ಲೇಖಕಿ : Nalina d
ಸರ್ವಕಾಲಕ್ಕೂ ಸಲ್ಲುವ ಗಾಂಧಿ ಚಿಂತನೆ:
ಮಹಾತ್ಮ ಗಾಂಧಿಯವರು ತಮ್ಮ ಜೀವನವನ್ನು ಸತ್ಯಶೋಧನೆಗಾಗಿ ಮುಡಿಪಾಗಿಟ್ಟಿದ್ದರು, ತಮ್ಮ ಬಾಹ್ಯ ಮತ್ತು ಆಂತರಿಕ ವರ್ತನೆಗಳಲ್ಲಿ ಸರಳ ಮತ್ತು ಸ್ವತಂತ್ರವಾಗಿ ಕಂಡರೂ, ಮಾನಸಿಕವಾಗಿ ಸ್ಥಿರವಾಗಿ ಸತ್ಯದ ಪ್ರಯೋಗಗಳನ್ನು ನಡೆಸಿ ಪರಿಹಾರ ಕಂಡುಕೊಂಡಿದ್ದರು. ಆತ್ಮವಿಮರ್ಶೆಯಲ್ಲಿ ತೊಡಗಿಕೊಳ್ಳುವ ಪ್ರತಿಯೊಬರಿಗೂ ಗಾಂಧಿಜಿಯವರ ನಿತ್ಯಸತ್ಯದ ಜೀವನ ಮಾದರಿಯಾಗಿರುತ್ತದೆ. ಗಾಂಧೀಜಿಯವರ ಜೀವನವೇ ಒಂದು ಸತ್ಯಶೋಧನೆ, ಮಿಥ್ಯೆಯನ್ನು ಅವರು ಪರಿಹರಿಸಿಕೊಳ್ಳಲು ಮಾಡಿದ ತ್ಯಾಗಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಹೊರದೇಶಕ್ಕೆ ಶಿಕ್ಷಣಕ್ಕಾಗಿ ಹೊರಡುವ ಮೊದಲು ತಮ್ಮ ತಾಯಿಗೆ ಅವರು ವಚನವಿಟ್ಟಂತೆ ನಡೆದುಕೊಂಡರು, ಹೀಗೆ ನಡೆದುಕೊಳ್ಳುವಾಗ ಅವರಲ್ಲಿ ಕೆಲವೊಮ್ಮೆ ಸತ್ಯವನ್ನ ಹೊರತು ಬೇರೆ ಯಾವುದೇ ರೀತಿಯ ಭಾವನಾತ್ಮಕ ಆಮಿಶಗಳು ಕಂಡುಬರಲಿಲ್ಲ. ಗಾಂಧಿಜಿಯವರ ಬದುಕಿನ ವಿಮರ್ಶೆಯನ್ನು ಒಂದು ವೈಜ್ನಾನಿಕ ಪ್ರಯೋಗವನ್ನಾಗಿ ನೋಡಬಹುದು. ಅವರು ಕಂಡುಕೊಂಡ ತತ್ವಗಳೆಲ್ಲವೂ ನಿರಂತರ ಆತ್ಮಶೋಧನೆಯ ಮೊಸೆಯಲ್ಲಿ ಫಲಿಸಿದಂತವು. ಗಾಂಧೀಜಿಯವರ ಮಾತಿನಲ್ಲೇ ಹೇಳಬೇಕೆಂದರೆ, ಸತ್ಯ ಮತ್ತು ನಿಷ್ಠೆಯಲ್ಲಿ ಬಲವಾದ ನಂಭಿಕೆಯಿಟ್ಟು ನಡೆಯುವ ಯಾವುದೇ ವ್ಯಕ್ತಿಯಾಗಲಿ ನನ್ನ ರೀತಿಯಲ್ಲಿ ಸಾಧನೆ ಮಾಡಲು ಸಾಧ್ಯ’ ಎಂದು.
ಗಾಂಧಿಜಿಯವರ ತತ್ವಗಳು ಮತ್ತು ಆ ತತ್ವಗಳಲ್ಲಿದ್ದ ಅವರ ಅಖಂಡ ನಂಭಿಕೆ. ಮೊದಲನೆಯದಾಗಿ ಅಹಿಂಸೆ- ಒಬ್ಬನು ತಾನು ಅಹಿಂಸಾವಾದಿಯೆಂದು ಹೇಳಿಕೊಂಡರೆ ಯಾರಾದರೂ ಅವನಿಗೆ ಕೆಡುಕು ಮಾಡಿದರೂ ಅವನು ಪಗೊಳ್ಳಬಾರದು. ಹಿಂಸೆ ಮಾಡಿದವನಿಗೆ ಕೆಡುಕಾಗಬೇಕೆಂತಲೂ ಬಯಸಬಾರದು. ಅವರ ದೇಹಕ್ಕೆ ನೋವಾಗುವಂತಹ ಯಾವ ವಿಧವಾದ ಕಾರ್ಯ ಮಾಡಬಾರದು. ಎದುರಾಳಿ ಏನು ಮಾಡಿದರೂ ಅದನ್ನು ಸಹಿಸಬೇಕು. ಅಹಿಂಸೆ ಎಂದರೆ ಎಲ್ಲಾ ಜೀವರಾಶಿಗಳ ವಿಷಯದಲ್ಲಿಯೂ ಅವಕ್ಕೆ ಒಳ್ಳೆಯದಾಗಲೆಂದು ಬಯಸುವುದು. ಆದುದರಿಂದ ಈ ನಿಯಮಕ್ಕೆ ಮನುಷ್ಯ ವರ್ಗ ಮಾತ್ರವಲ್ಲದೆ ಕನಿಷ್ಠವಾದ ಜಂತುಗಳೂ ಕ್ರಿಮಿ ಕೀಟಗಳಾದಿಯಾಗಿ ಮೃಗಗಳೂ ಸೇರಿಕೊಳ್ಳುತ್ತವೆ. ನಾವು ನಾಶ ಮಾಡಬೇಕೆಂದು ಅವುಗಳ ಸೃಷ್ಠಿಯಾಗಿಲ್ಲ. ಅವೆಲ್ಲಕ್ಕೂ ಸೃಷ್ಠಿಯಲ್ಲಿ ಏನೋ ನಿಖರವಾದ ಸ್ಥಾನ ಇದೆ. ಆದುದರಿಂದ ಪ್ರತಿ ಚಟುವಟಿಕೆಯಿಂದ ಅಹಿಂಸೆಯನ್ನು ಆಚರಿಸಿದರೆ ಎಲ್ಲ ಜೀವರಾಶಿಗಳ ವಿಷಯದಲ್ಲೂ ಶುಭಾಕಾಂಕ್ಷೆ ಇರಬೇಕು. ಈ ತತ್ವವನ್ನು ನಾನು ಹಿಂದೂ ಶಾಸ್ತ್ರಗಳಲ್ಲಿ ಕಾಣುತ್ತೇನೆ ಮತ್ತು ಬೈಬಲ್ ಖುರಾನಿನಲ್ಲಿಯೂ ಕಾಣುತ್ತೇನೆ.” ಎಂದು ಗಾಂದೀಜಿ ಹೇಳಿರುವನ್ನು ಕೇಳಿದಾಗ ಅಹಿಂಸೆ ಮತ್ತು ಜೀವರಾಶಿಯ ನಡುವೆ ಒದಗಿಬರಬೇಕಾದ ಅನ್ಯೂನ್ಯವಾದ ತತ್ವವನ್ನು ಕಂಡುಕೊಂಡ ಬಹುರೂಪಿ ಅಹಿಂಸಾ ಕಾರ್ಯ ಮನೋಜ್ನವಾಗಿ ಅರಿವಾಗುತ್ತದೆ.
ದಿನಾಂಕ 13 -10-46ರಲ್ಲಿ ಹರಿಜನ ಪತ್ರಿಕೆಯು ಗಾಂಧೀಜಿಯವರ ಕುರಿತು ಹೀಗೆ ವರದಿ ಮಾಡಿದೆ. ಗಾಂಧೀಜಿಯವರನ್ನು ಅಹಿಂಸೆಯ ಕುರಿತು ಪ್ರಶ್ನೆ ಮಾಡಿದಾಗ, ’ಗಾಂಧೀಜಿಯವರು ತಾವೇನು ಮಹಾತ್ಮರೆಂದು ಎಂದೂ ಹೇಳಿಕೊಳ್ಳಲಿಲ್ಲವೆಂದು ಉತ್ತರಕೊಟ್ಟರು. ಇತರರಂತೆಯೇ ತಾವು ಸಾಮಾನ್ಯ ಮನುಷ್ಯರು, ತಾವು ಯಾರಿಗೂ ಹಾನಿಯುಂಟು ಮಾಡಲಿಲ್ಲವೆಂದು ನಂಭಿಕೆ. ತಾವು ಹೇಳಿದ ಮಾತೆಲ್ಲ ಜನರ ಹಿತಕ್ಕಾಗಿ –ಲೋಕಹಿತಕ್ಕಾಗಿ ಆಗಿದೆ”.
ಗಾಂಧಿಜಿಯವರು ಇತರರೊಂದಿಗೆ ಪತ್ರವ್ಯವಹಾರದಲ್ಲಿ ಬರೆದಿರುವ ಸಣ್ಣ ಸಾಲುಗಳು ಬದುಕಿನ ದೀವಿಗೆಗಳೇ. ಉದಾ-5-1-1947ರಲ್ಲಿ ಹರಿಜನ ಪ್ರಕಟಿಸಿದ ಪತ್ರವೊಂದರಲ್ಲಿ ದೀನದಯಾಳರಿಗೆ ಹೀಗೆ ಹೇಳುತ್ತರೆ. ’ನಿಜವಾಗಿಯೂ ಒಬ್ಬ ಮನುಷ್ಯನು ವಿವೇಕದಿಂದ ಜೀವಿಸುವುದಾದರೆ, ಯಾವ ಚಿಂತೆಗೊ ಕಾರಣವಿಲ್ಲ.”
ಸತ್ಯದಲ್ಲಿ ಸೌಂದರ್ಯ – ಎಲ್ಲಾ ವಸ್ತುಗಳಲ್ಲಿಯೂ ಎರಡು ಮುಖಗಳಿವೆ, ಬಾಹ್ಯ-ಆಂತರಿಕ. ಯಾವುದಕ್ಕೆ ಮನ್ನಣೆ ಕೊಡಬೇಕೆಂಬುದೇ ನನ್ನ ಮಟ್ಟಿನ ಪ್ರಶ್ನೆ, ಆಂತರಿಕ ಗುಣಕ್ಕೆ ಎಷ್ಟು ಪೋಷಣೆ ಕೊಡುವುದೂ ಅಷ್ಟೇ ಪ್ರಮಾಣದಲ್ಲಿ ಬಾಹ್ಯದ ಬೆಲೆ. ಎಲ್ಲಾ ನಿಜವಾದ ಕಲೆಯೂ ಆತ್ಮವನ್ನು ವಿಕಾಸಗೊಳಿಸಬೇಕು. ಅದನ್ನು ಪ್ರಕಾಶಕ್ಕೆ ತರಬೇಕು. ಮನುಷ್ಯನ ಅಂತರಾತ್ವನ್ನು ಪ್ರಕಾಶಪ್ಡಿಸುವ ಪ್ರಮಾಣದಲ್ಲಿ ಮಾತ್ರ ಬಾಹ್ಯರೂಪಗಳಿಕೆ ಬೆಲೆಯುಂಟು. ಈ ರೀತಿಯ ಕಲೆ ನನಗೆ ಬಹಳ ರುಚಿಸುತ್ತದೆ. ಎಲ್ಲಾ ಕಲಾವಿಶೇಷವೂ ಆತ್ಮಸಾಕ್ಷಾತ್ಕಾರಕ್ಕೆ ಸಹಾಯಕವಾಗಬೇಕು. ನನ್ನ ಮಟ್ಟಿಗೆ ಹೇಳಬೇಕೆಂದರೆ ನನ್ನ ಆತ್ಮ ಸಾಕ್ಷಾತ್ಕಾರಕ್ಕೆ ಯಾವ ಬಾಹ್ಯರೂಪಕಗಳ ಅವಶ್ಯಕತೆಯೂ ಇಲ್ಲ. ಆದುದರಿಂದ ನನ್ನ ಜೀವನದಲ್ಲಿ ಪ್ರಭಾವಯುತವಾದ್ ಕಲೆಯಿದೆಯೆಂದು ನಾನು ಹೇಳಬಲ್ಲೆ-ಆದರೆ ನನ್ನ ಸುತ್ತಮುತ್ತಲೂ ಕಲಾಕೃತಿಗಳೆಂದು ನೀವು ಹೇಳುವ ವಸ್ತುಗಳು ಕಾಣದೆ ಇರಬಹುದು. ನನ್ನ ಕೋಣೆಯ ಗೋಡೆಗಳು ಬರಿದಾಗಿರಬಹುದು; ಛಾವಣಿಯೇ ಇಲ್ಲದೆ ನಾನು ವಾಸವಾಗಿರಬಹುದು. ಏಕೆಂದರೆ ನಾನು ಹೀಗೆ ಅನಂತವ್ಯಾಪ್ತಿಯೂ ಸೌಂದರ್ಯವೂ ಉಳ್ಳ ನಕ್ಷತ್ರ ಮಂಡಲವನ್ನು ನೋಡಬಹುದು. ಮೇಲೆ ನಭೋಮಂಡಲವನ್ನು ವೀಕ್ಷಿಸುತ್ತ ಅಲ್ಲಿ ದೇದೀಪ್ಯಮಾನವಾಗಿರುವ ಅಸಂಖ್ಯಾತ ನಕ್ಷತ್ರಗಳ ಸೊಗಸಾದ ದೃಶ್ಯಕ್ಕಿಂತಲೂ ಮಾನವನ ಕೃತಕವಾದ ಕಲಾಕೃತಿ ಏನುತಾನೆ ಕೊಡಬಲ್ಲದು? ಆದರೆ ಕಲಾಕೃತಿಗಳೆಂದು ಗಣಿಸಲ್ಪಡುವ ವಿಷಯಗಳನ್ನು ನಾನು ನಿರಾಕರಿಸುತ್ತೇನೆಂದು ಇದರ ಅರ್ಥವಲ್ಲ; ಪ್ರಕೃತಿಯಲಿ ನಿತ್ಯ ಸೌಂದರ್ಯದಿಂದ ಶೋಭಿಸುವ ವಸ್ತುಗಳೊಂದಿಗೆ ಹೋಲಿಸಿದರೆ ಈ ಕಾಲಾಕೃತಿಗಳು ಎಷ್ಟು ಅಸಮರ್ಪಕವಾದುವೆಂದು ಹೇಳುವುದು ಮಾತ್ರ ನನ್ನ ಉದ್ದೇಶ. ಮಾನವನ ಈ ಕಲಾಕೃತಿಗಳು ಆತ್ಮವು ತನ್ನ ಸಿದ್ಧಿಯನ್ನು ಪಡೆಯಲು ಎಷ್ಟರಮಟ್ಟಿಗೆ ಸಹಾಯಕವಾಗುವುವೋ ಅಷ್ಟೇ ಅವುಗಳ ಬೆಲೆ.
ಇನ್ನೂ ಮುಂದುವರೆಯುತ್ತಾ ಗಾಂಧೀಜಿಯವರು ಹೀಗೆ ಹೇಳುತ್ತಾರೆ ’ಸತ್ಯದ ವಿನಾ ಸೌಂದರ್ಯವಿಲ್ಲ. ಆದರೆ ಸತ್ಯವೂ ಸುಂದರವಾಗಿಲ್ಲದ ರೂಪಗಳನ್ನು ತಾಳಿ ಕಾಣಿಸಿಕೊಳ್ಳಬಹುದು. ಸತ್ಯ ಮತ್ತು ಅಸತ್ಯ ಒಂದರ ಬದಿಗೆ ಮತ್ತೊಂದಿರುತ್ತದೆ. ನಿಸರ್ಗದ ಸುಂದರ ವಿಷಯಗಳು -ಸೂರ್ಯಾಸ್ತಮಯ ಅಥವಾ ನಕ್ಷತ್ರಗಳ ನಡುವಿನ ಚಂದ್ರ-ಸತ್ಯಧ್ಯೋತಕ. ಅವುಗಳನ್ನು ಕಂಡಾಗ ಸೃಷ್ಠಿಕರ್ತನ ನೆನಪಾಗುತ್ತದೆ. ಎಲ್ಲಾ ಸೃಷ್ಠಿಯಲ್ಲಿಯೂ ಜಗಧೀಶ್ವರನನ್ನು ಅವನ ದಯೆಯನ್ನು ನಾನು ಕಾಣಲು ಯತ್ನಿಸಿದ್ದೇನೆ.
ಎಲ್ಲಕ್ಕೂ ಮೊದಲು ಅರಸಬೇಕಾದ್ದು ಸತ್ಯವನ್ನು. ಸೌಂದರ್ಯ-ಸೌಜನ್ಯ ತಾವಾಗಿ ನಂತರ ಬಂದುಸೇರುತ್ತದೆ ಎಂಬ ಮಾತಿನಲ್ಲಿ ಗಾಂಧೀಜಿಯವರು ಸತ್ಯದೊಂದಿಗೆ ಕಂಡುಕೊಂಡಿರುವ ಸತ್ಯದರ್ಶನದಲ್ಲಿರುವ ಪಾರದರ್ಶಕತೆ ವೇದ್ಯವಾಗುತ್ತದೆ. ಹೀಗೆ ನೆನೆಯುವಾಗ ಸಾಧು ಗಾಂಧಿ ಎಂದು ಡಿ.ವಿ. ಗುಂಡಪ್ಪ (ಡಿವಿಜಿ)ಯವರು ಬರೆದಿರುವ ಕವಿತೆ ನೆನಪಾಗುತ್ತದೆ.
ಇಂದ್ರೀಯಂಗಳ ಜಯಿಸಿ ಚಿತ್ತಶುದ್ಧಿಯ ಬಯಸಿ
ಲೋಭಮಂ ತ್ಯಜಿಸಿ ಕೋಪವ ವರ್ಜಿಸಿ
ಸರ್ವ ಸಖ್ಯವ ಭಜಿಸಿ ತೃಪ್ತತೆಯನಭ್ಯಸಿಸಿ
ಸತ್ಯಪಾಲನೆಯೊಂದ ಮನದೊಳಿರಿಸಿ.
ಕಾಯಕಷ್ಟವ ಅಶಿಸಿ ವೈರಿಗಣಮಂ ಕ್ಷಮಿಸಿ
ಸರ್ವಸಮತೆಯ ಗಳಿಸಿ ಶಮವನರಸಿ.
ಸ್ವತ್ಮ ಶಿಕ್ಷಣಮೇ ಸ್ವರಾಜ್ಯಮೆನ್ನುತ ವಚಿಸಿ
ದೇಶ ಸೇವೆ ಯನೀಶಸೇವೆಯೆನಿಸಿ.
ಸಾಧು ವರವೃತ್ತಿಯಂ ತನ್ನೊಳೇ ಜಗಕೆ ತೋರಿ
ಐಹಿಕಾರ್ಥಂಗಳಾನರ್ಥ್ಯಮಂ ವಿಶದಪಡಿಸಿ.
ಪಾಶ್ಚಾತ್ಯ ಜನಕಮತಿ ವಿಮಲ ನೀತಿಯನು ಪೇಳ್ವಾ
ದೈವಸಂಪನ್ನಾರ್ಗದರ್ಶಕಂ ಗಾಂಧಿಯಲ್ತೆ.
ಸರಳತೆಯ ಗಾಂಧೀಜಿ ನಮ್ಮ ದೇಶಕ್ಕೆ ಅಗತ್ಯವಾದ ಆರ್ಥಿಕ ನೀತಿಯನ್ನು ಹೇಗೆ ರೂಪಿಸಬೇಕೆಂದು ಅರಿತಿದ್ದವರು. ಗ್ರಾಮಗಳನ್ನು ಭಾರತದ ಬೆನ್ನೆಲುಬು ಎಂದವರು ಕರೆದರು. ಗ್ರಾಮೋದ್ಯೋಗಗಳನ್ನು ಬಲಪಡಿಸಬೇಕೆಂಬ ಬಲವಾದ ಆಶಯ ಅವರದಾಗಿತ್ತು. ಆ ಮೂಲಕ ಗ್ರಾಮದ ಯುವಕರು ತಮ್ಮ ಬದುಕನ್ನು ಗ್ರಾಮಗಳಲ್ಲೇ ಕಂಡುಕೊಳ್ಳಲಿ, ಶಿಕ್ಷಿತರಾಗಲಿ, ಭಾರತದ ಹಸಿವು ಮತ್ತು ಬಡತನ ಮುಕ್ತವಾಗಿ ಕಾಣಬೇಕೆಂದು ಗಾಂಧೀಜಿಯ ಕನಸೂ ಕೂಡ. ಶ್ರಮ ಗೌರವ/ dignity of labour ಗ್ರಾಂಧೀಜಿಯವರಿಂದ ನಾವು ಕಲಿಯಲೇ ಬೇಕಾದ ಒಂದು ಪ್ರಮುಖ ಅಂಶ. ಗ್ರಾಮಗಳಲ್ಲಿ ಪಂಚಾಯತ್ ವ್ಯವಸ್ಥೆ, ಮಾದಕದ್ರವ್ಯ ಮತ್ತು ಮಧ್ಯಪಾನಮುಕ್ತ ಯುವಕರು, ಸಮಾನತೆ, ಸರ್ವಧರ್ಮ ಸಮನ್ವಯದ ರಾಷ್ಟ್ರನೀತಿ, ಗುಡಿಕೈಗಾರಿಕೆಗಳಿಗೆ ಹೆಚ್ಚಿನ ಬೆಂಬಲ,ಸ್ತ್ರೀಯರಿಗೆ ಶಿಕ್ಷಣ, ದೀನ ದಲಿತರ ಉದ್ದಾರ ಮುಂತಾದವು ಗಾಂಧೀಜಿಯವರ ಆತ್ಮವು ಎಂದೆಂದಿಗೂ ತುಡಿಯುತ್ತಿದ್ದ ವಿಚಾರಗಳು.
ಗಾಂಧೀಜಿಯವರು ಸರ್ವೋಧಯ ತತ್ವವನ್ನು ಭಾರತಕ್ಕಾಗಿಕಂಡುಕೊಂಡ ರೀತಿ ಅಮೂಲ್ಯ. ಹರಿಜನ ಪತ್ರಿಕೆಯಲ್ಲಿ ಗಾಂಧೀಜಿಯವರು ಸಮಾನತೆಯ ಕುರಿತು ಹೀಗೆ ಬರೆದಿದ್ದರು –’ನನ್ನ ವಿಚಾರದಲ್ಲಿ ಸಮಾಜದಲ್ಲಿ ಜೀವಿಸುವ ಮಾನವರೆಲ್ಲರೂ ಸರಿಸಮಾನರು. ಆದುದರಿಂದ ಅವರಿಗೆಲ್ಲಾ ಸಮಾನವಾದ ಅವಕಾಶವಿರಬೇಕು. ಮಾನವರ ಸಾಮರ್ಥ್ಯ ಒಂದೇ ಆಗಿರದೇ ಹೋದರೂ ಈ ಆಸ್ಪದವನ್ನು ನೀಡಬೇಕು.’ ಎಲ್ಲೆಡೆಯೂ ಗಾಂಧಿಯವರು ಕರ್ಮಯೋಗಿಯಾಗಿ ನಮಗೆ ಕಂಡುಬರುತ್ತಾರೆಯೇ ಹೊರತು ಶುಚಿಯಾದ ಬಟ್ಟೆ ಧರಿಸಿ ಉತ್ಸಾಹದಿ ಸುಳ್ಳುಗಳನ್ನು ಹುಟ್ಟುಹಾಕುವ ರಾಜಕೀಯ ಪುಡಾರಿಯಾಗಿ ಕಂಡುಬರುವುದಿಲ್ಲ. ಗಾಂಧೀಜಿಯವರು ಇಂದಿನ ಯುವಜನತೆಗೆ ಸ್ನೇಹಿತನಂತೆ, ಹಿರಿಯ ಉತ್ಸಾಹಿ ಸಂಶೋದಕನಂತೆ ಕಂಡುಬರುತ್ತಾರೆ. ಹಾಗೆಯೇ ಶುದ್ಧ ಆತ್ಮದ ಪರಿಶುದ್ಧ ವ್ಯಕ್ತಿಯಾಗಿಯೂ ಗೋಚರಿಸುತ್ತಾರೆ. ಇಂಥಹ ಮಹಾನ ವ್ಯಕ್ತಿ ನಮ್ಮ ದೇಶದ ಸ್ವಾತಂತ್ಯಕ್ಕಾಗಿ ಶ್ರಮಿಸಿದ ವರ್ಷದೊಳಗೆ ರಕ್ತಪಾತದಲ್ಲಿ ಹತರಾಗಿದ್ದು ಒಂದು ದುರಂತ. ಆದೇನೇ ಇದ್ದರೂ ಗಾಂಧೀಜಿಯವರ ತತ್ವಗಳು, ಸಿದ್ಧಾಂತಗಳು, ಕಂಡುಕೊಂಡ ಸಮಾನತೆಯ ಸಿದ್ಧಾಂತಗಳಿಗೆ ಎಂದೆಂದಿಗೂ, ಭಾರತದಲ್ಲಷ್ಟೇ ಅಲ್ಲದೆ ವಿಶ್ವದ ಎಲ್ಲೆಡೆಯೂ ಪ್ರಸ್ತುತವಾಗಿದ್ದು ಇನ್ನಷ್ಟು ಸ್ಪಷ್ಟವಾಗಿ ಅಳವಡಿಸಿಕೊಳ್ಳಲು ಮಾರ್ಗದರ್ಶಿ ಸೂತ್ರಗಳಾಗಿರುವುದರಲ್ಲಿ ಸಂಶಯವಿಲ್ಲ.
Nalina d
ಜನನಿ ನಿಲಯ, ಜ್ಯೋತಿನಗರ ಅಂಚೆ,
ಚಿಕ್ಕಮಗಳೂರು –೫೭೭೧೦೨
-
ನೆರಳಿಗಂಟಿದ ಭಾವ
ಕವನ ಸಂಕಲನ (Poetry Collection)₹100.00Original price was: ₹100.00.₹90.00Current price is: ₹90.00.
ಪ್ರಕಟಣೆಗಾಗಿ ಸಂಪರ್ಕಿಸಿ
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.
ನಳಿನಾ ಡಿ ಅವರ ‘ಸರ್ವಕಾಲಕೂ ಸಲ್ಲುವ ಗಾಂಧೀ ಚಿಂತನೆ’ ಲೇಖನ ಸಕಾಲಿಕ, ಸರ್ವಮಾನ್ಯವೂ ಆಗಿದೆ. ಗಾಂಧಿ ಚಿಂತನೆಗಳ ಕುರಿತು ಚಿಂತನೆಗೆ ಹಚ್ಚಿದ ಬರೆಹ ಆಪ್ತವಾಗಿದೆ. ಲೇಖಕಿಗೆ ಹಾರ್ದಿಕ ಅಭಿನಂದನೆಗಳು.
ಡಾ. ಸಂಗಮೇಶ ಎಸ್. ಗಣಿ
9743171324
ಧನ್ಯವಾದಗಳು