿದ್ದಾರೆ. ಕನ್ನಡ ಬದುಕು ಸಾಂಸ್ಕೃತಿಕ ಸಮುಚ್ಚಯವಾಗಿ ಸ್ಥಳೈಕ್ಯ- ಕಾಲೈಕ್ಯಸಾಧಿಸುವ ವಿಧಾನ ವಿವರಿಸಿದ್ದಾರೆ. ವ್ಯಾಪಾರ ಪ್ರಣಿತ ಲಾಭಿಕೋರ ಸಂಸ್ಕೃತಿಯ ಬಡಾಯಿ ಪಕ್ಷಗಳ ಸ್ಪರ್ಧೆಯಲ್ಲಿ ದೇಸಿ ಭಾಷಾ ಸಂಸ್ಕೃತಿ ನಾಶಗೊಳ್ಳಬಾರದೆಂದು, ಅವಕಾಶವಾದಿತನಕ್ಕೆ ಬದುಕು ತೆರೆದುಕೊಂಡರೆ ನಾಚಿಗ್ಗೇಡಿ ಪೋಷಾಕಿನ ಜಾಹೀರಾತಾಗುತ್ತದೆ. ಜಾಗತೀಕರಣ ಭಾಷೆ ಇಂಗ್ಲಿಷ್ ತನ್ನ ಪ್ರಭಾವ ತೋರಿ ಪ್ರಾದೇಶಿಕ ಸಮುದಾಯದ ಉಸಿರಾದ ಸಣ್ಣಪುಟ್ಟ ಜನಾಂಗದ ಭಾಷೆಗಳನ್ನು ಹೊಸಕಿ ಹಾಕುತ್ತಿದೆ. ಇದರಿಂದ ದೇಶಿ ಸಾಂಸ್ಕೃತಿಕ ಸಾಮರಸ್ಯ ಮೂಲೆಗುಂಪಾಗಿ ಬಂಡವಾಳಶಾಹಿಗಳ ಕ್ರೌರ್ಯ ಹೆಚ್ಚಿದ ಸತ್ಯವನ್ನು ಹೇಳಿದ್ದಾರೆ.

ಕನ್ನಡ ಭಾಷಾ ಬಳಕೆದಾರರ ಸಂಖ್ಯೆ ೧೯೭೧ ರಿಂದ ೨೦೧೧ ರವರೆಗೆ ಶೇ ೩.೭೫ ಏರಿಕೆ ಆದರೆ ಕನ್ನಡದಲ್ಲಿ ವಾಸಿಸುವ ತುಳುಭಾಷಿಕರ ಸಂಖ್ಯೆ ಶೇ ೯ ರಷ್ಟು ಏರಿಕೆ ಇದೆ. ಹಿಂದಿ ಶೇ ೪೬ ರಷ್ಟು ಆಗಿದೆ. ಭಾರತದಲ್ಲಿ 172 ಭಾಷೆಗಳು ಅಪಾಯದಲ್ಲಿವೆ ಎಂಬ ಯುನೆಸ್ಕೋ ವರದಿ ಸಾಕ್ಷೀಕರಿಸಿ, ಭಾರತದಲ್ಲಿ ೧೯೪೭ ರ ನಂತರ ೨೫೦ ಕ್ಕೂ ಹೆಚ್ಚು ಭಾಷೆಗಳು ನಾಶವಾಗಿದ್ದು,’ ಭಾಷೆ ಲೋಕದ ದೃಷ್ಟಿ, ಸಂವಹನದಾಚೆ ತತ್ವ ಚಿಂತನೆ ರೂಪಿಸುವ ಅಗಾಧ ಶಕ್ತಿಯಾಗಿದೆ’ ಎಂಬುದನ್ನು ಹೇಳಿದ್ದಾರೆ. ಇದು ಮೂರ್ತ-ಅಮೂರ್ತ ಕಲ್ಪನೆಯೊಂದಿಗೆ ಮೀಮಾಂಸೆ -ಚರ್ಚೆಗಳ ಮುಖೇನ ಸಮುದಾಯದ ತಾಯ್ನುಡಿಯಾಗಿ, ಸಾಂಸ್ಕೃತಿಕ ದೃಷ್ಟಿಕೋನಗಳನ್ನು ದರ್ಶಿಸುತ್ತದೆ. ಇದನ್ನು ಸೂಕ್ಷ್ಮತೆಯಿಂದ ಅರಿವ ಅಗತ್ಯತೆಯಿದೆ. ಇದಕ್ಕೆ ಭಾರತದ ನವೋದಯ ಹರಿಕಾರರ ದರ್ಶನ ಅಗತ್ಯ. ಅದರಲ್ಲೂ ರಾಜಾರಾಮ್ ಮೋಹನ್ ರಾಯ, ದಯಾನಂದ ಸರಸ್ವತಿ, ಅರವಿಂದ, ಅರವಿಂದ್ರನಾಥ್ ಟಾಗೋರ. ನಾರಾಯಣ ಗುರು, ಮಹಾತ್ಮ ಗಾಂಧಿ, ಡಾ ಬಾಬಾ ಸಾಹೇಬ್ ಅಂಬೇಡ್ಕರ್, ಕುವೆಂಪುನಂಥವರು, ಸಮಾಜ ಸುಧಾರಣೆಗೆ ಒಲವುದೋರಿ ಧರ್ಮ, ಶಿಕ್ಷಣ, ರಾಜಕೀ ಕ್ಷೇತ್ರಗಳ ಮೇಲಿನ ಅವರ ನಿರ್ಣಾಯಕ ಪ್ರಭಾವ ಮಾದರಿಯಾಗಿದೆ. ೨೦೦೫ ರಲ್ಲಿ AGT ಮತ್ತು WTO ದ ಒಪ್ಪಂದ ಶಿಕ್ಷಣದಲ್ಲಿ ಭಾಷೆ ಮತ್ತು ತತ್ವಶಾಸ್ತ್ರ ದುಬಾರಿಯಾಗಿ, ಚಿಂತನೆ ವ್ಯವಹಾರಿಕ ದೃಷ್ಟಿ ಪಡೆದು, ಪ್ರಾದೇಶಿಕ ಭಾಷೆಗಳ ಅಸ್ತಿತ್ವಕ್ಕೆ ಹೊಡೆತ ಉಂಟಾಗಿ ಭಾಷಾ ಅಧ್ಯಯನ ತೊಲಗಿ ವ್ಯವಹಾರ ಅಧ್ಯಯನ ಪ್ರಾಧಾನ್ಯತೆ ಪಡೆದ ವಿಷಯವಿದೆ.

ಆಧುನಿಕ ಬಿಕ್ಕಟ್ಟಿನ ಭಾರತ ದೇಶ ಸಂವಿಧಾನಿಕ ನಿಲುವಿನಲ್ಲಿ ಭಾಷೆ ಕುರಿತು ಮಾಡಿದ ಚಿಂತನೆ ಏನು? ನಮ್ಮ ಸಂವಿಧಾನ ಭಾಷೆಗಳ ಬಗ್ಗೆ ಏನ್ಹೇಳಿದೆ ? ರಾಷ್ಟ್ರೀಯ ನಿಲುವು ಮತ್ತು ಪ್ರಾದೇಶಿಕ ನಿಲುವನ್ನು ಅರ್ಥೈಸಿಕೊಳ್ಳುವ ವಿಧಾನ ಮಹತ್ವದ್ದೆನ್ನುವ ಆಶಯದಲ್ಲಿ ಮೂಡಿಬಂದಿದೆ. ಸಂವಿಧಾನದ ಪರಿಚಯ, ಸಾಂವಿಧಾನ ರೂಪಿತ ಶ್ರಮ ಮತ್ತು ಸಂಸದೀಯ ವ್ಯಕ್ತಿತ್ವಗಳ ಪರಿಚಯ ತಿಳಿಸುವುರೊಂದಿಗೆ ಸಂವಿಧಾನ ಪೀಠಿಕೆ (preambel) : ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಾರ್ವಭೌಮತ್ವ, ನ್ಯಾಯ, ಜನತಂತ್ರ, ಧರ್ಮನಿರಪೇಕ್ಷೆ -ಗಣರಾಜ್ಯದ ಮಹತ್ವ, ರಾಜಕೀಯ ಮತ್ತು ಅಧಿಕಾರದ ಸಾಮಾನ್ನೀಕರಣ ಸಾಮಾನ್ಯರಿಗೆ ತಲುಪುವ ಆಶಯಗಳನ್ನು ಮೊದಲ ಭಾಗದಲ್ಲಿಯೇ ಅರ್ಥೈಸಲಾಗಿದೆ.

ಭಾಷಾ ಚಿಂತನೆಗೆ ಪೂರಕ ಆಕರ- ಕುವೆಂಪು ಭಾಷಾ ಪ್ರಾಧಿಕಾರ ಪ್ರಕಟಿಸಿದ “ಸಂವಿಧಾನ ರಚನಾ ಸಭೆಯ ಚರ್ಚೆಗಳು” ಎಂಬ ಹತ್ತು ಸಂಪಟಗಳ ನೆರವು ಮತ್ತು ೧೯೪೯ ಸೆಪ್ಟೆಂಬರ್ ೧೨ ರಿಂದ ೧೪ ವರೆಗೆ ಮೂರು ದಿನಗಳ ಕಾಲ ನಡೆದ ಸಂಸದೀಯ ಸಭೆ ಮುಖ್ಯ ವಸ್ತುವಾಗಿದೆ. ಭಾಷೆ, ರಾಷ್ಟ್ರೀಭಾಷೆ, ಅಧಿಕೃತ ಭಾಷೆಗಳ ಚರ್ಚೆ ನಡೆದು, ಮೂರು ರೀತಿ-ಭಾಷೆ, ಲಿಪಿ ಮತ್ತು ಅಂಕಿ ಅಂಶಗಳು ಶಾಸನವಾದ ಮಾಹಿತಿಯಿದೆ. ಡಾ ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಸತ್ತಿನ ಚರ್ಚೆ, ಅರ್ಥಪೂರ್ಣ ಅನುಚ್ಛೇದಗಳ, ಭಾಷಾ ವ್ಯಾಖ್ಯಾನದ ಸಂಭಾಷಣಾತ್ಮಕ ಮೌಲ್ಯವಿದೆ. ಚರ್ಚೆಯಲ್ಲಿ ಪಾಲ್ಗೊಂಡ ಮಹಾವೀರ್ ತ್ಯಾಗಿ, ಮೌಲಾನ ಹಸ್ರತ್, ಸೇಠ ಗೋವಿಂದ ದಾಸ್, ಬಾಲಕೃಷ್ಣ ಶರ್ಮ, ರವಿಶಂಕರ್ ಶುಕ್ಲ ರಂಥ ಸಂಸದೀಯ ಪಟುಗಳ ಸಂವಾದವಿದೆ. ಭಾಷೆ, ರಾಷ್ಟ್ರ ಭಾಷೆ, ಅಧಿಕೃತ ಭಾಷೆ ಇವುಗಳ ಚರ್ಚೆ ನಡೆದು, ಪ್ರಥಮವಾಗಿ ಭಾರತಕ್ಕೆ ರಾಷ್ಟ್ರಗೀತೆ,ರಾಷ್ಟ್ರ ಲಾಂಛನ, ರಾಷ್ಟ್ರ ಧ್ವಜ ಕುರಿತು ಒಮ್ಮತ ಮೂಡದಿರುವ ಕಾರಣವುಂಟು. ಇದಕ್ಕಾಗಿ ರಾಷ್ಟ್ರಭಾಷೆಯನ್ನು ನಿಗದಿಪಡಿಸುವ ಪ್ರಸ್ತಾವನೆ ಕೈ ಬಿಡಲಾಗುತ್ತದೆ. ಇನ್ನು ದೇಶದ ಆಡಳಿತಕ್ಕಾಗಿ ಯಾವ ಭಾಷೆ ಅಳವಡಿಸಿಕೊಳ್ಳಬೇಕು; ರಾಜ್ಯ-ರಾಜ್ಯಗಳು ತಮ್ಮ ಆಡಳಿತಕ್ಕಾಗಿ ಯಾವ ಭಾಷೆ ಆಯ್ಕೆ ಮಾಡಿಕೊಳ್ಳುವುದು? ಅದರ ಸೂತ್ರ ಯಾವುದು? ರಾಜ್ಯ -ರಾಜ್ಯಗಳ ನಡುವೆ ಇದರಲ್ಲಿ ಹಿಂದಿ, ಹಿಂದುಸ್ತಾನಿ,ಸಂಸ್ಕೃತ, ಬಂಗಾಳಿ, ತೆಲುಗು ಇತ್ಯಾದಿ ಭಾಷೆಗಳು ತಮ್ಮ ರುಜುವಾತು ಪ್ರತಿಪಾದಿಸುತ್ತವೆ. ನಂತರದ ಸಮಸ್ಯೆ ಯಾವ ಲಿಪಿಯನ್ನು ಬಳಸಬೇಕು? ದೇವನಾಗರಿ ಬಳಸಬೇಕೇ?, ಉರ್ದು ಭಾಷಾ ಲಿಪಿ ಬಳಸಬೇಕೆ ?, ಅಥವಾ ರೋಮನ್ ಲಿಪಿಯನ್ನು ಅಥವಾ ಅಂತರಾಷ್ಟ್ರೀಯ ಧ್ವನಿ ಲಿಪಿಯನ್ನು ಸ್ವೀಕರಿಸಬೇಕೆ? ಎಂಬ ಚರ್ಚೆ ನಡೆಯುವುದು. ಮೂರನೇದಾಗಿ ಅಂಕಿಗಳ ವಿಚಾರ- ಇದಕ್ಕೆ ಹಿಂದಿ ಭಾಷೆಯ ಅಂಕಿ ಅಂಶವನ್ನು ಅಥವಾ ಭಾರತ ಮೂಲದ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಇಂಗ್ಲಿಷ್ ಸಂಖ್ಯೆಯನ್ನೊ? ಇಂಥ ಚರ್ಚೆ ನಡೆದ ವಿಸ್ತೃತ ಮಾಹಿತಿ ಇದೆ. ಭಾಷೆಗೆ ಸಂಬಂಧಿಸಿದ ಅನುಚ್ಛೇದಗಳನ್ನು ಪರಿಶೀಲಿಸುವ ವಿಷಯ ಮುಂದಿಟ್ಟಾಗ, ಅಧ್ಯಕ್ಷರು ‘ನಾವು ತೀರ್ಮಾನಿಸುವ ಅಂಶವನ್ನು ಇಡೀ ದೇಶವು ಒಪ್ಪುವಂತಿರಬೇಕು ಮತ್ತು ಮೃದುವಾಗಿರಬೇಕು’ ಎಂಬ ಅರಿವನ್ನು ಸಂಸದರಲ್ಲಿ ಎಚ್ಚರಿಸುತ್ತಾರೆ. ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಇಂಗ್ಲಿಷ್ ನ ಸ್ಥಾನದಲ್ಲಿ ಪ್ರತಿಷ್ಠಾಪಿಸುವ ನಿರ್ಣಯ ಸ್ವೀಕರಿಸಿದಮೇಲೆ,ಅದರ ಅಂಗವಾಗಿ ಎರಡು ನಿರ್ಣಯಗಳನ್ನು ಸ್ವೀಕರಿಸಲಾಯಿತು. ಒಂದು ಇಂಗ್ಲಿಷನ್ನು ತತ್ತಕ್ಷಣ ತ್ಯಜಿಸುವುದು ಅಸಾಧ್ಯ ಎಂದು, ಇಲ್ಲಿ ಹಿಂದಿ ಭಾಷೆ ಕೇವಲ ಭಾರತೀಯ ಭಾಷೆ ಎಂಬ ಕಾರಣಕ್ಕಾಗಿ ಅಲ್ಲ. ಅದು ನಮ್ಮ ವ್ಯಕ್ತಿತ್ವ ಮತ್ತು ವಿಚಾರಗಳನ್ನು ಸಮರ್ಥವಾಗಿ ಅಭಿವ್ಯಕ್ತಗೊಳಿಸಲು ಒಂದು ಸೂಕ್ತ ಮಾಧ್ಯಮ ಎಂಬ ದೃಷ್ಟಿಯಿಂದ. ಭಾರತ ಒಕ್ಕೂಟದಲ್ಲಿ ಎಲ್ಲಾ ರೀತಿಯಲ್ಲೂ ಇಂಗ್ಲೀಷಿನ ಸ್ಥಾನದಲ್ಲಿ ಪ್ರತಿಷ್ಠಾಪಿತವಾಗುವವರೆಗೂ ಇಂಗ್ಲಿಷನ್ನು ಹಲವು ವರ್ಷಗಳ ವರೆಗೆ ಕಾಪಾಡಬೇಕೆಂದು, ಅದಕ್ಕಾಗಿ (ಮುಂದಿನ 15 ವರ್ಷಗಳ) ಇಂಗ್ಲಿಷನ್ನೇ ಉಪಯುಕ್ತವಾಗಿರುವ ಎಲ್ಲಾ ಕ್ಷೇತ್ರಗಳಲ್ಲಿ ಮುಂಚಿನಂತೆಯೇ ಮುಂದುವರಿಸಲು ತೀರ್ಮಾನಿಸುತ್ತಾರೆ. ಸಂವಿಧಾನದ ಪೀಠಿಕೆಯಲ್ಲಿ ಉಪಯೋಗಿಸಲು ಮುಂದಿನ ನಿರ್ಣಯವನ್ನು ಕೈಗೊಳ್ಳಲಾದ ಚರಿತ್ರೆ ಇದೆ. ಅಂಕಿಗಳ ಬಗ್ಗೆ, ರಾಜ್ಯ ಭಾಷೆಗಳ ಬಗ್ಗೆ ಅವಲೋಕಿಸಿ, ಒಂದು ರಾಜ್ಯದ ಆಡು ಭಾಷೆಯು ಆ ರಾಜ್ಯದ ಆಡಳಿತದ ವ್ಯವಹಾರ ಭಾಷೆಯಾಗಿರಬೇಕು: ಮತ್ತು ಅಂತರಾಜ್ಯ ವ್ಯವಹಾರ ಮತ್ತು ರಾಜ್ಯಗಳ ಕೇಂದ್ರದೊಂದಿಗೆ ವ್ಯವಹಾರವು, ಆದರೆ ಎರಡು ರಾಜ್ಯಗಳ ನಡುವೆ ಅಂತರ ರಾಜ್ಯ ವ್ಯವಹಾರವು ಹಿಂದಿಯಲ್ಲಿ ನಡೆಸತಕ್ಕದ್ದು ಎಂಬ ಒಪ್ಪಂದವಿದೆ. ರಾಜ್ಯಗಳ ನಡುವಿನ ವ್ಯವಹಾರ ಹಿಂದಿಯಲ್ಲಿ ನಡೆವ ಇಂಥ ನಿಬಂಧನೆಗಳನ್ನಿಟ್ಟುಕೊಂಡು ಇಂಗ್ಲಿಷ್ ಭಾಷೆ ಬಳಸತಕ್ಕದ್ದೆಂದು ನಿರ್ಣೈಸಿತು. ವಿಧಾನಸಭೆ, ನಮ್ಮ ದೇಶದ ಉಚ್ಚನ್ಯಾಯಾಲಯಗಳಲ್ಲಿ ಉಪಯೋಗಿಸುವ ಭಾಷೆ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ ಮಾಹಿತಿ ಇದೆ. ಕೊನೆಗೆ ಸಂಸತ್ತಿನ ಕಲಾಪಗಳಲ್ಲಿ ಚರ್ಚೆಗೆ ಹಿಂದಿಯೂ, ಅದೇ ಉದ್ದೇಶಕ್ಕಾಗಿ ರಾಜ್ಯಗಳ ವಿಧಾನಸಭೆಗಳಲ್ಲಿ ಆಡು ಭಾಷೆಯನ್ನು ಉಪಯೋಗಿಸುವುದು. ಅನುಚ್ಛೇದಗಳ ಪಾಠ ಮತ್ತು ಆ ಪಾಠದ ನ್ಯಾಯಾಲಯಗಳಲ್ಲಿನ ವ್ಯಾಖ್ಯೆಗಳ ವಿಷಯದಲ್ಲಿ, ಸಮರ್ಪಕವಾಗಿ ಉಳಿಸಿಕೊಳ್ಳಬೇಕಾಗುತ್ತದೆ. ಈ ದೆಸೆಯಲ್ಲಿ ಇಂಗ್ಲಿಷ್ ಭಾಷೆಯನ್ನು ನಮ್ಮ ಶಾಸನಗಳ ಪ್ರಸ್ತಾವನೆಗೆ ಮತ್ತು ವಿಧೇಯಕಗಳಿಗೆ ಅಥವಾ ಅನುಚ್ಛೇದಗಳಿಗೆ ,ಕಾನೂನು, ಆದೇಶಗಳಿಗೆ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನ್ಯಾಯ ಸಮೀಕ್ಷಾ ರೂಪದಲ್ಲಿರುವ ವ್ಯಾಖ್ಯೆಗಳಿಗೆ, ಎಲ್ಲದರ ಭಾಷೆಯಾಗಿ ಮುಂಬರುವ ಅನೇಕ ವರ್ಷಗಳ ಕಾಲ ಇಂಗ್ಲಿಷ್ ಮುಂದುವರಿಯಬೇಕು ಎಂಬ ಅಭಿಪ್ರಾಯ ಮಂಡಿತ ವಿಷಯ ಮೊದಲ ಭಾಗದಲ್ಲಿಯೇ ಬಂದಿದೆ. 15 ವರ್ಷ ವೆಂದು ಒಪ್ಪಿಕೊಂಡ ಇಂಗ್ಲಿಷ್ ಭಾಷೆ, 63 ವರ್ಷ ತನ್ನ ಜೀವಂತಿಕೆಯನ್ನು ಆಡಳಿತದಲ್ಲಿ ಉಳಿಸಿದ್ದು ಆಶ್ಚರ್ಯ.

ಒಳನೋಟದಲ್ಲಿ ಅಧ್ಯಾಯ ಮೂರರಿಂದ ಒಂಬತ್ತರವರೆಗೆ ಶಾಸನಬದ್ಧ ಆಲೋಚನೆಗಳು ಮೂಡಿಬಂದಿವೆ. ಅಧಿಕೃತ ಭಾಷೆಗಳ ಕುರಿತು ಸಂವಿಧಾನಿಕ ಆಲೋಚನೆ ಹೊಸ ಭಾಗದಲ್ಲಿ 14 ಎ, ಅನುಚ್ಛೇದ, ಕೇಂದ್ರ ಭಾಷೆ-301 ಎ, ಭಾಷೆ, ಲಿಪಿ, 301 -ಬಿ, ರಾಷ್ಟ್ರಪತಿಯವರು ಸಂವಿಧಾನ ಆರಂಭದ ಐದರಿಂದ ಹತ್ತು ವರ್ಷ ವಿವಿಧ ಭಾಷೆಗಳ ಪ್ರತಿನಿಧಿಗಳನ್ನು ಸದಸ್ಯರಾಗಿ ನೇಮಿಸಿ ಆಯೋಗ ರಚಿಸಬೇಕು. ಅನುಚ್ಛೇದ ಎರಡು ಪ್ರಾದೇಶಿಕ ಭಾಷೆಗಳು, ರಾಜ್ಯದ ಅಧಿಕೃತ ಭಾಷೆ ಅಥವಾ ಆಡಳಿತ ಭಾಷೆ, 301-ಸಿ ಡಿ ಇ, ಅನುಚ್ಛೇದ -3 ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯ ಇತ್ಯಾದಿಗಳ ಭಾಷೆ, 301-ಎಫ್ ಇಲ್ಲಿ ಉಪಯೋಗಿಸುವ ಭಾಷೆ ಕುರಿತು, ಭಾಷೆಗಳ ಅನುಚ್ಛೇದ -4 ನಿರ್ದೇಶನಗಳು, 301-ಹೆಚ್ ಪ್ರತಿ ಮಾನವನ ತೊಂದರೆ ನಿವಾರಣೆಗೆ, ಭಾಗ-14ರ ಎ. ದಲ್ಲಿ 1)ಒಕ್ಕೂಟ ಭಾಷೆ 2) ಪ್ರಾದೇಶಿಕ ಭಾಷೆ 3)ನಿರ್ದೇಶತತ್ವದ ಮಾಹಿತಿ ಇದೆ.

ಭಾರತೀಯ ಪರಿಶಿಷ್ಟ ಭಾಷೆಗಳು ಮಾಹಿತಿ, ಒಕ್ಕೂಟದ ಭಾಷೆಯಲ್ಲಿ ಅ-343 ರಿಂದ 351 ಮತ್ತು 394ನೇ ಅನುಚ್ಛೇದಗಳು ವಿವರವಿದೆ. ಅ- 344 ರಾಜ್ಯ ಭಾಷೆಯ ಬಗ್ಗೆ ಆಯೋಗ ಮತ್ತು ಸಂಸತ್ ಸಮಿತಿ, ಅ-365 ರಾಜ ಭಾಷೆ ಅಥವಾ ರಾಜ್ಯ ಭಾಷೆಗಳು, ಹಾಗೆ ಅ-346 ಮತ್ತು 47ನೆಯ ಅನುಚ್ಛೇದ ಉಪಬಂಧಗಳಿಗೆ ಒಳಪಟ್ಟು, ಕಾನೂನಿನ ಮೂಲಕ ರಾಜ್ಯದಲ್ಲಿ ಬಳಕೆಯಲ್ಲಿರುವ ಯಾವುದೇ ಒಂದು ಭಾಷೆಯನ್ನು ಅಥವಾ ಹೆಚ್ಚು ಭಾಷಾ ಅಂಗೀಕಾರ, ಅ-347 ಒಂದು ಸಮುದಾಯ ಒಂದು ವರ್ಗ ಅಥವಾ ಭಾಷೆಗಾಗಿ ವಿಶೇಷ ಉಪಬಂಧ, ಹೀಗೆ ಇದು ಭಾಷಾ ಆಯೋಗ ದತ್ತಾಂಶದಂತಿದೆ.

ಭಾರತದ ಭಾಷಾ ಆಯೋಗ 1955: ಅವಲೋಕನ-ಕರ್ತವ್ಯಗಳು, ಇಂಗ್ಲೀಷನ್ನು ಸಾರ್ವತ್ರಿಕ ಮಾಧ್ಯಮವೆಂದು ಪರಿಗಣಿಸುವುದು ಸಮಂಜಸವಲ್ಲ. ವಿದೇಶಿ ಭಾಷಾ ಬಳಕೆ ಒಳ್ಳೆಯದಲ್ಲ. ಪ್ರಾಥಮಿಕ ಶಿಕ್ಷಣದಲ್ಲಿ ಭಾರತೀಯ ಭಾಷಾ ಪರಿಚಯ ಅತ್ಯಗತ್ಯ. ವಿದ್ಯಾರ್ಥಿ ಇಚ್ಚಿತ ಭಾಷೆಯಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ದೊರೆಯಬೇಕು. ಇದಕ್ಕೆ 30 ಸದಸ್ಯರ ಆಯೋಗ ವಿರಬೇಕು. 20 ಜನರು ಎರಡೂ ಸದನಕ್ಕೆ ಆಯ್ಕೆಯಾದ ಸದಸ್ಯರು ಮತ್ತು 10 ಜನ ರಾಜ್ಯ ಮಂಡಳಿಯಿಂದ ಆಯ್ಕೆಮಾಡುವ ನಿಯಮ. ರಾಜ್ಯಗಳ ಪುನರ್ ವಿಂಗಡಣೆ ವಿಷಯ ಹಿನ್ನೆಲೆ, ತಾರ್ಕಿಕತೆ, ರಾಜ್ಯ ಪುನರ್ ವಿಂಗಡಣೆಯ ಸಂಬಂಧಿಸಿದ ಆಯೋಗಗಳ ಭಾಷೆಗಳ ಕುರಿತು ಕೇಂದ್ರದ ಅಧಿನಿಯಮಗಳು, ಅಧಿಕೃತ ಭಾಷಾ ಅಧಿನಿಯಮ ಗಳು -1963, ಸಂಖ್ಯೆ -19, ಅಧಿಸೂಚನೆ 2007 ಮತ್ತು 2011, ಭಾಷೆಗಳ ಕುರಿತು ರಾಜ್ಯದ ಅಧಿನಿಯಮ, ಕರ್ನಾಟಕ ಅಧಿನಿಯಮ 1963-26, ಕನ್ನಡ ಅಭಿವೃದ್ಧಿ ಕುರಿತು ರಾಜ್ಯದ ಇತರ ಅಧಿನಿಯಮಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯಮ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯ ಅಧಿಸೂಚನೆ. ಅಕ್ಟೋಬರ್ 1-1994 ಸಂಖ್ಯೆ -28 ಇದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅದಿನಿಯಮ-1994 ಎಂದು ಕರೆಯುವುದು. ಪ್ರಾಧಿಕಾರ ರಚನೆ. ಮೂರು ವರ್ಷಕ್ಕೆ ಅನ್ವಯಿಸಿ ಸೇವೆ- ಅಧ್ಯಕ್ಷರು, ಸದಸ್ಯರ ಅರ್ಹತೆ-ಅನರ್ಹತೆ ನಿಯಮಗಳು, ಯೋಜನೆ, ಕಾರ್ಯ ಉದ್ದೇಶ, ಮಾಹಿತಿ ಸಲಹೆ, ಇದರೊಂದಿಗೆ ಕನ್ನಡ ಸಮಗ್ರ ಭಾಷೆ ಅಧಿನಿಯಮ- 2022 ರ ವಿವರದಂಥ ಮಾಹಿತಿ ಬಂದದಿದೆ. ಕೊನೆಯಲ್ಲಿ ಸಂವಿಧಾನ ರಚನಾ ಸಂದರ್ಭದಲ್ಲಿ ನವಂಬರ್ 25 ರ 1949 ರ ರಚನಾ ಸಭಾ ಭಾಷಣ ಡಾ ಬಾಬಾ ಸಾಹೇಬ್ ಅಂಬೇಡ್ಕರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಡ್ರಾಫ್ಟಿಂಗ್ ಕಮಿಟಿಯನ್ನು ಟೀಕಿಸಿದ ಮನಸ್ಸುಗಳಿಗೆ ಸರಿಯಾಗಿ ಬರೆ ಕೊಟ್ಟಂತೆ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಉತ್ತರವಿದೆ. ಈ ಗ್ರಂಥವು‌ ನಮ್ಮ ಸ್ಪರ್ಧಾತ್ಮಕ ಜ್ಞಾನಕ್ಕೆ ಮಾಹಿತಿ ಕೈಪಿಡಿಯಾಗಿ ಸ್ವೀಕರಿಸಲು ಯೋಗ್ಯ. ಸಂವಿಧಾನ ಭಾಷಾ ಚಿಂತನೆ ಮಡುಗಟ್ಟಿದ ವಿಷಯವಿದೆ. ಇದನ್ನು ವಾಸ್ತವ ಸೃಜನತ್ವಕ್ಕೆ ಅನ್ವಯಿಸಿ ರಚನೆ ಮಾಡಿದ್ದರೆ ಇನ್ನಷ್ಟು ಸಾರ್ಥಕವೆನಿಸುತ್ತಿತ್ತು ಆದರೂ ಡಾ ಸಂತೋಷ ಅವರ ಸಾಧನೆ ಅಭಿನಂದನಾರ್ಹ.

ಡಾ ಸಣ್ಣವೀರಣ್ಣ ದೊಡ್ಡಮನಿ
ಪ್ರಾಧ್ಯಾಪಕರು, ತೊಗಲುಗೊಂಬೆ
ಮನೆ ಸಂಖ್ಯೆ 07/24
ಕಾಂಚನೇಶ್ವರ ಆವರಣದ ಹತ್ತಿರ
ಗುಳೇದಗುಡ್ಡ 587203
ಬಾಗಲಕೋಟೆ ಜಿಲ್ಲೆ
-587203









Leave a Reply