ಸಪ್ತಪದಿ ಎಂದರೆ ಸಾಮಾನ್ಯವಾಗಿ ನಾವು ಏಳು ಹೆಜ್ಜೆ ಇಡುವುದು ಎಂದರ್ಥ ಆದ್ರೆ ಈ ಸಪ್ತಪದಿಯನ್ನು ನವದಂಪತಿಗಳು ಏಳೇಳು ಜನ್ಮದ ಸಂಬಂಧವನ್ನು ಬೆಸೆಯುವ ಬಂಧವಾಗಿದೆ. ಮದುವೆ ಎಂದರೆ ಸಂಭ್ರಮ ಸಡಗರದಿಂದ ಕೂಡಿರುತ್ತದೆ ಹಾಗೂ ಎರಡು ಕುಟುಂಬಗಳ ಹಿರಿಯರು ಅಕ್ಷತೆಯನ್ನಿಟ್ಟು ವಧುವರರಿಗೆ ಆಶೀರ್ವದಿಸಿ ಹರಸುವರು. ಏಳು ಹೆಜ್ಜೆಗಳನ್ನು ಇಟ್ಟು ಏಳೇಳು ಜನ್ಮಗಳಲ್ಲೂ ಒಂದಾಗುವುದು ಎಂದಾರ್ಥ. ಸಪ್ತಪದಿ ಎಂದರೆ ಏಳು ಹೆಜ್ಜೆ ಗಳು ಎಂದು ಅರ್ಥ. ಮದುಮಕ್ಕಳು ಅಗ್ನಿಕುಂಡವನ್ನು ಏಳು ಸುತ್ತು ಬರುವುದು ಎಂಬ ಅರ್ಥವಿದೆ.
ಹಿಂದೂ ಸಂಪ್ರದಾಯದ ಪ್ರಕಾರ ಪ್ರತಿಯೊಬ್ಬರೂ ಆಚಾರ,ವಿಚಾರ,ಸಂಸ್ಕೃತಿ ಸಂಪ್ರದಾಯ ಬೇರೆ ಇದ್ದರೂ ಸಪ್ತಪದಿ ತುಳಿದು ಮದುವೆ ಆಗುವುದು ಸರ್ವೇ ಸಾಮಾನ್ಯ.ಅಂತಹ ಮದುವೆಗಳು ಅತೀ ಹೆಚ್ಚು ಕಾಲ ಸುಖವಾಗಿ ಸಂಸಾರ ನಡೆಸುತ್ತಾರೆ.ಇದಕ್ಕೆ ನಾವೆಲ್ಲರೂ ಅಗ್ನಿಸಾಕ್ಷಿಯಾಗಿ ಮದುವೆ ಮಾಡಿಕೊಂಡಿದ್ದು ಎನ್ನುವುದು.
ಮದುವೆ ಎಂದರೆ ಒಂದು ದಿನದ ಸಂಭ್ರಮವಲ್ಲ!ಮೊದಲಿನ ಕಾಲದಲ್ಲಿ ಹೆಣ್ಣು ಮಕ್ಕಳು ಇದ್ದ ಕಡೆಗೆ ಬಂದು ಅವರಿಗೆ ದುಡ್ಡು ಕೊಟ್ಟು ಮದುವೆ ಮಾಡಿಕೊಂಡು ಹೋಗ್ತಿದ್ರಂತೆ.
ಎಲ್ಲ ಕಾರ್ಯ ಕ್ರಮಗಳು ಅವರರವರ ಸಂಪ್ರದಾಯದಂತೆ ಮಾಡಿಕೊಡಲಾಗುತ್ತದೆ.
ಮೊದಲನೆಯ ಸಂಗಮವೆಂದರೆ ಎರಡು ಮನೆಗಳ ಮನಸ್ಸುಗಳ ಜೊತೆಯಾಗೋದು , ಮೂರು ಗಂಟಿನ ಬಂಧದಿಂದ ಅನುಬಂಧ ಶುರುವಾಗೋದು , ಹಿರಿಯರ ಆಶೀರ್ವಾದ ಮತ್ತು ಕಿರಿಯರ ಪ್ರೀತಿ , ಐದು ಪಂಚಭೂತಗಳ ಸಾಕ್ಷಿಯಾಗಿ ಮತ್ತು ಬಂದು ಭಾಂದವರು ಹೊಟ್ಟೆ ತುಂಬಾ ರುಚಿಯ ಮದುವೆ ಭೋಜನ ಒಟ್ಟಿಗೆ ಸೇರುವುದೇ ಈ ಮದುವೆ ಸಂಭ್ರಮ!!.
ಹೌದು!
ಮದುವೆ ಎಂದರೆ ಏಳು ಹೆಜ್ಜೆಗಳನ್ನು ಏಳೇಳು ಜನ್ಮಗಳಿಗೆ ಒಟ್ಟಿಗೆ ಕೂಡಿಕೊಂಡು ಹಾಕುವುದು ಎಂದು ಅರ್ಥ. ಮದುವೆಯ ವಿಧಿ ವಿಧಾನಗಳು ವೈದಿಕ ಧರ್ಮದಲ್ಲಿ ಮಾತ್ರ ಕಾಣಿಸುತ್ತವೆ. ಮದುವೆಯ ವಿಧಿ ವಿಧಾನಗಳಲ್ಲಿ ಹೇಳುವ ಮಂತ್ರಗಳು ಮಂಗಳಕರವಾಗಿ, ಅರ್ಥಗರ್ಭಿತವಾಗಿ, ಭಾವಯುಕ್ತವಾಗಿ, ಪ್ರತಿಜ್ಞಾಪೂರ್ವಕವಾಗಿ ಇರುವುದನ್ನು ಕಾಣುತ್ತೇವೆ. ಹೆಂಡತಿ ಎಂದರೆ, ಗಂಡನ ಪ್ರಾಣದಲ್ಲಿ, ಸ್ನೇಹದಲ್ಲಿ, ಜೀವನದಲ್ಲಿ ಕೊನೆಗೆ ಆತ್ಮದಲ್ಲಿಯೂ ಅರ್ಧಭಾಗವೆಂದು ಶ್ರುತಿಗಳು ಹೇಳುತ್ತವೆ.
ಭಾರತದ ನಾನಾ ಭಾಷೆಯ ಜನರಿರುವ ವೈವಿಧ್ಯಮಯವಾದ ದೇಶ. ಇಲ್ಲಿ ಪ್ರತಿಯೊಂದು ಸಮುದಾಯದ ಆಚಾರ-ವಿಚಾರಗಳು ಸಂಪೂರ್ಣ ಭಿನ್ನವಾಗಿರುತ್ತದೆ. ಮದುವೆಯನ್ನೂ ತಮ್ಮ ಸಂಪ್ರದಾಯದಂತೆ ಮಾಡುತ್ತಾರೆ. ಆದರೆ ಪ್ರತಿಯೊಂದು ಹಿಂದೂ ಸಮುದಾಯದ ಮದುವೆಯಲ್ಲಿ ಮದುವೆ ಹೆಣ್ಣು-ಗಂಡು ಸಪ್ತಪದಿ ತುಳಿಯಲೇಬೇಕು. ಬಾಲ್ಯ, ಬ್ರಹ್ಮಚರ್ಯಗಳನ್ನು ದಾಟಿದಮೇಲೆ ಯೋಗ್ಯ ಸಂಗಾತಿಯನ್ನು ಆರಿಸಿಕೊಂಡು ಮುಂದಿನ ಇಡೀ ಆಯುಷ್ಯವನ್ನು ಕಳೆಯುವ ವಿವಾಹದಲ್ಲಿ ವಧುವರರು ದಂಪತಿಗಳಾಗಿ ಒಬ್ಬರಿಗೊಬ್ಬರು ಅನೇಕ ವಿಧವಾದ ವಚನ, ಪ್ರಮಾಣಗಳನ್ನಿತ್ತು ಆ ಮೂಲಕ ಸ್ಥಿರ ಹಾಗೂ ಸುಖೀ ಸಹಜೀವನಕ್ಕೆ ನಾಂದಿ ಹಾಡುವುದು.
ಮಾಂಗಲ್ಯಮ್ ತಂತುನಾನೇನಾ ಮಮ ಜೀವನ ಹೇತುನಾಕಂಟೇ ಭಧ್ನಾನಿ ಸುಭಗೆ ತ್ವಮ್ ಜೀವ ಶರದಾ ಶತಮ್!!
ಎಂಬ ಮೇಲಿನ ಮಂತ್ರಾಘೋಷದೊಂದಿಗೆ ವಧುವಿನ ಕೊರಳಲ್ಲಿ ಮಾಂಗಲ್ಯವನ್ನು ಕಟ್ಟಿ ಅವಳನ್ನು ಆಜೀವನ ಸಹಧರ್ಮಿಣಿಯಾಗಿಸಿಕೊಳ್ತಾನೇ ಪತಿ.
ಮುಂದಿನ ಶಾಸ್ತ್ರವಾದ ‘ಸಪ್ತಪದಿ’ ಗಳಲ್ಲಿ ಅವಳು ನಡೆಯುವ ಏಳು ಹೆಜ್ಜೆಗಳಲ್ಲೂ ತಮ್ಮ ಬದುಕಿನ ಅತ್ಯಂತ ಪ್ರಭಾವಶಾಲಿಯಾದ ವಚನಗಳನ್ನು ಕೊಡುವ ಮಂತ್ರಗಳನ್ನು ಇಬ್ಬರೂ ಪ್ರಮಾಣಪೂರ್ವಕವಾಗಿ ನುಡಿಯುವ ಅನನ್ಯ ಸಂಪ್ರದಾಯ ಹಿಂದೂ ವಿವಾಹ ಸಂಸ್ಕಾರದ ಮುಖ್ಯ ಅಂಶವಾಗಿದೆ.
ಪತಿ ಪತ್ನಿಯರು ತಮ್ಮ ಮುಂದಿನ ಜೀವನವನ್ನು ಸುಖಮಯವಾಗಿ ಕಳೆದು ಸಾರ್ಥಕಗೊಳಿಸಿಕೊಂಡು ಸಂತಾನಾಭಿವೃದ್ಧಿ ಮಾಡಿ, ವಂಶವನ್ನು ಉದ್ಧರಿಸಿ ಕೊನೆಗೆ ಮೋಕ್ಷದತ್ತ ಸಾಗುವ ಪಾಠವನ್ನು ಹೇಳಿಕೊಡುವುದೇ ಸಪ್ತಪದಿ ಮಂತ್ರಗಳು.
ಮೊದಲ ಸುತ್ತು:- ದಾಂಪತ್ಯ ಜೀವನದಲ್ಲಿ ಎದುರಿಸುವಂತಹ ಯಾವುದೇ ಸಮಸ್ಯೆಗಳನ್ನು ಪರಸ್ಪರರು ಹೊಂದಾಣಿಕೆ ಮಾಡಿಕೊಂಡು ನಿಭಾಯಿಸುತ್ತೇವೆ ಎಂದು ಶಪಥ ಮಾಡಿಕೊಳ್ಳುತ್ತಾರೆ. ವರನು ವಧುವಿನಿಂದ ಆಹಾರವನ್ನು ಪಡೆಯುವ ಬೇಡಿಕೆಯನ್ನು ಇಟ್ಟರೆ ವಧು ತನ್ನ ಹಾಗೂ ತಮ್ಮ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಪಡೆದುಕೊಳ್ಳಬೇಕೆಂಬ ಆಶ್ವಾಸನೆಯನ್ನು ಪಡೆಯುತ್ತಾಳೆ. ಇಲ್ಲಿ ವಧುವು ಅನ್ನಪೂರ್ಣೆ ಹಾಗೂ ವರನು ಯಜ್ಞೇಶ್ವರನು ಆಗಿರುತ್ತಾನೆ.
ಎರಡನೇ ಸುತ್ತು:-ಸುಖ ಜೀವನ ಹಾಗೂ ಮಗುವನ್ನು ಪಡೆಯಬೇಕೆಂದು ವಧುವಿನಿಂದ ವರನು ಮಾತನ್ನು ಪಡೆದುಕೊಳ್ಳುತ್ತಾನೆ. ಈ ಮಾತನ್ನು ಸಂತೋಷದಿಂದ ಒಪ್ಪಿಕೊಳ್ಳುವ ವಧು, ವರನಿಂದ ಕೇವಲ ಪ್ರೀತಿಯನ್ನು ಬಯಸುತ್ತಾಳೆ. ಇಲ್ಲಿ ವಧುವರರು ರತಿಮನ್ಮಥರಾಗುತ್ತಾರೆ.
ಮೂರನೇ ಸುತ್ತು:-ಜತೆಯಾಗಿರಲು ಮತ್ತು ಬೆಳೆಯಲು ಒಳ್ಳೆಯ ಸಂಪತ್ತು ಮತ್ತು ಶಕ್ತಿ ಕೊಡು ಎಂದು ದೇವರಲ್ಲಿ ಪ್ರಾರ್ಥಿಸಲಾಗುತ್ತದೆ. ಪರಪುರುಷನು ತನ್ನ ಗಂಡನಿಗೆ ದ್ವೀತಿಯನೆಂದು ವಧು ಪ್ರತಿಜ್ಞೆ ಮಾಡುತ್ತಾಳೆ. ಹಾಗೇ ಪರನಾರಿಯು ತನಗೆ ಸಹೋದರಿಯ ಸಮಾನ ಎಂದು ವರನು ಶಪಥ ಮಾಡುತ್ತಾನೆ. ಇಲ್ಲಿ ವಧುವರರು ಲಕ್ಷ್ಮಿನಾರಾಯಣರಾಗುತ್ತಾರೆ.
ನಾಲ್ಕನೇ ಸುತ್ತು:- ತಮ್ಮ ಪ್ರೀತಿ ಹೆಚ್ಚಾಗುತ್ತಾ ಇರಲಿ ಮತ್ತು ಗೌರವವು ಸ್ಥಿರವಾಗಿರಲಿ ಎಂದು ನಾಲ್ಕನೇ ಸುತ್ತಿನಲ್ಲಿ ವಧು ಹಾಗೂ ವರ ಬೇಡಿಕೊಳ್ಳುವರು. ದಂಪತಿ ತಮ್ಮ ಸಾಮಾಜಿಕ ಜವಾಬ್ದಾರಿ ಮತ್ತು ಪ್ರತಿಯೊಬ್ಬರ ಕುಟುಂಬದ ಜವಾಬ್ದಾರಿ ತೆಗೆದುಕೊಳ್ಳುವ ಬಗ್ಗೆ ತಿಳಿದುಕೊಳ್ಳುವರು. ಇಲ್ಲಿ ವಧುವರರು ಸರಸ್ವತೀ- ಬ್ರಹ್ಮರಾಗುತ್ತಾರೆ.
ಐದನೇ ಸುತ್ತು:- ಸದ್ಗುಣ ಹಾಗು ವಿಧೇಯಕವಾಗಿರುವ ಮಕ್ಕಳು ತಮಗೆ ಹುಟ್ಟಲಿ ಎಂದು ಐದನೇ ಸುತ್ತಿನಲ್ಲಿ ಬೇಡಿಕೊಳ್ಳಲಾಗುತ್ತದೆ. ಮಕ್ಕಳಿಂದ ಜೀವನವು ಯಾವಾಗಲೂ ಸಂತೋಷಮಯವಾಗಿರಲಿ ಹಾಗೂ ತಾವು ಏಕಾಂಗಿಗಳು ಎನ್ನುವ ಭಾವನೆ ತಮಗೆ ಮೂಡದಿರಲಿ ಎನ್ನುವುದು ಇದರರ್ಥ. ಇಲ್ಲಿ ವಧೂವರರು ಶಚಿ ಹಾಗೂ ಇಂದ್ರರಾಗುತ್ತಾರೆ.
ಆರನೇ ಸುತ್ತು:- ಈ ಸುತ್ತಿನಲ್ಲಿ ವಧು ಹಾಗೂ ವರ ಆರೋಗ್ಯಕರ ಮತ್ತು ಕಾಯಿಲೆಮುಕ್ತ ಜೀವನ ಸಿಗಲಿ ಎಂದು ಬೇಡುತ್ತಾರೆ. ಜೀವನ ಸುಖಮಯವಾಗಲು ಪರಸ್ಪರರ ನೋವು ಹಾಗೂ ನಲಿವನ್ನು ಹಂಚಿಕೊಳ್ಳುವುದಾಗಿ ಮಾತು ಕೊಡುತ್ತಾರೆ.
ಏಳನೇ ಸುತ್ತು:- ಏಳನೇ ಸುತ್ತು ಅವರಿಬ್ಬರು ಪವಿತ್ರ ಬಂಧನದಲ್ಲಿರುವುದನ್ನು ತಿಳಿಸುವುದು. ಜೀವನದ ಅಂತ್ಯದ ತನಕ ಅವರಿಬ್ಬರು ಜತೆಯಾಗಿರುವರು ಎಂದು ಈ ಸುತ್ತು ಹೇಳುತ್ತದೆ. ದಂಪತಿ ಪರಸ್ಪರರನ್ನು ಗೌರವಿಸುವರು ಮತ್ತು ಪೋಷಿಸುವರು. ತಮ್ಮ ಪ್ರೀತಿಯು ಸಮಯಕ್ಕೆ ತಕ್ಕಂತೆ ಪ್ರೌಢವಾಗಲಿ ಎಂದು ಬೇಡಿಕೊಳ್ಳುವರು.ಏಳನೇಯ ಹೆಜ್ಜೆಯನ್ನಿಟ್ಟು ಮನೆಯಲ್ಲಿ ನಮ್ಮಿಬ್ಬರ ಸ್ನೇಹ ಸ್ಥಿರವಾಗಿರಲಿ ಎಂದು ಬೇಡಿಕೊಳ್ಳುತ್ತಾರೆ.
ಸವಿತಾ ಮುದ್ಗಲ್
ಗಂಗಾವತಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.