ಲಲನೆಯರೊಟ್ಟಿಗೆ ಆಡುವುದ ಮರೆತು ಗೆಳತಿ
ಕನಸುಗಳ ಸಂತೆಯೊಳಗೆ ಯಾಕೆ ಕುಂತಿ ಗೆಳತಿ
ಮಿನುಗುವ ಕಣ್ಣಿನ ಜರತಾರೆಯುಟ್ಟು
ಭಾವನೆಗಳಿಗೆ ಬಣ್ಣ ಬಳಿಯುತಿರುವೆಯಾ ಗೆಳತಿ
ನೀಳ ಕೇಶರಾಶಿಯ ಹೆಣೆದು ಕುಳಿತಿರುವೆ ಏಕೆ
ಸುಳಿವ ಗಾಳಿಯಲೊಮ್ಮೆ ತೇಲಿ ಬಿಡು ಗೆಳತಿ
ಅಂಬರವೇರಿ ಕುಳಿತ ಚಿಂತೆಗಳಲ್ಲೊಮ್ಮೆ
ಹೂನಗೆಯ ಬೀರಿ ಮುದಗೊಳಿಸಬಾರದೆ ಗೆಳತಿ
ಸ್ವರ್ಗದ ಸೋಪಾನವು ಮುರಿಯುವ ಮೊದಲು
ಹೃದಯ ಸ್ತಬ್ಧವಾಗುವುದ ನಿಲಿಸಬಾರದೇ ಗೆಳತಿ
‘ಸಾತ್ವಿಕ’ನ ಪ್ರೇಮವು ಕೂಗಿ ಕರೆಯುತಿರಲು
ಬಾಳ ದೋಣಿಯಲೊಮ್ಮೆ ಪಯಣಿಸು ಬಾ ಗೆಳತಿ..
ಎಸ್ ಎನ್ ಬಾರ್ಕಿ
ರಾಜ್ಯಶಾಸ್ತ್ರ ಉಪನ್ಯಾಸಕರು
ಆದರ್ಶ ಸಂಯುಕ್ತ ಪದವಿ ಪೂರ್ವ
ಕಾಲೇಜು ಬೇವೂರ.