You are currently viewing ಹೈಕು ಕವಿ ಈಶ್ವರ ಚಂದ್ರ ಮಮದಾಪೂರ

ಹೈಕು ಕವಿ ಈಶ್ವರ ಚಂದ್ರ ಮಮದಾಪೂರ

ನಮ್ಮ ನಡುವೆ ಗಜಲ್ ಕವಿಗಳೆಂದು,ಶಾಹಿರಿ ರಚಕರೆಂದು,ಹೈಕು ಲೇಖಕರೆಂದು ಹೆಸರಾದವರು ಶ್ರೀ ಯುತ ಈಶ್ವರ ಮಮದಾಪೂರ ಅವರು.ಗೋಕಾಕನಲ್ಲಿ ನೆಲೆಸಿರುವ ಮೂಲತಃ ಗೋಕಾಕ. ತಾಲೂಕನವರೇ ಆದ ಶ್ರೀ ಈಶ್ವರ ಅವರು ಪ್ರಾಥಮಿಕ ಶಾಲೆಯೊಂದರ ಮುಖ್ಯೋಪಾಧ್ಯಾಯ ರು ಆಗಿ ಸೇವೆ ಸಲ್ಲಿಸುತ್ತಿದ್ದಾರೆ.ಇದೆಲ್ಲವನ್ನು ಮೀರಿ ಅವರೊಬ್ಬ ಕಾವ್ಯ ಜೀವಿಯಾಗಿ ಪರಿಚಿತರಾಗಿರುವದು ಇನ್ನೂ ವಿಶೇಷವಾದುದು.

ಶ್ರೀ ಯುತ ಈಶ್ವರ ಮಮದಾಪೂರ ಅವರು ತಾವು ಕಾವ್ಯ ಬರೆದು ಸಂತೋಷ ಪಟ್ಟುದಕ್ಕಿಂತ ತಮ್ಮ ಸ್ನೇಹಿತರು ಶಿಷ್ಯರಿಂದ ಕಾವ್ಯ ರಚಿಸಿ ಸಂತೋಷ ಪಟ್ಟುದೇ ಹೆಚ್ಚುಅವರು ಕಾವ್ಯಕೂಟ ಮೊದಲಾದ ವ್ಯಾಟ್ಸಪ್ ಗುಂಪುಗಳ ಮೂಲಕ ನೂರಾರು ಕವಿಗಳನ್ನು ಮುನ್ನೆಲೆಗೆ ತಂದಿರುವವರು ಹೌದು.
ಕಾವ್ಯಕೂಟ ಕನ್ನಡ ಬಳಗ ರಾಜ್ಯ ವೇದಿಕೆ ಒಂದು ವಿಶಿಷ್ಟ ಕಾವ್ಯಾಸಕ್ತರ ಗುಂಪು .ಇವರೆಲ್ಲಸಾಲಾಜಿಕ ಜಾಲತಾಣದಲ್ಲಿ ಒಂದೆಡೆ ಸೇರುವದು ಹೆಚ್ಚು.ಈ ಸಂಸ್ಥೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಶ್ರೀ ಯುತ ಮಮದಾಪೂರ ಅವರು.ಅನೇಕ ಸಂಘಟನೆಗಳನ್ನು ಹುಟ್ಡು ಹಸಕುವಲ್ಲಿಯೂ ಅವರು ಕೈಜೋಡಿಸಿದ್ದಾರೆ.ಗೋಕಾಕ ತಾಲೂಕ ಸಿರಿಗನ್ನಡ ವೇದಿಕೆ ಗೌರವಾಧ್ಯಕ್ಷರು,ಸಾಹಿತ್ಯ ಚಿಂತನ ಕಮ್ಮಟದ ವೇದಿಕೆಯ ಸಂಸ್ಥಾಪಕರಲ್ಲೊಬ್ಬರಾಗಿ ದುಡಿದವರು.ಚುಟುಕು ಸಾಹಿತ್ಯ ಪರಿಷತ್ತು ಗೋಕಾಕ,,ಜಿಲ್ಲಾ ಮಟ್ಟದ ಬೆಳಗಾವಿ ಕ.ಸಾ.ಪ,ಬಿ ಎಂ.ಶ್ರೀ ಪ್ರತಿಷ್ಠಾನ,ಇವೆಲ್ಕವುಗಳೊಂದಿಗೆ ಇವರು ಕಾರ್ಯಕ್ರಮ ನಡೆಸುವಲ್ಕಿ ಸಕ್ರಿಯವಾಗಿಕಾರ್ಯ ಮಾಡಿದ್ದಾರೆ.ನಾಡಿನ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ ಪಡೆದಿರುವ ಶ್ರೀ ಯುತರುರಾಜ್ಯ ಮಟದಟ ಜಿಲ್ಲಾಮಟ್ಟದ ಸಾಹಿತ್ಯನಕಾರ್ಯಕ್ರಮಗಳಲ್ಕಿ ಗೋಕಾಕ ತಾಲೂಕನ್ಬು ಪ್ರತಿ ನಿಧಿಸಿದ್ದಾರೆ.ಶಿಕ್ಷಕ ಸೇವಾ ರತ್ನ, ಮರಡಿ ಮಠದಿಂದ ಗೌರವ,ಬೆಳಕು ಕಾಯಕ ರತ್ನ ,ಸಾಹಿತ್ಯಭೂಷಣ ಪ್ರಶಸ್ತಿ ಇತ್ಯಾದಿ ಹಲವಾರು ಪ್ರಶಸ್ತಿ ಪಡೆದಿದ್ದಾರೆ.
ಬರೆಯುವದನ್ನು ಒಂದು ವ್ರತದಂತೆ ಕಾಪಾಡಿಕೊಂಡು ಬಂದ ಕವಿ ಈಶ್ವರ ಮಮದಾಪೂರ ಅವರು.೧೯೬೮ ರಲ್ಲಿ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಜನಿಸಿದ ವರು .ತಂದೆ ವಿರೂಪಾಕ್ಷಪ್ಪ ,ತಾಯಿ ರತ್ನವ್ವ, ಹಿಂದಿ ಭಾಷೆಯಲ್ಲಿ ಪದವಿ ಪಡೆದು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಆರಂಭಿಸಿದ ಶ್ರೀ ಯುತರು ಸಾಮಾಜಿಕ ಸಾಂಸ್ಸ್ಕೃತಿಕ ಸಾಹಿತ್ಯಕ ಸೇವೆಯಲ್ಲಿ ತೊಡಗಿಕೊಂಡು ರಾಜ್ಯಾದ್ಯಂತ ಗುರುತಿಸಿಕೊಂಡವರು .ಇವರ ವ್ಯಾಟ್ಸಾಪ್ ಸ್ನೇಹಕೂಟ ರಾಜ್ಯಾದ್ಯಂತ ಸಾವಿರಾರು ಸ್ನೇಹಿತರನ್ನು ಹೊಂದಿದೆ ನೂರಾರು ಕವಿಗಳನ್ನು ಬೆಳೆಸಿದೆ.
ಇವರ ಸಾಹಿತ್ಯಕ ಮತ್ತು ಸಾಂಸ್ಕೃತಿಕ ವ್ಯಕ್ತಿತ್ವ ಒಂದೆಡೆ ಯಾದರೆ ಎರಡು ಪ್ರಾಮಾಣಿಕವಾಗಿ ಶಿಕ್ಷಕರಾಗಿ ಎರಡು ದಶಕಗಳಿಗೂ ಹೆಚ್ಚು ಸಲ್ಲಿಸಿದ ಸೇವೆಯೂ ಅಷ್ಟೇ ಮುಖ್ಯವಾದುದು.
ಈಶ್ವರ ಮಮದಾಪೂರ ಅವರ ಈವರೆಗಿನ ಸಾಹಿತ್ಯ ಕೃತಿಗಳು ಆರು.ಚುಟುಕು ,ಹೈಕು,ಗಜಲ್ ಕವನ ಹೀಗೆ ಕನ್ನಡದ ಅನೇಕ ಕಾವ್ಯಪ್ರಕಾರಗಳಲ್ಲಿ ಅವರ ಸಾಹಿತ್ಯ ರಚನೆ ಮುನ್ನಡೆದಿದೆ.ಅವರ ಕೃತಿಗಳು ಹೀಗಿವೆ
೧ ಮಮದಾಪೂರ ಅವರ ಹನಿಗಳು
೨ ಮಮದಾಪೂರ ಅವರ ಚುಟುಕುಗಳು
೩ ಕಾವ್ಯ ಯಾನ ಕವನ ಸಂಕಲನ
೪ ಗೋರಿಯೊಳಗನ ಉಸಿರು ಗಜಲ್ ಸಂಕಲನ
೫.ದಿಗಂತದ ಅಪ್ಪುಗೆ-ಹೈಕು ಸಂಕಲನ
೬ ಗೋಕಾಕ ತಾಲೂಕಾ ದರ್ಶನ
ಇದೀಗ ಅವರ ಎರಡು ಕೃತಿಗಳು ಒಂದೇ ದಿನ ಬಿಡುಗಡೆ ಯಾಗುತ್ತಿವೆ.. ಸಮಕಾಲಿನದಲ್ಲಿ ಹೈಕು ಬರೆಯುತ್ತಿರುವ ಪ್ರಸಿದ್ದರಲ್ಲಿ ಕವಿ ಈಶ್ವರ ಅವರೂ ಒಬ್ಬರು.
ಹೈಕು ಜಪಾನಿ ಭಾಷೆಯಿಂದ ಕನ್ನಡ ಕಾವ್ಯ ಲೋಕ್ಕೆ ಬಂದ ಕಾವ್ಯ ಪ್ರಕಾರ .ಅನ್ಯ ಭಾಷೆಯ ಈ ಕಿರು ಕಾವ್ಯಪ್ರಕಾರವನ್ನು ಕನ್ನಡಕ್ಕೆ ತರುವ ಪ್ರಯತ್ನವನ್ನು ಅನೇಕ ಹಿರಿಯರು ಮಾಡುತ್ತಲೇ ಬಂದಿದ್ದಾರೆ.ಅದಕ್ಕೆ ಈಗ ಹೊಸ ಸೇರ್ಪಡೆ ಯಾಗಿರುವವರು ಗೋಕಾಕನ ಶ್ರೀ ಈ ಶ್ವರ ಮಮದಾಪೂರ ಅವರು.
ಇದೀಗ ಪ್ರಕಾರದಲ್ಕಿ ಹೊರತಂದ ಕೃತಿಯೇ ” ದಿಗಂತದ ಅಪ್ಪುಗೆ” ೨೦೨೧ ರಲ್ಲಿ ಈಶ್ವರ ಪ್ರಕಾಶನದಿಂದಲೇ ೨೦೨೨ ರಲ್ಲಿ ಮುದ್ರಣವಾಗಿದೆ.ಸಂಕಲನಕ್ಕೆ ನಾಡಿನ ಹಿರಿಯ ಗಜಲ್ ಕಾರ್ತಿ,ಶ್ರೇಷ್ಠ ಹೈಕು ಕವಿಯತ್ರಿಯರಾದ ಶ್ರೀ ಮತಿ ಅರುಣಾ ನರೇಂದ್ರ ಅವರ ಮುನ್ನುಡಿ,ಈಚೆಗೆ ತುಂಬಹೆಸರು ಮಾಡಿರುವ , ಸಕ್ರಿಯರಾಗಿರುವ ವಿಮರ್ಶಕ ಮಿತ್ರ ಡಾ.ಮಲ್ಲಿನಾಥ ತಳವಾರ ಅವರ ಸದಾಶಯ, ಶ್ರೀಮತಿ ರತ್ನಾ ಕೃಷ್ಣ ಭಟ್ ಅವರ ಬೆನ್ನುಡಿಗಳು ಇವೆ.
ಹೈಕು ಪದಕ್ಕೆ ದಿಗಂತದ ಅಪ್ಪುಗೆ ಎಂಬುದು ಸೂಕ್ತ ಶೀರ್ಷಿಕೆ.ನೆಲದ ಮೇಲಿದ್ದೇ ಆಗಸ ಮುಟ್ಟಬೇಕೆಂಬ ಹವಣಿಕೆ ಈ ಕಿರು ಕಾವ್ಯದ್ದು.ಇರುವದು ಮೂರೇ ಸಾಲು,ಅದು ವ್ಯಾಪಿಸುವ ವ್ಯಾಪ್ತಿ ಆಗಸದಷ್ಟು.ಹಾಗಾಗಿ ಈ ಸಂಕಲನಕ್ಕೆ ದಿಗಂತದ ಅಪ್ಪುಗೆ ಎಂದಿರುವದು ಸರಿಯಾಗಿಯೇ ಇದೆ.
ಅಪ್ಪನ ಚಿತ್ರಗಳೊಂದಿಗೆ ಇಲ್ಲಿನ ಹೈಕು ಆರಂಭವಾಗುತ್ತವೆ. ಅಲ್ಲ ಎಂದಿಗೂ ಅಷ್ಟಾಗಿ ಕಾವ್ಯದೊಳಕ್ಕೆ ಪ್ರವೇಶ ಪಡೆದವನಲ್ಲ.’ಅವ್ವ’ ಕಾವ್ಯ ಲೋಕದಲ್ಕಿ ರಾರಾಜಿಸಿದಷ್ಟು ಅಪ್ಪನ ಇರುವಿಕೆ ಡಾಳಾಗಿ ಕಾಣಿಸಲಾರದು.ಕವಿ ಮಮದಾಪೂರ ಅವರು ಅಪ್ಪನ ಶ್ರಮ, ತ್ಯಾಗ, ಬೆಳೆದ ಮಕ್ಕಳು ಅವನ ಕೃತಘ್ನರಾಗಿ ನಡೆದುಕೊಂಡದ್ದು ಕವಿಗೆ ಸಹನೆ ಇಲ್ಲ.



ಅಪ್ಪನ ಆಸೆ
ಮಗ ವಿದೇಶದಲ್ಲಿ
ಅಪ್ಪ ಅನಾಥ
ಹೀಗೆ ಮಕ್ಕಳನ್ನು ವಿದೇಶಕ್ಕೆ ಕಳಿಸಿ ಅನಾಥನಾದ ಅಪ್ಪನ ಚಿತ್ರ ಒಂದೆಡೆ ಇದ್ದರೆ; ಇನ್ನೊಂದೆಡೆ ಅವನ ಬೆವರೇ ಮಕ್ಕಳಿಗೆ ಸ್ಪೂರ್ತಿ ಎಂದು ಹೇಳಲು ಮರೆಯುವದಿಲ್ಲ.ನಾವೆಲ್ಲ ಹುಟ್ಟಿದೂರಿನಿಂದ ಹೊರಬಂದು ಬೇರೆಡೆ ಆಸರೆ ಕಟ್ಟಿಕೊಂಡವರು.ಆದರೆ ಜನ್ಮದೂರಿನ ನೆನಪು ಮಾಸದು .ಏಕೆಂದರೆ ಅಲ್ಲಿರುವ ಬೇರುಗಳು ಎಂದೂ ಕತ್ತರಿಸಲಾರವು.
ಜನ್ಮದೂರಿನ
ನೆನಪೆಂದೂ ಮಾಸದು
ಬೇರುಗಳಿವೆ
ಹೀಗೆ ಅವರ ಹೈಕುಗಳು ನಮ್ಮಮೂಲವನ್ನು ಚಿಂತನೆಗೀಡು ಮಾಡುತ್ತವೆ.ಈಸಶ್ವರ ಅವರ ಹೈಕುಗಳಲ್ಲಿ ನಿಸರ್ಗದ ವೈಭವದ ಚಿತ್ರ ಗಳು ತುಂಬ ಸುಂದರವಾಗಿವೆ.
ಬೆಟ್ಟದ ಝರಿ
ನದಿಯಾಗಿ ಓಡಿತ್ತು
ಕಡಲಪ್ಪಿತ್ತು
ಹೀಗೆ ನಿಸರ್ಗದ ವೈಭವ ಚಿತ್ರಿತವಾದರೆ ಸ್ಬಾರ್ಥಿಮನುಷ್ಯ ನಿಸರ್ಗ ಹಾಳು ಮಾಡುತ್ತಿರುವ ಬಗ್ಗೆ ಆಕ್ರೋಶವಿದೆ.
ಪರಿಸರದ
ತಪ್ಪಿಲ್ಲ, ,ತಪ್ಪೆಲ್ಲವು
ನಮ್ಮ ಸ್ವಾರ್ಥವು

ಹುಡುಕುತ್ತಿದೆ
ಕಾಡು ತಿಂದದವನನ್ನು
ಹಸಿದ ಹುಲಿ
ಇತ್ಯಾದಿ ಹೈಕುಗಳಲ್ಲಿಮನುಷ್ಯ ನಿಸರ್ಗದ ಮೇಲೆ ಮಾಡುತ್ತಿ ರುವ ಅನ್ಯಾಯ,ಇದರಿಂದ ಇಂದು ಕಾಡಿನ ಕ್ರೂರ ಪ್ರಾಣಿಗ ಳು ಅವನನ್ಬು ಅಟದಟಾಡಿಸಿಕೊಂಡು ಬೆನ್ನತ್ತುವದರಲ್ಕಿ ತಡವಿಲ್ಲ ಎಂಬುದರ ದರ್ಶನ ಇಲ್ಕಿದೆ.ಅನೇಕ ಸಲ ಕಾಡಾನೆ ಯಂತಹ ಪ್ರಾಣಿಗಳು ನಾಡಿಗೆ ನುಗ್ಗಿದ ಉದಾಹರಣೆ ನಮ್ಮ ಮುಂದಿದೆ.
ಪ್ರೀತಿ ಜಗದ ಬೆಳಕು ಎಂದು ನಂಬಿದ ಕವಿ ಈಶ್ವರ್ ಅವರು.
ಅರಿತು ನಡೆ
ಪ್ರೀತಿ ಜಗದ ಸತ್ಯ
ಪ್ರೇಮ ಬೆಳಕು
ಇದು ಅವರ ಕಾವ್ಯದ ಒಟ್ಟು ಸಾರ.ಗಜಲ್ ಕವಿಗಳು ಹೇಳುವಂತೆ ಲೋಕದಲ್ಲಿ ಎರಡು ಬಗೆಯ ಪ್ರೀತಿ ಇದೆ.ಒಂದು ಗಂಡು ಹೆಣ್ಣಿನ ನಡುವನ ಲೌಕಿಕ ಪ್ರೀತಿ.ಇನ್ನೊಂದು ಜಗಕ್ಕೆ ಒಳಿತಾಗಲಿ ಎನ್ನುವ ಲೋಕ ಪ್ರೀತಿ.ಈ ಎರಡೂ ಬಗೆಯ ಪ್ರೀತಿಗಳು ಅರಳಬೇಕಿವೆ. ಇಲ್ಲಿ ನಮಗೂ ಒಳತಾಗಬೇಕು ,ಜಗತ್ತಿಗೂ ಒಳ್ಳೆಯದಾಗಬೇಕು ಎಂದು ಸಾರುವದೇ ಎಲ್ಲ ಬಗೆಯ ಸಾಹಿತ್ಯದ ಸಾರವಾಗಿದೆ. ಕವಿಯ ಸುಂದರ ಒಲವಿನ ಚಿತ್ತಾರದ ನುಡಿಗಳಿಗೆ ಉದಾಹರಣೆಯಾಗಿ
ನೀನಿಟ್ಟ ಮುತ್ತು
ದೇಹವೆಲ್ಲಾ ಬೆವೆತ
ಮುತ್ತಿನ ಹನಿ
ಹೀಗೆ ಕವಿ ರಮ್ಯವಾಗಿ ಬರೆಯುತ್ತಾರೆ.ಅವಳು ಇಲ್ಲದ ಕಾವ್ಯ ಇರಲುಂಟೇ? ಇಲ್ಲಿ ಅವಳೂ ಮತ್ತೆ ಮತ್ತೆ ಹಾಜರಾಗಿದ್ದಾಳೆ ‘ ಅವಳು ‘ ಎಂಬ ಪದವೇ ಅದ್ಭುತ.ಅವಳ ಬಿಟ್ಟು ಕವಿಯ ಹಗತ್ತೇ ಇಲ್ಲ.
ಅವಳೆಂದರೆ/ಪ್ರೇಮ ಸಾಗರದಾಳ/ನಾನಲ್ಲಿ ಮುತ್ತು
ಅವಳೆಂದರೆ /ನಗುವಿನ ಕಡಲು / ತೇಲುತ್ತಿದ್ದೇನೆ
ಅವಳಿಲ್ಲದೆ/ ಚಲಿಸಲಾರೆ ನಾನು/ ಬತ್ತದ ನದಿ
ಹೀಗೆ ಅವಳಿಗೂ ಕವಿತೆಗೂ ಮುಗಿಯದ ನಂಟು ಎನ್ನುವದನ್ನು ಕವಿ ಸಾರಿದ್ದಾರೆ
ಗುರು ಶಿಷ್ಯ ಸಂಬಂಧವನ್ನೂ ಇವರ ಹೈಕು ಚಿತ್ರಿಸಿದೆ.ಜಗತ್ತಿನ ಎಲ್ಲ ಸಂಬಂಧಗಳಲ್ಲಿ ತುಂಬ ಪವಿತ್ರವಾದದ್ದು ಗುರು ಶಿಷ್ಯ ಸಂಬಂಧ.ಸ್ವಾರ್ಥ ರಹಿತ ಸಂಬಂಧ. ಶರಣ ಸಾಹಿತ್ಯವನ್ನು ಮೆಚ್ಚದವರಾರು? ವಿಶೇಷ ಎಂದರೆ ಶರಣರ ಕುರಿತ ಹೈಕುಗಳು ಅಪರೂಪ.ಈಶ್ವರ ಮಮದಾಪೂರ ಅವರು
ವಚನಸಾರ
ಜ್ಞಾನದಾಗರವಿದು
ನಾಡ ಸಂಪತ್ತು


ಬಸವ ಜ್ಯೋತಿ
ಶೋಷಿತರ ಬೆಳಕು
ಕತ್ತಲು ನಾಶ
ಹೀಗೆ ವಚನಕಾರರು,ಅವರ ಕಾಲದ ಮಹತ್ವವನ್ನುಚಿತ್ರಿಸಿದರೆ ಕೆಲ ಹೈಕುಗಳಲ್ಲಿ ಪುಸ್ತಕಗಳ ಬಣ್ಣನೆ ಇಲ್ಲಿದೆ. ಜಾತಿ ವ್ವವಸ್ಥೆ ವಿರೋಧ ಕುರಿತಂತೆ ಕೆಲ ಹೈಕುಗಳು ಇಲ್ಲಿವೆ, ಜಗತ್ತಿನಲ್ಲಿ ಯುದ್ದ ಬೇಡ, ಹಿಂಸೆ ಕಡಿಮೆಯಾಗಲಿ ಇತ್ಯಾದಿ ಸಾರಿದ್ದಾರೆ.
ಕೆಲವು ಸಲ ಕವಿ ತಾತ್ವಿಕ ಚಿಂತನೆಯತ್ತಲೂ ಜಾರುತ್ತಾರೆ. ಸಹಜವಾಗಿಯೇ ಬದುಕಿನ ಚಿಂತನೆ ಮೂಡುತ್ತದೆ. ತತ್ವಪದಕಾರರಂತೆ ‘ನಾಲ್ಕು ದಿನದ ಸಂತೆ’ ಈ ಬದುಕು ಎಂಬ ಭಾವಕ್ಕೂ ಬಂದು ತಲುಪುತ್ತಾರೆ.ಇದು ಅವರ ಅನುಭವದ ಬೆಳಕು.
ಹುಟ್ಟು ಸಾವಿನ
ನಡುವೆ ಮೂರು ದಿನ
ನಿನ್ನ ಬದುಕು
ಇಂತಹ ರಚನೆಗಳನ್ನು ಗಮನಿಸಬೇಕು.
ಒಟ್ಟಾರೆ ಮನುಷ್ಯತ್ವ ನೆಲೆ ನಿಲ್ಲಬೇಕು ಶೋಷಿತರ ಶೋಷಣೆ ಕಡಿಮೆಯಾಗಬೇಕು, ಪ್ರೀತಿ ಹಂಚಬೇಕು ಎನ್ನುವದು ಕವಿಯ ಆಶಯ.ಎಲ್ಲೆಲ್ಲೂ ಪ್ರೀತಿ ಇದೆ.
ರವಿಯ ಚುಂಬನ
ಮಲ್ಲಿಗೆ ನಕ್ಕ ಕ್ಷಣ
ಹಾಲು ಬೆಳಕು
ಎನ್ನುವ ಕವಿ ತಮ್ಮ ಸ್ವಂತ ಪ್ರೀತಿಯನ್ನೂ ಕವಿತೆಯಾಗಿಸದೇ ಬಿಟ್ಟಿಲ್ಲ
ಬದುಕೆಂದರೆ
ಪ್ರತಿ ಕ್ಷಣವೂ ಪ್ರೀತಿ
ಅಮೃತ ಪಾನ
ಎಂದು ನಂಬಿದ ಈ ” ಪ್ರೇಮದ ಪ್ರವಾದಿಯ” ದಾರಿ ಇನ್ನಷ್ಟು ಹಸಿರಾಗಲಿ ಅವರ ಕವಿತೆ ಹರಿದು ಸುತ್ತಲಿನ ಜಗ ಬೆಳಗಲಿ ಎಂದು ಹಾರೈಸುತ್ತೇನೆ. ಎಲ್ಲ ಬಗೆಯ ಚಂದಸ್ಸಿನ ನಿಯಮ ಮುರಿಯದ ರಚನೆಗಳು ಇಲ್ಲಿಯವು ಎನ್ನಬಹುದು.
ಕೆಲವೊಮ್ಮೆ ಪುನರುಕ್ತತೆ, ಜಾಳು ಜಾಳು ರಚನೆ ಎನ್ನಿಸಿದರೂ ಅಂತಹ ಒಂದೆರಡು ರಚನೆ ಎಲ್ಲ ಸಂಕಲನದಲ್ಕಿಯೂ ಸಹಜವೇ ಎಂದು ಅವುಗಳನ್ನಾಚೆ ಸರಿದಿಬಿಡಬೆಕು. ಬಹಳಷ್ಟು ಸರಳ ಸುಂದರ ರಚನೆಗಳನ್ನು ನೀಡಿದ ಶ್ರೀ ಈಶ್ವರ ಮಮದಾಪೂರ ಅವರಿಗೆ ಅಭಿನಂದನೆಗಳು.

ಡಾ.ಯಮಾ.ಯಾಕೊಳ್ಳಿ