ಎನ್ನೆದೆಯ ಗೂಡಿನಲಿ ಬಚ್ಚಿಟ್ಟು ಮುತ್ತಿಟ್ಟವಳು ನೀನಲ್ಲವೇ ಹೇಳು.
ಕಣ್ಣೆವೆಯ ಕಾಡಿಗೆಯಲಿ ಕಾಪಿಟ್ಟು ಮೆತ್ತಿಟ್ಟವಳು ನೀನಲ್ಲವೇ ಹೇಳು
ಸೊಗಸುಗಾರ ಸರದಾರನ ದಾರಿಯ ಕಾಯುತ ಸುಸ್ತಾಗಿರುವೆಯಲ್ಲವೇ
ಕನಸುಗಳ ಭ್ರಾಂತಿಯ ಅರಿಯುವ ನಿಟ್ಟಿನಲ್ಲಿ ಒತ್ತಿಟ್ಟವಳು ನೀನಲ್ಲವೇ ಹೇಳು
ಜೊತೆಯಲಿ ಹೆಜ್ಜೆಗಳ ಊರುತ ಸಪ್ತಪದಿ ತುಳಿದ ಜೋಡಿ ಜೀವಗಳು ನಾವು
ಮಿತಿಯಲಿ ಲಜ್ಜೆ ತೋರುತ ಆಪ್ತವಾಗಿ ತಾಳಿಯ ತಾಳ್ಮೆ ಸುತ್ತಿಟ್ಟವಳು ನೀನಲ್ಲದೆ ಹೇಳು.
ಕೆಂಪು ದಾವಣಿಯಲಿ ಮಿಂಚುಳ್ಳಿಯಂತೆ ಬಳಿ ಬಂದು ಸೆಳೆದೆಯಲ್ಲವೇ
ಕಂಪು ಮದಿರೆಯ ಮತ್ತಿನಲ್ಲಿ ನಗೆ ಚಿಮ್ಮುವ ನತ್ತಿಟ್ಟವಳು ನೀನಲ್ಲವೇ ಹೇಳು
ಬೇಲೂರು ಶಿಲಾಬಾಲಿಕೆಯ ಅಂದದ ಹೋಲಿಕೆಗೆ ಜಯಾ ಖುಷಿಯಾಗಿಹಳು
ಒಲವಿನ ಒರತೆಯಲಿ ನಲಿದು ಹೊತ್ತಿನ ತುತ್ತಿಟ್ಟವಳು ನೀನಲ್ಲವೇ ಹೇಳು
ಜಯಶ್ರೀ ಭ ಭಂಡಾರಿ
ಬಾದಾಮಿ