ವೀರಾಂಗನೆ ರಣಗಚ್ಚೆಯ ಹಾಕಿ ಶತ್ರುಗಳ ಸದೆ ಬಡೆದಳಲ್ಲ ಓಬವ್ವ.
ಧೀರೆಯವಳು ರಕುತ ಕುದಿದು ವೈರಿಗಳ ಶಿರವ ಒಡೆದಳಲ್ಲ ಓಬವ್ವ.
ಪತಿ ಭೋಜನಕೆ ನೀರು ತರಲು ಬಂದು ಬೆಚ್ಚಿ ನಿಂತಳಲ್ಲವೇ ಆಕೆ
ಸತಿಯ ಹುಡುಕಿ ಗುಪ್ತದ್ವಾರ ಬಳಿಯ ಕಂಡು ತಡೆದಳಲ್ಲ ಓಬವ್ವ.
ರಣಚಂಡಿ ರೂಪವ ಕಂಡು ಮಾತು ಹೊರಡದೆ ನಿಂತನಲ್ಲ ಅವನು
ಕ್ಷಣಕೆ ಒನಕೆ ಬೀಸುತ ದಂಡಿನ ಚೆಂಡಾಡುತಲಿ ಕಡೆದಳಲ್ಲ ಓಬವ್ವ.
ಸಬಲೆ ಶಕುತಿಗೆ ಪುರುಷ ಸಂಕುಲ ಮುಗಿದು ಬೀಗಿತಲ್ಲವೇ ಅಂದು.
ಅಬಲೆ ಎಂದವರಿಗೆ ಸಾಮರ್ಥ್ಯ ದೃಢತೆ ತೋರಿ ತೊಡೆದಳಲ್ಲ ಓಬವ್ವ.
ಕರುನಾಡ ಕೋಟೆಯ ಕಾಯ್ದ ರಮಣಿಯನು ಜಯಾ ಸ್ಮರಿಸಿಹಳು
ಸಿರಿನಾಡ ಆಲಯವು ಶೂರ ವನಿತೆ ಮುಕುಟ ಪಡೆದಳಲ್ಲ ಓಬವ್ವ
ಜಯಶ್ರೀ ಭಂಡಾರಿ
ಬಾದಾಮಿ