You are currently viewing ನೀ ನೆಲೆಸು ಬಸವೇಶ….

ನೀ ನೆಲೆಸು ಬಸವೇಶ….

ಬಸವೇಶ….
ನೀ ಕಟ್ಟ ಬಯಸಿದ
ಸಮಪಾಲು ಸಮಬಾಳು
ಸಮಾಜ ನಿರ್ಮಾಣ ಕನಸಾಗಿಯೇ
ಉಳಿಯಿತಲ್ಲ ‌..

ಕಾಯಕವೇ ಕೈಲಾಸವೆಂದೆ..
ಕೆಲಸವಿಲ್ಲದ ಯುವ ಜನಾಂಗ
ಮೊಬೈಲ್ ಮಾಯಾಂಗನೆಗೆ ಒಳಗಾಗಿ
ಸ್ಟಾರ್ ಗುಟಕಾದಂಥ ಮಾರಕ
ವಿಷಕ್ಕೆ ಬಲಿಯಾಗಿ
ಬದುಕನ್ನೇ ಬೀದಿಗೆ ಬೀಳಿಸಿದರಯ್ಯಾ..

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲವೆಂದೆ..
ಗಲ್ಲಿ ಗಲ್ಲಿಗಳಲ್ಲಿ ಮೂಲೆ ಮೂಲೆಯಲ್ಲಿ
ನಿನ್ನ ಪ್ರತಿಮೆ ಸ್ಥಾಪನೆ ಮಾಡಿ
ಪೂಜಿಸುವರಯ್ಯಾ..

ದಯೆಯೇ ಧರ್ಮದ ಮೂಲವೆಂದೆ..
ಕೇರಿಗೊಂದು ಗಲ್ಲಿಗೊಂದೊಂದು
ದುರುಗವ್ವ ಮರಗವ್ವರ ಗುಡಿ ಗುಂಡಾರ ಕಟ್ಟಿ
ಕೋಳಿ-ಕೋಣಗಳ ಬಲಿ ಕೊಟ್ಟು
ತಮ್ಮ ಹೊಟ್ಟೆ ತುಂಬಿಸಿಹರಯ್ಯಾ..

ಜಾತಿ ವಿಜಾತಿ ಎನಬೇಡ ಎಂದೆಯಯ್ಯಾ..
ನೀ ವೀರಶೈವನೆಂದು ಲಿಂಗಾಯತನೆಂದು
ಎರಡೇ ಜಾತಿಗೆ ಸೀಮಿತಗೊಳಿಸಿ
ಬೇರೆ ಜಾತಿಯವರಿಂದ ನಿನ್ನನು ದೂರ ಇಟ್ಟಿಹರಯ್ಯಾ..

ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕೆಂದೆಯಯ್ಯಾ ..
ಪರರ ಜೀವನದ ಹುಳುಕು ಹುಡುಕುತ
ತಮ್ಮ ಹರಿತ ನಾಲಿಗೆಯಿಂದ ಚುಚ್ಚಿ ಚುಚ್ಚಿ
ಕೊಲ್ಲುವ ಜನರೇ ಸುತ್ತಲೂ ತುಂಬಿಹರಯ್ಯಾ..

ಕಳಬೇಡ ಕೊಲಬೇಡ ಹುಸಿಯನುಡಿಯಬೇಡವೆಂದೆ..
ನಿತ್ಯ ಪರರ ಕೊಂದು ಮೋಸ, ವಂಚನೆ
ಅನ್ಯಾಯ ಎಸಗುವ ಜನರದ್ದೇ ಕಾರುಬಾರು ಅಯ್ಯ
ಬಹಿರಂಗದಿ ನೊಸಲ ವಿಭೂತಿ ಬಳೆದು
ಅಂತರಂಗದಿ ಕತ್ತಿ ಮಸೆಯುವ ಕುಹಕಿಗಳೆ ತುಂಬಿಹರಯ್ಯಾ..

ಮಹಿಳಾ ಸ್ವಾತಂತ್ರ್ಯದ ಹರಿಕಾರ ನೀನಾದೆ ಅಯ್ಯ..
ಕೆಲ ಪುಂಡ ಪುರುಷರು ಹೆಣ್ಣಿನ ಅವಹೇಳನ ಮಾಡಿ
ಅವಮಾನಿಸಿ ಅವರ ಚಾರಿತ್ರ್ಯಕ್ಕೆ
ಮಸಿ ಬಳೆಯುವರಯ್ಯಾ..

ಲಿಂಗ ವರ್ಗ ವರ್ಣಗಳ ಬೇಧವಿಲ್ಲದ ಸಮಾಜ ನಿರ್ಮಿಸಿ
ಅನುಭವ ಮಂಟಪದಿ ಸಮಾನ ಸ್ಥಾನ ನೀಡಿ
ಅನುಭಾವ ಸಾಹಿತ್ಯದ ಮೃಷ್ಟಾನ್ನ ಬಡಿಸಿದೆಯಯ್ಯಾ
ಇಂದು ಲಿಂಗ ವರ್ಗ ವರ್ಣಗಳ ಅಸಮಾನತೆ
ಹಾವಿನಂತೆ ಭುಸುಗುಟ್ಟುತ್ತ ಸ್ವಾಸ್ಥ್ಯವನ್ನೆ ಹಾಳುಗೆಡವಿದೆಯಯ್ಯಾ..

ಅಣ್ಣಾ….
ಮೌಢ್ಯತೆ ಅಳಿಯಲಿ
ವೈಚಾರಿಕತೆ ಬೆಳಗಲಿ
ಅಂಧತ್ವ ನಾಶವಾಗಲಿ
ಅರಿವು ಮೂಡಲಿ
ಅಸಮಾನತೆ ತೊಲಗಲಿ
ಸಮಾನತೆ ಬೆಳೆಯಲಿ
ಹೆಣ್ಣಿನ ಅವಮಾನ ನಿಲ್ಲಲಿ
ಗೌರವ ಸನ್ಮಾನ ಹೆಚ್ಚಲಿ
ಅಸುರತೆ ಸಂಹಾರವಾಗಲಿ
ಮಾನವೀಯತೆ ಮೆರೆಯಲಿ
ಬದುಕಿನ ಪ್ರತಿ ಹೆಜ್ಜೆಯಲ್ಲೂ
ನೀನು ನೆಲೆಸಯ್ಯ….

ಪ್ರಭಾ ಬಾಳಕೃಷ್ಣ ಬೋರಗಾಂವಕರ
ಅಥಣಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ



Leave a Reply