‘ಗಾಂಧಿ’ಕನ್ನಡಕ ಹಾಕು ಭಾರತವ ಹುಡುಕು….

ಲೇಖಕರು : ಡಾ. ಸಂಗಮೇಶ ಎಸ್. ಗಣಿ

ಭವ್ಯ ಭಾರತದ ಭೂತ ಮತ್ತು ಭವಿತವನ್ನು ಕಾಣಬೇಕಿದ್ದರೆ ನಾವು ನಮ್ಮ ಕಣ್ಣನ್ನೂ, ಕನ್ನಡಕವನ್ನೂ ಬದಲಿಸಿಕೊಳ್ಳುವ ಜರೂರು ಇದೆ. ಹಾಕುವ ಕನ್ನಡಕ ಪಾರದರ್ಶಕವಾಗಿರಬೇಕು. ನೋಡುವ ಕಣ್ಣೂ ಪ್ರಾಮಾಣಿಕವಾಗಿರಬೇಕು. ಗಾಂಧೀ ಆತ್ಮಶುದ್ಧಿ ಮತ್ತು ಪ್ರಾಮಾಣಿಕತೆಯ ಪ್ರತೀಕ. ಗಾಂಧಿಕನ್ನಡಕ ಹಾಕಿಕೊಂಡು ಭಾರತವನ್ನು ಹುಡುಕಿದರೆ ನಮ್ಮ ಹುಡುಕಾಟ ಇನ್ನೂ ಹೆಚ್ಚು ನಿಚ್ಚಳವಾದೀತು ! ಗಾಂಧಿಯ ಕಣ್ಣಿನಿಂದ ಭಾರತವನ್ನು ನೋಡುವುದು ಮುಖ್ಯವೆನಿಸುತ್ತದೆ. ದೇಶದಲ್ಲಿನ ಸದ್ಯದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ವಿದ್ಯಮಾನಗಳು ತಲ್ಲಣಕ್ಕೀಡು ಮಾಡುತ್ತಿರುವ ಈ ಹೊತ್ತಿನಲ್ಲಿ ಗಾಂಧಿಕನ್ನಡಕವನ್ನು ಧರಿಸಿಕೊಂಡು ಇಲ್ಲವೇ ಗಾಂಧಿಯ ಕಣ್ಣಿನಿಂದ ಭಾರತವನ್ನು ಹುಡುಕುವುದು ಕಂಡುಕೊಳ್ಳುವುದು ಉಚಿತವೆ‌ನಿಸುತ್ತದೆ.

‘ಯಾರು ತಮ್ಮನ್ನು ತಾವು ನೋಡಿಕೊಳ್ಳಬಲ್ಲರೊ ಅವರು ಲೋಕದ ಸಮಸ್ತವನ್ನು ಕಾಣಬಲ್ಲರು’ ಎಂಬುದು ಅನುಭಾವದ ನುಡಿ. ಅನುಭವದ ಅರಿವಿನೊರತೆಯ ಬತ್ತಿಸಿಕೊಳ್ಳದೆ, ಆತ್ಮಶೋಧನೆಯ ಹಣತೆ ಹೊತ್ತಿಸಿಕೊಂಡು; ಮನುಕುಲಕ್ಕೆ ಬೆಳಕಾದ ಸಂತಪರಂಪರೆಯಲ್ಲಿ ಮಹಾತ್ಮ ಗಾಂಧೀಜಿಯವರಿಗೆ ವಿಶೇಷ ಸ್ಥಾನವಿದೆ.

ಸತ್ಯದ ಹಾದಿ ಬಲು ಕಠಿಣ. ಗಾಂಧೀಜಿಯವರು ಆಯ್ಕೆ ಮಾಡಿಕೊಂಡಿದ್ದು ಅದೇ ಕಠಿಣ ಮಾರ್ಗವನ್ನೇ. ಅವರ ಆ ಮಾರ್ಗ ಇಡೀ ಮನುಕುಲಕ್ಕೆ ಮಾದರಿಯಾಗಿದ್ದೇನೊ ನಿಜ. ಆದರೆ, ಈಗ ಆ ದಾರಿ ತನ್ನ ಹಾದಿ ಬದಲಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಗಾಂಧೀ ಎಂಬ ಮಾರ್ಗ ಮತ್ತು ಮೌಲ್ಯ ಮರೆಗೆ ಸರಿಯುತ್ತಿರುವುದು ಇಂದು ವಿಪರ್ಯಾಸ. ಇಂಥ ವಿಷಮ ಸ್ಥಿತಿಯಲ್ಲಿಯೇ ಗಾಂಧಿ ಎಂಬ ಬೆಳಕಿಗಾಗಿ ಮತ್ತೆಮತ್ತೆ ತಡಕಾಡುವ ಜರೂರು ಸೃಷ್ಟಿಯಾಗಿರುವುದು ಗಾಂಧೀತನದ ಜೀವಂತಿಕೆಗೆ ಸಾಕ್ಷಿ!. ತಮ್ಮ ಜೀವನವನ್ನು ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಲೇ ಸತ್ಯಶೋಧನೆಯ ಪರಮ ಗಮ್ಯದೆಡೆಗೆ ತುಡಿದ, ಮಾನವ ಘನತೆಯನ್ನು ಇಡೀ ಜಗತ್ತಿಗೆ ಸಾರಿದ ಧೀಮಂತ ಚೇತನ ಗಾಂಧೀಜಿ.

ಆಧುನಿಕತೆಯ ಧಾವಂತಕ್ಕೆ ಸಿಲುಕಿಕೊಂಡಿರುವ ಮನುಷ್ಯ ಬದುಕು ನೈತಿಕತೆಯ ಅಧಃಪತನ ಕಾಣುತ್ತಿರುವ ಈ ಹೊತ್ತಿನಲ್ಲಿ ನಾವು ನಮ್ಮನ್ನು ಆತ್ಮವಿಮರ್ಶೆಗೆ, ಆತ್ಮಾವಲೋಕನಕ್ಕೆ ಒಳಗುಮಾಡಿಕೊಳ್ಳುವ ತುರ್ತಿನಲ್ಲಿ ಇರುವುದು ವೇದ್ಯಸಂಗತಿ. ಈ ಸಂದರ್ಭದಲ್ಲಿ ಸರಳ, ಸಾತ್ವಿಕ, ಮಾದರಿಯಾಗಿ ಗಾಂಧೀಜಿ ನಮಗೆ ಒದಗುತ್ತಾರೆ. ಮನುಷ್ಯ ದೌರ್ಬಲ್ಯಗಳನ್ನು ಮೀರುವ, ಸದ್ಗುಣಗಳನ್ನು ಮೆರೆಯುವ ಪ್ರಯತ್ನವನ್ನು ನಿರಂತರವಾಗಿ ಮಾಡಿದಾಗ ತನ್ನನ್ನು ತಾನು ಒಳಗೊಂಡಂತೆ ಸಮಾಜ, ವ್ಯವಸ್ಥೆ, ದೇಶ ಅಷ್ಟೇ ಅಲ್ಲ; ಇಡೀ ವಿಶ್ವವು ಒಂದು ಬಗೆಯ ಎಚ್ಚರಿಕೆಯಲ್ಲಿ ಮುನ್ನಡೆಯಲು ಸಾಧ್ಯ ಎಂಬುದನ್ನು ಗಾಂಧೀಜಿಯವರು ದೃಢವಾಗಿ ನಂಬಿದ್ದರು. ಆದ್ದರಿಂದಲೇ ಅವರ ಆದರ್ಶ, ವಿಚಾರ-ಚಿಂತನೆಗಳು ಅವರನ್ನು ಸಾರ್ವಕಾಲಿಕಗೊಳಿಸಿದವು.

ಸರ್ವಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಚಿಂತಕ, ರಾಜಕೀಯ ಮುತ್ಸದ್ದಿ, ಸತ್ಯಪ್ರತಿಪಾದಕ, ಸತ್ಯಶೋಧಕ, ಶಿಕ್ಷಣ ಚಿಂತಕ ಎಂಬಿತ್ಯಾದಿ ಚೌಕಟ್ಟುಗಳಿಗೆ ಗಾಂಧೀಜಿಯವರನ್ನು ಸೀಮಿತಗೊಳಿಸಿ ನೋಡುವುದರಿಂದ ಅವರ ಬಗೆಗೆ ಆಂಶಿಕ ಪರಿಚಯವಾಗುತ್ತದೆಯೇ ಹೊರತು, ಅವರ ವ್ಯಕ್ತಿತ್ವದ ಸಮಗ್ರ ಪರಿಚಯ ದಕ್ಕುವುದಿಲ್ಲ.

“ನಾನೂ ಸಹ ಎಲ್ಲರಂತೆ ತಪ್ಪು ಮಾಡುವ ಸರಳ ವ್ಯಕ್ತಿ. ಆದರೆ, ನನ್ನ ತಪ್ಪುಗಳನ್ನು ಒಪ್ಪಿಕೊಂಡು ನನ್ನ ಹೆಜ್ಜೆಗಳನ್ನು ಹಿಂದಕ್ಕಿಡುವಂತಹ ನಮ್ರತೆ ನನ್ನಲ್ಲಿದೆ” ಎನ್ನುವ ಗಾಂಧೀ ಅವರ ಆದರ್ಶ ಬಹಳ ದೊಡ್ಡದು ಮತ್ತು ಮಹತ್ವದ್ದು ಕೂಡ. ಅಲ್ಲದೆ, “ಸತ್ಯ-ಅಹಿಂಸೆಗಳನ್ನು ಕೇವಲ ವೈಯುಕ್ತಿಕ ಅನುಷ್ಠಾನದ ತತ್ತ್ವಗಳನ್ನಾಗಿ ಮಾಡಿಕೊಂಡರೆ ಸಾಲದು; ಸಮಾಜ, ಸಮುದಾಯ, ರಾಷ್ಟ್ರಗಳು ಕೂಡ ಅವನ್ನು ಅನುಷ್ಠಾನಗೊಳಿಸಬೇಕು” ಎಂದು ಹೇಳಿದ ಅವರ ಮಾತುಗಳು ವ್ಯವಸ್ಥೆಯ ಸಾಮೂದಾಯಿಕ ಹಿತವನ್ನು ಪ್ರತಿಪಾದಿಸುವಂಥದಾಗಿದೆ ಎಂಬುದನ್ನು ಅಲ್ಲಗಳೆಯಲಾಗದು. ಸ್ವಾತಂತ್ರ್ಯಪೂರ್ವ ಕಾಲಘಟ್ಟದ ಸಾಮಾಜಿಕ, ರಾಜಕೀಯ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ ಪಲ್ಲಟಗಳ ಅರಿವಿದ್ದ ಗಾಂಧೀಜಿಯವರಿಗೆ ಇಡೀ ಮನುಷ್ಯ ಮಾಡುವ ಪ್ರಮಾದಗಳ ಬಗ್ಗೆ ಖೇದವಿತ್ತು. ಆದ್ದರಿಂದಲೇ ಅವರು “ಸ್ವಾತಂತ್ರ್ಯ ಎಂದರೆ ವೈಯುಕ್ತಿಕ ನಿಯಂತ್ರಣ, ವ್ಯವಸ್ಥೆಯ ಸಾಕ್ಷಾತ್ಕರಣ’ ಎಂದು ತುಂಬ ವಿಶ್ವಾಸದಿಂದ ನುಡಿದರು. ಅವರ ಜೀವನವನ್ನು ತುಂಬ ಪ್ರಭಾವಿಸಿದ “ಅನ್ ಟು ದಿ ಲಾಸ್ಟ್’ ಕೃತಿ ಅವರಲ್ಲಿ “ಸರ್ವೋದಯ’ದ ಕಲ್ಪನೆಯನ್ನು ಮೊಳೆಯಿಸಿತು. ಮುಂದೆ ಅವರು ಸಾಮಾಜಿಕ ಅಸಮಾನತೆ, ಹರಿಜನರ ಉದ್ಧಾರ, ಶೋಷಿತರ ಪರ ನಿಲುವುಗಳನ್ನು ಪ್ರಕಟಿಸಲು ಸಾಧ್ಯವಾಯಿತು. ಮನುಷ್ಯ ಮಾನವೀಯತೆಯ ಸಾಕಾರರೂಪವಾಗಬೇಕಿತ್ತು; ಆದರೆ ತನ್ನ ಪಾಶವೀ ಕೃತ್ಯಗಳಿಂದ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿರವುದು ಅತ್ಯಂತ ದುರಂತ. ಸ್ವಾರ್ಥ, ಮೋಸ, ವಂಚನೆ, ಅಸತ್ಯ, ಅನ್ಯಾಯ, ಅನಾಚಾರ, ಜಾತೀಯತೆ, ಶೋಷಣೆ, ಕೋಮುಗಲಭೆ, ರಾಷ್ಟ್ರದ ಬಗೆಗಿನ ಅಗೌರವ, ವರ್ಗತಾರತಮ್ಯ ಇತ್ಯಾದಿ ಸಮಸ್ಯೆಗಳು ಇಂದು ವ್ಯಕ್ತಿಸಹಿತವಾಗಿ ದೇಶವನ್ನು ತೀವ್ರವಾಗಿ ಬಾಧಿಸುತ್ತಿವೆ. ದುರಾಡಳಿತ, ಏಕಸಂಸ್ಕೃತಿ ಹೇರಿಕೆ, ಮಾನವೀಯ ರಹಿತ ರಾಜಕೀಯ, ಅದಕ್ಷ ಆಡಳಿತ, ಜಾಗತಿಕ ಬಂಡವಾಳ ಹೂಡಿಕೆಯ ಅತಿ ನಿರೀಕ್ಷೆ, ನಿರುದ್ಯೋಗ, ಅನಕ್ಷರತೆ, ಬಡತನ, ಅನಾರೋಗ್ಯ, ಕೋಮುಗಲಭೆ, ರೈತರ ಆತ್ಮಹತ್ಯೆ, ಬೆಲೆ ಏರಿಕೆ, ಜನಸಾಮಾನ್ಯರ ಶೋಷಣೆ, ಧಾರ್ಮಿಕ ಅಸಹಿಷ್ಣುತೆ, ಭಯೋತ್ಪಾದನೆ  ಮುಂತಾದ ರಾಷ್ಟ್ರೀಯ, ಜಾಗತಿಕ ಸಮಸ್ಯೆಗಳು ದೇಶದ ಜನಜೀವನವನ್ನು ಒಂದೇಸಮನೇ ಹಿಂಡುತ್ತಿವೆ. ಇಂಥ ಸಂದರ್ಭದಲ್ಲಿ ಗಾಂಧೀಜಿಯವರು ಪ್ರತಿಪಾದಿಸಿದ ಹದಿನೆಂಟು ರಚನಾತ್ಮಕ ಕಾರ್ಯಗಳು ಹೆಚ್ಚು ಔಚಿತ್ಯಪೂರ್ಣವೆನಿಸುತ್ತವೆ; ಮತೀಯ ಐಕ್ಯತೆ, ಅಸ್ಪೃಶ್ಯತೆ ನಿವಾರಣೆ, ಪಾನ ನಿರೋಧ, ಖಾದಿ, ಇತರೆ ಗ್ರಾಮೋದ್ಯೋಗ, ಗ್ರಾಮ ನೈರ್ಮಲ್ಯ, ಮೂಲ ಶಿಕ್ಷಣ, ವಯಸ್ಕರ ಶಿಕ್ಷಣ, ಮಹಿಳೋದ್ಧಾರ, ಆರೋಗ್ಯ ಮತ್ತು ಶುಚಿತ್ವ ಶಿಕ್ಷಣ, ಪ್ರಾದೇಶಿಕ ಭಾಷೆ, ರಾಷ್ಟ್ರ ಭಾಷೆ, ಆರ್ಥಿಕ ಸಮಾನತೆ, ರೈತ ಜನೋದ್ಧಾರ, ಕಾರ್ಮಿಕರ ಕಲ್ಯಾಣ, ಕುಷ್ಠರೋಗ ನಿರ್ಮೂಲನೆ, ವಿದ್ಯಾರ್ಥಿ ಸಮುದಾಯದ ಅಭಿವೃದ್ಧಿ ಹೀಗೆ ಅವರ ಅಮೂಲ್ಯ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಬೇಕಾದುದು ಅವಶ್ಯವಿದೆ.‌ ಜೊತೆಗೆ ಅವುಗಳ ಅನುಷ್ಠಾನದಲ್ಲಿ ರಾಜಕೀಯ ಇಚ್ಛಾಶಕ್ತಿಯೂ ಅತ್ಯಗತ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ, ಪರಿಶ್ರಮವೂ ಅಷ್ಟೇ ಮುಖ್ಯ.

ಬಹುಜನ, ಬಹುಭಾಷಿಕ, ಬಹುಸಂಸ್ಕೃತಿಯ ಜನರ ನೆಲೆಯಾದ ಭಾರತದ ಬಹುತ್ವವನ್ನು ನಾಶಪಡಿಸುವ ಶಕ್ತಿಗಳು ಪ್ರಬಲವಾಗಿತ್ತಿರುವ ಈ ಹೊತ್ತಿನಲ್ಲಿ ಕವಿ ಕುವೆಂಪು ಅವರ

“ಅಖಂಡ ಕರ್ನಾಟಕ:

ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ…

‘ಮೆರೆಯಲಾತ್ಮ ಸಂಸ್ಕೃತಿ

ಬೆಳಗೆ ಜೀವ ದೀಧಿತಿ.

ಪರಮಾತ್ಮನ ಚರಣದೀಪ್ತಿ,

ಶರಣ ಹೃದಯಗಳಲಿ ಹೊತ್ತಿ

ಉಸಿರುಸಿರಿನ ಹಣತೆ ಬತ್ತಿ

ಉರಿಯಲೆಂದು ತಣ್ಣಗೆ;

ಬಾಳ ಸೊಡರ್ ಗುಡಿಯನೆತ್ತಿ

ತನ್ನ ಮುಡಿಯ ಬಾನಿಗೆತ್ತಿ

ಸೊಗಸಲೆಂದು ರಸಸ್ಫೂರ್ತಿ

ಭಗವಂತನ ಕಣ್ಣಿಗೆ….” ಸಾಲುಗಳು ಬರೀ ಕರ್ನಾಟಕದ ವಸ್ತುಸ್ಥಿತಿಗೆ ಮಾತ್ರ ಅನ್ವಯಿಸದೇ ಭಾರತದ ಒಟ್ಟು ಸಂಕ್ರಮಣದ ಸ್ಥಿತಿಗೂ ಕನ್ನಡಿ ಹಿಡಿಯುತ್ತವೆ. ಗಾಂಧಿ ಕನಸಿದ ಭಾರತ  ಭಿನ್ನವಾಗಿತ್ತು. ಆದರೆ ಇವತ್ತಿನ ಭಾರತದ ಚಿತ್ರಣ ಬೇರೆಯೇ ಆಗಿದೆ. ದೇಶವನ್ನು ಭಿನ್ನವಾಗಿ, ಮಾನವೀಯವಾಗಿ ಕಟ್ಟುವ ಪ್ರಯತ್ನದಲ್ಲಿ ಸದಾ ನಿರತರಾಗಿದ್ದರು ಗಾಂಧೀಜಿ. ತಮ್ಮ ಜೀವನದುದ್ದಕ್ಕೂ ಸತ್ಯ, ಅಹಿಂಸೆ, ಸತ್ಯಾಗ್ರಹ, ಉಪವಾಸ ಇತ್ಯಾದಿ ಮೌಲ್ಯಗಳನ್ನು, ಸಂದೇಶಗಳನ್ನು ನೀಡಿದರಲ್ಲದೆ ಸ್ವತಃ ಬಾಳಿ ತೋರಿದರು. ಅವರು ಹೇಳಿದ ಸಪ್ತಪಾತಕಗಳು “ಕೇಡಿನಿಂದ’ ಕೊಡವಿಕೊಳ್ಳಬೇಕಾದ ಅಗತ್ಯತೆಯನ್ನು ಪ್ರತಿಪಾದಿಸುತ್ತವೆ.

ತತ್ತ್ವರಹಿತ ರಾಜಕೀಯ, ನೀತಿರಹಿತ ವಾಣಿಜ್ಯ, ಶ್ರಮರಹಿತ ಸಂಪತ್ತು, ಆತ್ಮಸಾಕ್ಷಿರಹಿತ ಸುಖ, ಶೀಲರಹಿತ ಜ್ಞಾನ, ಮಾನವೀಯತೆರಹಿತ ವಿಜ್ಞಾನ, ತ್ಯಾಗರಹಿತ ಪೂಜೆ ಇವುಗಳ ಅನುಷ್ಠಾನವಿಲ್ಲದ ಹೊರತು ಮನುಷ್ಯ ಜನ್ಮದ ಘನತೆ, ಗೌರವ ಜೊತೆಗೆ ಒಂದು ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿ ಎಂಬುದು ಮರಿಚೀಕೆಯಾಗುತ್ತದೆ.

ಈ ಹಿನ್ನೆಲೆಯಲ್ಲಿ ಗಾಂಧೀಜಿಯವರೇ ಹೇಳಿದಂತೆ ‘ಎಷ್ಟೇ ಪಾಂಡಿತ್ಯವಿರಲಿ, ಎಷ್ಟೇ ವಿದ್ಯಾಭ್ಯಾಸ ಮಾಡಿರಲಿ ಹೃದಯ ಪರಿಶುದ್ಧತೆಯನ್ನು ಕಲಿಸದಿದ್ದರೆ ಎಲ್ಲವೂ ವ್ಯರ್ಥವೇ. ಎಲ್ಲ ಜ್ಞಾನದ ಗುರಿಯೂ ಶೀಲಸಂವರ್ಧನವೇ’ ಎಂಬ ಮಾತು ಮಾರ್ಮಿಕವಾದುದಾಗಿದೆ.

ನಮ್ಮ ನಡುವೇ ಇದ್ದು ಬಾಳಿ-ಬದುಕಿದ್ದ ಗಾಂಧೀಯವರನ್ನು ನಾವು ಮಹಾತ್ಮ ಎಂದು ಭಾವಿಸಿದ್ದು ತಪ್ಪಲ್ಲ; ಆದರೆ ದೇವರೆಂದು ತಿಳಿದು ಅವರೊಂದಿಗೆ ಒಂದು ರೀತಿಯ ಅಂತರವನ್ನು ಸೃಷ್ಟಿಸಿಕೊಂಡಿದ್ದೀವಲ್ಲ ಇದು ನಮಗೆ ನಾವೇ ಮಾಡಿಕೊಂಡ ಮೋಸ. ನಮ್ಮ ಲೋಪಗಳನ್ನು ನಾವು ಸತ್ಯ ಎಂಬ ಗಾಂಧೀದರ್ಪಣದಲ್ಲಿ ನೋಡಿಕೊಳ್ಳಬೇಕಿದೆ. ಪ್ರಾಮಾಣಿಕ ನಡೆಯೊಳಗೆ ಗಾಂಧಿ ಕಾಣಿಸುತ್ತಾರೆ. ಹೀಗೆ ಕಂಡ ಗಾಂಧಿಯನ್ನು ನಮ್ಮೊಳಗಣ ನಿಜದ ನುಡಿ ಮತ್ತು ನೆಲೆಯಾಗಿಸಿಕೊಳ್ಳಬೇಕು. ಆಗ ಮಾತ್ರ ಗಾಂಧೀ ‘ಹುಟ್ಟು’ ‘ಹಬ್ಬ’ವಾಗಬಲ್ಲದು.

ಲೇಖನ : ಡಾ. ಸಂಗಮೇಶ ಎಸ್. ಗಣಿ

ಮುಖಸ್ಥರು, ಕನ್ನಡ ವಿಭಾಗ

ಟಿಎಂಎಇಎಸ್ ಅಕಾಡೆಮಿ ಆಫ್ ಸೈನ್ಸ್ ಆಂಡ್ ಕಾಮರ್ಸ್ ಪಿಯು ಕಾಲೇಜ್,

ಹೊಸಪೇಟೆ

ಮೊ: 9743171324

No products were found for this query.

ಪ್ರಕಟಣೆಗಾಗಿ ಸಂಪರ್ಕಿಸಿ

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.